ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷ ತಿದ್ದಿಕೊಳ್ಳುವವನೇ ಆದರ್ಶ ಶಿಕ್ಷಕ

Last Updated 28 ಮೇ 2017, 5:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಪರರಲ್ಲಿ ದೋಷ ಹುಡುಕುವ ಮೊದಲು ತನ್ನಲ್ಲಿರುವ ಲೋಪದೋಷ ತಿದ್ದಿಕೊಂಡು ಅನುಕರಣೀಯನಾಗಬೇಕಾದುದು ಆದರ್ಶ ಶಿಕ್ಷಕನ ಮೊದಲ ಗುಣವಾಗಬೇಕು. ನುಡಿದಂತೆ ಯಾರೂ ನಡೆಯುವುದಿಲ್ಲ ಎಂಬುದು ಕುಂಟುನೆಪವಾಗಬಾರದು. ಸಮಸ್ಯೆ ಎದುರಾದರೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕೇ ಹೊರತು ಪಲಾಯನ ಮಾಡಬಾರದು’ ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿರುವ ಸತ್ಯಸಾಯಿ ಗ್ರಾಮದಲ್ಲಿ ಆಯೋಜಿಸಿರುವ ‘ರಾಷ್ಟ್ರೀಯ ಶಿಕ್ಷಕ ಸಮಾವೇಶ’ದ ಎರಡನೇ ದಿನದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಶಿಕ್ಷಕರು ಕ್ರಿಯಾತ್ಮಕ ನಾಯಕರಾಗಬೇಕು. ಕೆಲಸದಲ್ಲಿ ವ್ಯತ್ಯಾಸವಾದಾಗ ಸಮಸ್ಯೆಯ ಮೂಲ ಹುಡುಕಿ ಅದರ ನಿವಾರಣೆಗಾಗಿ ಪ್ರಯತ್ನಿಸಬೇಕೇ ಹೊರತು ಮೌನಕ್ಕೆ ಶರಣಾಗಬಾರದು. ಧೋರಣೆಯಲ್ಲಿ ಬದಲಾವಣೆ  ತಂದು ಅನುಕರಣೀಯ ವಿಚಾರ ಅಳವಡಿಸಿಕೊಳ್ಳುವ ಶಿಕ್ಷಕ ಶಿಕ್ಷಣದ ಮೂಲಕ ಸಮಾಜದ ಸುಧಾರಣೆ ಮಾಡಬಲ್ಲ’ ಎಂದು ಅಭಿಪ್ರಾಯಪಟ್ಟರು.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಮಾಜಿ ನಿರ್ದೇಶಕ ಜಿ. ಬಾಲಸುಬ್ರಹ್ಮಣ್ಯಂ ಮಾತನಾಡಿ, ‘ಬೆರಳ ತುದಿಯಲ್ಲೇ ಎಲ್ಲವೂ ಲಭಿಸುವಂತೆ ಮಾಡಿರುವ ಆಧುನಿಕ ತಂತ್ರಜ್ಞಾನ ಮೂಲಸ್ತರವನ್ನೇ ಮರೆಯಾಗಿಸಿದೆ. ಪರಿಣಾಮ ಏನನ್ನು ಕಲಿಸಬೇಕೋ ಅದನ್ನು ಸಮರ್ಪಕವಾಗಿ ಕಲಿಸದೆ ಬದುಕಿನ ನಿಜಾರ್ಥವನ್ನು ರೂಢಿಸಿಕೊಳ್ಳಬೇಕಾದ ಪಥವನ್ನು ಮರೆತಿದ್ದೇವೆ. ಇದರಿಂದ ಶಿಕ್ಷಕರು ಕೆಟ್ಟ ರೀತಿಯಲ್ಲಿ ಕಲಿಸುವಂತಾಗಿದೆ. ಇದು ಮೌಢ್ಯಕ್ಕೆ ಎಡೆಮಾಡಿಕೊಟ್ಟಿದೆಯೇ ಹೊರತು ಮೌಲ್ಯವನ್ನು ಬಿಂಬಿಸುವಲ್ಲಿ ವಿಫಲವಾಗಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕೊಲ್ಕತ್ತಾದ ಬೇಲೂರು ಮಠದ ರಾಮಕೃಷ್ಣ ಮಿಷನ್ ವಿವೇಕಾನಂದ ವಿಶ್ವವಿದ್ಯಾನಿಲಯದ ಉಪಕುಲಪತಿ ಸ್ವಾಮಿ ಆತ್ಮಪ್ರಿಯಾನಂದ ಮಾತನಾಡಿ, ‘ಸ್ವಾಮಿ ವಿವೇಕಾನಂದರು ಮುಂದೊಂದು ದಿನ ಮೌಲ್ಯಗಳ ಕುರಿತು ಚರ್ಚಿಸಬೇಕಾದ ಅನಿವಾರ್ಯ ಬಂದೇ ಬರುತ್ತದೆ ಎಂದು ಪ್ರತಿಪಾದಿಸಿದ್ದರು. ಪರಿಸ್ಥಿತಿ ಅವಲೋಕಿಸಿದರೆ ಆ ಕಾಲ ಇದುವೇ ಆಗಿರಬೇಕೆಂದು ಅನಿಸುತ್ತಿದೆ. ವಾಸ್ತವ ಮರೆತು ಭ್ರಮೆಯ ಬೆನ್ನೇರಿದರೆ ಆದರ್ಶ ಪಾಲನೆಯಾಗದು. ಆದ್ದರಿಂದ ಮೌಲ್ಯದ ಅವಲೋಕನ ಮಾಡುತ್ತಾ ಸಶಕ್ತವಾದ ಶಿಕ್ಷಣವನ್ನು ಯುವಜನಾಂಗಕ್ಕೆ ನೀಡಬೇಕಾದುದು ಇಂದಿನ ಅಗತ್ಯವಾಗಿದೆ’ ಎಂದು ಅವರು ಹೇಳಿದರು.

ಸತ್ಯಸಾಯಿ ಲೋಕಸೇವಾ ಸಮೂಹ ಶಿಕ್ಷಣ ಸಂಸ್ಥೆಗಳ ಮಾರ್ಗದರ್ಶಕ ಬಿ. ಎನ್. ನರಸಿಂಹಮೂರ್ತಿ ಮಾತನಾಡಿ, ‘ಎಷ್ಟೇ ಜ್ಞಾನವನ್ನು ಸಂಪಾದಿಸಿದರೂ ಅದರಿಂದ ಪ್ರಯೋಜನವಿಲ್ಲ. ನಮ್ಮಲ್ಲಿ ಸಹಸ್ರಾರು ಪುಸ್ತಕಗಳ ಸಂಗ್ರಹವಿದ್ದರೆ ಅದು ಸಂಗ್ರಹವಾಗಿ ಹಾಗೆಯೇ ಉಳಿಯುತ್ತದೆ ಹೊರತು ಉಪಯೋಗ ಶೂನ್ಯ. ಭಗವಂತನಲ್ಲಿ ಸಂಪೂರ್ಣ ಶರಣಾಗತಿ ಮತ್ತು ಸಮಾಜದ ಪ್ರತಿಜೀವಿಗಳ ಮೇಲೂ ಪ್ರೀತಿ ಮತ್ತು ದಯೆ ತೋರಿದಾಗ ಮಾತ್ರ ನಮ್ಮೊಳಗಿನ ಜ್ಞಾನ ಸಾರ್ಥಕವಾಗುತ್ತದೆ’ ಎಂದು ತಿಳಿಸಿದರು. ಸತ್ಯಸಾಯಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ನಾರಾಯಣರಾವ್, ಕೆ. ಸಂಜೀವ ಶೆಟ್ಟಿ, ಎಚ್. ರಮಾನಂದ, ಮಹೇಂದ್ರ ಶ್ರೀಪಾದ ಹೆಗಡೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT