ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ವಿವಿಧ ಕಾಮಗಾರಿ ವೀಕ್ಷಿಸಿದ ಸಿಇಒ

Last Updated 28 ಮೇ 2017, 5:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಜೆ.ಮಂಜುನಾಥ್ ಅವರು ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರವಾಸ ಕೈಗೊಂಡು ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲ್ಲೂಕುಗಳಲ್ಲಿ ಪ್ರವಾಸ ನಡೆಸಿದ ಸಿಇಒ ಅವರು ನರೇಗಾ ಯೋಜನೆಯಡಿ ಕೈಗೊಂಡ ಹಿಪ್ಪುನೆರಳೆ ಮರಗಡ್ಡಿ ಬೇಸಾಯ, ಕೆರೆ ಸಂಜೀವಿನಿ ಕಾಮಗಾರಿ, ನದಿ ಪುನಶ್ಚೇತನ ಕಾರ್ಯ, ಅಂಗನವಾಡಿ ಕೇಂದ್ರ, ಜಾನುವಾರುಗಳ ನೀರು ಕುಡಿಯುವ ತೊಟ್ಟಿ, ಕಾಲುವೆ, ಗೋಕುಂಟೆ ಅಭಿವೃದ್ಧಿ ಕೆಲಸ, ಪುಷ್ಕರಣಿ ಪುನಶ್ಚೇತನ ಕಾಮಗಾರಿಗಳನ್ನು ವೀಕ್ಷಿಸಿ, ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊತ್ತನೂರು ಗೇಟ್ ಬಳಿ ರೈತ ಪಿಳ್ಳಪ್ಪ ಅವರ ಜಮೀನಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಕೈಗೊಂಡ ದ್ರಾಕ್ಷಿ ಗಿಡ ನಾಟಿ ಕಾಮಗಾರಿ, ಕುಪ್ಪಹಳ್ಳಿ ರೈತ ಮುನಿಯಪ್ಪ ಜಮೀನಿನಲ್ಲಿ ರೇಷ್ಮೆ ಇಲಾಖೆ ವತಿಯಿಂದ ಕೈಗೊಂಡ ಮರಗಡ್ಡಿ ಬೇಸಾಯ ಕ್ರಮವನ್ನು ವೀಕ್ಷಿಸಿದರು.

ಬಳಿಕ ಶಿಡ್ಲಘಟ್ಟ ತಾಲ್ಲೂಕಿನ ಜೆ.ವೆಂಕಟಾಪುರಕ್ಕೆ ತೆರಳಿ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿ, ರಾಜೀವ್‌ಗಾಂಧಿ ಸೇವಾ ಕೇಂದ್ರ ಕಟ್ಟಡವನ್ನು ಪರಿಶೀಲಿಸಿದರು. ನಂತರ ಬೈರಸಂದ್ರಕ್ಕೆ ತೆರಳಿ ಮಾದರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿಂದ ಕಲ್ಯಾಪುರಕ್ಕೆ ತೆರಳಿದ ತಂಡ ರೈತ ಆಂಜಿನಪ್ಪ ಅವರ ಜಮೀನನಲ್ಲಿ ಮರಗಡ್ಡಿ ಪದ್ಧತಿಯಲ್ಲಿ ಬೆಳೆದ ಹಿಪ್ಪುನೆರಳೆ ಕೃಷಿಯನ್ನು ವೀಕ್ಷಿಸಿತು. ಬಳಿಕ ಹೀರೇಕಟ್ಟಿಗೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾದರಕಲ್ಲು ಗ್ರಾಮದ ದಮ್ಮಲಕುಂಟೆಯ ಹೂಳೆತ್ತುವ ಮತ್ತು ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿತು.

ನಂತರ ನೆರನಕಲ್ಲು ಗ್ರಾಮದ ಪುರಾತನ ಪುಷ್ಕರಣಿಯ ಪುನಶ್ಚೇತನ ಕಾಮಗಾರಿ ಅವಲೋಕಿಸಿತು. ಪ್ರವಾಸದುದ್ದಕ್ಕೂ ಸಿಇಒ ಅವರು ಅಲ್ಲಲ್ಲಿ ರೈತರೊಂದಿಗೆ ಸಂವಾದ ನಡೆಸಿದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿದ್ಧರಾಮಯ್ಯ, ಮುಖ್ಯ ಲೆಕ್ಕಾಧಿಕಾರಿ ನಾಗೇಶ್, ರೇಷ್ಮೆ ಇಲಾಖೆ ಉಪ ನಿರ್ದೇಶಕ ನಾಗಭೂಷಣ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಇಒ ಅವರಿಗೆ ಸಾಥ್‌ ನೀಡಿದರು.

ಅಂತರ್ಜಲ ವೃದ್ಧಿಗೆ ಆದ್ಯತೆ: ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್, ‘ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಸಿತಗೊಂಡು ನೀರಿನ ಹಾಹಾಕಾರ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ನರೇಗಾದಲ್ಲಿ ಅಂತರ್ಜಲ ವೃದ್ಧಿಸುವ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಲ್ಲಿ ಪಾಲಾರ್ ನದಿ ಪುನಶ್ಚೇತನ ಕಾಮಗಾರಿ ಬಹು ಮುಖ್ಯವಾದ್ದದ್ದು.

ಇದರಿಂದ 16 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ 120 ಗ್ರಾಮಗಳ 348 ಚದರ ಕಿ.ಮೀ ಪ್ರದೇಶಕ್ಕೆ ಪ್ರಯೋಜನವಾಗಲಿದೆ. ₹ 9 ಕೋಟಿ  ವೆಚ್ಚದ ಈ ಯೋಜನೆಯಡಿ 612 ಜಲ ಸಂರಕ್ಷಣೆ ಮತ್ತು ನೀರು ಮರು ಪೂರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಪ್ರಸಕ್ತ ಸಾಲಿನಲ್ಲಿ ಉತ್ತರ ಪಿನಾಕಿನಿ ನದಿ ಪುನಶ್ಚೇತನ ಕಾಮಗಾರಿಯನ್ನು ಕೂಡ ಆರಂಭಿಸಲಾಗಿದೆ. ಅದರಿಂದ 46 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 6,514 ಕಾಮಗಾರಿಗಳ ಗುರಿ ಹೊಂದಲಾಗಿದೆ. ಮುಂಬರುವ ದಿನಗಳಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಚಿತ್ರಾವತಿ ಸೇರಿದಂತೆ ಜಿಲ್ಲೆಯ ವಿವಿಧ ನದಿ ಮೂಲಗಳ ಪುನಶ್ಚೇತನಗೊಳಿಸಲಾಗುತ್ತದೆ’ ಎಂದು ತಿಳಿಸಿದರು.

‘ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯ ನರೇಗಾದಡಿ 1,401 ಕೊಳವೆ ಬಾವಿ ಮರುಪೂರಣ ಗುಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಗೋಕುಂಟೆ, ಪುಷ್ಕರಣಿ, ಕಾಲುವೆ ಅಭಿವೃದ್ಧಿ ಹಾಗೂ ಕೆರೆ ಹೊಳೆತ್ತುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. 64 ಕಡೆಗಳಲ್ಲಿ ಬಹು ಕಮಾನು ತಡೆ ಗೋಡೆಗಳ ನಿರ್ಮಾಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿವೆ. 200 ಕಾಮಗಾರಿ ಜಿಲ್ಲೆಯಾದ್ಯಂತ ಪ್ರಗತಿಯಲ್ಲಿವೆ’ ಎಂದರು.

ಕೃಷಿ, ತೋಟಗಾರಿಕೆಗೆ ಕಾಳಜಿ: ‘ನರೇಗಾ ಯೋಜನೆಯಡಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ರೇಷ್ಮೆ ಇಲಾಖೆ 2,777 ಕಾಮಗಾರಿ ಕೈಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ 1,900 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಯಲಾಗಿದೆ. ಈ ಪೈಕಿ 900 ಎಕರೆ ಪ್ರದೇಶದಲ್ಲಿ ಕಡಿಮೆ ನೀರಿನಲ್ಲಿ ಬೆಳೆಯುವ ಮರಗಡ್ಡಿ ಬೇಸಾಯ ಕ್ರಮದಲ್ಲಿ ನಾಟಿ ಮಾಡಲಾಗಿದೆ. ತೋಟಗಾರಿಕೆ ಇಲಾಖೆಯಿಂದ 800 ಕ್ಕೂ ಹೆಚ್ಚು ಕಾಮಗಾರಿಗಳನ್ನು ನಡೆಸಲಾಗಿದೆ. ಕೃಷಿ ಇಲಾಖೆಯಿಂದ 304 ಎರೆಹುಳು ಗೊಬ್ಬರ ಘಟಕ ಹಾಗೂ 573 ದ್ರವ ರೂಪದ ಸಾವಯವ ಗೊಬ್ಬರದ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಕೃಷಿ ಭಾಗ್ಯ ಯೋಜನೆಯಡಿ 6,371 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ’ ಎಂದು ಹೇಳಿದರು.

* * 

ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಜಿಲ್ಲೆಗೆ ನರೇಗಾ ಯೋಜನೆ ವರದಾನವಾಗಿದೆ. ಪ್ರಸಕ್ತ ಸಾಲಿನಲ್ಲಿ ಲಭ್ಯವಿರುವ 27.18 ಲಕ್ಷ ಮಾನವ ದಿನಗಳಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಜೆ.ಮಂಜುನಾಥ್, ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT