ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ನಿಷೇಧದಿಂದಾಗಿ ದೇಶದಲ್ಲಿ ಹಸುಗಳ ಸಂತತಿಯೇ ಮಾಯವಾಗಬಹುದು!

Last Updated 26 ಮೇ 2017, 14:19 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಗೋಹತ್ಯೆ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಕಸಾಯಿಖಾನೆಗಳಿಗೆ ಗೋವುಗಳನ್ನು ಮಾರಬಾರದು ಎಂಬ ಕೇಂದ್ರ ಸರ್ಕಾರದ ಹೊಸ ನಿಯಮ ಆರ್ಥಿಕತೆಯ ಮೇಲೆ ಪರಿಣಾಮವನ್ನು ಬೀರಲಿದೆ. ಈ ನಿಯಮದಿಂದಾಗಿ ಭಾರತದಲ್ಲಿ ಹಸುಗಳ ಸಂತತಿಯೇ ಮಾಯವಾಗುವ ಸಾಧ್ಯತೆ ಇದೆ.

ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಜಾನುವಾರು ಜನಗಣತಿಯ ಅಂಕಿ ಅಂಶಗಳನ್ನು ಗಮನಿಸಿದರೆ 1997ರಿಂದ  2012ರ ವರೆಗಿನ ಅವಧಿಯಲ್ಲಿ   ಗೋವುಗಳ ಸಂಖ್ಯೆ 103 ಮಿಲಿಯನ್‍ನಿಂದ 117 ಮಿಲಿಯನ್ ಏರಿಕೆಯಾಗಿದೆ . ಅದೇ ವೇಳೆ ಹೋರಿಗಳ ಸಂಖ್ಯೆ 96 ಮಿಲಿಯನ್‍ನಿಂದ 66 ಮಿಲಿಯನ್‍ಗೆ ಇಳಿದಿದೆ. ಇದಕ್ಕೆ ಕಾರಣ ಗದ್ದೆ ಉಳುವುದಕ್ಕೆ ಹೋರಿಗಳ ಬದಲು ಟ್ರ್ಯಾಕ್ಟರ್‍ಗಳ ಬಳಕೆ. ಕಸಾಯಿಖಾನೆಗಳು ಇಲ್ಲದೇ ಹೋದರೆ ಎತ್ತು, ಹೋರಿಗಳ ಸಂಖ್ಯೆಯೂ ಹಸುಗಳ ಸಂಖ್ಯೆಯಷ್ಟೇ ಇರುತ್ತಿತ್ತು. ಹೋರಿ, ಎತ್ತುಗಳನ್ನೇ ಕಸಾಯಿಖಾನೆಯಲ್ಲಿ ಕೊಲ್ಲಲಾಗುತ್ತದೆ ಮತ್ತು ರಫ್ತು ಮಾಡಲಾಗುತ್ತದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ

ಈ ಕಾಲಾವಧಿಯಲ್ಲಿ ಹಾಲು ಕೊಡುವ ಹಸುಗಳ ಸಂಖ್ಯೆ 33 ಮಿಲಿಯನ್‍ನಿಂದ 42 ಮಿಲಿಯನ್ ಏರಿಕೆಯಾಗಿದೆ. ಮಿಶ್ರ ತಳಿ ಹಸುಗಳ ಸಂಖ್ಯೆ ಶೇ.15ರಿಂದ ಶೇ.25ಕ್ಕೇರಿದೆ. ಹಾಗಾಗಿ ಕ್ಷೀರೋತ್ಪಾದನೆಯೂ ಹೆಚ್ಚಳವಾಗಿದೆ. 

ಹಸುವೊಂದು ಕರುವಿಗೆ ಜನ್ಮನೀಡಿದ ನಂತರವೇ ಹಾಲು ಕೊಡಲು ಆರಂಭಿಸುತ್ತದೆಯ ಹಾಗಾಗಿ ಹಾಲುಕೊಡುವ ಹಸುಗಳ ಸಂಖ್ಯೆಯಷ್ಟೇ  ಕರುಗಳ ಸಂಖ್ಯೆಯೂ ಇರಬೇಕು. ಇಲ್ಲಿ ಶೇ.5ಕ್ಕಿಂತ ಕಡಿಮೆ ಹೆಣ್ಣು ಕರುಗಳಿದ್ದರೆ ಗಂಡು ಕರುಗಳ ಸಂಖ್ಯೆ ಶೇ. 35ಕ್ಕಿಂತವೂ ಕಡಿಮೆ. ಗಂಡು ಕರುಗಳು ಹುಟ್ಟಿದರೆ ಕೆಲವು ಹುಟ್ಟಿದ ಕೂಡಲೇ ಸಾಯುತ್ತವೆ, ಬದುಕಿ ಉಳಿದರೆ ಅವುಗಳನ್ನು ಕಸಾಯಿಖಾನೆಗೆ ಕೊಡಲಾಗುತ್ತದೆ.

[related]

ಸಾಮಾನ್ಯವಾಗಿ 3 ರಿಂದ 10 ವರ್ಷಗಳ ವರೆಗೆ ಹಸು ಹಾಲುಕೊಡುತ್ತದೆ. ಆದರೆ 20-25 ವರ್ಷದ ವರೆಗೆ ಬದುಕುತ್ತದೆ. ಹಸುವಿನಿಂದ ಏನೂ ಉಪಯೋಗ ಇಲ್ಲ ಎಂದಾಗ ರೈತರು ಅದನ್ನು ಮಾರುತ್ತಾರೆ. ಹೀಗೆ ಖರೀದಿಸುವವರು ಕಸಾಯಿಖಾನೆಯವರೇ ಆಗಿರುತ್ತಾರೆ. ಹೋರಿಗಳ ಸಂಖ್ಯೆಯನ್ನು ನೋಡಿದರೆ 10 ವರ್ಷದಿಂದ ಹೆಚ್ಚು ವಯಸ್ಸಿರುವ ಹೋರಿಗಳ ಸಂಖ್ಯೆ ಶೇ. 2ರಷ್ಟಿದೆ. ಒಂದು ವೇಳೆ ಕಸಾಯಿಖಾನೆ ಇಲ್ಲದೇ ಇರುತ್ತಿದ್ದರೆ  ಇವುಗಳ ಸಂಖ್ಯೆ ಶೇ.50ರ ಆಸುಪಾಸು ಇರುತ್ತಿತ್ತು.

ಹೈನುಗಾರಿಕೆ ಮೇಲೆ ಪರಿಣಾಮ
ಕಸಾಯಿಖಾನೆಗೆ ಗೋವುಗಳನ್ನು ಮಾರುವುದನ್ನು ನಿಷೇಧಿಸಿದರೆ ಇದು ಹೈನುಗಾರಿಕೆ ಮೇಲೆ ಪರಿಣಾಮ  ಬೀರಲಿದೆ. ಹಸು ಹಾಲು ಕೊಡುವುದನ್ನು ನಿಲ್ಲಿಸಿದರೆ ಅದನ್ನು ಕಸಾಯಿಖಾನೆಗೆ ಮಾರುವಂತಿಲ್ಲ . ಅದರ ಬದಲಾಗಿ ಅದು ಸಾಯುವವರೆಗೆ ಸಾಕಬೇಕಾದ ಹೊಣೆ ರೈತನ ಮೇಲಿರುತ್ತದೆ. ಉಪಯೋಗ ಶೂನ್ಯವಾದ ಹಸುಗಳನ್ನು ಸಾಕುವುದಕ್ಕೆ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ.

ಹೀಗಾದರೆ ಹಾಲಿನ ದರವೂ ಏರಿಕೆಯಾಗುತ್ತದೆ. ಹಸುಗಳಿಗೆ ಕೊಡುವ ಆಹಾರದ ಬೇಡಿಕೆ ದುಪ್ಪಟ್ಟಾಗುತ್ತಿದ್ದಂತೆ ಹಾಲಿನ ದರವೂ ಏರಿಕೆಯಾಗುತ್ತವೆ. ರೈತ ಕೃಷಿ ಭೂಮಿಯಲ್ಲಿ ಬೇರೆ ಬೆಳೆ ಬೆಳೆಯುವುದಕ್ಕಿಂತ ಹಸುಗಳಿಗಾಗಿ ಹುಲ್ಲು ಬೆಳೆಯಲು ಆರಂಭಿಸಿದರೆ, ಇತರ ಕೃಷಿ ಉತ್ಪನ್ನಗಳ ಬೆಲೆಯಲ್ಲೂ ಏರಿಕೆಯಾಗುತ್ತದೆ.

2012ರ ಗಣತಿ ಪ್ರಕಾರ ದೇಶದಲ್ಲಿ ಸರಿ ಸುಮಾರು 180 ಮಿಲಿಯನ್ ಹಸುಗಳಿವೆ. ಒಂದು ವೇಳೆ ದೇಶದಾದ್ಯಂತ ಗೋ ಹತ್ಯೆ ನಿಷೇಧ ಕಾನೂನು  ಅನುಷ್ಠಾನಕ್ಕೆ ಬಂದರೆ 2027ರ ಹೊತ್ತಿಗೆ ಗೋವುಗಳ ಸಂಖ್ಯೆ 360ರಿಂದ 400 ಮಿಲಿಯನ್‍ನಷ್ಟಾಗಲಿದೆ. ಇದು ದೇಶಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ.

ಹಸು ಸಾಕುವ ಯಾವೊಬ್ಬ ರೈತನೂ ಹಲವಾರು ವರ್ಷಗಳ ಕಾಲ ಹಸುವನ್ನು ಮನೆಯಲ್ಲೇ ಇಟ್ಟುಕೊಳ್ಳುವುದಿಲ್ಲ. ಗದ್ದೆ ಉಳುವುದಕ್ಕಾಗಿ ಎತ್ತುಗಳನ್ನು ಬಳಕೆ ದುಬಾರಿ ಎನಿಸಿದಾಗ ರೈತ ಟ್ರ್ಯಾಕ್ಟರ್‌ಗಳನ್ನು ಬಳಸಲು ಆರಂಭಿಸಿದ. ಕಸಾಯಿಖಾನೆಗಳಿಗೆ ಹಸುಗಳನ್ನು ಮಾರುವುದು ನಿಷೇಧಿಸಿದರೆ ರೈತ ಹಸು ಸಾಕುವುದನ್ನೇ ನಿಲ್ಲಿಸುತ್ತಾನೆ. ಹೀಗಾದರೆ ಕಾಲ ಕ್ರಮೇಣ ಭಾರತದಲ್ಲಿ ಹಸುಗಳೇ ಮಾಯವಾಗಿ ಬಿಡಬಹುದು. ಒಂದು ವೇಳೆ ನಿರುಪಯೋಗಿ ಹಸುಗಳಿಗೆ ರಕ್ಷಣೆ ನೀಡಲು ಸರ್ಕಾರವೇ ಗೋವು ಶಾಲೆಗಳನ್ನು ನಿರ್ಮಿಸಿದರೆ ಹಸುಗಳು ಬದುಕುಳಿಯಬಹುದು. ಹಾಲು ಉತ್ಪಾದನೆ ಇದ್ದರೂ ಹಾಲಿನ ಉತ್ಪನ್ನಗಳ ದರದ ಮೇಲೆ ಇದು ಪರಿಣಾಮ ಬೀರಲಿದೆ.

2011ರಿಂದ ಭಾರತದಲ್ಲಿ ಪ್ರತೀ ವರ್ಷ ಕೋಣದ ಮಾಂಸದ ರಫ್ತು ವಹಿವಾಟಿನಲ್ಲಿ ಶೇ. 14ರಷ್ಟು ಏರಿಕೆಯಾಗುತ್ತಿದೆ.  2014ರಲ್ಲಿ ಕೋಣದ ಮಾಂಸ ರಫ್ತು ಮೂಲಕ ಭಾರತ ಗಳಿಸಿ 4.8 ಬಿಲಿಯನ್ ಡಾಲರ್!. ಭಾರತವೀಗ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಿ ಗಳಿಸುವುದಕ್ಕಿಂತ ಹೆಚ್ಚು ಹಣವನ್ನು ಬೀಫ್ ರಫ್ತು ಮೂಲಕ ಗಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT