ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಷ್ಠಾನ ಅನುದಾನದಲ್ಲಿ ಉಪನ್ಯಾಸಕರಿಗೆ ವೇತನ

Last Updated 26 ಮೇ 2017, 10:01 IST
ಅಕ್ಷರ ಗಾತ್ರ

ಬಳ್ಳಾರಿ: ನಿರ್ದಿಷ್ಟವಾಗಿ ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನಕ್ಕೆ ಮೀಸಲಿಡಬೇಕಾದ ಅನುದಾನವನ್ನು ಜಿಲ್ಲೆಯ ಪ್ರೌಢಶಾಲೆಗಳ ಅತಿಥಿ ಶಿಕ್ಷಕರು ಮತ್ತು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೇತನಕ್ಕೂ ಬಳಸುವ ನಿರ್ಧಾರವನ್ನು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್ ಮನೋಹರ್‌ ಗುರುವಾರ ಪ್ರಕಟಿಸಿದರು.

ನಗರದಲ್ಲಿ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಒ.ಶ್ರೀಧರನ್‌ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ತಿಮ್ಮರಾಯಪ್ಪ ಅವರ ಮನವಿಗೆ ಸ್ಪಂದಿಸಿ ಅವರು ಈ ಭರವಸೆಯನ್ನು ನೀಡಿದರು.

ಜಿಲ್ಲೆಯ ಸರಕಾರಿ ಪ್ರೌಢಶಾಲೆಗಳಲ್ಲಿ 220 ಅತಿಥಿ ಶಿಕ್ಷಕರನ್ನು ನೇಮಿಸಿದರೆ ಶಿಕ್ಷಕರ ಕೊರತೆ ಇರುವುದಿಲ್ಲ. ಅವರಿಗೆ ಪ್ರತಿಷ್ಠಾನದ ಮೂಲಕ ವೇತನ ಪಾವತಿಸಬೇಕು ಎಂದು ಶ್ರೀಧರನ್‌ ಕೋರಿದರು.                                       

ಹೆಚ್ಚು ವಿದ್ಯಾರ್ಥಿಗಳು ಹಾಗೂ ಕಡಿಮೆ ಗುಣಮಟ್ಟದ ಶಾಲೆಗಳಲ್ಲಿ ಶಿಕ್ಷಕರನ್ನು ಒದಗಿಸಬೇಕು ಎಂಬ ಷರತ್ತಿನ ಮೇರೆಗೆ ಜಿಲ್ಲಾಧಿಕಾರಿ ಸಮ್ಮತಿ ಸೂಚಿಸಿದರು. ಜಿಲ್ಲೆಯಲ್ಲಿರುವ 197 ಸರ್ಕಾರಿ ಪ್ರೌಢಶಾಲೆಗಳಿಗೆ ತಲಾ ₹ 30,000 ದಂತೆ ₹ 60,000,00 ವೆಚ್ಚದಲ್ಲಿ ಕ್ರೀಡಾ ಸಾಮಗ್ರಿಗಳನ್ನು ಪ್ರತಿಷ್ಠಾನದ ಮೂಲಕವೇ ನೀಡಬೇಕು ಎಂದು ಡಿಡಿಪಿಐ ಕೋರಿದರು.

ಜಿಲ್ಲೆಯಲ್ಲಿ 128 ಪದವಿ ಪೂರ್ವ ಉಪನ್ಯಾಸಕರ ಕೊರತೆ ಇದೆ. ಜೂನ್ 1ರೊಳಗಾಗಿ 60 ಉಪನ್ಯಾಸಕರನ್ನು ಒದಗಿಸುವುದಾಗಿ ಇಲಾಖೆ ಭರವಸೆ ನೀಡಿದೆ. ಪ್ರತಿಷ್ಠಾನದ ಅಡಿಯೇ ಅವರಿಗೆ ವೇತನ ಪಾವತಿಸಬೇಕು ಎಂದು ತಿಮ್ಮರಾಯಪ್ಪ ಮನವಿ ಮಾಡಿದರು.

ಇಲಾಖೆಯ ಉಪನ್ಯಾಸಕರನ್ನು ಕಲಾ ವಿಭಾಗಕ್ಕೆ ಬಳಸಿಕೊಳ್ಳಿ. ಪ್ರತಿಷ್ಠಾನದ ಅಡಿ ನೇಮಿಸಲಾಗುವ 60 ಮಂದಿಯನ್ನು ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಬಳಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಕೊರತೆ ನೀಗಿಸಲು ವಿಜ್ಞಾನ ವಿಷಯದ ಉಪನ್ಯಾಸಕರಿಗೆ ₹ 20,000 ಮಾಸಿಕ ವೇತನ ನೀಡಲು ಸಮ್ಮತಿಸಿದರು.

ಗಣಿಬಾಧಿತ ಪ್ರದೇಶಗಳಲ್ಲಿ ಜನರ ಜೀವನಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಶೇಷ ಒತ್ತು ನೀಡಿದೆ. ಶಿಕ್ಷಣ, ಆರೋಗ್ಯ, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ, ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ಅಸಂಘಟಿತ ಮಹಿಳೆಯರ ಮತ್ತು ಕೂಲಿ ಕಾರ್ಮಿಕರ ಅಭಿವೃದ್ಧಿಗೆ ಪ್ರತಿಷ್ಠಾನದ ನಿಧಿಯನ್ನು ಬಳಸಲಾಗುವುದು ಎಂದರು.

ಕೃಷಿ, ಅರಣ್ಯ, ಪಶುಸಂಗೋಪನೆ, ಹಾಲು ಒಕ್ಕೂಟ, ಆಹಾರ ಇಲಾಖೆ, ವಯಸ್ಕರ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಿಯಾಯೋಜನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT