ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಲು ಮಾರಲು ಬಂದು ಜೈಲು ಪಾಲಾದ

ಅಕ್ಷರ ಗಾತ್ರ
ಜಗತ್ತಿನ ಹಿಂದುಳಿದ ದೇಶ ಎಂದೇ ಬಿಂಬಿತವಾಗಿರುವ ಆಫ್ರಿಕಾದಲ್ಲಿ ಕಿತ್ತು ತಿನ್ನುವ ಬಡತನ. ಮುರಿದು ಬಿದ್ದ ಕಾನೂನು ಮತ್ತು ನ್ಯಾಯ ವ್ಯವಸ್ಥೆ.

ಹಾದಿಬೀದಿಯಲ್ಲಿ ಪಾನಿಪೂರಿಯ ಹಾಗೆ ಮಾರಾಟವಾಗುವ ಬಂದೂಕು ಮತ್ತು ಡ್ರಗ್ಸ್. ಈ ಕಗ್ಗತ್ತಲೆಯ ಖಂಡದ ಶ್ರೀಮಂತ ಜನ ಉನ್ನತ ವ್ಯಾಸಂಗಕ್ಕಾಗಿ ಬೇರೆ ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ.

ಆದರೆ ದುರದೃಷ್ಟ ಎಂದರೆ ದುಡ್ಡು ಸಂಪಾದಿಸುವ ಸುಲಭದ ಹಾದಿ ಕಂಡುಕೊಳ್ಳುವ ಈ ಯುವಕರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲವರು ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗುತ್ತಾರೆ. ಕೆಲವರು ಶೋಕಿಗಾಗಿ, ಇನ್ನು ಕೆಲವರು ಹಣಕ್ಕಾಗಿ ಡ್ರಗ್ಸ್ ಮಾರುತ್ತಾರೆ.  ಇದೇ ರೀತಿಯ ಕಳ್ಳದಂಧೆಯಲ್ಲಿ ಸಿಲುಕಿರುವ ಯುವಕನ ಕಥೆಯಿದು...
***
ಧಾರವಾಡದಲ್ಲಿರುವ ಈ ಸ್ಥಳ ಶಾಲ್ಮಲೆಯ ಉಗಮ ಸ್ಥಾನ. ಸಪ್ತ ಗಿರಿಗಳ ನಾಡು. ಶಹರದ ಗೌಜು ಗದ್ದಲಗಳಿಂದ ಕೊಂಚ ದೂರದಲ್ಲಿರುವ ಬಡಾವಣೆ. ಅಲ್ಲೊಂದು ಇಲ್ಲೊಂದು ಚದುರಿದಂತೆ ಇರುವ ಮನೆಗಳು. ಹಗಲಿನಲ್ಲೂ ಜನರ ಸಂಚಾರ ಅಷ್ಟಾಗಿ ಇಲ್ಲದ ನಿರ್ಜನ ಪ್ರದೇಶ. 
 
ಇಂತಹ ಪ್ರದೇಶದಲ್ಲಿ ಬ್ರಹ್ಮಲಿಂಗೇಶ್ವರನಗರ ಎಂಬ ಬಡಾವಣೆಯಿದೆ. ಕಡಿಮೆ ಆದಾಯದವರು, ಶಹರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಬಾಡಿಗೆ ಮನೆ ಸಿಗದವರು ಹೆಚ್ಚಾಗಿ ಇಲ್ಲಿ ವಾಸಿಸುತ್ತಿದ್ದಾರೆ. 
 
ಇಲ್ಲೊಂದು ದೊಡ್ಡ ಮನೆಯಿದೆ. ಹಗಲೆಲ್ಲಾ ಸ್ತಬ್ಧವಾಗಿರುವ ಈ ಮನೆ ರಾತ್ರಿಯಾಗುತ್ತಿದ್ದಂತೆ ಜಾಗೃತವಾಗುತ್ತದೆ.  ದ್ವಿಚಕ್ರ, ನಾಲ್ಕು ಚಕ್ರ ವಾಹನಗಳದ್ದೇ ಅಲ್ಲಿ ಸದ್ದು. ಮುಚ್ಚಿದ ಕಿಟಕಿ, ಬಾಗಿಲಿನಿಂದ ಪಾಶ್ಚಾತ್ಯ ಸಂಗೀತದ ಕರ್ಕಶ ಶಬ್ದ ಕಿವಿಗೆ ಬಡಿದರೆ, ಸಿಗರೇಟ್‌ ಹೊಗೆ ಅಲ್ಲಿ ಏಳುತ್ತದೆ.
 
ಅಲ್ಲೇ ಪಕ್ಕದಲ್ಲಿ ದೊಡ್ಡ ಪಾತ್ರೆಯಲ್ಲಿ ಪ್ರಾಣಿಗಳ ಮಾಂಸ ಕುದಿಯುತ್ತದೆ. ಘಮ್ಮೆನುವ ಮಸಾಲೆ ವಾಸನೆ ಇಡೀ ಪ್ರದೇಶವನ್ನು ಬಡಿಯುತ್ತದೆ. ನಸುಕಿನವರೆಗೂ ಏನೇನೋ ವ್ಯವಹಾರಗಳು ಅಲ್ಲಿ ನಡೆದು ಪುನಃ ಬೆಳಿಗ್ಗೆ ನೀರವ ಮೌನ...
 
ಇಂತಿಪ್ಪ ಪ್ರದೇಶದಲ್ಲಿ ವಾಸಮಾಡಿಕೊಂಡಾತ ಇದರಿಂದ ಬೇಸತ್ತು ಪೊಲೀಸರಿಗೆ ಮಾಹಿತಿ ನೀಡುತ್ತಾನೆ. ಈ ಮಾಹಿತಿಯನ್ನು ಪಡೆದ ಪೊಲೀಸರ ತಂಡ ಆ ಮನೆಯ ಮೇಲೆ ಏಕಾಏಕಿ ದಾಳಿಮಾಡುತ್ತದೆ. 
 
ಬಲವಂತದಿಂದ ಬಾಗಿಲನ್ನು ತೆಗೆಸಿ ಒಳಗೆ ನುಗ್ಗುತ್ತಾರೆ ಪೊಲೀಸರು. ಕಂಪ್ಯೂಟರ್ ಮುಂದೆ ಕುಳಿತು ಮೋರಿಸ್ ಎಂಬ ನಿಗ್ರೋ, ಏನೂ ನಡೆದೇ ಇಲ್ಲ ಎನ್ನುವಂತೆ ಕಂಪ್ಯೂಟರ್‌ ಮುಂದೆ ಟೈಪಿಸುತ್ತಾ ಕುಳಿತಿರುತ್ತಾನೆ. ಯಾರ ಅನುಮತಿ ಪಡೆಯದೇ ಒಳ ನುಗ್ಗಿದ ಪೊಲೀಸರಿಗೆ ಒಂದು ಕ್ಷಣ ತಬ್ಬಿಬ್ಬು! ತಮಗೆ ಬಂದ ಮಾಹಿತಿಯಂತೆ ಪಡ್ಡೆಗಳ ದಂಡು ಅಲ್ಲಿಲ್ಲ... ಯಾವ ಮೋಜುಮಸ್ತಿಯ ಸುಳಿವೇ ಇಲ್ಲ...!
 
ತಮ್ಮನ್ನು ಯಾಮಾರಿಸಲು ಈ ರೀತಿ ಸುಳ್ಳು ಮಾಹಿತಿ ನೀಡಲಾಗಿದೆಯೇ ಎಂಬ ಅನುಮಾನ ಹಿರಿಯ ಅಧಿಕಾರಿಗೆ ಕಾಡಿತು. ಪೊಲೀಸರು ಬಂದ ಉದ್ದೇಶವೇನು ಎಂದು ಏನೂ ಅರಿಯದವನಂತೆ ಮೋರಿಸ್ ಪ್ರಶ್ನಿಸುತ್ತಾನೆ. 
 
ಹೇಳಿಕೇಳಿ ಪೊಲೀಸರು, ಕೇಳಬೇಕೇ? ಅಲ್ಲಿಯ ವಾತಾವರಣವನ್ನು ನೋಡಿದ ಅವರಿಗೆ ಅಲ್ಲೇನೋ ನಡೆಯುತ್ತಿದೆ ಎಂಬ ವಾಸನೆ ಬಡಿಯುತ್ತದೆ. ವಿಧವಿಧವಾಗಿ ಮೋರಿಸ್‌ನನ್ನು ಪ್ರಶ್ನಿಸುತ್ತಾರೆ. ಆದರೆ ಚಾಲಾಕಿ ಮೋರಿಸ್ ಅಷ್ಟೇ ಜಾಣ್ಮೆಯಿಂದ ಉತ್ತರಿಸುತ್ತಾನೆ.
 
ಆದರೂ ಸುಮ್ಮನಾಗದ ಪೊಲೀಸರು ಮನೆಯನ್ನೆಲ್ಲ ತಡಕಾಡುತ್ತಾರೆ. ಆಗ ಅವರಿಗೆ ಮಲಗುವ ಕೋಣೆಯ ಹಾಸಿಗೆ ಒಳಗಡೆ ಎರಡು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಇಟ್ಟ ಒಂದಿಷ್ಟು ಪುಡಿ ಸಿಗುತ್ತದೆ. ಅದರ ವಾಸನೆಯಿಂದ ಅದು ಬ್ರೌನ್ ಶುಗರ್ ಎಂದು ಖಾತ್ರಿಯಾಗುತ್ತದೆ. ಪೊಲೀಸರು  ಅದನ್ನು ವಶಪಡಿಸಿಕೊಂಡು ಸ್ಥಳದ ಪಂಚನಾಮೆ ಮಾಡಿ ಮೋರಿಸ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತರುತ್ತಾರೆ.
 
ಆತನ ವಿರುದ್ಧ ಮಾದಕವಸ್ತು ನಿಷೇಧ ಕಾಯ್ದೆ ಅಡಿಯಲ್ಲಿ ದೂರನ್ನು ದಾಖಲಿಸಿ, ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸುತ್ತಾರೆ. ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ. ಹೆಚ್ಚಿನ ವಿಚಾರಣೆಗಾಗಿ ಮೋರಿಸ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ.
 
ಪೊಲೀಸರು ಎಷ್ಟೇ ಹರಸಾಹಸ ಪಟ್ಟರೂ ಮೋರಿಸ್  ತಾನು ಮಾದಕವಸ್ತುವನ್ನು ಎಲ್ಲಿಂದ ತಂದಿದ್ದೇನೆ ಎಂಬುದನ್ನು ಬಾಯಿಬಿಡುವುದಿಲ್ಲ. ‘ನಾನು ಇವತ್ತಷ್ಟೇ ವ್ಯಾಪಾರದ ವೀಸಾ  ಪಡೆದು ಧಾರವಾಡಕ್ಕೆ ಬಂದಿದ್ದೇನೆ.
 
ನನಗೆ ಪರಿಚಿತ ವ್ಯಕ್ತಿಯ ಮನೆಯಲ್ಲಿ ಉಳಿದುಕೊಂಡಿದ್ದೇನೆ. ಈಗ ಜಪ್ತಾಗಿರುವ ಮಾದಕ ವಸ್ತುವಿಗೂ ನನಗೂ ಯಾವುದೇ ಸಂಬಂಧವಿಲ್ಲ. ಈ ಮನೆಯಲ್ಲಿ ಇರುವ ನನಗೆ ಪರಿಚಿತ ವ್ಯಕ್ತಿ ಎಲ್ಲೋ ಹೊರಗಡೆ ಹೋಗಿದ್ದಾನೆ. ಆದರೆ ಎಲ್ಲಿ ಹೋಗಿದ್ದಾನೆ ಎಂಬುದು ಗೊತ್ತಿಲ್ಲ. ಆತನ ಹೆಸರು ಜೋನ್ಸ್’ ಎನ್ನುತ್ತಾನೆ. 
 
ಆತನ ಹೇಳಿಕೆಯ ಆಧಾರದ ಮೇಲೆ ಜೋನ್ಸ್‌ನನ್ನು ಈ ಪ್ರಕರಣದಲ್ಲಿ ಎರಡನೆಯ ಆರೋಪಿಯನ್ನಾಗಿ ಮಾಡಲಾಗುತ್ತದೆ. ತನಿಖೆಯನ್ನು ಪೊಲೀಸರು ಮುಂದುವರಿಸುತ್ತಾರೆ. ಮೋರಿಸ್ ನೀಡಿದ ಸುಳಿವಿನಂತೆ ಎಷ್ಟೇ ಹುಡುಕಾಟ ನಡೆಸಿದರೂ ಜೋನ್ಸ್‌ ಪತ್ತೆಯಾಗುವುದೇ ಇಲ್ಲ! 
 
ವಿಚಾರಣೆ ಮುಂದುವರಿಸಿದ ಪೊಲೀಸರು ಮೋರಿಸ್‌ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆಹಾಕುತ್ತಾರೆ.   ಇವನ ವಿರುದ್ಧ ದೋಷಾರೋಪ ಪಟ್ಟಿ ತಯಾರಿಸಿ, ಜೋನ್ಸ್‌ ವಿರುದ್ಧ ‘ಸ್ಪ್ಲಿಟ್‌ ಅಪ್‌’ ದೋಷಾರೋಪ ಪಟ್ಟಿ ತಯಾರಿಸುತ್ತಾರೆ (ನಾಪತ್ತೆಯಾಗಿರುವ ಆರೋಪಿ ವಿರುದ್ಧ ತನಿಖೆಯನ್ನು ಬಾಕಿ ಇಟ್ಟು ದೋಷಾರೋಪ ಪಟ್ಟಿ ತಯಾರು ಮಾಡುವುದು ಇಲ್ಲವೇ, ಆರೋಪಿ ತೀರಿಕೊಂಡಿದ್ದಾನೆ ಎಂಬ ಮಾಹಿತಿ ಸಿಕ್ಕರೆ ಆತನ ವಿರುದ್ಧ ತನಿಖೆಯನ್ನು ಕೈಬಿಡುವುದಕ್ಕೆ ‘ಸ್ಪ್ಲಿಟ್‌ಅಪ್’ ದೋಷಾರೋಪ ಪಟ್ಟಿ ಎನ್ನುತ್ತಾರೆ)
 
ಪ್ರಕರಣ ಧಾರವಾಡದ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತದೆ. ಮೋರಿಸ್  ಪರ ವಕೀಲರು ತಮ್ಮ ಕಕ್ಷಿದಾರನನ್ನು ಬಚಾವು ಮಾಡಲು ಸಾಕಷ್ಟು ಅಧ್ಯಯನ  ಮಾಡಿಕೊಂಡು   ಬರುತ್ತಾರೆ. ‘ನನ್ನ ಕಕ್ಷಿದಾರ ನಿರಪರಾಧಿಯಾಗಿದ್ದು ಆತನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇರುವುದಿಲ್ಲ. ಇವನು ವ್ಯಾಪಾರಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದಾನೆ.
 
ಹೀಗೆ ಧಾರವಾಡಕ್ಕೆ ಬಂದಿಳಿದ ವ್ಯಕ್ತಿಯನ್ನು ಹಣ ಕೀಳುವ ಉದ್ದೇಶದಿಂದ ಪೊಲೀಸರು ಧಾರವಾಡ ಬಸ್ ನಿಲ್ದಾಣದಿಂದ ಬಂಧಿಸಿಕೊಂಡು ಬಂದು, ಆತನದಲ್ಲದ ಮಾದಕ ವಸ್ತುವನ್ನು ಆತನೇ ತಂದಿದ್ದಾನೆ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಮಾಡಿದ್ದಾರೆ ಎಂದು ಹೇಳಲಾಗುವ ಮನೆಯಲ್ಲಿ ಮೋರಿಸ್ ಇರಲೇ ಇಲ್ಲ.
 
ಅಲ್ಲದೇ ಆ ಮನೆಯ ಮಾಲೀಕನ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಲ್ಲ. ನನ್ನ ಕಕ್ಷಿದಾರ ಅದೇ ಮನೆಯಲ್ಲಿ ವಾಸಿಸುತ್ತಿದ್ದ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಈ ಪ್ರಕರಣಕ್ಕೆ ಯಾವ ಸ್ಥಳೀಯ ಸಾಕ್ಷಿಗಳೂ ಇರುವುದಿಲ್ಲ.
 
ಬಲ್ಲ ಮೂಲಗಳ ಪ್ರಕಾರ ದಾಳಿಮಾಡಲಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಆದರೆ ಯಾವುದೇ ನಂಬಲರ್ಹವಲ್ಲದ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಅಮಾಯಕನನ್ನು, ಅದರಲ್ಲೂ ವಿದೇಶಿ ಪ್ರಜೆಯನ್ನು ಶಿಕ್ಷೆಗೆ ಒಳಪಡಿಸುವುದು ಆಕ್ಷೇಪಾರ್ಹ.
 
ಯಾವುದೇ ವ್ಯಕ್ತಿಯ ಮನೆಯ ಮೇಲೆ ದಾಳಿಮಾಡುವುದು, ಆತನ ಖಾಸಗಿ ಬದುಕಿನ ಹಕ್ಕಿನ ಉಲ್ಲಂಘನೆಯಾಗುತ್ತದೆ. ಅಲ್ಲದೆ ವ್ಯಾಪ್ತಿ ಪ್ರದೇಶದ ದಂಡಾಧಿಕಾರಿಯ ಪೂರ್ವಾನುಮತಿ ಇಲ್ಲದೆ ಹಾಗೂ ಮಾದಕ ವಸ್ತುಗಳನ್ನು ಜಪ್ತು ಮಾಡುವ ಸಂದರ್ಭದಲ್ಲಿ ಪತ್ರಾಂಕಿತ ಅಧಿಕಾರಿಯ ಸಮಕ್ಷಮವಲ್ಲದೆ ದಾಳಿ ಮಾಡುವುದು ಕಾನೂನು ನಿಯಮಗಳ ಉಲ್ಲಂಘನೆಯಾಗುತ್ತದೆ.
 
ನಮ್ಮ ಕಕ್ಷಿದಾರನ ವಿರುದ್ಧ ದಾಖಲಿಸಿರುವ ಪ್ರಕರಣ ತಪ್ಪು ತಿಳಿವಳಿಕೆಯಿಂದ ಆಗಿರುವುದು. ವಿದೇಶಿ ಪ್ರಜೆಯನ್ನು ಬಂಧಿಸಬೇಕಾದರೆ ರಾಯಭಾರ ಕಚೇರಿಗೆ ಮಾಹಿತಿ ನೀಡಬೇಕು ಹಾಗೂ ತನ್ನನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಬೇಕು. ಅಂತಹ ಯಾವ ಅವಕಾಶವನ್ನೂ ಇಲ್ಲಿ ನೀಡಲಾಗಿಲ್ಲ. ಅಲ್ಲದೆ ಮೊಬೈಲ್ ಮತ್ತು ಪಾಸ್‌ಪೋರ್ಟ್‌ ಅನ್ನು ಬಲವಂತದಿಂದ ವಶಪಡಿಸಿಕೊಳ್ಳಲಾಗಿದೆ’ ಎಂದು ವಾದ ಮಂಡಿಸುತ್ತಾರೆ.
 
‘ಈ ಪ್ರಕರಣದಲ್ಲಿ ದೂರುದಾರರು ಪೊಲೀಸರೇ ಆಗಿದ್ದು, ತನಿಖಾಧಿಕಾರಿಗಳು ಸಹ ಅವರೇ ಆಗಿದ್ದಾರೆ. ಮಾತ್ರವಲ್ಲ ಅವರೇ ಸಾಕ್ಷಿದಾರರೂ ಆಗಿದ್ದಾರೆ. ಪಂಚರು ಎಂದು ಸಹಿಮಾಡಿರುವ ವ್ಯಕ್ತಿಗಳು ಕಂಪ್ಯೂಟರ್‌ನಲ್ಲಿ ಟೈಪಿಸಿದ ಪಂಚನಾಮೆಗೆ ಸಹಿಹಾಕಿದ್ದಾರೆ.
 
ಆದರೆ ದಾಳಿಯ ಸಂದರ್ಭದಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್‌ ತೆಗೆದುಕೊಂಡು ಹೋಗಿ ಪೊಲೀಸರು ದಾಳಿಮಾಡಿದ್ದಾರೆಯೆ? ಸ್ವತಃ ಪೊಲೀಸ್‌ ಠಾಣೆಯಲ್ಲಿ ಕುಳಿತು ತಯಾರಿಸಿದ ಪಂಚನಾಮೆಗೆ ಹಾಗೂ ಜಪ್ತಾಗಿದೆ ಎಂದು ಹೇಳುವ ಸಾಮಾನಿನ ಮೇಲೆ ಪಂಚರ ಸಹಿಯನ್ನು ಪಡೆಯಲಾಗಿದೆ. ಅಲ್ಲದೆ ಪೊಲೀಸರು ಬ್ರೌನ್ ಶುಗರ್ ಎಂಬ ಮಾದಕ ವಸ್ತುವನ್ನು ಜಪ್ತು ಮಾಡಲಾಗಿದೆ ಎಂದು ಹೇಳುತ್ತಾರೆ.
 
ಆದರೆ ರಾಸಾಯನಿಕ ತಜ್ಞರ ವರದಿಯಲ್ಲಿ ಜಪ್ತಾದ ಸಾಮಗ್ರಿ ಬ್ರೌನ್ ಶುಗರ್ ಅಲ್ಲ, ಅದರಲ್ಲಿ ಅಲ್ಪ ಪ್ರಮಾಣದ ಕೊಕೇನ್ ಮತ್ತು ಕೆಫಿನ್ ಅಂಶ ಕಂಡು ಬಂದಿದೆ ಎಂದು ದಾಖಲಾಗಿದೆ. ಆದ್ದರಿಂದ ನಮ್ಮ ಕಕ್ಷಿದಾರನಾದ ಮೋರಿಸ್‌ನೇ ಈ ಪ್ರಕರಣದಲ್ಲಿ ಆರೋಪಿ ಎಂಬುದು ದೃಢಪಟ್ಟಿರುವುದಿಲ್ಲ.
 
ಆದ್ದರಿಂದ ಸಂದೇಹದ ಲಾಭದ ಆಧಾರದ ಮೇಲೆ (ಬೆನಿಫಿಟ್ ಆಫ್ ಡೌಟ್) ದೋಷಮುಕ್ತಗೊಳಿಸಬೇಕು ಎಂದು ಆರೋಪಿಪರ ವಕೀಲರು ವಾದಮಾಡುತ್ತಾರೆ. ಇವರ ವಾದವನ್ನು ಗಮನಿಸಿದಾಗ ಎಂಥವರಿಗೂ ಆರೋಪಿ ಪರವಾಗಿಯೇ ಆದೇಶ ಹೊರಬೀಳುತ್ತದೆ ಎನ್ನುವಂತಿತ್ತು. ಅವರು ಎತ್ತಿತೋರಿಸಿದ ಒಂದೊಂದು ಅಂಶವೂ ಆರೋಪಿಯೆಡೆಗೆ ವಾಲುವಂತಿತ್ತು.
 
ಆದರೆ ಆರೋಪಿ ಪರ ವಕೀಲರ ಭರ್ಜರಿ ವಾದಕ್ಕೆ ಅಷ್ಟೇ ರಾಜಾರೋಷವಾಗಿ ಸರ್ಕಾರದ ಪರ ವಕೀಲರು ವಾದ ಮುಂದಿಡುತ್ತಾರೆ. ‘ದಾಳಿಯನ್ನು ನಡೆಸಿದ ಸಹಾಯಕ ಪೊಲೀಸ್‌ ಕಮಿಷನರ್‌ ಅವರು ಸ್ವತಃ ಪತ್ರಾಂಕಿತ ಅಧಿಕಾರಿ. ಆದ್ದರಿಂದ ಇಂಥ ಸಂದರ್ಭದಲ್ಲಿ ಬೇರೆ ಪತ್ರಾಂಕಿತ ಅಧಿಕಾರಿಯ ಹಾಜರಿ ಅಗತ್ಯವಿಲ್ಲ.
 
ದಂಡಾಧಿಕಾರಿಗಳ ಪೂರ್ವಾನುಮತಿ ಪಡೆಯುವ ಸುಳಿವು ಆರೋಪಿಗೆ ಸಿಕ್ಕರೆ ಆತ ತಪ್ಪಿಸಿಕೊಳ್ಳಬಹುದು ಎನ್ನುವ ಕಾರಣಕ್ಕೆ ಕೆಲವು ಪ್ರಕರಣಗಳಲ್ಲಿ ದಂಡಾಧಿಕಾರಿಗಳ ಪೂರ್ವಾನುಮತಿ ಅಗತ್ಯವಿಲ್ಲ. ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ವಕೀಲರು ಹೇಳುತ್ತಿದ್ದಾರೆಯೇ ವಿನಾ ಅದಕ್ಕೆ ಸೂಕ್ತ ಸಾಕ್ಷ್ಯಾಧಾರ ನೀಡಿಲ್ಲ.
 
ಸ್ಥಳದಲ್ಲಿ ಹಾಜರು ಇದ್ದ ಬಹುತೇಕ ಸಾಕ್ಷಿದಾರರೂ ಆತನ ವಿರುದ್ಧ ಹೇಳಿಕೆ ನೀಡಿದ್ದಾರೆ. ಪಕ್ಕದಲ್ಲಿಯೇ ಇರುವ ನಿವಾಸಿ ಕೂಡ ಈ ಬಗ್ಗೆ ನಿಖರ ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೇ, ಆರೋಪಿ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ  200ಗ್ರಾಂ ಮಾದಕ ವಸ್ತು ತನ್ನದೇ ಎಂದು ಒಪ್ಪಿಕೊಂಡಿದ್ದಾನೆ. ಪ್ರತಿ ಗ್ರಾಮನ್ನು ನಾಲ್ಕು ಸಾವಿರ ದರದಲ್ಲಿ ಮಾರಾಟ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದಾನೆ. ಇದರಿಂದ ಇವನು ಅಪರಾಧಿ ಎನ್ನುವಲ್ಲಿ ಎರಡು ಮಾತಿಲ್ಲ’ ಎನ್ನುತ್ತಾರೆ.
 
‘ಆರೋಪಿ ಇಟ್ಟುಕೊಂಡ ಮಾದಕ ವಸ್ತು ಬ್ರೌನ್ ಶುಗರ್ ಅಲ್ಲ, ಅದು ಕೊಕೇನ್ ಮತ್ತು ಕೆಫಿನ್ ಎಂಬುದು ಇಲ್ಲಿ ಮುಖ್ಯವಲ್ಲ. ಏಕೆಂದರೆ ಆರೋಪಿ ಹೊಂದಿದ ಈ ವಸ್ತುಗಳು ಮಾದಕ ವಸ್ತು ಮತ್ತು ಅಮಲು ಪದಾರ್ಥ ಕಾಯ್ದೆ 1985ರ ಪ್ರಕಾರ ಅಮಲು ಮತ್ತು ಮಾದಕ ವಸ್ತುಗಳೆಂದೇ ಪರಿಗಣಿತವಾಗುತ್ತವೆ. ಹೀಗಾಗಿ ಕಾಯ್ದೆಯ 22ನೇ ಕಲಮಿನ ಅನ್ವಯ ಆರೋಪಿಯು ಅತ್ಯಂತ ಕಠಿಣ ಶಿಕ್ಷೆಗೆ ಅರ್ಹವಾದ ಅಪರಾಧವನ್ನು ಎಸಗಿದ್ದಾನೆ.
 
ತಾನು ವ್ಯಾಪಾರಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದೇನೆ ಎನ್ನುವ ಆರೋಪಿ ಯಾವ ವ್ಯಾಪಾರ ಎಂದು ತಿಳಿಸಿಲ್ಲ. ಅಷ್ಟೇ ಅಲ್ಲದೇ ವೀಸಾ ಅವಧಿ ಬಹಳ ಹಿಂದೆಯೇ ಮುಗಿದುಹೋಗಿದೆ. ಆತನ ಬಳಿ ಸಿಕ್ಕ ಪಾಸ್‌ಪೋರ್ಟ್ ಸಹ ನಕಲಿ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ವೀಸಾ ಪಾಸ್‌ಪೋರ್ಟ್ ನಿಯಮಗಳನ್ನು ಉಲ್ಲಂಘಿಸಿದ ಆತನ ಮೇಲೆ ಮತ್ತೊಂದು ಅಪರಾಧ ಪ್ರಕರಣ ದಾಖಲಿಸಬಹುದಾಗಿದೆ’ ಎನ್ನುತ್ತಾರೆ.
 
ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರಿಗೆ ಈತನೇ ಅಪರಾಧಿ ಎಂದು ಪರಿಗಣಿಸಲು ಹೆಚ್ಚುಹೊತ್ತು ಬೇಕಾಗಲಿಲ್ಲ. ಆತನಿಗೆ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಎರಡು ಲಕ್ಷ ದಂಡವನ್ನು ವಿಧಿಸಿ ಆದೇಶಿಸಿದರು. ದಂಡವನ್ನು ಕಟ್ಟಲು ವಿಫಲವಾದಲ್ಲಿ ಮತ್ತೆ ಎರಡು ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಯಿತು.
ಸುಲಭದ ಸಂಪಾದನೆಗೆ ಅಡ್ಡದಾರಿ ಹಿಡಿದರೆ ಒಂದಲ್ಲ ಒಂದು ಸಲ ಕಾನೂನಿನ ಕುಣಿಕೆಗೆ ಬೀಳಲೇಬೇಕು ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.
(ಹೆಸರು ಬದಲಾಯಿಸಲಾಗಿದೆ)
ಲೇಖಕರು ನ್ಯಾಯಾಂಗ ಇಲಾಖೆ ಅಧಿಕಾರಿ
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT