ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಾಬ್ದಾರಿ ಅರಿತು ಸಾಮರ್ಥ್ಯ ವೃದ್ಧಿಸಿಕೊಳ್ಳಿ

Last Updated 27 ಮೇ 2017, 5:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಪೋಷಕರ ಕನಸು ಸಾಕಾರಗೊಳಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಹೀಗಾಗಿ ಶಿಕ್ಷಕರು ನಿರಂತರವಾಗಿ ತಮ್ಮ ಸೃಜನಶೀಲತೆಯನ್ನು ವೃದ್ಧಿಸಿಕೊಳ್ಳುತ್ತಲೇ ಇರಬೇಕು. ಆಗ ಮಾತ್ರ ಅವರು ವಿದ್ಯಾರ್ಥಿಗಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಲು ಸಾಧ್ಯ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಪ್ರತಿಪಾದಿಸಿದರು.

ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿರುವ ಸತ್ಯಸಾಯಿ ಗ್ರಾಮದಲ್ಲಿ ಸತ್ಯಸಾಯಿ ಲೋಕಸೇವಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿರುವ ಮೂರು ದಿನಗಳ ‘ರಾಷ್ಟ್ರೀಯ ಶಿಕ್ಷಕರ ಸಮಾವೇಶ’ಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಶಿಕ್ಷಕರು ಸಮಾಜದ ಬೆನ್ನೆಲುಬು ಇದ್ದಂತೆ. ಶಿಕ್ಷಕ ವೃತ್ತಿ ಸಮಾಜದ ಬದಲಾವಣೆ ಮತ್ತು ಬಲವರ್ಧನೆಗೆ ಕಾರಣವಾಗಬೇಕು. ಶಿಕ್ಷಕನಾದನಿಗೆ ನಿರಂತರವಾಗಿ ಕಲಿಯುವ ಹಸಿವು ಇರಬೇಕು. ಆಗ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯ. ಬದಲಾದ ಕಾಲಕ್ಕೆ ತಕ್ಷಂತೆ ಶೈಕ್ಷಣಿಕ ಜ್ಞಾನವನ್ನು ಪರಿಷ್ಕರಣೆ ಮಾಡಿಕೊಳ್ಳಬೇಕಾದ್ದದ್ದು ಇಂದಿನ ಅಗತ್ಯವಾಗಿದೆ’ ಎಂದು ಹೇಳಿದರು.

‘ನಮ್ಮಲ್ಲಿ ಇವತ್ತು ಬೋಧನಾ ಕ್ರಮ ಬದಲಾಗಬೇಕಿದೆ. ಅದಕ್ಕಾಗಿ ರಾಜ್ಯದಲ್ಲಿ 50 ಸಾವಿರ ಶಿಕ್ಷಕರಿಗೆ ಶೈಕ್ಷಣಿಕ ವರ್ಷದಲ್ಲಿ ಪ್ರಮುಖ ವಿಷಯಗಳು ಮತ್ತು ಇಂಗ್ಲಿಷ್‌ ಬೋಧನೆಯ ಕುರಿತು ಮಧ್ಯಮ ಮತ್ತು ದೀರ್ಘ ಅವಧಿಯ ಪುನರ್‌ ರಚನಾ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಶಿಕ್ಷಕರು ಕೂಡ ಆತ್ಮಾವಲೋಕನ ಮಾಡಿಕೊಳ್ಳುವ ಜತೆಗೆ ಬದಲಾದ ಕಾಲಕ್ಕೆ ತಕ್ಕಂತೆ ತಮ್ಮ ಸಾಮರ್ಥ್ಯವನ್ನು ವೃದ್ಧಿಪಡಿಸಿಕೊಂಡು ವೃತ್ತಿಗಿರುವ ಘನತೆ ಎತ್ತಿಹಿಡಿಯುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಅತಿಯಾದ ಒತ್ತಡದಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳು ಕಳೆದುಹೋಗುತ್ತಿವೆ. ಇವತ್ತು ಸಮಾಜದಲ್ಲಿ ಎಂಜಿನಿಯರಿಂಗ್‌, ವೈದ್ಯಕೀಯ ವೃತ್ತಿಯಲ್ಲಿ ಚೆನ್ನಾಗಿ ದುಡ್ಡು ಮಾಡಬಹುದು ಎನ್ನುವ ಮನೋಭಾವ ಮೂಡಿದೆ. ಇದು ಭಾವನೆ ಹೋಗಬೇಕು. ನೈತಿಕ ಮೌಲ್ಯಗಳನ್ನು ಒಳಗೊಂಡ ಶಿಕ್ಷಣ ಬೋಧಿಸುವ ಮೂಲಕ ಶಿಕ್ಷಕರು ಸಮಾಜದ ಋಣ ತೀರಿಸುವಂತಹ ಜವಾಬ್ದಾರಿಯುತ ವಿದ್ಯಾರ್ಥಿ ಸಮುದಾಯ ರೂಪಿಸಬೇಕಿದೆ’ ಎಂದರು.

ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ನಮ್ಮ ದೇಶದಲ್ಲಿ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆಗಳಿಲ್ಲ. ಶಿಕ್ಷಕರು ಮಕ್ಕಳಿಗಾಗಿ ಪಾಠ ಮಾಡುತ್ತಿಲ್ಲ. ಇನ್ನು ಪೋಷಕರು ತಮ್ಮ ಮಗು ಹೀಗೆಯೇ ಆಗಬೇಕು ಎಂದು ಬಯಸಿ ಅದಕ್ಕೆ ಪೂರಕವಾದ ಶಿಕ್ಷಣ ಸಂಸ್ಥೆಗಳ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದು ದುರ್ದೈವ. ಮಗುವಿಗೆ ಮುಕ್ತ ಸ್ವಾತಂತ್ರ್ಯವಿಲ್ಲದ ವಿಚಿತ್ರ ಶಿಕ್ಷಣ ಪದ್ಧತಿ ನಮ್ಮಲ್ಲಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಹುಪಾಲು ವಿದ್ಯಾರ್ಥಿಗಳು ಓದಿನ ಬಳಿಕ ನೌಕರಿ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಪ್ರತಿ 100 ವಿದ್ಯಾರ್ಥಿಗಳಲ್ಲಿ 8ಕ್ಕಿಂತ ಹೆಚ್ಚಿನ ಜನರಿಗೆ ಸರ್ಕಾರ ನೌಕರಿ ಕೊಡಲು ಸಾಧ್ಯವಿಲ್ಲ. ಇಷ್ಟಿದ್ದೂ ಯಾವುದು ಸಿಗುವುದಿಲ್ಲವೋ ಆ ಕಡೆಗೆ ನಾವು ಮಕ್ಕಳನ್ನು ದೂಡುತ್ತಿದ್ದೇವೆ. ಮುಂಬರುವ ಮೂರು ವರ್ಷಗಳಲ್ಲಿ ಅತ್ಯಧಿಕ ಯುವ ಜನರನ್ನು ಹೊಂದುವ ನಮ್ಮ ದೇಶದ ಎದುರು ಭಯಾನಕ ಸಂಕಟವಿದೆ’ ಎಂದು ಹೇಳಿದರು.

‘ಚಿಕ್ಕ ಕುಟುಂಬ ಪರಿಕಲ್ಪನೆ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಶಿಕ್ಷಕರ ಮೇಲೆ ಗುರುತರವಾದ ಜವಾಬ್ದಾರಿ ಇದೆ. ಒತ್ತಡಕ್ಕಿಂತಲೂ ಮುಕ್ತ ಮನಸ್ಸು ವಿದ್ಯಾರ್ಥಿಗಳನ್ನು ತುಂಬಾ ಜಾಣರನ್ನಾಗಿ ಮಾಡುತ್ತದೆ. ಹೀಗಾಗಿ ಮಕ್ಕಳಿಗೆ ಮುಕ್ತ ವಾತಾವರಣ ಕಲ್ಪಿಸಿ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ. ಇಲ್ಲಿ ಶಿಕ್ಷಕರಾಗಿ ಬಂದವರೆಲ್ಲ ಮೂರು ದಿನಗಳ ಬಳಿಕ ಗುರುಗಳಾಗಿ ವಾಪಸ್‌ ಹೋದರೆ ಈ ಸಮಾವೇಶ ಸಾರ್ಥಕವಾಗುತ್ತದೆ’ ಎಂದು ಮಾರ್ಮಿಕವಾಗಿ ತಿಳಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಆಧುನಿಕ ವಿಜ್ಞಾನ ಭೌತಿಕ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿದರೆ, ಆಧ್ಯಾತ್ಮಿಕ ಶಿಕ್ಷಣ ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳುವುದೂ ಕಲಿಸುತ್ತದೆ.  ಇವತ್ತು ನಮ್ಮನ್ನು ನಾವು ತಿಳಿದುಕೊಳ್ಳದೆ ಇತರರಿಗೆ ತಿಳಿ ಹೇಳುವ ಕೆಲಸ ಮಾಡುತ್ತಿದ್ದೇವೆ’ ಎಂದರು.

‘ಆಧುನಿಕ ಶಿಕ್ಷಣದ ಜತೆಗೆ ಆಧ್ಯಾತ್ಮಿಕ, ನೈತಿಕ, ಮೌಲ್ಯಯುತ ಶಿಕ್ಷಣವನ್ನು ನಮ್ಮ ವಿದ್ಯಾರ್ಥಿಗಳ ಮನಸ್ಸಿನಲ್ಲಿ ತುಂಬಬೇಕಿದೆ. ಆಗ ಮಾತ್ರ ನಮ್ಮ ವಿದ್ಯಾರ್ಥಿಗಳು ಮುಂದುವರಿದ ಸಮಾಜದ ಆಸ್ತಿಯಾಗುತ್ತಾರೆ. ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳುತ್ತಾರೆ. ಇವತ್ತು ತಲೆಮಾರುಗಳ ಕಂದಕ ಹೆಚ್ಚುತ್ತಿದೆ. ಇಂದಿನ ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ ಯುಗದಲ್ಲಿದ್ದಾರೆ. ಅದಕ್ಕೆ ತಕ್ಕಂತೆ ಶಿಕ್ಷಕರು ಸಿದ್ಧತೆ ಮಾಡಿಕೊಂಡು ಪಾಠ ಮಾಡಬೇಕಾದ ಅಗತ್ಯವಿದೆ’ ಎಂದು ಒತ್ತಿ ಹೇಳಿದರು.

ಲೋಕಸೇವಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಮಾರ್ಗದರ್ಶಕ ಬಿ. ಎನ್. ನರಸಿಂಹಮೂರ್ತಿ ಮಾತನಾಡಿ, ‘ಉಳ್ಳವರು ಖಾಸಗಿ ಶಾಲೆಗಳಿಗೆ, ಬಡವರ ಮಕ್ಕಳು ಸರ್ಕಾರಿ ಶಾಲೆಗೆ ಎನ್ನುವಂತಹ ಸಮಾಜದೊಳಗಿನ ಈ ಧ್ರುವೀಕರಣ ದುರಂತಕ್ಕೆ ನಾಂದಿಯಾಗುತ್ತಿದೆ. ಇ

ದನ್ನು ಮನಗಂಡು ಸತ್ಯಸಾಯಿ ಬಾಬಾ ಅವರು ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಇವತ್ತು ರಾಜ್ಯದ 9 ಜಿಲ್ಲೆಗಳಲ್ಲಿ ಹರಡಿರುವ 14 ಶಿಕ್ಷಣ ಸಂಸ್ಥೆಗಳ 27 ಶಾಲಾ ಕಾಲೇಜುಗಳಲ್ಲಿ ಸುಮಾರು 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ 10 ವರ್ಷಗಳಲ್ಲಿ ಹೊಸದಾಗಿ 13 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದು ಅವರು ತಿಳಿಸಿದರು.

* * 

ಅಂಕದ ಭಯ ಮಕ್ಕಳನ್ನು ದುರ್ಬಲರನ್ನಾಗಿ ಮಾಡುತ್ತಿದೆ. ಭಯದಲ್ಲಿ ಬೆಳೆದ ಮಗು ದೇಶದ ಆಸ್ತಿ ಆಗಲು ಸಾಧ್ಯವಿಲ್ಲ. ಇವತ್ತು ಮುಕ್ತ ವಾತಾವರಣದ ಶಿಕ್ಷಣ ಅಗತ್ಯವಿದೆ.
ಬಸವರಾಜ ಪಾಟೀಲ ಸೇಡಂ, ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT