ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿಗೆ ಧಾವಿಸಿದ ಭಾರತ

ಶ್ರೀಲಂಕಾದಲ್ಲಿ ಭಾರಿ ಮಳೆ, ಪ್ರವಾಹ
Last Updated 27 ಮೇ 2017, 19:30 IST
ಅಕ್ಷರ ಗಾತ್ರ

ಕೊಲಂಬೊ: ಧಾರಾಕಾರ ಮಳೆಯಿಂದ ಶ್ರೀಲಂಕಾದಲ್ಲಿ ಉಂಟಾಗಿರುವ ಪ್ರವಾಹ ಮತ್ತು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 119ಕ್ಕೆ ಏರಿಕೆಯಾಗಿದೆ. 

ನದಿ ಪಾತ್ರದಲ್ಲಿ ವಾಸ ಮಾಡುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.  ಮಳೆ ಸುರಿಯುವ ಸಂಭವ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಇದಲ್ಲದೆ ಭಾರಿ ಗಾಳಿ ಬೀಸಬಹುದು ಎಂದು ತಿಳಿಸಲಾಗಿದೆ.

ಪ್ರವಾಹ ಪೀಡಿತ ಜನರ ಸ್ಥಳಾಂತರಕ್ಕೆ ಸಮರೋಪಾದಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸೇನೆಯ ಸಾವಿರ ಯೋಧರನ್ನು ಇದಕ್ಕಾಗಿ ನಿಯೋಜಿಸಲಾಗಿದೆ.

ಯೋಧ ಸಾವು: ಪ್ರವಾಹದಲ್ಲಿ ಸಿಲುಕಿಕೊಂಡ ಜನರನ್ನು ರಕ್ಷಿಸುತ್ತಿದ್ದ  ಯೋಧರೊಬ್ಬರು ಹೆಲಿಕಾಪ್ಟರ್‌ನಿಂದ ಬಿದ್ದು ಮೃತಪಟ್ಟಿದ್ದಾರೆ.

ನೆರವಿಗೆ ಮೊರೆ: ಪ್ರವಾಹ ಮತ್ತು ಭೂಕುಸಿತದಿಂದ ತೊಂದರೆಗೊಳಗಾದ ಜನರಿಗೆ ನೆರವು ನೀಡುವಂತೆ ಶ್ರೀಲಂಕಾದ ವಿದೇಶಾಂಗ ಸಚಿವಾಲಯ ವಿಶ್ವಸಂಸ್ಥೆಗೆ ಮನವಿ ಮಾಡಿದೆ. ಜನರ ಹುಡುಕಾಟ ಮತ್ತು ರಕ್ಷಣಾ ಕಾರ್ಯಕ್ಕೆ ಅಂತರರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಲಹಾ ಗುಂಪಿಗೆ ಮೊರೆ ಇಟ್ಟಿದೆ.

2003ರಲ್ಲಿ ಸುರಿದ ಮಳೆ ಮತ್ತು ಭೂಕುಸಿತಕ್ಕೆ 250 ಜನ ಮೃತಪಟ್ಟು, 10 ಸಾವಿರ ಮನೆಗಳು ನೆಲಸಮವಾಗಿದ್ದವು. ಕಳೆದ ವರ್ಷ ಭೂಕುಸಿತದಲ್ಲಿ 100 ಜನ  ಬಲಿಯಾಗಿದ್ದರು.

ಭಾರತ ನೆರವು
(ನವದೆಹಲಿ):
ಪ್ರವಾಹ, ಭೂಕುಸಿತಕ್ಕೆ ತತ್ತರಿಸಿರುವ ಶ್ರೀಲಂಕಾಕ್ಕೆ ನೆರವಾಗಲು ಭಾರತ ಮುಂದಾಗಿದೆ. ನೌಕಾಪಡೆಯ ಎರಡು ಹಡಗುಗಳು  ಪರಿಹಾರ ಸಾಮಗ್ರಿಗಳನ್ನು ತುಂಬಿಕೊಂಡು ಈಗಾಗಲೇ ಶ್ರೀಲಂಕಾಗೆ ತೆರಳಿವೆ. ಒಂದು ಹಡಗು ಶನಿವಾರ ಬೆಳಗಿನ ಜಾವ ಶ್ರೀಲಂಕಾ ತಲುಪಿದೆ. ಮತ್ತೊಂದು ಹಡಗು ಭಾನುವಾರ ತಲುಪಲಿದೆ.

ಶುಕ್ರವಾರ ರಾತ್ರಿ ಸರಣಿ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಈ ವಿಷಯವನ್ನು ತಿಳಿಸಿದ್ದಾರೆ.

ಮಳೆ ಮತ್ತು ಭೂಕುಸಿತದಿಂದ ಮೃತಪಟ್ಟವರಿಗೆ ಅವರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ‘ಶ್ರೀಲಂಕಾದ ನಮ್ಮ ಸೋದರ, ಸೋದರಿಯರ ಅಗತ್ಯಗಳಿಗೆ ನಾವು ಸದಾ ನೆರವಾಗುತ್ತೇವೆ’ ಎಂದು ತಿಳಿಸಿದ್ದಾರೆ.
*
ಹಾನಿಯ ನೋಟ
4,93,455 
ಮಂದಿ ಸಂತ್ರಸ್ತರು
25 ಜಿಲ್ಲೆಗಳಲ್ಲಿ ಪ್ರವಾಹ ಭೂಕುಸಿತ
150 ಮಂದಿ ಕಣ್ಮರೆಯಾದವರು
185 ತಾತ್ಕಾಲಿಕ ಆಶ್ರಯ ಕೇಂದ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT