ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಡಣವೀಸ್ ಪಾರು

Last Updated 25 ಮೇ 2017, 19:30 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಪಾರಾದ ಘಟನೆ ಲಾತೂರ್ ಜಿಲ್ಲೆಯಲ್ಲಿ ನಡೆದಿದೆ.

ನಿಲಂಗಾ ಪಟ್ಟಣದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮುಖ್ಯಮಂತ್ರಿ ಅವರು ವಾಪಸ್ ಆಗುವ ವೇಳೆ ಈ ಅಪಘಾತ ಸಂಭವಿಸಿದೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೆಲಿಪ್ಯಾಡ್‌ನಿಂದ ಮೇಲೇರುತ್ತಿದ್ದಂತೆ ಪ್ರತಿಕೂಲ ಹವಾಮಾನದ ಕಾರಣಕ್ಕೆ ಪೈಲಟ್ ಹೆಲಿಕಾಪ್ಟರ್‌ನ್ನು ವಾಪಸ್ ಕೆಳಗಿಳಿಸತೊಡಗಿದರು. ಆಗ ಹೆಲಿಕಾಪ್ಟರ್‌ ಹೆಲಿಪ್ಯಾಡ್‌ ಮೇಲೆ ಜೋತಾಡುತ್ತಿದ್ದ ವೈರುಗಳಿಗೆ ಸಿಕ್ಕಿಹಾಕಿಕೊಂಡು ನೆಲಕ್ಕೆ ಅಪ್ಪಳಿಸಿತು.

ಮುಖ್ಯಮಂತ್ರಿ, ಇಬ್ಬರು ಪೈಲಟ್‌ಗಳು ಸೇರಿದಂತೆ ಹೆಲಿಕಾಪ್ಟರ್‌ನಲ್ಲಿ ಇದ್ದ ಆರು ಜನರಿಗೆ ಯಾವುದೇ ರೀತಿಯ ತೊಂದರೆ ಆಗಲಿಲ್ಲ.

ನಾನು ಸುರಕ್ಷಿತ: ಸಿ.ಎಂ ಟ್ವೀಟ್‌
ಮುಂಬೈ:
  ನಿಲಂಗಾ ಪಟ್ಟಣದಲ್ಲಿ ಹೆಲಿಕಾಪ್ಟರ್‌ ಅಪಘಾತದಿಂದ ಪಾರಾದ ಕೂಡಲೇ ಟ್ವೀಟ್ ಮಾಡಿದ ಫಡಣವೀಸ್ ಅವರು, ‘ಲಾತೂರ್ ಬಳಿ ನಮ್ಮ ಹೆಲಿಕಾಪ್ಟರ್ ಅಪಘಾತಕ್ಕಿಡಾಯಿತು, ಆದರೆ ನಾನು ಮತ್ತು ನನ್ನ ತಂಡದ ಸದಸ್ಯರು ಸುರಕ್ಷಿತರಾಗಿದ್ದೇವೆ. ಗಾಬರಿ ಪಡಬೇಕಿಲ್ಲ’ ಎಂದು ತಿಳಿಸಿದ್ದಾರೆ.

ನಂತರ 40 ಕಿ. ಮೀ. ದೂರದ ಲಾತೂರ್‌ಗೆ ಕಾರಿನಲ್ಲಿ ತೆರಳಿದ ಅವರು ಅಲ್ಲಿಂದ ವಿಶೇಷ ಹೆಲಿಕಾಪ್ಟರ್‌ ಮೂಲಕ ಮುಂಬೈಗೆ ತೆರಳಿದರು.
ಮುಖ್ಯಮಂತ್ರಿ ಅವರ ಜತೆ ಹಿರಿಯ ಐಎಎಸ್ ಅಧಿಕಾರಿ ಪ್ರವೀಣ್ ಪರದೇಶಿ, ಅವರ ಆಪ್ತ ಸಹಾಯಕ ಅಭಿಮನ್ಯು ಪವಾರ್ ಮತ್ತು ಮಾಧ್ಯಮ ಸಲಹೆಗಾರ ಕೇತನ್ ಪಾಠಕ್ ಇದ್ದರು.

ರಾಜ್ಯ ಸರ್ಕಾರಕ್ಕೆ ಸೇರಿದ ಆರು ವರ್ಷ  ಹಳೆಯದಾದ ಸಿಕೊರಸ್ಕಿ ಹೆಲಿಕಾಪ್ಟರ್ ದುರಸ್ತಿಯಾಗದಷ್ಟು ಜಖಂಗೊಂಡಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ವಿದರ್ಭ ವಿಭಾಗದ ಗಡಚಿರೋಳಿಯಲ್ಲಿ ಪ್ರವಾಸ ಮಾಡುತ್ತಿದ್ದಾಗ ಮುಖ್ಯಮಂತ್ರಿ ಫಡಣವೀಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕದೋಷ ಉಂಟಾಗಿದ್ದರಿಂದ ಅವರು ಕಾರಿನಲ್ಲಿ ಪ್ರಯಾಣ ಮುಂದುವರಿಸಿದ್ದರು.

ತನಿಖೆ: ಹೆಲಿಕಾಪ್ಟರ್ ಅಪಘಾತದ ಬಗ್ಗೆ ವಿಮಾನ ಅಪಘಾತ ತನಿಖಾ ಸಂಸ್ಥೆಯು ತನಿಖೆ ನಡೆಸಲಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶಕರ ಕಚೇರಿಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT