ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಳ ಭವಿಷ್ಯಕ್ಕೆ ಬಣ್ಣದ ಆಮಿಷ

Last Updated 26 ಮೇ 2017, 19:30 IST
ಅಕ್ಷರ ಗಾತ್ರ

ಭಾರತ ಸರ್ಕಾರದ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) 1980ರ ದಶಕದ ಉತ್ತರಾರ್ಧದಲ್ಲಿ ಉತ್ತರ ಕನ್ನಡ ಜಿಲ್ಲೆಯೊಂದಿಗೆ ನೆಂಟಸ್ಥನ ಬೆಳೆಸಲು ಬಂದಾಗ ಪರಿಸರವಾದಿಗಳ ಜೊತೆ ನೂರಾರು ಹಳ್ಳಿಗಳ ಜನರು ಕಿತ್ತೆದ್ದು ಬಂದು ಈ ಹೊಸ ಸಂಬಂಧ ಸಾಧ್ಯವಿಲ್ಲವೆಂದು ಖಂಡತುಂಡವಾಗಿ ವಾದಿಸಿದರು. ಜನಮತ ಧಿಕ್ಕರಿಸಿ ಸರ್ಕಾರ, ಜಿಲ್ಲಾ ಕೇಂದ್ರ ಕಾರವಾರದ ಸಮೀಪ ಕಾಳಿ ನದಿ ತಟದ ಕಾನನ ಪ್ರದೇಶದಲ್ಲಿರುವ ಕೈಗಾದಲ್ಲಿ ಪರಮಾಣು ಸ್ಥಾವರ ಸ್ಥಾಪನೆಗೆ ಮುಂದಡಿಯಿಟ್ಟಿತು.

2000ನೇ ಇಸವಿಯಲ್ಲಿ ಕಾರ್ಯಾರಂಭಿಸಿದ ಕೈಗಾ ಅಣು ಸ್ಥಾವರ ಒಟ್ಟು ನಾಲ್ಕು ರಿಯಾಕ್ಟರ್‌ಗಳನ್ನು ಹೊಂದಿ ಪ್ರತಿ ಘಟಕದಿಂದ 220 ಮೆಗಾ ವಾಟ್‌ನಂತೆ ಒಟ್ಟು 880 ಮೆಗಾ ವಾಟ್‌ ವಿದ್ಯುತ್ ಉತ್ಪಾದನೆ ಮಾಡುತ್ತಿದೆ.

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಹೊಸ ನಿರ್ಮಾಣಕ್ಕೆ ಅನುಮೋದನೆ ನೀಡಿದ 10 ಪರಮಾಣು ರಿಯಾಕ್ಟರ್‌ಗಳ ಪೈಕಿ ಎರಡು ಘಟಕಗಳು ಕೈಗಾಕ್ಕೆ ಸೇರ್ಪಡೆಯಾಗಿವೆ. 5 ಮತ್ತು 6ನೇ ರಿಯಾಕ್ಟರ್‌ಗಳು ಬರುವ ಸುದ್ದಿ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಇದೇ ವೇಳೆಗೆ ಎನ್‌ಪಿಸಿಐಎಲ್ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ವೆಚ್ಚ ಮಾಡಿರುವ ಕೋಟ್ಯಂತರ ರೂಪಾಯಿ, ಹೋರಾಟದ ಕಾವನ್ನು ಮಂದಗೊಳಿಸಿದೆ ಎಂಬುದು ಸಹ ನಿಚ್ಚಳವಾಗಿದೆ. ಪರಿಸರವಾದಿಗಳು ಮಾತ್ರ, ಮುಂಬೈನ  ಟಾಟಾ ಮೆಮೋರಿಯಲ್ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್ 2012ರಲ್ಲಿ ಕೈಗಾ ಸುತ್ತಲಿನ ಹಳ್ಳಿಗಳಲ್ಲಿ ನಡೆಸಿರುವ ಆರೋಗ್ಯ ಸಮೀಕ್ಷೆಯ ಅಂತಿಮ ವರದಿ ಪ್ರಕಟಗೊಳಿಸಿದ ನಂತರವೇ ಹೊಸ ಘಟಕಗಳ ಸ್ಥಾಪನೆಗೆ ಸರ್ಕಾರ ಯೋಚಿಸಬೇಕು ಎಂದು ಹಟ ಹಿಡಿದಿದ್ದಾರೆ.

ಸೌಲಭ್ಯದ ಆಮಿಷ: ‘ಶಿವರಾಮ ಕಾರಂತ ಅವರ ನೇತೃತ್ವದಲ್ಲಿ ಕೈಗಾ ವಿರೋಧಿ ಹೋರಾಟ ನಡೆದಾಗ ನಾನು ಪಾದಯಾತ್ರೆಯಲ್ಲಿ ಭಾಗವಹಿಸಿದ್ದೆ. ಇಂದು ಮನಸ್ಸಿನಲ್ಲಿ ಹೋರಾಟದ ಹುಮ್ಮಸ್ಸಿದ್ದರೂ, ಮೈಯಲ್ಲಿ ಕಸುವಿಲ್ಲ. ಯುವ ಪೀಳಿಗೆ ನಗರ ಸೇರಿದೆ. ಕೃಷಿ ಬದುಕು ಕಟ್ಟಿಕೊಂಡು ಹಳ್ಳಿಯಲ್ಲಿ ಉಳಿದಿರುವ ಯುವಕರಲ್ಲೂ ಸಂಘಟನಾತ್ಮಕವಾಗಿ ಸಿಡಿದು ನಿಲ್ಲುವ ಮನೋಭಾವ ಕಡಿಮೆಯಾಗಿದೆ. ಹಾಗೆಂದು ಪ್ರತಿರೋಧ ಇಲ್ಲವೆಂದಲ್ಲ ಪ್ರತಿಯೊಬ್ಬರಲ್ಲೂ ವೈಯಕ್ತಿಕ ನೆಲೆಯ ವಿರೋಧವಿದೆ’ ಎನ್ನುತ್ತಾರೆ ತಾರಗಾರಿನ ನರಸಿಂಹ ಗಾಂವಕರ. 

ತೀರಾ ಹಿಂದುಳಿದಿದ್ದ ಕೈಗಾ ಸನಿಹದ (15–20 ಕಿ.ಮೀ ಅಂತರದಲ್ಲಿರುವ) ಯಲ್ಲಾಪುರ ತಾಲ್ಲೂಕಿನ ಹಳ್ಳಿಗಳು ಒಂದೂವರೆ ದಶಕದಲ್ಲಿ ಅಚ್ಚರಿಯ ಬೆಳವಣಿಗೆ ಕಂಡಿವೆ. ಊರಿನ ಶಾಲೆ, ಸಮುದಾಯ ಭವನ ಕಟ್ಟಡ, ಕಿರು ಸೇತುವೆ, ದೊಡ್ಡ ಸೇತುವೆಗಳಿಗೆ ಅನುದಾನ, ಶಾಲಾ ಮಕ್ಕಳ ಪುಸ್ತಕಗಳು, ಪೆನ್ನು, ಪಾಟಿಚೀಲ ಒಳಗೊಂಡ ಹಲವು ಸೌಲಭ್ಯಗಳು ಎನ್‌ಪಿಸಿಐಎಲ್‌ನಿಂದ ಒದಗಿಬರುತ್ತಿವೆ. ಆರೋಗ್ಯ ಸೇವೆ ನೀಡಲು ಮೊಬೈಲ್ ಕ್ಲಿನಿಕ್ ವಾರಕ್ಕೊಮ್ಮೆ ಪ್ರತಿ ಹಳ್ಳಿಗೆ ಭೇಟಿ ನೀಡಿ ಉಚಿತ ತಪಾಸಣೆ, ಔಷಧ ವಿತರಿಸುತ್ತದೆ. ಹಳ್ಳಿಗರ ಸಂಘಟನೆ ಮುರಿಯಲೆಂದೇ ಎನ್‌ಪಿಸಿಐಎಲ್‌ ಇಷ್ಟೆಲ್ಲ ಸೌಕರ್ಯ ನೀಡುತ್ತದೆ ಎಂಬ ಭಾವ ಜನರಲ್ಲಿ ಬಲವಾಗಿದ್ದರೂ, ಬದುಕಿನ ಅನಿವಾರ್ಯ ಅವರನ್ನು ಮೆತ್ತಗೆ ಮಾಡಿದೆ.

‘ಅಣು ಸ್ಥಾವರ ಹೊರಸೂಸುವ ವಿಕಿರಣದಿಂದ ಕ್ಯಾನ್ಸರ್, ಥೈರಾಯ್ಡ್‌ ನಂತಹ ಸಮಸ್ಯೆಗಳು ಬರುತ್ತವೆ ಎನ್ನುತ್ತಾರೆ. ಅದಕ್ಕೆ ಪುಷ್ಟಿಯೆಂಬಂತೆ ನಮ್ಮ ಭಾಗದಲ್ಲಿ ಪ್ರತಿ ಮನೆಯಲ್ಲಿ ಥೈರಾಯ್ಡ್  ಸಮಸ್ಯೆ ಇರುವ ರೋಗಿಗಳಿದ್ದಾರೆ. ಅನೇಕರಿಗೆ ಕ್ಯಾನ್ಸರ್ ಬಂದಿದೆ. ಎಳೆಯರಲ್ಲಿ ಕೈಕಾಲು ಗಂಟು ನೋವು ಕಾಣಿಸಿಕೊಂಡಿದೆ. ನಮ್ಮ ಭಾಗದ ಯುವಕರಿಗೆ ಹೆಣ್ಣು ಕೊಡಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ’ ಎನ್ನುವ ಥೈರಾಯ್ಡ್ ರೋಗಿ ಸವಿತಾ ಹೆಬ್ಬಾರ್, ‘ಸರ್ಕಾರ ಅಣು ಸ್ಥಾವರವನ್ನಂತೂ ಮುಚ್ಚುವುದಿಲ್ಲ, ಕೈಗಾ ಮೂಲಕ ಊರಿನ ಅಭಿವೃದ್ಧಿಯನ್ನಾದರೂ ಮಾಡಿಕೊಳ್ಳೋಣ ಎಂಬ ಮಾನಸಿಕತೆಯಲ್ಲಿ ಜನರಿದ್ದಾರೆ’ ಎಂದು ಆರೋಪಿಸಿದರು.



‘ದಶಕಗಳ ಹಿಂದೆ ಸರ್ಕಾರಗಳನ್ನು ನಡುಗಿಸಿದ್ದ ಬೇಡ್ತಿ, ಕೊಡಸಳ್ಳಿ, ಕೈಗಾದಂತಹ ಚಳವಳಿಗಳ ತೀವ್ರತೆ, ಸ್ಪಂದಿಸುವ ಮನಸ್ಸು ಇಂದಿನ ಯುವ ಪೀಳಿಗೆಯಲ್ಲಿ ಕಾಣುತ್ತಿಲ್ಲ. ಅದನ್ನೇ ಬಳಸಿಕೊಂಡು ಯೋಜನೆಗಳ ಒತ್ತಡದಿಂದ ಜರ್ಝರಿತವಾಗಿರುವ ಜಿಲ್ಲೆಯ ಮೇಲೆ ಮತ್ತಷ್ಟು ಭಾರ ಹೇರುವ ಸರ್ಕಾರದ ಕ್ರಮವೂ ಸರಿಯಲ್ಲ’ ಎಂದು ಹೇಳುತ್ತಾರೆ ಕೈಗಾ ವಿರೋಧಿ ಹೋರಾಟದ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಯಲ್ಲಾಪುರದ ಪ್ರಮೋದ ಹೆಗಡೆ.

2009ರಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಟ್ರೀಷಿಯಂ ಸೋರಿಕೆ ಪ್ರಕರಣ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅಧಿಕಾರಿಗಳು ಇದು ಉದ್ದೇಶಪೂರ್ವಕ ಕೃತ್ಯ ಎಂದು ಸಮಸ್ಯೆ ತಿಳಿಗೊಳಿಸಿದ್ದರು. ಆದರೆ ಜಿಲ್ಲೆಯ ಜನರಿಗೆ ಮಾತ್ರ ಈ ಕರಾಳ ಸನ್ನಿವೇಶ ಇಂದಿಗೂ ಸ್ಮರಣೆಯಲ್ಲಿದೆ.

ಪಶ್ಚಿಮಘಟ್ಟದಲ್ಲಿ ಸಾಧ್ಯವೇ ಇಲ್ಲ: ಭಾರತ ದೇಶದಲ್ಲಿ ಶೇ 2.5ರಷ್ಟು ಮಾತ್ರ ಪಶ್ಚಿಮಘಟ್ಟ ಪ್ರದೇಶವಿದೆ. ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಈ ಸೂಕ್ಷ್ಮ ಪರಿಸರ ವಲಯ ಪ್ರದೇಶವೇ ಯಾಕೆ ಬೇಕು? ದೇಶದ ನೀರು, ಆಹಾರ ಸುಭದ್ರತೆಯ ದೃಷ್ಟಿಯಿಂದ ಅಣು ರಿಯಾಕ್ಟರ್‌ಗಳ ವಿಸ್ತರಣೆ ಸಾಧ್ಯವೇ ಇಲ್ಲ ಎಂಬುದು ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ಅವರ ವಾದ.

ಉದ್ದೇಶಿತ 5 ಮತ್ತು 6ನೇ ಘಟಕದಿಂದ ಉತ್ಪಾದನೆಯಾಗುವ 1,400 ಮೆಗಾ ವಾಟ್ ವಿದ್ಯುತ್ ಸಾಗಾಟಕ್ಕೆ ಮತ್ತಷ್ಟು ಮರಗಳ ನಾಶ ಖಚಿತ. ಉತ್ತರ ಕನ್ನಡದಲ್ಲಿ ಶೇ 65ರಷ್ಟಿದ್ದ ನಿತ್ಯ ಹರಿದ್ವರ್ಣ ಕಾಡು ಶೇ 32ಕ್ಕೆ ಇಳಿದಿದೆ. ಪಶ್ಚಿಮ ಘಟ್ಟದ ಮೇಲೆ ಯೋಜನೆಗಳ ಹೇರುವಿಕೆ ಪ್ರಸ್ತುತ ಎದುರಾಗಿರುವ ಜಲಕ್ಷಾಮವನ್ನು ಉಲ್ಬಣಿಸುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ದೇಶದಲ್ಲಿ ವಿದ್ಯುತ್ ಕೊರತೆ ನೀಗಿಸಲು ಅಣು ಸ್ಥಾವರವೇ ಬೇಕಾಗಿಲ್ಲ. ಭಾರತದಲ್ಲಿ ಸೌರ ವಿಕಿರಣ ಹೆಚ್ಚಿನ ಪ್ರಮಾಣದಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ರಾಷ್ಟ್ರಗಳನ್ನು ಸೇರಿಸಿಕೊಂಡು ಸೌರ ಮೈತ್ರಿಕೂಟ ರಚಿಸಿದ್ದಾರೆ. ಸೌರ ವಿದ್ಯುತ್‌ಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಯೋಜನೆ ಈಗಾಗಲೇ ಅನುಷ್ಠಾನದಲ್ಲಿದೆ. ಅನೇಕ ಸಂಘ –ಸಂಸ್ಥೆಗಳು, ರೈತರು ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ ವಿದ್ಯುತ್ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದಾರೆ. ಇದನ್ನೇ ವ್ಯಾಪಕಗೊಳಿಸುವ ಜೊತೆ ಗಾಳಿ, ಜೈವಿಕ ಇಂಧನ ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ಮಾಡುತ್ತಾರೆ.

‘ಬೇರೆ ದೇಶಗಳು ಅಣು ವಿದ್ಯುತ್ ತಿರಸ್ಕರಿಸುತ್ತಿವೆ. ರಷ್ಯಾದ ಚೆರ್ನೋಬಿಲ್, ಅಮೆರಿಕದ ತ್ರೀಮೈಲ್ ಐಲ್ಯಾಂಡ್ ಪರಮಾಣು ವಿದ್ಯುತ್ ಘಟಕಗಳಲ್ಲಿ ಸಂಭವಿಸಿದ ಅವಘಡಗಳಿಂದ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಅಣು ವಿದ್ಯುತ್ ಘಟಕದಿಂದ ಜೈವಿಕ ಪರಿಸರದ ಮೇಲೆ ಆಗುವ ಅನಾಹುತ ಅಧ್ಯಯನ ಮಾಡಲಾಗಿದೆಯೇ? ಅಣು ತ್ಯಾಜ್ಯ ವಿಲೇವಾರಿಯಲ್ಲಿ ಪಾರದರ್ಶಕತೆ ಎಲ್ಲಿದೆ? ಕೈಗಾ ಸುತ್ತಲಿನ ಹಳ್ಳಿಗಳಲ್ಲಿ ಕ್ಯಾನ್ಸರ್ ರೋಗಿಗಳು ಯಾಕೆ ಹೆಚ್ಚಾಗುತ್ತಿದ್ದಾರೆ? ಈ ಪ್ರಶ್ನೆಗಳಿಗೆ ಇಂದಿಗೂ ಉತ್ತರ ದೊರೆತಿಲ್ಲ. ಕಲುಷಿತಗೊಂಡ ನೀರಿನಲ್ಲಿ ಬೆಳೆಯುವ ಮೀನು ನಮ್ಮ ಊಟದ ತಟ್ಟೆಗೆ ಬರುತ್ತದೆ ಎಂಬ ಅರಿವು ಯೋಜನೆ ಅನುಷ್ಠಾನಗೊಳಿಸುವವರಿಗೆ ಇಲ್ಲವೇ?’ ಎಂದು ರಾಮಚಂದ್ರ ಪ್ರಶ್ನಿಸುತ್ತಾರೆ.

ಪ್ರತಿ ಮನುಷ್ಯನ ವಿದ್ಯುತ್ ಬಳಕೆಯ ಆಧಾರದಲ್ಲಿ ದೇಶ ಉದ್ಧಾರ ಆಗುವುದಿಲ್ಲ. ಪೋಲಾಗುವ ವಿದ್ಯುತ್ ಉಳಿಸಲು ಸರ್ಕಾರ ಯೋಚಿಸಬೇಕು ಎಂಬುದು ಅವರ ಕಿವಿಮಾತು.

ಸ್ಥಳಾಂತರ ಮರೀಚಿಕೆ: ‘ಅಣು ಸ್ಥಾವರದ 5 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸುಮಾರು 500 ಕುಟುಂಬಗಳನ್ನು ಸ್ಥಳಾಂತರಗೊಳಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ನಾಲ್ಕು ವರ್ಷಗಳ ಹಿಂದೆ 104 ದಿನ ಹೋರಾಟ ಮಾಡಿದ್ದೆವು. ರಾಜ್ಯದ ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ಅವರು ಹೋರಾಟಗಾರರ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಮೇಲೆ ಪ್ರತಿಭಟನೆ ಹಿಂಪಡೆಯಲಾಗಿತ್ತು. ನಮ್ಮ ಮನವಿಗೆ ಸರ್ಕಾರ ಇನ್ನೂ ಬೆಲೆ ಕೊಟ್ಟಿಲ್ಲ. ಸ್ಥಾವರದಲ್ಲಿ ಒಂದೊಮ್ಮೆ ಅನಾಹುತ ಸಂಭವಿಸಿದರೆ ಈ ಗುಡ್ಡಗಾಡು ಪ್ರದೇಶದಲ್ಲಿರುವ ನಮ್ಮನ್ನು ತಕ್ಷಣ ಸ್ಥಳಾಂತರಿಸಲು ಉತ್ತಮ ರಸ್ತೆ ಸಹ ಇಲ್ಲ. ಮೂಲ ಸೌಕರ್ಯ ಅಭಿವೃದ್ಧಿಪಡಿಸಿ ಹೊಸ ಘಟಕ ತನ್ನಿ’ ಎಂಬುದು ಕೈಗಾದಿಂದ 3.2 ಕಿ.ಮೀ ದೂರದಲ್ಲಿರುವ ಬಾಳೆಮನಿಯ ಶ್ಯಾಮನಾಥ ನಾಯ್ಕ ಅವರ ಆಗ್ರಹ.

ಮಕ್ಕಳಿಗೂ ಇಲ್ಲಿಯೇ ನೌಕರಿ ಸಿಗಲಿ: ‘ಕೈಗಾ ಘಟಕ ವಿಸ್ತರಣೆ ಹೊಸ ತಂತ್ರಜ್ಞಾನದ ನಿರೀಕ್ಷೆ ಮೂಡಿಸಿದೆ. ವಿಕಿರಣದ ದುಷ್ಪರಿಣಾಮ ಇಲ್ಲದಿರುವುದನ್ನು ಮನಗಂಡೇ ಸರ್ಕಾರ ಹೊಸ ಘಟಕಕ್ಕೆ ಅನುಮತಿ ನೀಡಿದೆ. ನಮ್ಮ ಕುಟುಂಬ, ಮಕ್ಕಳು ಕೈಗಾ ವಲಯದಲ್ಲಿಯೇ ವಾಸಿಸುವ ಜತೆಗೆ ಇಲ್ಲಿಂದ ಹೊರ ಹೋಗುವ ನೀರನ್ನೇ ಕುಡಿಯುತ್ತೇವೆ. 25 ವರ್ಷ ಗಳಿಂದ ಇದೇ ಪರಿಸರದಲ್ಲಿ ಕೆಲಸ ಮಾಡುತ್ತಿದ್ದರೂ ಯಾವ ಕಾಯಿಲೆಯೂ ಕಾಡಿಲ್ಲ. ಶೇ 80ರಷ್ಟು ನೌಕರರು ತಮ್ಮ ಮಕ್ಕಳಿಗೂ ಇಲ್ಲಿಯೇ ನೌಕರಿ ಸಿಗಲಿ ಎಂದು ಬಯಸುತ್ತಿದ್ದಾರೆ’ ಎಂದು ಕೈಗಾ ನೌಕರರೊಬ್ಬರು ಪ್ರತಿಕ್ರಿಯಿಸಿದರು.
*
ಪರಿಸರ ಸ್ನೇಹಿ
‘ದೇಶದಲ್ಲಿ ವಿದ್ಯುತ್ ಬೇಡಿಕೆ ಅಗಾಧವಾಗಿದೆ. ಜಾಗತಿಕ ತಾಪಮಾನ, ಹವಾಮಾನ ಬದಲಾವಣೆಯ ಸವಾಲು ಎದುರಾಗಿರುವ ಸಂದರ್ಭದಲ್ಲಿ ಪರಿಸರ ಸ್ನೇಹಿಯಾಗಿರುವ ಪರಮಾಣು ವಿದ್ಯುತ್ ಉತ್ಪಾದನೆ ಅನಿವಾರ್ಯ. ಕಲ್ಲಿದ್ದಲು ವಿದ್ಯುತ್ ಉತ್ಪಾದನೆ ವಾತಾವರಣಕ್ಕೆ ಹಾನಿಕಾರಕ, ಆದರೆ ಅಣು ವಿದ್ಯುತ್ ಹಸಿರು ಇಂಧನವೆಂದೇ ಪರಿಚಿತ’ ಎಂದು ಕೈಗಾ ಅಣು ಸ್ಥಾವರದ ಸ್ಥಾನಿಕ ನಿರ್ದೇಶಕ ಎಚ್‌.ಎನ್. ಭಟ್ ಪ್ರತಿಪಾದಿಸುತ್ತಾರೆ.

‘ಎನ್‌ಪಿಸಿಐಎಲ್, ಕೈಗಾ ಸುತ್ತಲಿನ 50 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಮುಂಬೈಯ ಟಾಟಾ ಮೆಮೊರಿಯಲ್ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮೂಲಕ ಆರೋಗ್ಯ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದೆ. ಘಟಕ ಸ್ಥಾಪನೆಯ ಪೂರ್ವ ಹಾಗೂ ಪ್ರಸ್ತುತ ಅಂಕಿಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಜಗತ್ತಿನಲ್ಲಿ ವಿಕಿರಣ ಇಲ್ಲದ ಜಾಗವೇ ಇಲ್ಲ. ಅಣು ವಿದ್ಯುತ್ ಘಟಕದಿಂದ ವಿಕಿರಣ ಹೆಚ್ಚಾಗುತ್ತದೆ ಎಂಬುದು ತಪ್ಪು ಕಲ್ಪನೆ.

‘ಕಾರವಾರ ಸುತ್ತಮುತ್ತಲಿನ ವಾತಾವರಣದಲ್ಲಿ 2,400 ಮೈಕ್ರೊಸೀವರ್ಟ್ (ಎಸ್‌ವಿ) ವಿಕಿರಣ ದಾಖಲಾಗಿತ್ತು. ಅಣು ಸ್ಥಾವರ ನಿರ್ಮಾಣಗೊಂಡ ಮೇಲೆ ಈ ಪ್ರಮಾಣ 2,401 ಎಸ್‌ವಿ ಆಗಿದೆಯಷ್ಟೆ. ಬೆಂಗಳೂರಿನಲ್ಲಿ 3,500 ಯೂನಿಟ್ ವಿಕಿರಣ ಹೊರಹೊಮ್ಮುತ್ತದೆ. 4 ಲಕ್ಷ ಮೈಕ್ರೊಸೀವರ್ಟ್‌ಗಿಂತ ಅಧಿಕ ವಿಕಿರಣ ಮಾತ್ರ ಅಪಾಯಕಾರಿ’ ಎಂಬುದು ಅವರ ವಾದ.

‘ದೇಶದಲ್ಲಿ ಒಂದು ಲಕ್ಷ ಜನರಲ್ಲಿ 200 ಜನರಿಗೆ ಕ್ಯಾನ್ಸರ್ ಬರುತ್ತಿದೆ. ಕೈಗಾ ಸುತ್ತಮುತ್ತ ಈ ಅನುಪಾತ ಕಮ್ಮಿಯಿದೆ. ಈಶಾನ್ಯ ರಾಜ್ಯಗಳಲ್ಲಿ ಅಣು ವಿದ್ಯುತ್ ಸ್ಥಾವರಗಳಿಲ್ಲ. ಆದರೂ ಅಲ್ಲಿ ಕ್ಯಾನ್ಸರ್ ಪ್ರಮಾಣ ಜಾಸ್ತಿ ಇದೆ. ಅಣು ರಿಯಾಕ್ಟರ್‌ಗಳು ಕ್ಯಾನ್ಸರ್ ಬರಲು ಕಾರಣ ಎಂಬ ಆರೋಪದಲ್ಲಿ ಹುರುಳಿಲ್ಲ ಎನ್ನುವ ಅವರು, ಮಾಧ್ಯಮಗಳು ಜನರಿಗೆ ಈ ಬಗ್ಗೆ ತಿಳಿ ಹೇಳಬೇಕು ಎನ್ನುತ್ತಾರೆ.

ಕೈಗಾದಲ್ಲಿ ಎನ್‌ಪಿಸಿಐಎಲ್‌ ಹೊಂದಿರುವ 600 ಹೆಕ್ಟೇರ್‌ ಜಾಗದಲ್ಲಿ ಕೇವಲ 120 ಹೆಕ್ಟೇರ್‌ಗಳಲ್ಲಿ ನಾಲ್ಕು ರಿಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಅಮೆರಿಕದಲ್ಲಿ 103 ಅಣು ರಿಯಾಕ್ಟರ್‌ಗಳಿವೆ. ಆ ದೇಶಕ್ಕೆ ಅಗತ್ಯವಿರುವಷ್ಟು ವಿದ್ಯುತ್ ಘಟಕಗಳು ಬಹಳ ಹಿಂದೆಯೇ ನಿರ್ಮಾಣಗೊಂಡಿವೆ. ಅಣು ತ್ಯಾಜ್ಯ ವ್ಯವಸ್ಥಿತ ವಿಲೇವಾರಿಯ ಸಂಶೋಧನೆ ಪ್ರಗತಿಯಲ್ಲಿದೆ. ಭವಿಷ್ಯದಲ್ಲಿ ತ್ಯಾಜ್ಯ ಕಡಿಮೆಗೊಳಿಸುವ ತಂತ್ರಜ್ಞಾನ ಅಭಿವೃದ್ಧಿಗೊಳ್ಳಬಹುದು. ಪ್ರಸ್ತುತ ಪ್ರತಿ ರಿಯಾಕ್ಟರ್‌ನಿಂದ ಬರುವ ತ್ಯಾಜ್ಯವನ್ನು 100 ವರ್ಷಗಳವರೆಗೆ ಶೇಖರಿಸುವಷ್ಟು ವಿಶಾಲವಾದ ಮತ್ತು ಭದ್ರವಾದ ಜಾಗವಿದೆ ಎಂದು ಅವರು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT