ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕಾಂಕ್ರಿಟ್‌ ರಸ್ತೆಯಲ್ಲಿ ಗುಂಡಿಗಳು!

Last Updated 29 ಮೇ 2017, 6:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಒಳಭಾಗದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ರಾಜ್ಯ ಹಣಕಾಸು ಆಯೋಗದ (ಎಸ್ಎಫ್‌ಸಿ) ಅನುದಾನದಲ್ಲಿ ಕಾಂಕ್ರಿಟ್ ರಸ್ತೆಗಳನ್ನಾಗಿ ಪರಿವರ್ತಿಸುವ ಅಭಿವೃದ್ಧಿ ಕಾಮಗಾರಿಗಳು ಇತ್ತೀಚೆಗೆ ಚುರುಕು ಪಡೆದಿರುವ ನಡುವೆಯೇ, ಅನೇಕ ಕಡೆಗಳಲ್ಲಿ ಕಾಂಕ್ರಿಟ್ ರಸ್ತೆಗಳಲ್ಲಿ ಮ್ಯಾನ್‌ಹೋಲ್‌ಗಳು ರಸ್ತೆಗುಂಡಿಗಳಾಗಿ ಪರಿಣಮಿಸಿವೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿವೆ.

ಇತ್ತೀಚೆಗಷ್ಟೇ ನಗರದ 15, 16 ಮತ್ತು 20ನೇ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಗರ್ಲ್ಸ್‌ ಸ್ಕೂಲ್ ರಸ್ತೆಯಿಂದ ಸುಬ್ಬರಾಯನಪೇಟೆಯ ಸುಬ್ರಮಣ್ಯ  ಸ್ವಾಮಿ ದೇವಸ್ಥಾನದ ವರೆಗೆ ₹ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ 200 ಮೀಟರ್‌ ಉದ್ದದ ಕಾಂಕ್ರಿಟ್‌ ರಸ್ತೆಯಲ್ಲಿ ಸುಮಾರು 15 ಮ್ಯಾನ್‌ಹೋಲ್‌ಗಳು ರಸ್ತೆಗುಂಡಿ ಗಳಾಗಿ ಪರಿವರ್ತನೆ ಗೊಂಡಿವೆ. 

ಈ ರಸ್ತೆಯಲ್ಲಿ ಅರ್ಧ ಅಡಿಯಿಂದ ಒಂದೂವರೆ ಅಡಿ ವರೆಗೆ ಮ್ಯಾನ್‌ ಹೋಲ್‌ ಗುಂಡಿಗಳು ಬಾಯ್ತೆರೆದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಹೊಸ ರಸ್ತೆ ಎಂದು ಮೈಮರೆತು ಬೈಕ್, ವಾಹನ ಓಡಿಸುವ ಸವಾರರು ಗಾಡಿ ಗುಂಡಿಗೆ ಬೀಳುತ್ತಿದ್ದಂತೆ ರಸ್ತೆ ಮಾಡಿದವರಿಗೆ ಹಿಡಿಶಾಪ ಹಾಕುವ ದೃಶ್ಯಗಳು ಸಾಮಾನ್ಯವಾಗಿವೆ.

‘ಸದ್ಯ ಮಳೆಗಾಲ ಆರಂಭವಾಗಿದೆ. ಸಂಜೆ, ರಾತ್ರಿ ವೇಳೆ ಗಾಳಿ ಬೀಸಿದರೆ ವಿದ್ಯುತ್ ಕಡಿತಗೊಳಿಸುತ್ತಾರೆ. ಆಗ ಈ ರಸ್ತೆ ಗುಂಡಿಗಳು ಪಾದಚಾರಿಗಳಿಗೆ ತುಂಬಾ ತೊಂದರೆ ಉಂಟುಮಾಡುತ್ತವೆ. ಅನೇಕ ಜನರು ಬಿದ್ದ ಉದಾಹರಣೆ ಇದೆ. ಕೆಲ ವಾಹನಗಳಿಗೆ ಹಾನಿಯಾಗಿದೆ. ಮ್ಯಾನ್‌ಹೋಲ್‌ ಬಳಿ ಸದ್ಯ ತಾತ್ಕಾಲಿಕವಾಗಿ ಏನಾದರೂ ಅಳವಡಿಸಿ ಅಪಾಯ ತಪ್ಪಿಸುವ ಕೆಲಸ ಮಾಡ ಬೇಕಿದೆ’ ಎಂದು ಸುಬ್ಬರಾಯನ ಪೇಟೆ ನಿವಾಸಿ ಗಿರೀಶ್ ಹೇಳಿದರು.

‘ರಾತ್ರಿ ಕತ್ತಲು ವೇಳೆ ಈ ರಸ್ತೆಯಲ್ಲಿ ವಯಸ್ಸಾದವರು, ಚಿಕ್ಕಮಕ್ಕಳು ನಡೆದಾಡಲು ತೀವ್ರ ತೊಂದರೆ ಯಾಗುತ್ತಿದೆ. ಹೆಚ್ಚು ಕಡಿಮೆಯಾಗಿ ಜೀವಹಾನಿಯಾದರೆ ಯಾರು ಹೊಣೆಗಾರರು? ನಗರಸಭೆ ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕೂಡಲೇ ಗಮನಹರಿಸಿ ಸಮಸ್ಯೆ ಸರಿಪಡಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

‘ನಡು ರಸ್ತೆಯಲ್ಲಿಯೇ ಒಂದೂವರೆ ಅಡಿ ಗುಂಡಿಯನ್ನು ಹಾಗೇ ಬಿಟ್ಟಿದ್ದಾರೆ. ಹೊಸ ಕಾಂಕ್ರಿಟ್‌ ರಸ್ತೆಯಲ್ಲಿ ಗುಂಡಿಗಳಿರುತ್ತವೆ ಎಂದು ಯಾವ ಸವಾರರೂ ಊಹಿಸುವುದಿಲ್ಲ. ಅಮಾಯಕರ ಪ್ರಾಣ ಹೋಗುವ ಮೊದಲು ನಗರಸಭೆಯವರು ಎಚ್ಚೆತ್ತು ಕೊಳ್ಳಬೇಕಿದೆ’ ಎಂದು ಗರ್ಲ್ಸ್‌ ಸ್ಕೂಲ್ ರಸ್ತೆ ನಿವಾಸಿ ವಸಂತ್‌ ಬೇಸರ ವ್ಯಕ್ತಪಡಿಸಿದರು.

‘ಮ್ಯಾನ್‌ಹೋಲ್‌ ಸೃಷ್ಟಿಸಿರುವ ಗುಂಡಿಗಳಿಗೆ ಮುಕ್ತಿ ನೀಡಿ ಎಂದು ನಗರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದ್ದೇವೆ ಅವರು ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ. ನಗರಸಭೆಯ ಸ್ಥಳೀಯ ಸದಸ್ಯರು ಕೂಡಲೇ ಸಂಬಂಧ ಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡುವ ಮೂಲಕ ತುರ್ತಾಗಿ ಈ ತೊಂದರೆಗೆ ಪರಿಹಾರ ಕಲ್ಪಿಸಬೇಕು’ ಎಂದರು.

* * 

ಪ್ರತಿ ಕಾಂಕ್ರಿಟ್ ರಸ್ತೆಯಲ್ಲಿ ಮ್ಯಾನ್‌ಹೋಲ್‌ಗಳನ್ನು ಎತ್ತರಿಸಿ ನಿರ್ಮಾಣ ಮಾಡುವ ಜವಾಬ್ದಾರಿ ಗುತ್ತಿಗೆದಾರರಿಗೆ ಸೇರಿದೆ. ತುರ್ತಾಗಿ ಸಮಸ್ಯೆ ಸರಿಪಡಿಸಲು ಕ್ರಮಕೈಗೊಳ್ಳುವೆ.
ಉಮಾಕಾಂತ್, ನಗರಸಭೆ ಆಯುಕ್ತ

* * 

ಗುಂಡಿಗಳಿಂದ ಜನರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಮ್ಯಾನ್‌ಹೋಲ್‌ ಮೇಲಕ್ಕೆ ಎತ್ತರಿಸಿ ಸರಿಪಡಿಸುವಂತೆ ನಗರಸಭೆಗೆ ಮನವಿ ಕೊಟ್ಟಿರುವೆ. ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆ
ಎಂ.ಜಯಮ್ಮ, 20ನೇ ವಾರ್ಡ್‌ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT