ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್‌ ಬೌಲರ್‌ನ ಸಾಧನೆಯ ಓಟ

Last Updated 28 ಮೇ 2017, 19:30 IST
ಅಕ್ಷರ ಗಾತ್ರ

ಚೆನ್ನೈನ ಪಶ್ಚಿಮ ಮಾಂಬಳಂನಲ್ಲಿರುವ ಪದ್ಮ ಶೇಷಾದ್ರಿ ಶಾಲೆಯಲ್ಲಿ ಓದುತ್ತಿದ್ದ ಆ ಬಾಲಕ ಕ್ರಿಕೆಟ್‌ನಲ್ಲಿ ತಂದೆಯಂತೆ ವೇಗದ ಬೌಲರ್ ಆಗಲು ಬಯಸಿದ್ದ. ಇದಕ್ಕೆ ತರಬೇತುದಾರರ ತಕರಾರು ಇರಲಿಲ್ಲ. ಆದರೆ ಬಾಲಕ ಓಡುವ ವಿಧಾನಕ್ಕೆ ಬೇಸರಗೊಂಡ ತಾಯಿ ಸ್ಪಿನ್‌ ಬೌಲಿಂಗ್ ಮಾಡುವಂತೆ ಸೂಚಿಸಿದರು.

ಅದು ಆತನ ಕ್ರಿಕೆಟ್ ಜೀವನಕ್ಕೆ ಬಹುದೊಡ್ಡ ತಿರುವು ತಂದುಕೊಟ್ಟಿತು. ಈ ಬಾಲಕ ಬೇರೆ ಯಾರೂ ಅಲ್ಲ; ವಿಶ್ವ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ರವಿಚಂದ್ರನ್ ಅಶ್ವಿನ್‌. ವೇಗದ ಬೌಲಿಂಗ್‌ನಿಂದ ದೂರ ಉಳಿದರೂ ಅಶ್ವಿನ್‌ ಕ್ರಿಕೆಟ್‌ ಜೀವನದ ಸಾಧನೆಯ ಓಟ ವೇಗವಾಗಿಯೇ ಸಾಗಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 50, 100 ಮತ್ತು 200 ವಿಕೆಟ್‌ ಕಬಳಿಸಿದ ಖ್ಯಾತಿ ಅವರದು. ಈ ವರೆಗೆ ನಾಲ್ಕು ಬಾರಿ ಐಸಿಸಿ ಮತ್ತು ಬಿಸಿಸಿಐನ ವಿವಿಧ ಪ್ರಶಸ್ತಿ ಗಳಿಸಿದ ಅವರಿಗೆ ಈಗ ಸಿಯೆಟ್ ಕ್ರಿಕೆಟ್ ರೇಟಿಂಗ್‌ನ ವರ್ಷದ ಕ್ರಿಕೆಟಿಗ ಪ್ರಶಸ್ತಿ ಸಂದಿದೆ. 

ಅಶ್ವಿನ್ ಕ್ರಿಕೆಟ್ ಜಗತ್ತಿಗೆ ತೆರೆದುಕೊಂಡದ್ದು 2010ರಲ್ಲಿ. ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಮಾಡಿದ ಅವರು ಅದೇ ವರ್ಷ ಮೇ ತಿಂಗಳಲ್ಲಿ ಮೂರು ರಾಷ್ಟ್ರಗಳ ಏಕದಿನ ಕ್ರಿಕೆಟ್‌ ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಂಡ ಭಾರತ ತಂಡದಲ್ಲಿ ಸ್ಥಾನ ಗಳಿಸಿದರು. ಸರಣಿ ಮುಗಿದ ಒಂದು ವಾರದ ನಂತರ ಅವರು ಟ್ವೆಂಟಿ–20 ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದರು.

ಅದೇ ವರ್ಷ ನವೆಂಬರ್‌ನಲ್ಲಿ ಭಾರತದಲ್ಲಿ ನಡೆದ ನ್ಯೂಜಿಲ್ಯಾಂಡ್‌ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಅಶ್ವಿನ್ ಬೌಲಿಂಗ್ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಿತು. ಐದು ಪಂದ್ಯಗಳಲ್ಲಿ 11 ವಿಕೆಟ್‌ ಕಬಳಿಸಿ ಗಮನ ಸೆಳೆದರು. ನಂತರ ಅವರು ಸಾಧನೆಯ ಒಂದೊಂದೇ ಮೆಟ್ಟಿಲು ಏರತೊಡಗಿದರು. 



ಸಾಧನೆಯ ಶಿಖರವೇರಿಸಿದ ಟೆಸ್ಟ್‌
ಟೆಸ್ಟ್‌ಗೆ ಪದಾರ್ಪಣೆ ಮಾಡಿದ ನಂತರ ಅಶ್ವಿನ್‌ ಕ್ರಿಕೆಟ್‌ ಜೀವನ ಹೆಚ್ಚು ಬೆಳಗಿತು. 2011ರಲ್ಲಿ ಭಾರತ ಪ್ರವಾಸ ಕೈಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾದ ಅವರು ಮೊದಲ ಪಂದ್ಯದಲ್ಲೇ ಗಮನಾರ್ಹ ಸಾಧನೆ ಮಾಡಿದರು. ಮೊದಲ ಇನಿಂಗ್ಸ್‌ನಲ್ಲಿ 81ಕ್ಕೆ ಮೂರು ಮತ್ತು ಎರಡನೇ ಇನಿಂಗ್ಸ್‌ನಲ್ಲಿ 47ಕ್ಕೆ ಆರು ವಿಕೆಟ್ ಉರುಳಿಸಿ ಭಾರತದ ಗೆಲುವಿಗೆ ಕಾರಣರಾದರು.

ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಗಲಿಗೆ ಹಾಕಿಕೊಂಡರು. ಭಾರತ ಇನಿಂಗ್ಸ್ ಜಯ ಸಾಧಿಸಿದ ಎರಡನೇ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ಅಶ್ವಿನ್ ಮೂರನೇ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದರು. ಭಾರತದ ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿ ಆಲ್‌ರೌಂಡರ್‌ ಆಗುವ ಭರವಸೆ ಮೂಡಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳು ಅವರ ಪಾಲಾದವು.

ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಸಂದರ್ಭದಲ್ಲೂ ಬೌಲಿಂಗ್‌ನ ಲಯ ಉಳಿಸಿಕೊಂಡ ಅಶ್ವಿನ್‌ ಮುಂದಿನ ವರ್ಷ ನ್ಯೂಜಿಲ್ಯಾಂಡ್ ತಂಡ ಭಾರತ ಪ್ರವಾಸ ಕೈಗೊಂಡಾಗ ಎರಡು ಪಂದ್ಯಗಳಲ್ಲಿ 10 ವಿಕೆಟ್‌ ಬಗಲಿಗೆ ಹಾಕಿದರು. 2012ರಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಾಗ ಟೆಸ್ಟ್‌ನಲ್ಲಿ 50 ವಿಕೆಟ್‌ ಸಾಧನೆ ಮಾಡಿದ ಅವರು ಕೇವಲ ಒಂಬತ್ತು ಪಂದ್ಯಗಳಲ್ಲಿ ಈ ಮೈಲಿಗಲ್ಲು ದಾಟಿ ದಾಖಲೆ ನಿರ್ಮಿಸಿದರು.

ನಾಲ್ಕು ಪಂದ್ಯಗಳಲ್ಲಿ 243 ರನ್‌ ಗಳಿಸಿದ ಅವರು ಬೌಲಿಂಗ್ ಆಲ್‌ರೌಂಡರ್‌ ಆಗುವತ್ತ ಬಲವಾದ ಹೆಜ್ಜೆ ಹಾಕಿದರು. 2013ರಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದಾಗ ಅಶ್ವಿನ್‌ ಇನ್ನಷ್ಟು ಗಟ್ಟಿಯಾಗಿದ್ದರು.

ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 103ಕ್ಕೆ ಏಳು ವಿಕೆಟ್ ಕಬಳಿಸಿದ ಅವರು ಎರಡನೇ ಇನಿಂಗ್ಸ್‌ನಲ್ಲಿ 95ಕ್ಕೆ5 ವಿಕೆಟ್‌ ಉರುಳಿಸಿದ್ದರು. ನಾಲ್ಕು ಪಂದ್ಯಗಳಲ್ಲಿ ಅವರು ಗಳಿಸಿದ ಒಟ್ಟು ವಿಕೆಟ್‌ಗಳ ಸಂಖ್ಯೆ 29.



ಮುಂದಿನ ವರ್ಷ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಪರಿಣಾಮಕಾರಿಯಾಗದ ಅಶ್ವಿನ್‌ 2015ರಲ್ಲಿ ಮತ್ತೆ ಬಲ ವೃದ್ಧಿಸಿ ಕೊಂಡರು. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ 21 ವಿಕೆಟ್ ಉರುಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಫ್ರೀಡಂ ಟ್ರೋಫಿ ಸರಣಿಯಲ್ಲೂ ಮಿಂಚಿದರು.

2016ರಲ್ಲಿ ಭಾರತ ತಂಡದ ನ್ಯೂಜಿಲೆಂಡ್‌ ಪ್ರವಾಸದ ವೇಳೆ ಮೂರು ಪಂದ್ಯಗಳಲ್ಲಿ 27 ವಿಕೆಟ್ ಗಳಿಸಿದ ಅವರು ಜೀವನಶ್ರೇಷ್ಠ (59ಕ್ಕೆ7) ಸಾಧನೆಯನ್ನೂ ಮಾಡಿದರು.

ಕಳೆದ 12 ತಿಂಗಳ ಅವಧಿಯಲ್ಲಿ ನಡೆದ 13 ಟೆಸ್ಟ್ ಪಂದ್ಯಗಳಲ್ಲಿ ಅವರು ಗಳಿಸಿದ ವಿಕೆಟ್‌ಗಳ ಸಂಖ್ಯೆ 82. ಏಳು ವರ್ಷಗಳಲ್ಲಿ ಏಳು ಪಂದ್ಯಶ್ರೇಷ್ಠ ಪ್ರಶಸ್ತಿ  ತಮ್ಮದಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT