ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರ ಕಾಯಂಗೆ ಒತ್ತಾಯಿಸಿ ಮುತ್ತಿಗೆ

Last Updated 26 ಮೇ 2017, 9:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪೌರಕಾರ್ಮಿಕ ನೌಕರರ ಕಲ್ಯಾಣ ಹಾಗೂ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪೌರ ಕಾರ್ಮಿಕರು ಪಾಲಿಕೆ ಆಯುಕ್ತರ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಆಯುಕ್ತರು ಕೆಲಸದ ನಿಮಿತ್ತ ಹೊರ ಹೋಗಿದ್ದರಿಂದ ಸುಮಾರು ಎರಡು ತಾಸು ಕಚೇರಿ ಎದುರು ನೂರಾರು ಪೌರಕಾರ್ಮಿಕರು ಧರಣಿ ಕುಳಿತ್ತಿದ್ದರಿಂದ ಕಚೇರಿ ಒಳ ಹೋಗಲು ಮತ್ತು ಹೊರ ಬರಲು ಸಿಬ್ಬಂದಿ ಮತ್ತು ಸಾರ್ವಜನಿಕರು ತೊಂದರೆ ಅನುಭವಿಸಿದರು.

‘ಗುತ್ತಿಗೆ ಪೌರ ಕಾರ್ಮಿಕರ ಕಾಯಂಗೊಳಿಸಲು ಮತ್ತು ಗುತ್ತಿಗೆ ಪದ್ಧತಿ ರದ್ದು ಮಾಡಲು ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಇದಕ್ಕೆ ರಾಜ್ಯ ಸರ್ಕಾರ ಆರು ತಿಂಗಳ ಕಾಲಾವಕಾಶ ಕೋರಿತ್ತು. ಆದರೆ, ಗಡುವು ಮುಗಿದರೂ ಯಾವುದೇ ಕ್ರಮ ಕೈಗೊಳ್ಳದೇ ಹೈಕೋರ್ಟ್‌ ಆದೇಶ ಉಲ್ಲಂಘನೆ ಮಾಡಲಾಗಿದೆ’ ಎಂದು ಸಂಘದ ಅಧ್ಯಕ್ಷ ಬಾಬು ಬಳ್ಳಾರಿ ಆರೋಪಿಸಿದರು.

‘ಗುತ್ತಿಗೆ ಪದ್ಧತಿ ರದ್ದು ಮಾಡಿ ಪೌರಕಾರ್ಮಿಕರನ್ನು ಕಾಯಂ ಮಾಡುವುದಾಗಿ ಸರ್ಕಾರ ಮೂರು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆದರೆ, ಇಲ್ಲಿವರೆಗೂ ನೌಕರರನ್ನು ಕಾಯಂ ಮಾಡದೇ ಅನ್ಯಾಯ ಎಸಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕನಿಷ್ಠ ವೇತನದ ವ್ಯತ್ಯಾಸದ ಬಾಕಿ ₹9 ಕೋಟಿಯನ್ನು ಕೂಡಲೇ ಗುತ್ತಿಗೆ ಪೌರ ಕಾರ್ಮಿಕರಿಗೆ ಪಾವತಿಸಬೇಕು. ಭವಿಷ್ಯ ನಿಧಿ ವಂತಿಗೆ ಹಣ ₹3 ಕೋಟಿಯನ್ನು ಕೂಡಲೇ ಪೌರಕಾರ್ಮಿಕರ ಖಾತೆಗೆ ಜಮಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

‘ಮಹಾನಗರದಲ್ಲಿ 2000 ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪಾಲಿಕೆಯು ಸದ್ಯ 6 ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆದಿದ್ದು, ಇದರ ಪ್ರಕಾರ 1,317 ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸಬಹುದು. ಉಳಿದ 683 ಪೌರಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬೀಳುವ ಸಾಧ್ಯತೆ ಇದೆ. ಹೀಗಾಗಿ, ಪ್ಯಾಕೇಜ್‌ ಮತ್ತು ಗುತ್ತಿಗೆ ಪದ್ಧತಿ ರದ್ದು ಮಾಡಬೇಕು’ ಎಂದು ಒತ್ತಾಯಿಸಿದರು.

‘ಜೂನ್‌ 12ರ ಒಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ, ಅವಳಿ ನಗರದ ಸ್ವಚ್ಛತೆಯನ್ನು ಸ್ಥಗಿತಗೊಳಿಸಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಕ್ರಮದ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಸೇವೆ ಕಾಯಮಾತಿಗೆ ಆಗ್ರಹಿಸಿ ಪೊರಕೆ ಚಳವಳಿ
ಧಾರವಾಡ: ಸಚಿವ ಸಂಪುಟದ ತೀರ್ಮಾನದಂತೆ ರಾಜ್ಯದ ಎಲ್ಲ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಸದಸ್ಯರು ಗುರುವಾರ ನಗರದಲ್ಲಿ  ಪೊರಕೆ ಚಳವಳಿ ನಡೆಸಿದರು.

ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ರಾಜ್ಯದ ಎಲ್ಲ ನಗರಗಳ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಹೊರಗುತ್ತಿಗೆ ನೀಡಿದ್ದು, ಅದರಡಿ ಅಂದಾಜು 45 ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಕುಟುಂಬಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿವೆ.

ತ್ತಿಗೆದಾರರು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಶಾಮೀಲಾಗಿ ಕಾನೂನಾತ್ಮಕವಾಗಿ ಕಾರ್ಮಿಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

‘ಕೂಡಲೇ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜೂನ್‌ 10ರಿಂದ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ, ಅನಿರ್ದಿಷ್ಟಾವಧಿಗೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ವಿಜಯ ಗುಂಟ್ರಾಳ, ಕನಕಪ್ಪ ಕೊಟಬಾಗಿ, ಸೋಮು ಮೊರಬದ, ನಾಗಮ್ಮ ಗೊಲ್ಲರ, ಶರಣಪ್ಪ ಅಮರಾ ವತಿ, ಗಂಗಮ್ಮ ಸಿದ್ರಾಮಪುರ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT