ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹25 ಲಕ್ಷ ಲಂಚದ ಬೇಡಿಕೆ: ದೂರು

Last Updated 27 ಮೇ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕೋರ್ಸ್‌ಗಳ ನವೀಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿಗೆ ಭೇಟಿ ನೀಡಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಸ್ಥಳೀಯ ವಿಚಾರಣಾ ಸಮಿತಿ (ಎಲ್‌ಐಸಿ) ಅಧ್ಯಕ್ಷ ಅರವಿಂದ ಗುರುಜಿ ₹25 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಬೆಂಗಳೂರಿನ ಎ.ಎಂ.ಸಿ ಎಂಜಿನಿಯರಿಂಗ್‌ ಕಾಲೇಜಿನ ಆಡಳಿತ ಮಂಡಳಿ ವಿಶ್ವವಿದ್ಯಾಲಯದ ಕುಲಪತಿಗೆ ದೂರು ನೀಡಿದೆ.

ಕಾಲೇಜಿನ ಅಧ್ಯಕ್ಷ ಡಾ.ಕೆ.ಆರ್‌.ಪರಮಹಂಸ ಹಾಗೂ ಪ್ರಾಂಶುಪಾಲ ಡಾ.ಟಿ.ಎನ್‌. ಶ್ರೀನಿವಾಸ್‌ ಅವರು ಕುಲಪತಿ ಕರಿಸಿದ್ದಪ್ಪ ಅವರಿಗೆ ದೂರು ಕೊಟ್ಟಿದ್ದಾರೆ.

‘ಇದೇ ತಿಂಗಳ 23ರಂದು ಸಮಿತಿ ಕಾಲೇಜಿಗೆ ಭೇಟಿ ನೀಡಬೇಕಾಗಿತ್ತು. ಆದರೆ, ಆ ದಿನ ಭೇಟಿ ನೀಡದ ಸಮಿತಿ, ಯಾವುದೇ ಮುನ್ಸೂಚನೆ ನೀಡದೇ 25ರಂದು ಕಾಲೇಜಿಗೆ ಭೇಟಿ ನೀಡಿತು. ಅಧ್ಯಕ್ಷ ಅರವಿಂದ ಗುರುಜಿ ಸಣ್ಣಪುಟ್ಟ ಕೊರತೆಗಳನ್ನು ದೊಡ್ಡದಾಗಿ ಬಿಂಬಿಸಿ, ಕಾಲೇಜಿನ ಸಿಬ್ಬಂದಿಗೆ ಕಿರುಕುಳ ನೀಡಿದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಕಾಲೇಜಿನ ಆವರಣ ವೀಕ್ಷಣೆ ವೇಳೆ ಅರವಿಂದ ಅವರು ಮಹಿಳಾ ಪ್ರಾಧ್ಯಾಪಕಿ ಜೊತೆ ಅನುಚಿತವಾಗಿ ವರ್ತಿಸಿದರು. ಅಲ್ಲದೆ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರನ್ನು ಪ್ರತ್ಯೇಕವಾಗಿ ಭೇಟಿಯಾಗಲು ಬಯಸಿದ್ದರು. ಬೆಂಗಳೂರಿನ ಗೋಲ್ಡ್‌ ಫಿಂಚ್‌ ಹೋಟೆಲ್‌ನ 108ನೇ ಕೊಠಡಿಯಲ್ಲಿ ಭೇಟಿಯಾಗಲು ಅಧ್ಯಕ್ಷರಿಗೆ ಸೂಚಿಸಿದರು. ಅಧ್ಯಕ್ಷರು ಭೇಟಿಯಾದಾಗ, ಕಾಲೇಜು ಪ್ರತಿ ವರ್ಷ ₹25 ಕೋಟಿ ವಹಿವಾಟು ನಡೆಸುತ್ತಿದೆ. ಇದರ ಶೇ 1ರಷ್ಟು ಅಂದರೆ ₹25 ಲಕ್ಷ ತಮಗೆ ಕೊಡಬೇಕೆಂದು ಒತ್ತಾಯಿಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅರವಿಂದ ಅವರು ಬರೆದಿದ್ದ ‘₹25 ಲಕ್ಷ’ ಬೇಡಿಕೆಯ ಚೀಟಿಯನ್ನು ಸ್ಕ್ಯಾನ್‌ ಮಾಡಿ ದೂರಿನ ಜೊತೆ ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ.

ದೂರು ಬಂದಿರುವುದು ನಿಜ: ‘ಅರವಿಂದ ವಿರುದ್ಧ ಎ.ಎಂ.ಸಿ ಎಂಜಿನಿಯರಿಂಗ್‌ ಕಾಲೇಜು ಕೊಟ್ಟಿರುವ ದೂರು ನಮಗೆ ತಲುಪಿದೆ. ಇದೇ ಸಮಿತಿಯ ಸದಸ್ಯ ತಿಮ್ಮರಾಜು ಅವರು ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದ್ದಾರೆ. ಹೀಗಾಗಿ ಇಡೀ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಲು ಸಮಿತಿ ರಚಿಸಲಾಗುವುದು. ಇದು ನೀಡುವ ವರದಿಯ ಆಧಾರದ ಮೇಲೆ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ವಿ.ಟಿ.ಯು ಕುಲಸಚಿವ ಎಚ್‌.ಎನ್‌. ಜಗನ್ನಾಥ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT