ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಸ್ವಚ್ಛಗೊಳಿಸಲು ತಿಂಗಳ ಗಡುವು

ಪಾಲಿಕೆ ಸದಸ್ಯರ ಮನೆ ಮುಂದೆ ಧರಣಿ
Last Updated 27 ಮೇ 2017, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದು ತಿಂಗಳ ಒಳಗೆ ಹೊರಮಾವು ಹಾಗೂ ಅಗರ ಕೆರೆಯನ್ನು ಸ್ವಚ್ಛಗೊಳಿಸದಿದ್ದರೆ, ನಿಮ್ಮ ಮನೆ ಮುಂದೆ ಧರಣಿ ಕೂರುತ್ತೇವೆ’ ಎಂದು ಪಾಲಿಕೆ ಸದಸ್ಯೆ ರಾಧಮ್ಮ ಅವರಿಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಎಚ್ಚರಿಕೆ ನೀಡಿದರು.

‘ಯುನೈಟೆಡ್ ಬೆಂಗಳೂರು’  ನೇತೃತ್ವದಲ್ಲಿ ಇಲ್ಲಿ ಶನಿವಾರ ಆಯೋಜಿಸಿದ್ದ ‘ನಮ್ಮ ಕೆರೆಗಳನ್ನು ಉಳಿಸಿ ರಕ್ಷಿಸುವ’ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಕೆರೆ ಅಭಿವೃದ್ಧಿ ಆಗದಿರುವುದಕ್ಕೆ ಇಲ್ಲಿನ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಮಾರು ಆರು ಎಕರೆಯಷ್ಟು ಕೆರೆ ಜಮೀನು ಒತ್ತುವರಿಯಾಗಿದೆ ಎಂಬ ಮಾಹಿತಿ ಇದೆ.  ಇದನ್ನು ತೆರವುಗೊಳಿಸಲು ಕ್ರಮಕೈಗೊಳ್ಳಿ’ ಎಂದು ಅವರು ಪಾಲಿಕೆ ಸದಸ್ಯರಿಗೆ ಸೂಚಿಸಿದರು.

‘ಕೆರೆ ಜನರಿಗೆ ಸೇರಿದ್ದು. ಇವುಗಳ ಸಂರಕ್ಷಣೆಯಲ್ಲಿ ಸರ್ಕಾರ ಹಾಗೂ ಅಧಿಕಾರಿಗಳಿಗಿಂತ ಜನರ ಪಾತ್ರ ಹೆಚ್ಚಿನದ್ದು. ಕೆರೆಯ ನೀರು ಕಲುಷಿತಗೊಳಿಸುವವರನ್ನು ಸಾಕ್ಷ್ಯ ಸಮೇತ ಹಿಡಿದು  ಪೊಲೀಸರಿಗೆ ಒಪ್ಪಿಸಬೇಕು. ಒಳಚರಂಡಿ ನೀರನ್ನು ಸಂಸ್ಕರಿಸದೇ ಕೆರೆಗೆ ಹರಿಸುವುದನ್ನು ಮೊದಲು ನಿಲ್ಲಿಸಬೇಕು’ ಎಂದು ತಿಳಿಸಿದರು. 

ಪಾಲಿಕೆ ಸದಸ್ಯೆ ರಾಧಮ್ಮ ಪರವಾಗಿ ಮಾತನಾಡಿದ ಅವರ ಪತಿ ವೆಂಕಟೇಶ್, ‘ಕೆರೆ ಅಭಿವೃದ್ಧಿಗೆ  ₹ 12 ಕೋಟಿ ವೆಚ್ಚದ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ.  ₹ 6 ಕೋಟಿ ಮಂಜೂರು ಮಾಡಲು ಬಿಬಿಎಂಪಿ ಒಪ್ಪಿದೆ. ಮೊದಲ ಹಂತದಲ್ಲಿ ₹ 3 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೂಡಲೇ ಕಾಮಗಾರಿ ಆರಂಭಿಸುತ್ತೇವೆ’ ಎಂದರು.

‘ಎರಡು ತಿಂಗಳ ಹಿಂದೆ ಇದೇ ಮಾತನ್ನು ಹೇಳಿದ್ದೀರಿ. ಇದುವರೆಗೂ ಕೆರೆ ಅಭಿವೃದ್ಧಿಗೆ ನೀವು ಯಾವುದೇ ಕ್ರಮಕೈಗೊಂಡಿಲ್ಲ. ಮತ್ತೆ ಅದೇ ಭರವಸೆ ನೀಡುತ್ತಿದ್ದೀರಿ’ ಎಂದು ಸ್ಥಳದಲ್ಲಿದ್ದ ಅನು ಅವರು ತರಾಟೆಗೆ ತೆಗೆದುಕೊಂಡರು.

‘ಸಾರ್ವಜನಿಕರ ಗಮನಕ್ಕೆ ತರದೆಯೇ  ಸಮಗ್ರ ಯೋಜನಾ ವರದಿಯನ್ನು  ರೂಪಿಸಿರುವುದು ಸರಿಯಲ್ಲ. ಯೋಜನೆಯ ನೀಲ ನಕಾಶೆಯನ್ನು ಬಹಿರಂಗಪಡಿಸಬೇಕು. ಜನರಿಂದ ಸಲಹೆಳನ್ನು ಪಡೆಯಬೇಕು. ಬಾಯಿಮಾತಿನ ಭರವಸೆ ನೀಡುವುದನ್ನು ಬಿಟ್ಟು, ಕಾರ್ಯೋನ್ಮುರಾಗಬೇಕು’ ಎಂದರು.

‘ಕೆರೆಯ ಸುತ್ತಮುತ್ತಲಿನ ಜಾಗದಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ತಲೆಎತ್ತಿವೆ. ಇವುಗಳ ತ್ಯಾಜ್ಯ ನೀರು ಕೆರೆಯೊಡಲು ಸೇರುತ್ತಿದೆ. ಎರಡು ಕಡೆಯಿಂದ ರಾಜಕಾಲುವೆಯ ನೀರು ಕೆರೆಗೆ ಹರಿಯುತ್ತಿದೆ. ಮೊದಲು ಇದನ್ನು ತಡೆಯಬೇಕು’ ಎಂದು ವಿಶ್ವನಾಥ್ ಎಸ್. ಒತ್ತಾಯಿಸಿದರು.

ಹೊರಮಾವು ಕೆರೆ ಪರಿಶೀಲನೆ: ದೊರೆಸ್ವಾಮಿ ನೇತೃತ್ವದ ತಂಡ ಜಯಂತಿನಗರ ಬಳಿಯ ಹೊರಮಾವು ಕೆರೆಗೆ ಭೇಟಿ  ಪರಿಶೀಲಿಸಿತು. 

ಈ ವೇಳೆ ಸ್ಥಳೀಯ ನಿವಾಸಿ ರಾಮಚಂದ್ರ  ‘51  ಎಕರೆ 34 ಗುಂಟೆ ವ್ಯಾಪ್ತಿಯ ಕೆರೆ ಜಾಗದಲ್ಲಿ ಬಹುತೇಕ ಭೂಮಿ ಒತ್ತುವರಿಯಾಗಿದೆ.  ಕೆರೆಯ ಮೀಸಲು ಪ್ರದೇಶದಲ್ಲೂ ಮನೆಗಳ ನಿರ್ಮಾಣ ಕಾರ್ಯ ಎಗ್ಗಿಲ್ಲದೇ ಸಾಗುತ್ತಿದೆ.  ಕೆರೆಯಲ್ಲೇ ದಂಡೆಯನ್ನು ನಿರ್ಮಿಸಲಾಗಿದೆ’ ಎಂದು ದೊರೆಸ್ವಾಮಿ ಅವರ ಗಮನಕ್ಕೆ ತಂದರು.

‘ಸಂಜೆ 6.30ರ ನಂತರ  ಕೆಲವರು ಕಟ್ಟಡ ತ್ಯಾಜ್ಯವನ್ನು ತಂದು ಕೆರೆಯಲ್ಲಿ ಸುರಿಯುತ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪೊಲೀಸರಿಗೆ ದೂರು
ಅಗರ ಹಾಗೂ ಹೊರಮಾವು ಕೆರೆಗಳಿಗೆ ಕಟ್ಟಡ ತ್ಯಾಜ್ಯವನ್ನು ಸುರಿಯುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಹೆಣ್ಣೂರು ಠಾಣೆಗೆ ದೊರೆಸ್ವಾಮಿ ನೇತೃತ್ವದ ತಂಡ ದೂರು ನೀಡಿತು.

‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದ ಪ್ರಕಾರ ತ್ಯಾಜ್ಯ ಸುರಿಯುವವರಿಗೆ ₹ 5 ಲಕ್ಷ ದಂಡ ವಿಧಿಸಬಹುದು. ಒಂದಿಬ್ಬರಿಗೆ ಈ ರೀತಿ ದಂಡ ವಿಧಿಸಿದರೆ ತ್ಯಾಜ್ಯ ಸುರಿಯುವುದು ತಾನಾಗಿಯೇ ಹತೋಟಿಗೆ ಬರುತ್ತದೆ’ ಎಂದು  ದೊರೆಸ್ವಾಮಿ ಅವರು ತಿಳಿಸಿದರು.

‘ಈ ಎರಡೂ ಕೆರೆಗಳ ಜಾಗದಲ್ಲಿ ರಾತ್ರಿ ವೇಳೆ ಸಿಬ್ಬಂದಿಯನ್ನು ನಿಯೋಜಿಸುತ್ತೇವೆ. ಬಿಬಿಎಂಪಿ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರಿಗೆ ಪತ್ರ ಬರೆಯುತ್ತೇನೆ’ ಎಂದು ಇನ್‌ಸ್ಪೆಕ್ಟರ್ ಟಿ.ಶ್ರೀನಿವಾಸ  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT