ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟು, ಸಹಕಾರ ಮನೋಭಾವ ಇರಲಿ

Last Updated 29 ಮೇ 2017, 7:16 IST
ಅಕ್ಷರ ಗಾತ್ರ

ಕೆರಗೋಡು: ನಾಡಿನ ರೈತರ ಜೀವನ ಸುಧಾರಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸಮೀಪದ ಕೆ.ಗೌಡಗೆರೆ ಗ್ರಾಮದಲ್ಲಿ ಭಾನುವಾರ ಚನ್ನಭೈರವೇಶ್ವರಸ್ವಾಮಿ ಸೇವಾ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ರಾಮಮಂದಿರದ ವಾರ್ಷಿಕೋತ್ಸವ ಹಾಗೂ ಚಾವಣಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರು ಬರಗಾಲದಿಂದ ತತ್ತರಿಸಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಬೆಳೆ ಹಾಗೂ ಬೆಲೆ ಸಿಗಲಿದೆ. ಯಾರೂ ಧೃತಿಗೆಡಬಾರದು ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಗ್ರಾಮದ ಜನರು ಒಗ್ಗಟ್ಟು ಹಾಗೂ ಸಹಕಾರ ಮನೋಭಾವದಿಂದಿರಬೇಕು. ಇದರಿಂದ ಜನರ ನಡುವೆ ಸಾಮರಸ್ಯದ ಜೀವನ ಇರಲಿದೆ ಎಂದರು.

ಬೆಳಿಗ್ಗೆ ರಾಮಮಂದಿರದ ದೇವಾಲಯದಲ್ಲಿ ಗಣಪತಿ ಪೂಜೆ, ದೇವರಿಗೆ ಅಭಿಷೇಕ, ಹೂವಿನ ಅಲಂಕಾರ, ಗ್ರಾಮದ ಪಟ್ಟಲದಮ್ಮ ಹಾಗೂ ಹಿರಿಯಮ್ಮ ದೇವರ ಪೂಜಾ ಕಾರ್ಯಕ್ರಮ ನಡೆಯಿತು. ಬಳಿಕ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದ ಸ್ವಾಮೀಜಿ ವಿಶೇಷ ಪೂಜೆ ಮತ್ತು ಆಶೀರ್ವಚನ ನೀಡಿದರು.

ಮಾಜಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಚಂದಗಾಲು ಶಿವಣ್ಣ, ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಮೈಷುಗರ್ ಮಾಜಿ ಅಧ್ಯಕ್ಷ ಎಸ್.ಸಿದ್ದರಾಮೇಗೌಡ, ಎಪಿಎಂಸಿ ನಿರ್ದೆಶಕ ಕೆ.ಪಿ.ವೀರಪ್ಪ, ಚನ್ನಭೈರವೇಶ್ವರ ಟ್ರಸ್ಟ್‌ನ ಬೋರೇಗೌಡ ಇದ್ದರು.

‘ಬಿಎಸ್‌ವೈಗೆ ಪ್ರಧಾನಿ ನೋಟು ಮುದ್ರಣ ಯಂತ್ರ ಕೊಟ್ಟಿದ್ದಾರಾ?’
ಮಂಡ್ಯ: ‘ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮನ್ನಾ ಅಸಾಧ್ಯ ಎಂದಿದ್ದರು. ಆದರೆ, ಈಗ, ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು 2008ರಲ್ಲಿ ನೀಡಿದ ಹೇಳಿಕೆ ವಿಧಾನಸಭೆ ಕಲಾಪದಲ್ಲಿ ದಾಖಲಾಗಿದೆ. ‘ಯಾವುದೇ ಕಾರಣಕ್ಕೂ ರೈತರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ, ಚುನಾವಣೆಯಲ್ಲಿ ಮತ ಪಡೆಯಲು ನಾನು ಭರವಸೆ ನೀಡಿದ್ದೆ. ಈಗ ಚುನಾವಣೆ ಮುಗಿದಿದೆ. ಸಾಲಮನ್ನಾ ಮಾಡಬೇಕೆಂಬ ನಿಯಮ ಇಲ್ಲ. ಕೇಂದ್ರ ಸರ್ಕಾರ ನನಗೆ ನೋಟು ಮುದ್ರಣ ಮಾಡುವ ಯಂತ್ರ ಕೊಟ್ಟಿಲ್ಲ’ ಎಂಬ ಹೇಳಿಕೆ ಕೊಟ್ಟಿದ್ದರು ಎಂದರು.

ಸಹಕಾರಿ ಸಂಘಗಳ ಸಾಲಮನ್ನಾ ಮಾಡುವುದಾಗಿ ಯಡಿಯೂರಪ್ಪ ಈಚೆಗೆ ಹೇಳಿಕೆ ಕೊಟ್ಟಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ಮುದ್ರಿಸುವ ಯಂತ್ರ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.

ರಾಮನಗರದಿಂದಲೇ ಸ್ಪರ್ಧೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದಲೇ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಅಲ್ಲಿಯ ಕೆಲ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.

ಕೆಲವರು ಪಕ್ಷ ಬಿಟ್ಟು ಹೋಗುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ‘ಚುನಾವಣೆ ಸಮಯದಲ್ಲಿ ಪಕ್ಷದಿಂದ ಹೊರ ಹೋಗುವವರು, ಪಕ್ಷಕ್ಕೆ ಬರುವವರಿಗೆ ಲೆಕ್ಕ ಇರುವುದಿಲ್ಲ. ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT