ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವಾರಣೆಯಾಗದ ಅಸಮತೋಲನ ಆಡಳಿತಯಂತ್ರದ ವೈಫಲ್ಯ ಅಕ್ಷಮ್ಯ

Last Updated 26 ಮೇ 2017, 19:30 IST
ಅಕ್ಷರ ಗಾತ್ರ

ರಾಜ್ಯದ ಹಿಂದುಳಿದ 114 ತಾಲ್ಲೂಕುಗಳಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಪ್ರತಿವರ್ಷ ಹಂಚಿಕೆ ಮಾಡುತ್ತಿರುವ ಅನುದಾನವನ್ನು ‘ಹಿಂದುಳಿದಿರುವಿಕೆ’ ಮಾನದಂಡವನ್ನು ಬದಿಗಿಟ್ಟು ಪ್ರಭಾವಿ ಶಾಸಕರು ತಮ್ಮ ತಾಲ್ಲೂಕುಗಳಿಗೆ ಬಳಸಿಕೊಳ್ಳುತ್ತಿರುವುದು ಈಗ ಸರ್ಕಾರದ ಗಮನಕ್ಕೆ ಬಂದಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿನ ವಿವಿಧ ತಾಲ್ಲೂಕುಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ್ದ ಡಾ. ಡಿ.ಎಂ.ನಂಜುಂಡಪ್ಪ ಅವರು, ಯಾವ್ಯಾವ ತಾಲ್ಲೂಕಿನಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುದನ್ನು ತಮ್ಮ ವರದಿಯಲ್ಲಿ ತಿಳಿಸಿದ್ದರು.

ವರದಿಯ ಅನುಷ್ಠಾನಕ್ಕಾಗಿ ಹತ್ತು ವರ್ಷಗಳ ಅವಧಿಯಲ್ಲಿ ₹ 19,016 ಕೋಟಿ ಅನುದಾನವನ್ನೇನೋ ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲಿ ₹ 17,499 ಕೋಟಿ ಖರ್ಚಾಗಿದೆ. ಆದರೂ ಅತಿ ಮತ್ತು ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಹೇಳಿಕೊಳ್ಳುವಂತಹ ಬದಲಾವಣೆ ಆಗಿಲ್ಲ ಎಂದರೆ, ಸರ್ಕಾರಕ್ಕಿರುವ ಕಾಳಜಿ ಎಂತಹದ್ದು ಎಂಬುದು ಗೊತ್ತಾಗುತ್ತದೆ. ಜತೆಗೆ ಬಿಡುಗಡೆಯಾದ ಹಣವನ್ನು ಪ್ರಭಾವಿ ಶಾಸಕರು ತಾವು ಪ್ರತಿನಿಧಿಸುವ ತಾಲ್ಲೂಕುಗಳಿಗೆ ಒಯ್ದಿರುವುದು ನಾಚಿಕೆಗೇಡು. ಅರ್ಹ ತಾಲ್ಲೂಕುಗಳ ಅನುದಾನ ಕಸಿದುಕೊಳ್ಳುವುದು ಒಳ್ಳೆಯ ಲಕ್ಷಣ ಅಲ್ಲ. ಈ ಹತ್ತು ವರ್ಷಗಳಿಗೆ ಸರ್ಕಾರ ₹ 25,438 ಕೋಟಿ ಅನುದಾನ ನಿಗದಿಪಡಿಸಿತ್ತು. ಆದರೆ ಅದಕ್ಕೆ ತಕ್ಕಂತೆ ಕ್ರಿಯಾ ಯೋಜನೆಯನ್ನು ಆಡಳಿತಯಂತ್ರ ಸಿದ್ಧಪಡಿಸಿಲ್ಲ. ಹಾಗಾಗಿ ಪೂರ್ಣ ಹಣ ಬಿಡುಗಡೆಯಾಗಿಲ್ಲ.

ಅತ್ಯಂತ ಹಿಂದುಳಿದ ತಾಲ್ಲೂಕುಗಳ ಪೈಕಿ ಹೆಚ್ಚಿನವು ರಾಜ್ಯದ ಉತ್ತರ ಭಾಗದಲ್ಲಿವೆ. ನಂಜುಂಡಪ್ಪ ವರದಿ ಸರ್ಕಾರದ ಕೈ ಸೇರುವವರೆಗೆ ಪ್ರಾದೇಶಿಕ ಅಸಮತೋಲನ ನಿವಾರಣೆ ಆ ಭಾಗಕ್ಕೆ ಕೇವಲ ಭಾವನಾತ್ಮಕ ಸಂಗತಿ ಆಗಿತ್ತು. ಈಗ ಕೈಯಲ್ಲಿ ನೀಲನಕ್ಷೆ ಇದೆ. ಆ ನೀಲನಕ್ಷೆಗೆ ಅನುಗುಣವಾಗಿ ಕೆಲಸಕಾರ್ಯಗಳು ನಡೆದಿದ್ದರೆ ಈ ವೇಳೆಗೆ ಆ ತಾಲ್ಲೂಕುಗಳ ಸ್ಥಿತಿ ಸ್ವಲ್ಪವಾದರೂ ಸುಧಾರಿಸುತ್ತಿತ್ತು. ಪ್ರಭಾವಿ ಶಾಸಕರು ಅನುದಾನ ದುರ್ಬಳಕೆ ಮಾಡಿಕೊಳ್ಳುವುದನ್ನು ಅಧಿಕಾರಿಗಳು ತಪ್ಪಿಸಬೇಕಿತ್ತು.  ಯೋಜನೆಯ ಹಣವನ್ನು ನಿರ್ದಿಷ್ಟ ತಾಲ್ಲೂಕಿನ ಅಭಿವೃದ್ಧಿಗೇ ಬಳಸಿಕೊಳ್ಳಬೇಕಿದೆ ಎಂದು ಅವರಿಗೆ ಮನವರಿಕೆ ಮಾಡಿಕೊಡಬೇಕಿತ್ತು.

ಇದರ ಬದಲಿಗೆ ಶಾಸಕರ ಪ್ರಭಾವಕ್ಕೆ ಅಧಿಕಾರಿಗಳು ಮಣಿದಿರುವುದರಿಂದಲೇ ತೀರಾ ಹಿಂದುಳಿದ ತಾಲ್ಲೂಕುಗಳಿಗೆ ಏನೇನೂ ಸಿಕ್ಕಿಲ್ಲ.  ಈ ಅನ್ಯಾಯದಲ್ಲಿ ಅಧಿಕಾರಶಾಹಿಯ ಪಾತ್ರವೇ ಹೆಚ್ಚು. ಅತಿ ದಯನೀಯ ಸ್ಥಿತಿಯಲ್ಲಿರುವ ಜನರ ಏಳಿಗೆಯ ದೃಷ್ಟಿಯಿಂದ ರೂಪಿಸಿದ ಯೋಜನೆ ಜಾರಿಯಲ್ಲೂ ಅಧಿಕಾರಿಗಳ ಇಂತಹ ವರ್ತನೆ ಅಕ್ಷಮ್ಯ. ಇಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಬೇಕು. ನಿಗದಿಪಡಿಸಿದ ಹಣ–ಯೋಜನೆ ಅರ್ಹ ತಾಲ್ಲೂಕಿಗೆ ತಲುಪಿಲ್ಲ. ಅಂದರೆ, ಯಾವ ತಾಲ್ಲೂಕಿನಲ್ಲಿ ಏನು ಕೆಲಸ ಕೈಗೆತ್ತಿಕೊಳ್ಳಬೇಕು ಎಂಬ ಸ್ಪಷ್ಟ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಳ್ಳದೆ ಅಧಿಕಾರಿ ವರ್ಗ ಕಾರ್ಯನಿರ್ವಹಿಸುತ್ತಿದೆ ಎಂದೇ ಅರ್ಥ.

ಪ್ರಾದೇಶಿಕ ಅಸಮತೋಲನ ನಿವಾರಣೆ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚಾಗಿದೆ. ಇದರ ಲೆಕ್ಕಪತ್ರ ಪರಿಶೀಲನೆ ಪಾರದರ್ಶಕವಾಗಿ ನಡೆಯಬೇಕು. ಈ ಯೋಜನೆ ಅಡಿಯಲ್ಲಿ ಆಗಿರುವ ಪ್ರಗತಿ, ಅದರಿಂದ ಜನರಿಗೆ ಆಗಿರುವ ಉಪಯೋಗ ಏನು ಎಂಬುದನ್ನು ಬಹಿರಂಗಪಡಿಸಬೇಕು. ಅಲ್ಲದೇ ಭೌತಿಕವಾಗಿ ಏನೇನು ಆಸ್ತಿ ಸೃಷ್ಟಿಯಾಗಿದೆ ಎಂಬುದೂ ಗೊತ್ತಾಗಬೇಕು. ಎಲ್ಲದಕ್ಕೂ ಹೊಣೆಗಾರಿಕೆ ನಿಗದಿಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT