ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಪ್ರತಿಭಟನೆ ಹತೋಟಿಗೆ ಕಠಿಣ ಕ್ರಮ

Last Updated 28 ಮೇ 2017, 19:30 IST
ಅಕ್ಷರ ಗಾತ್ರ

ಶ್ರೀನಗರ: ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಕಮಾಂಡರ್ ಸಬ್ಸಾರ್‌ ಭಟ್‌ನನ್ನು ಸೇನೆಯು ಗುಂಡಿಕ್ಕಿ ಕೊಂದಿರುವುದನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ನಿಯಂತ್ರಿಸಲು ಭದ್ರತಾ ಪಡೆಗಳು  ಕಠೋರ ನಿರ್ಬಂಧಗಳನ್ನು ಹೇರಿವೆ.

ಶ್ರೀನಗರದ ಏಳು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿರ್ಬಂಧಗಳು ಜಾರಿಯಲ್ಲಿವೆ. ಆದರೆ ಭಾನುವಾರ ನಡೆದ ಸೇನಾ ನೇಮಕಾತಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಪ್ರವೇಶಪತ್ರ ತೋರಿಸಿದಾಗ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಆಡಳಿತದ ಮೂಲಗಳು ಹೇಳಿವೆ.

ಪರೀಕ್ಷಾ ಕೇಂದ್ರಗಳಿಗೆ ನೇಮಕಗೊಂಡಿರುವ ಸಿಬ್ಬಂದಿ ತಮ್ಮ ಗುರುತು ಪತ್ರ ತೋರಿಸಿ ಕರ್ತವ್ಯಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರದಲ್ಲಿ ಇರುವ ಎಲ್ಲಾ ಕಾಲೇಜುಗಳು ಮತ್ತು ಹೈಸ್ಕೂಲ್‌ಗಳನ್ನು ಸೋಮವಾರ ಮುಚ್ಚುವಂತೆ ಜಿಲ್ಲಾ ಆಡಳಿತ ಆದೇಶಿಸಿದೆ.

ದಕ್ಷಿಣ ಕಾಶ್ಮೀರದ ಅನಂತನಾಗ್, ಪುಲ್ವಾಮಾ ಮತ್ತು ಸೋಫಿಯಾನ್ ಜಿಲ್ಲೆಗಳಲ್ಲೂ ಭಾರಿ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ಕೇಂದ್ರ ಕಾಶ್ಮೀರದ ಬುಡಗಾಮ್ ಮತ್ತು ಗಂದರ್‌ಬಾಲ್‌ನಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜನರ ಚಲನವಲನದ ಮೇಲೆ ನಿರ್ಬಂಧ ಹೇರಲಾಗಿದೆ.

ಪ್ರತಿಭಟನೆಯನ್ನು ನಿಯಂತ್ರಿಸಲು ಇಂತಹ ಕಠಿಣ ಕ್ರಮ ಅಗತ್ಯವಾಗಿದೆ ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ.  ಪ್ರತ್ಯೇಕತಾವಾದಿಗಳು ಎರಡು ದಿನಗಳ ಪ್ರತಿಭಟನೆಗೆ ಕರೆ ನೀಡಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಕನಿಷ್ಠ 30 ಜನರಿಗೆ ಗಾಯಗಳಾಗಿವೆ.

ಎನ್‌ಕೌಂಟರ್‌ನಲ್ಲಿ ಸತ್ತಿರುವ  ಸಬ್ಸಾರ್ ಭಟ್ ಅಂತ್ಯಕ್ರಿಯೆಯು ಟ್ರಾಲ್‌ನ ರತ್‌ಸುನಾ ಪ್ರದೇಶದಲ್ಲಿ ಇರುವ ಸ್ಮಶಾನದಲ್ಲಿ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ನೂರಾರು ಜನರು ಸೇರಿದ್ದರು.

ಶನಿವಾರ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ಮಧ್ಯೆ ಗುಂಡಿನ ಚಕಮಕಿ ನಡೆದಾಗ ನಾಗರಿಕರೊಬ್ಬರು ಸತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾಶ್ಮೀರ ಕಣಿವೆಯಾದ್ಯಂತ ಅಂತರ್ಜಾಲ ಮತ್ತು ಮೊಬೈಲ್ ಸೇವೆಯನ್ನು ಸ್ಥಗಿತಗೊ ಳಿಸಲಾಗಿದೆ.

ಸೇನಾ ಪರೀಕ್ಷೆ ಬರೆದ 799 ಯುವಕರು
ಶ್ರೀನಗರ (ಪಿಟಿಐ): ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಸಬ್ಸಾರ್ ಭಟ್ ಹತ್ಯೆಯನ್ನು ಖಂಡಿಸಿ ಕಾಶ್ಮೀರದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದರೂ ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಮತ್ತು ಇತರ ಶ್ರೇಣಿಯ ಅಧಿಕಾರಿಗಳ ಆಯ್ಕೆಗೆ ಸೇನೆ ನಡೆಸುತ್ತಿರುವ ಸಾಮಾನ್ಯ ಪ್ರವೇಶ ಪರಿಕ್ಷೆಗೆ 799 ಕಾಶ್ಮೀರಿ ಯುವಕರು ಹಾಜರಾಗಿದ್ದಾರೆ.

ಪ್ರತ್ಯೇಕತಾವಾದಿಗಳು ನೀಡಿರುವ ಬಂದ್ ಕರೆಯನ್ನು ಲೆಕ್ಕಿಸದೆ ಈ ಯುವಕರು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದಾರೆ. ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ 815 ಅಭ್ಯರ್ಥಿಗಳ ಪೈಕಿ 16 ಅಭ್ಯರ್ಥಿಗಳು ಮಾತ್ರ ಪ್ರವೇಶ ಪರೀಕ್ಷೆಗೆ ಗೈರಾಗಿದ್ದರು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಯುವಕರು ಪರೀಕ್ಷೆಗೆ ಹಾಜರಾಗುವ ಮೂಲಕ ಉಗ್ರಗಾಮಿಗಳ ಕರೆಯನ್ನು ಧಿಕ್ಕರಿಸಿ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT