ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಸ್ಕೂಲ್‌ ಚೆಸ್‌ನಲ್ಲಿ ಕಂಚು ಗೆದ್ದ ಶ್ರೀಯಾನಾ

ಅಕ್ಷರ ಗಾತ್ರ

ಮಂಗಳೂರಿನ ಶ್ರೀಯಾನಾ ಮಲ್ಯ ರಾಜ್ಯ ಚೆಸ್‌ನಲ್ಲಿ ಸಂಚಲನ ಮೂಡಿಸಿದ್ದಾಳೆ. ಇನ್ನೂ ಆರೂ ವರೆ ವರ್ಷ ವಯಸ್ಸಿನ ಈ ಬಾಲಕಿ ರುಮೇನಿಯಾದ ಇಯಾಸಿಯಲ್ಲಿ ಈಚೆಗೆ ಅಂತರರಾಷ್ಟ್ರೀಯ ಚೆಸ್‌ ಫೆಡರೇಷನ್‌ (ಫಿಡೆ) ವತಿಯಿಂದ ನಡೆದ ವಿಶ್ವ ಶಾಲಾ ಚೆಸ್‌ ಚಾಂಪಿಯನ್‌ಷಿಪ್‌ನ ಏಳು ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾಳೆ.

ಆ ಕೂಟದಲ್ಲಿ ಒಟ್ಟು ಆರು ಜಯ, ಒಂದು ಡ್ರಾ ಸಾಧಿಸಿದ ಶ್ರೀಯಾ ಆರೂವರೆ ಪಾಯಿಂಟ್ಸ್‌ ಗಳಿಸಿದ್ದಳು. ಎರಡರಲ್ಲಿ ಸೋತರೂ ಮೂರನೇ ಸ್ಥಾನಕ್ಕೆ ಅಡ್ಡಿಯಾಗಲಿಲ್ಲ.

ಶ್ರೀಯಾನಾ ಎದುರು ಸೋತಿದ್ದರೂ ಏಳು ಪಾಯಿಂಟ್ಸ್‌ ಕಲೆ ಹಾಕುವಲ್ಲಿ ಯಶಸ್ಸು ಪಡೆದ ಮಂಗೋಲಿಯಾದ ಆಟಗಾರ್ತಿ ಚಿನ್ನದ ಪದಕ ಗೆದ್ದಳು.

ಮಂಗಳೂರು ನಗರದ ಉರ್ವ ಬಡಾ ವಣೆಯ ಸಂದೀಪ್‌ ಮತ್ತು ನಂದಿನಿ ಮಲ್ಯ ದಂಪತಿಯ ಮಗಳು ಶ್ರೀಯಾನಾಳಿಗೆ ತಂದೆಯೇ ಮೊದಲ ಗುರು.

ಹಿಂದೆ ಶಾಲಾ ಕಾಲೇಜು ಮಟ್ಟದಲ್ಲಿ ಸಾಕಷ್ಟು ಚೆಸ್‌ ಆಡಿರುವ ಅನುಭವಿ ಸಂದೀಪ್‌ ತಮ್ಮ ಮಗಳಿಗೆ ಮೂರೂವರೆ ವರ್ಷ ವಯಸ್ಸಾಗಿದ್ದಾಗಲೇ ಈ ಆಟವನ್ನು ಪರಿಚಯಿಸಿದ್ದರು. ಈಕೆ ಶಾಲೆಗೆ ಸೇರುವ ಮೊದಲೇ ತಂದೆಯೊಡನೆ ಗಂಟೆಗಳ ಕಾಲ ಚೆಸ್‌ ಆಡುತ್ತಿದ್ದಳು. ಇದನ್ನು ಗಮನಿಸಿದ ನಂದಿನಿಯವರು ಮಗಳನ್ನು ಡೆರಿಕ್ಸ್‌ ಚೆಸ್‌ ಸ್ಕೂಲ್‌ಗೆ ಸೇರಿಸಿದರು.

ಈ ಸ್ಕೂಲ್‌ನಲ್ಲಿ ಶ್ರೀಯಾನಾಳ ಸ್ಮರಣ ಶಕ್ತಿ, ಚುರುಕುತನಗಳನ್ನು ಗಮನಿಸಿ ಅದಕ್ಕೆ ಹೊಂದುವಂತೆ ಆಕೆಗೆ ತರಬೇತು ನೀಡಲಾಯಿತು.
ಹೋದ ವರ್ಷ ಮಂಡ್ಯದಲ್ಲಿ ನಡೆದಿದ್ದ ಏಳು ವರ್ಷ ವಯಸ್ಸಿನೊಳಗಿನ ಬಾಲಕಿಯರ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದ ಈಕೆ, ಅಖಿಲ ಭಾರತ ಮಟ್ಟದಲ್ಲಿ 14ನೇ ಸ್ಥಾನ ಪಡೆದಿದ್ದಳು.

ಈ ನಡುವೆ ರಾಜ್ಯದಾದ್ಯಂತ ಅನೇಕ ಮುಕ್ತ ಮತ್ತು ವಯೋಮಿತಿಯ ರ‍್ಯಾಪಿಡ್‌ ಟೂರ್ನಿಗಳಲ್ಲಿ ಪಾಲ್ಗೊಂಡು ಅನುಭವ ಗಳಿಸಿದಳು.

ಇದೇ ವರ್ಷ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಶಾಲಾ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುದೇ ಅಲ್ಲದೆ, ನಾಗಪುರದಲ್ಲಿ ನಡೆದ ರಾಷ್ಟ್ರೀಯ ಕೂಟದಲ್ಲಿಯೂ ಅಗ್ರಸ್ಥಾನ ಪಡೆದು ಅಂತರರಾಷ್ಟ್ರೀಯ ಕೂಟದಲ್ಲಿ ಪಾಲ್ಗೊಳ್ಳುವುದಕ್ಕೆ ಅರ್ಹತೆ ಗಳಿಸಿದಳು.

ವಿಶ್ವ ಕೂಟಕ್ಕೂ ಮೊದಲು ನಡೆದ ರಾಜ್ಯ ಏಳು ವರ್ಷ ವಯಸ್ಸಿನ ಒಳಗಿನವರ ಮುಕ್ತ ಚಾಂಪಿಯನ್‌ಷಿಪ್‌ನಲ್ಲಿ ಆಡಿದ ಎಂಟೂ ಸುತ್ತುಗಳಲ್ಲಿ ಎಂಟು ಪಾಯಿಂಟ್ಸ್‌ ಗಳಿಸಿದ್ದು ಆಕೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿತು.

ರುಮೇನಿಯಾದಲ್ಲಿ ಪದಕ ಗೆದ್ದು ವಾಪಸಾದ ನಂತರ ಮಾತನಾಡಿದ ಶ್ರೀಯಾನಾ ‘ಆ ಊರಲ್ಲಿ ಕಾಲಿಟ್ಟ ದಿನದಿಂದಲೂ ಭಯ ಕಾಡುತಿತ್ತು. ಆದರೆ ಒಂದೊಂದೇ ಸುತ್ತಿನಲ್ಲಿ ಗೆಲ್ಲುತ್ತಾ ಸಾಗಿದಂತೆ ಭಯ ದೂರವಾಯಿತು. ಆತ್ಮ ವಿಶ್ವಾಸ ಹೆಚ್ಚಿತು’ ಎಂದಳು.

ಡೆರಿಕ್ಸ್‌ ಚೆಸ್‌ ಸ್ಕೂಲ್‌ನ ಆಡಳಿತಾಧಿಕಾರಿ ಡೆರಿಕ್‌ ಪಿಂಟೊ ಅವರ ಪ್ರಕಾರ ಶ್ರೀಯಾನಾ ರುಮೇನಿಯಾದಲ್ಲಿ ತನ್ನ ಶಕ್ತಿ ಮೀರಿ ಆಡಿದ್ದಾಳೆ. ಅವರೇ ಹೇಳುವಂತೆ ‘ವಿಶ್ವ ಮಟ್ಟದಲ್ಲಿ ಏಳು ವರ್ಷ ವಯೋ ಮಿತಿ ವಿಭಾಗದಲ್ಲಿ ಮಕ್ಕಳು ಆಡುವ ಪರಿಯನ್ನು ಗಮನಿಸಿದಾಗ ಅಚ್ಚರಿ ಎನಿಸುತ್ತದೆ.

ಒಬ್ಬರಿಗಿಂತ ಒಬ್ಬರು ಆತ್ಯುತ್ತಮವಾಗಿ ಆಡುತ್ತಾರೆ. ಶ್ರೀಯಾನಾ ಅಲ್ಲಿ ಎಂಟನೇ ಸುತ್ತಿನಲ್ಲಿ ಗೆದ್ದಿದ್ದರೆ, ಚಿನ್ನ ಗೆಲ್ಲಲು ಸಾಧ್ಯವಿತ್ತು. ಅಂತಿಮ ಸುತ್ತಿನಲ್ಲಿ ಶ್ರೀಯಾನಾಳಿಂದ ಅತ್ಯುತ್ತಮ ಆಟ ಮೂಡಿಬಂದಿತು. ಮುಂದಿನ ವರ್ಷ ಈಕೆ ಎಂಟು ವರ್ಷ ವಯೋಮಿತಿಯೊಳಗಿನ ವಿಶ್ವ ಕೂಟದಲ್ಲಿಯೂ ಪಾಲ್ಗೊಳ್ಳುವುದು ಖಚಿತ.ಈಕೆ ಮುಂದಿನ ದಿನಗಳಲ್ಲಿ ಭಾರತಕ್ಕೆ ಇನ್ನಷ್ಟೂ ಖ್ಯಾತಿ ತರಲಿದ್ದಾಳೆ’ .

ಪ್ರಸಕ್ತ ಮಂಗಳೂರಿನ ಲೂರ್ದ್ಸ್‌ ಸೆಂಟ್ರಲ್‌ ಸ್ಕೂಲ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿರುವ ಈಕೆಯೊಡನೆ ಡೆರಿಕ್ಸ್‌ ಚೆಸ್‌ ಸ್ಕೂಲ್‌ನಲ್ಲಿ ಹಿರಿಯ ಆಟಗಾರರೆಲ್ಲರೂ ಆಡಿ ಪ್ರೋತ್ಸಾಹಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಾವಿರಾರು ಮಂದಿ ಕಳೆದ ಒಂದೂವರೆ ದಶಕದಲ್ಲಿ ಡೆರಿಕ್ಸ್‌ ಚೆಸ್‌ ಸ್ಕೂಲ್‌ನಲ್ಲಿ ತರಬೇತು ಪಡೆದಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳು ಬಂದಿವೆ. ಇದೀಗ ಈ ಸ್ಕೂಲ್‌ಗೆ ಶ್ರೀಯಾನಾ ಮತ್ತೊಂದು ಗರಿ ಮೂಡಿಸಿದ್ದಾಳೆ.
(ಲೇಖಕರು ಚೆಸ್‌ ಕೋಚ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT