ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ಹೂಳಿನ ಮೇಲೆ ವ್ಯಾಪಾರ!

Last Updated 29 ಮೇ 2017, 7:25 IST
ಅಕ್ಷರ ಗಾತ್ರ

ಮಂಡ್ಯ: ಚರಂಡಿಯ ಹೂಳಿನ ಮೇಲೆ ವ್ಯಾಪಾರಿಗಳು ಹಣ್ಣು, ತರಕಾರಿ ಮಾರುತ್ತಿದ್ದಾರೆ. ಗ್ರಾಹಕರು ಮೂಗು ಮುಚ್ಚಿಕೊಂಡು ಖರೀದಿ ಮಾಡುತ್ತಿ ದ್ದಾರೆ. ತರಕಾರಿ ಮಾರುಕಟ್ಟೆಯನ್ನು ಈ ಸ್ಥಿತಿಗೆ ತಂದ ನಗರಸಭೆ ವಿರುದ್ಧ ವ್ಯಾಪಾರಿ, ಗ್ರಾಹಕರಿಬ್ಬರೂ ಹಿಡಿ ಶಾಪ ಹಾಕುತ್ತಿದ್ದಾರೆ!

ನಗರದ ತರಕಾರಿ ಮಾರುಕಟ್ಟೆ ರಸ್ತೆ ಬದಿಯಲ್ಲಿ ಮುಚ್ಚಿ ಹೋಗಿದ್ದ ಚರಂಡಿಯ ಹೂಳೆತ್ತಿ ವಾರ ಕಳೆದಿದೆ. ಎತ್ತಿದ ಹೂಳನ್ನು ತೆರವುಗೊಳಿಸದ ಕಾರಣ ವ್ಯಾಪಾರಿಗಳು ಹೂಳಿನ ಮೇಲೆ ಚೀಲ, ಬಟ್ಟೆ ಹಾಸಿಕೊಂಡು ಹಣ್ಣು, ತರಕಾರಿಯನ್ನು ಮಾರಾಟಕ್ಕಿಟ್ಟಿದ್ದಾರೆ. ಅದು ನಿತ್ಯ ನಡೆಯುವ ಮಾರುಕಟ್ಟೆ ಯಾದ್ದರಿಂದ ವ್ಯಾಪಾರಿಗಳಿಗೆ ಅನಿ ವಾರ್ಯ. ಹೂಳನ್ನು ಸಹಿಸಿಕೊಂಡು ಅದರ ನಡುವೆಯೇ ಮಾರಾಟ ನಡೆಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಡಿಸಿಸಿ ಬ್ಯಾಂಕ್‌ ಕಟ್ಟಡದಿಂದ ಆರಂಭವಾಗುವ ಚರಂಡಿ ರಾಜಕಾಲುವೆ ವರೆಗೂ ಚಾಚಿಕೊಂಡಿದೆ. ಅದರಲ್ಲಿ ಅರ್ಧ ಭಾಗದ ಹೂಳೆತ್ತಲಾಗಿದೆ. ಹೂಳಿನಿಂದ ವ್ಯಾಪಾರಿಗಳಿಗೆ ಮಾತ್ರ ತೊಂದರೆಯಾಗಿಲ್ಲ, ಮಾರುಕಟ್ಟೆ ರಸ್ತೆಯಲ್ಲಿ ಸಾಗುವ ವಾಹನ ಸಂಚಾರಕ್ಕೂ ತೀವ್ರ ತೊಂದರೆಯಾಗಿದೆ. ದುರ್ವಾಸನೆ ಬೀರುವ ಹೂಳು ರಸ್ತೆಯಲ್ಲಿ ಚೆಲ್ಲಾಡುತ್ತಿದೆ. ಇದರಿಂದ ದ್ವಿಚಕ್ರವಾಹನ ಸವಾರರು ಹೂಳಿನಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.

ರಸ್ತೆಯ ಎಡಬದಿಯಲ್ಲಿ ಅಂಗಡಿ ಮಳಿಗೆಗಳಿವೆ. ಬಲಬದಿಯಲ್ಲಿ ವ್ಯಾಪಾರಿಗಳು ಹಣ್ಣು, ತರಕಾರಿ ವ್ಯಾಪಾರ ಮಾಡುತ್ತಾರೆ. ಚರಂಡಿಗೆ ಹೊಂದಿಕೊಂಡಂತೆ ರೈಲ್ವೆ ಇಲಾಖೆಯ ಗೋಡೆ ಇದೆ. ಮುಚ್ಚಿ ಹೋಗಿದ್ದ ಚರಂಡಿಯ ಹೂಳು ತೆಗೆದಿರುವ ಕಾರಣ ರಸ್ತೆ ಕಿರಿದಾಗಿದೆ.

ಹೀಗಾಗಿ ವ್ಯಾಪಾರಿಗಳು, ಗ್ರಾಹಕರು, ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಚರಂಡಿ ಮಾಡಲಿ, ನಮ್ಮದೇನೂ ಆಕ್ಷೇಪ ಇಲ್ಲ. ಆದರೆ ಹೂಳು ತೆಗೆದ ತಕ್ಷಣ ಅದನ್ನು ತುಂಬಿಕೊಂಡು ಹೋಗಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ನಾಳೆ ಎನ್ನುತ್ತಾ ದಿನ ದೂಡುತ್ತಿದ್ದಾರೆ’ ಎಂದು ತರಕಾರಿ ವ್ಯಾಪಾರಿ ನಂದೀಶ್‌ ಹೇಳಿದರು.

‘ಹೂಳು ತುಂಬಿಕೊಂಡು ಹೋಗಿ ಚರಂಡಿ ಮೇಲೆ ಚಪ್ಪಡಿ ಹಾಸಿದರೆ ನಮಗೆ ಸಮಸ್ಯೆಯಾಗುವುದಿಲ್ಲ. ಕಲ್ಲಿನ ಮೇಲೆ ನಾವು ವ್ಯಾಪಾರ ಮಾಡಿಕೊಳ್ಳುತ್ತೇವೆ. ಇದರಿಂದ ವಾಹನ ಸಂಚಾರಕ್ಕೂ ಸಮಸ್ಯೆಯಾಗುವುದಿಲ್ಲ’ ಎಂದು ಹಣ್ಣಿನ ವ್ಯಾಪಾರಿ ನಾರಾಯಣ ಹೇಳಿದರು.

ಮಾಯವಾಗಿದ್ದ ಚರಂಡಿ!: ‘ಮಾಯವಾಗಿದ್ದ ಚರಂಡಿಯನ್ನು ನಗರಸಭೆ ಹುಡುಕಿದೆ. ಮೊದಲೇ ಇದ್ದ ಚರಂಡಿಯನ್ನು ವ್ಯಾಪಾರಿಗಳು ಮುಚ್ಚಿ ಅಂಗಡಿ ಹಾಕಿಕೊಂಡಿದ್ದರು. ಹೀಗಾಗಿ ಮಳೆ ಬಂದಾಗ ಮೇಲಿನಿಂದ ಹರಿದು ಬರುವ ನೀರು ಎಡಭಾಗದಲ್ಲಿರುವ ಮಳಿಗೆಗಳಿಗೆ ನುಗ್ಗುತ್ತಿತ್ತು.

ಆದ್ದರಿಂದ ಚರಂಡಿಯ ಹೂಳು ತೆಗೆಯುವಂತೆ ಮೊದಲಿನಿಂದಲೂ ಮನವಿ ಮಾಡುತ್ತಿದ್ದೆವು. ಈಗ ಬೇಡಿಕೆ ಈಡೇರಿದೆ, ಆದರೆ ತೆಗೆದ ಹೂಳನ್ನು ತೆರವುಗೊಳಿಸದ ಕಾರಣ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ’ ಎಂದು ವ್ಯಾಪಾರಿ ನಾಗರಾಜ್‌ ಹೇಳಿದರು.

ರೋಗಭೀತಿ: ಚರಂಡಿಯ ಹೂಳು ರಸ್ತೆಯಲ್ಲಿ ಬಿದ್ದಿರುವ ಕಾರಣ ಸುತ್ತಮುತ್ತಲಿನ ಪ್ರದೇಶದ ಜನರಿಗೆ ರೋಗ ಭೀತಿ ಎದುರಾಗಿದೆ. ಹೂಳಿನ ಮೇಲೆ ಮಳೆ ಸುರಿದಿರುವ ಕಾರಣ ಅಲ್ಲಲ್ಲಿ ತಗ್ಗುಗಳಲ್ಲಿ ನೀರು ನಿಂತಿದೆ. ಸೊಳ್ಳೆಗಳ ಉತ್ಪಾದನಾ ಸ್ಥಳವಾಗಿ ಮಾರ್ಪಟ್ಟಿದೆ.

‘ಮಳೆಗಾಲ ಆರಂಭವಾಗುತ್ತಿದ್ದಂತೆ ರಸ್ತೆಯಲ್ಲಿ ನೀರು ಹರಿಯುತ್ತಿತ್ತು. ಆದ್ದರಿಂದ ಚರಂಡಿಯ ಹೂಳೆತ್ತಲಾಗಿದೆ. ಕೂಡಲೇ ಹೂಳು ತೆರವುಗೊಳಿಸುವಂತೆ ಸಿಬ್ಬಂದಿಗೆ ತಿಳಿಸಿದ್ದೆ. ಇನ್ನೂ ತೆಗೆಸಿಲ್ಲ ಎಂದರೆ ಪರಿಶೀಲನೆ ಮಾಡಿ, ತಕ್ಷಣ ತೆರವಿಗೆ ಕ್ರಮ ಕೈಗೊಳ್ಳುತ್ತೇನೆ’ ಎಂದು ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಹೇಳಿದರು.

ವ್ಯಾಪಾರಿಗಳು ಏನಂತಾರೆ?
ಈ ಕೊಳಚೆ ಮಣ್ಣನ್ನು ಇಲ್ಲೇ ಬಿಟ್ಟು ಹೋಗಿದ್ದಾರೆ. ನನಗೆ ಸೊಪ್ಪು ಮಾರುವುದೇ ಜೀವನ. ಬೇರೆ ಕೆಲಸ ಗೊತ್ತಿಲ್ಲ. ವಾಸನೆ ಇದ್ದರೂ ಪರವಾಗಿಲ್ಲ, ಸಹಿಸಿಕೊಂಡು ಸೊಪ್ಪು ಮಾರಲೇಬೇಕು. ನಮ್ಮ ಸಮಸ್ಯೆಯನ್ನು ಯಾರು ಕೇಳುತ್ತಾರೆ?
-ಸಣ್ಣಮ್ಮ, ಸೊಪ್ಪು ವ್ಯಾಪಾರಿ

ಚರಂಡಿಗೆ ಸಿಮೆಂಟ್‌ ಕಾಂಕ್ರೀಟ್‌ ಹಾಕಿಸಿ, ಕಲ್ಲು ಹಾಕಿಸಿಕೊಟ್ಟರೆ ನಮಗೆ ಅನುಕೂಲವಾಗುತ್ತದೆ. ಸಣ್ಣ ರಸ್ತೆಯಲ್ಲಿ ವಾಹನಗಳು ಸಿಕ್ಕಿಹಾಕಿಕೊಳ್ಳುತ್ತವೆ. ಟ್ರಾಫಿಕ್‌ ಜಾಮ್‌ ನೋಡಿ ನನಗೂ ಸಾಕಾಗಿ ಹೋಗಿದೆ.
-ಮಲ್ಲೇಶ್‌, ಈರುಳ್ಳಿ ವ್ಯಾಪಾರಿ

ಮೊನ್ನೆ ಮಳೆ ಸುರಿದ ನಂತರ ವಾಸನೆ ಸ್ವಲ್ಪ ತಗ್ಗಿದೆ. ಮೊದಲು ಇಲ್ಲಿ ನಿಲ್ಲಲು ಅಸಾಧ್ಯವಾದಷ್ಟು ದುರ್ವಾಸನೆ ಹರಡಿತ್ತು. ಹೂಳಿನ ಕಾರಣಕ್ಕಾಗಿ ನಾವು ವ್ಯಾಪಾರ ನಿಲ್ಲಿಸಲು ಬರುವುದಿಲ್ಲ. ನಮಗೆ ಇದೇ ಜೀವನಾಧಾರ.
-ಮಹೇಂದ್ರ, ವ್ಯಾಪಾರಿ

ನಗರಸಭೆಯವರು ಮನಸ್ಸು ಮಾಡಿದರೆ ಅರ್ಧ ಗಂಟೆಯಲ್ಲಿ ಈ ಮಣ್ಣನ್ನು ತುಂಬಿಕೊಂಡು ಹೋಗಬಹುದು. ಆದರೆ ಅವರಿಗೆ ಮನಸ್ಸಿಲ್ಲ. ನಮಗೆ ಆಗುತ್ತಿರುವ ತೊಂದರೆ ಅವರಿಗೇನು ಗೊತ್ತು?
–ಪರಮೇಶ್‌, ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT