ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಟ್ಟಾಗಿದ್ದರೆ ಮತ್ತೆ ಅಧಿಕಾರ ಸಾಧ್ಯ’

‘ಲಕ್ಷ್ಮಣ ರೇಖೆ’ ಮೀರಿದರೆ ಸಹಿಸಲ್ಲ: ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಖಡಕ್‌ ಎಚ್ಚರಿಕೆ
Last Updated 25 ಮೇ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ‘ಭಿನ್ನಮತ ಬದಿಗಿಟ್ಟು, ಒಟ್ಟಾಗಿದ್ದರಷ್ಟೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮತ್ತೆ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯ’ ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಕಿವಿಮಾತು ಹೇಳಿದರು.
 
‘ಯಾವ ನಾಯಕರೂ ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು. ಅಂತಹ ಅಶಿಸ್ತು ಸಹಿಸುವುದಿಲ್ಲ. ಆಕ್ಷೇಪ, ಅಸಮಾಧಾನ ಅಥವಾ ಅಹವಾಲುಗಳಿದ್ದರೆ  ಕೆಪಿಸಿಸಿ ನಾಯಕರ ಅಥವಾ ಎಐಸಿಸಿ ವೀಕ್ಷಕರ ಗಮನಕ್ಕೆ ತರಬೇಕು. ಲಕ್ಷ್ಮಣ ರೇಖೆ ಯಾರೂ ಮೀರಬಾರದು’ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. 
 
ನಾಲ್ಕು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಜೊತೆ ಜಿಲ್ಲಾ ಘಟಕಗಳ ಪ್ರಮುಖರು, ಉಸ್ತುವಾರಿ ಸಚಿವರು, ಶಾಸಕರ ಜೊತೆ ಸಂವಾದ ನಡೆಸಿದ ಬಳಿಕ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು.
 
‘ತಳಮಟ್ಟದ ನಾಯಕರ ಅಹವಾಲು ಆಲಿಸಿದ್ದೇನೆ. ಕೆಲವು ಸಣ್ಣಪುಟ್ಟ ಸಮಸ್ಯೆಗಳಿರುವುದನ್ನು ಗಮನಿಸಿದ್ದೇನೆ. ನಾಯಕರು ಮತ್ತು ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಿದರೆ ಗೆಲುವು ನಮ್ಮದೇ. ಜನರು ಮತ್ತೆ ನಮ್ಮನ್ನೇ ಬೆಂಬಲಿಸುತ್ತಾರೆ’ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
 
‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಈ ಸರ್ಕಾರದ ಸಾಧನೆ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಗಳ ಸಾಧನೆಗಿಂತ ಅತ್ಯುತ್ತಮವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಜೊತೆ ಮುಕ್ತ ಸಂವಾದಕ್ಕೂ ಸಿದ್ಧ’ ಎಂದೂ ಅವರು ಸವಾಲು ಹಾಕಿದರು.
 
‘ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ಹೆಚ್ಚಿನ ಸಮಯ ವಿನಿಯೋಗಿಸಬೇಕು. ಜನರ ಅಹವಾಲುಗಳಿಗೆ ಸ್ಪಂದಿಸಬೇಕು. ಚುನಾವಣೆಗೆ ಒಂಬತ್ತು ತಿಂಗಳು ಮಾತ್ರ ಇದ್ದು ಶಾಸಕರು, ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಜೊತೆಗೆ ಜನರ ಜೊತೆ ಬೆರೆಯುವಂತೆ ಸೂಚಿಸಿದ್ದೇನೆ’ ಎಂದರು.
 
‘ಪಕ್ಷ ಸಂಘಟನೆ ಬಲಪಡಿಸುವ ಉದ್ದೇಶದಿಂದ ಬೂತ್‌ಮಟ್ಟದ ಸಮಿತಿಗಳನ್ನು ಜೂನ್‌ 30ರ ಒಳಗೆ ರಚಿಸಲಾಗುವುದು. ಜುಲೈ 15ರ ಒಳಗೆ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗುವುದು. ಇಂದಿರಾಗಾಂಧಿ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಮತ್ತು ಚಿಕ್ಕಮಗಳೂರಿನಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು.
 
ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವ ಹಿರಿಯ ನಾಯಕರಾದ ಎಚ್‌. ವಿಶ್ವನಾಥ್‌, ಜನಾರ್ದನ ಪೂಜಾರಿ, ಜಾಫರ್‌ ಷರೀಫ್‌ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲು ಹಿಂಜರಿಕೆ ಯಾಕೆ ಎಂದು ಕೇಳಿದಾಗ, ‘ಹಾಗೇನೂ ಇಲ್ಲ. ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ನೀವು ಕಾದು ನೋಡಿ’ ಎಂದು  ಪ್ರತಿಕ್ರಿಯಿಸಿದರು.
****
ಮುಖ್ಯಮಂತ್ರಿ 29ರಂದು ದೆಹಲಿಗೆ
ಈ ತಿಂಗಳ ಅಂತ್ಯದೊಳಗೆ ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತ ಗೊಂದಲ ಪರಿಹಾರ ಕಾಣಲಿದೆ ಎಂದು ವೇಣುಗೋಪಾಲ್‌ ಪುನರುಚ್ಚರಿಸಿದ್ದಾರೆ.

ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 29ರಂದು ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಕೆಪಿಸಿಸಿಗೆ ಹೊಸ ಅಧ್ಯಕ್ಷರ ಆಯ್ಕೆ ಸಂಬಂಧ ಮುಖ್ಯಮಂತ್ರಿ ಹೈಕಮಾಂಡ್‌ ಜೊತೆ ಚರ್ಚೆ ನಡೆಸಲಿದ್ದಾರೆ. 28ರಂದು ರಾತ್ರಿ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
****
ಜಿಲ್ಲಾಮಟ್ಟದ ಸಮನ್ವಯ ಸಮಿತಿ
ಕೆಲವು ಜಿಲ್ಲೆಗಳ ನಾಯಕರು ವೇಣುಗೋಪಾಲ್‌ ಅವರ ಬಳಿ ಸ್ಥಳೀಯವಾಗಿರುವ ಅಸಮಾಧಾನ ಮತ್ತು ಅದರಿಂದಾಗುತ್ತಿರುವ ಪರಿಣಾಮಗಳ ಬಗ್ಗೆ ಚರ್ಚಿಸಿದರು.  ಇದರಿಂದಾಗಿ ‘ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ರಾಯಚೂರು, ಹಾಸನ, ತುಮಕೂರು, ಹುಬ್ಬಳ್ಳಿ–ಧಾರವಾಡ ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ರಚಿಸಲಾಗುವುದು’  ಎಂದು ತಿಳಿಸಿದರು.
****
ಇನ್ನೊಂದು ವಾರದೊಳಗೆ ಕೆಪಿಸಿಸಿ ಹೊಸ ಅಧ್ಯಕ್ಷರ ನೇಮಕ ಗೊಂದಲ ಪರಿಹಾರ ಕಾಣಲಿದೆ.
ಕೆ.ಸಿ. ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT