ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಪೂರ್ಣ ಬೆಳೆಗೆ ಅಂಗಾಂಶ ಕೃಷಿ

Last Updated 29 ಮೇ 2017, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಬೀಜ ಬಿತ್ತನೆ ಮಾಡುವ ಮೂಲಕ ಸಸಿಗಳನ್ನು ಬೆಳೆಸುವುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಬ್ಬರು ಗಿಡದ ಅಂಗದಿಂದಲೇ ಕಸಿಮಾಡಿ ಆ ಮೂಲಕ ವರ್ಷಕ್ಕೆ ಲಕ್ಷಾಂತರ ಸಸಿಗಳನ್ನು ಉತ್ಪಾದಿಸುತ್ತಾರೆ. ಅವರ ಹೆಸರು ಡಾ.ಮುರಳೀಧರ್ ರಾವ್. ಮೂಲತಃ ಮಂಗಳೂರಿನ ಸುರತ್ಕಲ್ ಸಮೀಪದ ಮುಕ್ಕದ ಗ್ರಾಮದವರು.

ಕೃಷಿ ವಿಷಯದಲ್ಲಿ ಪದವೀಧರರಾದ ಅವರು ಹೈದರಾಬಾದ್‌ನ ನಾಗಾರ್ಜುನ ಫರ್ಟಿಲೈಸರ್ಸ್‌ನಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿದರು. ಆಗ ಹೈದರಾಬಾದ್‌ನಲ್ಲೇ ಒಂದಿಷ್ಟು ಜಮೀನು ಖರೀದಿಸಿ ಕೃಷಿ ಪ್ರಯೋಗಗಳನ್ನು ನಡೆಸಿದವರು.

ಅಮೆರಿಕಕ್ಕೆ ಹೋಗಿ ಬದುಕು ಕಟ್ಟಿಕೊಳ್ಳುವ ಕನಸನ್ನು ಕೂಡ ಕಂಡವರು. ಆದರೆ ವಿದೇಶ ವ್ಯಾಮೋಹ ಬಿಟ್ಟು, ಸ್ವದೇಶದಲ್ಲೇ ಕೃಷಿ ಮಾಡುವ ಹಂಬಲದಿಂದ 2013ರಲ್ಲಿ ಮ್ಯೂಸ್‌ ಪ್ಲಾಂಟ್ ಜೀನ್ ಟೆಕ್ ಎಂಬ ಅಂಗಾಂಶ ಕೃಷಿ ಉತ್ಪನ್ನ ಕೇಂದ್ರವನ್ನು ತೆರೆದರು. ಕಿನ್ನಿಗೋಳಿ-ಮೂಡಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಕಾಣಸಿಗುವ ಕುದ್ರಿಪದವು ಎಂಬ ಸಣ್ಣ ಗ್ರಾಮೀಣ ಪ್ರದೇಶದಲ್ಲೇ ಅವರ ಲ್ಯಾಬ್‌ ಇದೆ.

ಕರಾವಳಿ ಪ್ರದೇಶದಲ್ಲಿ ಬೀಜ ಬಿತ್ತುವ ಮೂಲಕ ಇಲ್ಲವೆ ನರ್ಸರಿಗಳಿಂದ ಸಸಿಗಳನ್ನು ತಂದು ನೆಡುವ ಮೂಲಕ ಕೃಷಿ ಚಟುವಟಿಕೆ ನಡೆಸುತ್ತಾರೆ. ಆದರೆ, ಡಾ.ಮುರಳೀಧರ್ ರಾವ್ ಮಾತ್ರ ಇದಕ್ಕೆ ಬದಲಾಗಿ ಆಯ್ದ ಗಿಡವೊಂದರ ಒಳಭಾಗದ ತಿರುಳನ್ನು ಕತ್ತರಿಸಿ ಸಸಿಗಳನ್ನು ಉತ್ಪತ್ತಿ ಮಾಡುತ್ತಾರೆ. ಇದೇ ಅಂಗಾಂಶ ಕೃಷಿ.

ಕೇಂದ್ರ ಸರಕಾರದ ಬಯೋಟೆಕ್ನಾಲಜಿ ವಿಭಾಗದಿಂದ ಮಾನ್ಯತೆ ಪಡೆದ ಜಿಲ್ಲೆಯ ಏಕೈಕ ಅಂಗಾಂಶ ಕೃಷಿ ಸಸಿಗಳ ಉತ್ಪನ್ನ ಕೇಂದ್ರ ಇದಾಗಿದೆ. ವರ್ಷಕ್ಕೆ ಎರಡು ಲಕ್ಷಕ್ಕೂ ಮಿಕ್ಕಿದ ಸಸಿಗಳನ್ನು ಈ ಕೃಷಿ ವಿಜ್ಞಾನಿ ಉತ್ಪಾದಿಸಿ ಮಾರಾಟ ಮಾಡುತ್ತಾರೆ.

ಈ ಕೃಷಿ ವಿಧಾನ ಅಷ್ಟೇ ಶ್ರಮದಾಯಕವಾದುದು. ಮುರಳೀಧರ್ ರಾವ್ ಅವರು, ಬಾಳೆಗಿಡದ ಹಲವು ತಳಿಗಳ ಅಂಗಾಂಶ ಕೃಷಿ ಮಾಡುತ್ತಿದ್ದಾರೆ. ಒಮ್ಮೆ ಅಂಗಾಂಶ ಕೃಷಿಗೊಳಗಾದ ತಿರುಳಿನಿಂದ ಅದು ಸಸಿಯಾಗಿ ಮಾರಾಟ ಮಾಡುವ ಹಂತಕ್ಕೆ ಸರಿಸುಮಾರು ಒಂದು ವರ್ಷವೇ ಬೇಕು. ಅಲ್ಲದೇ ಪ್ರತಿ ಹಂತದಲ್ಲೂ ಅದರ ಬಗ್ಗೆ ಹೆಚ್ಚಿನ ನಿಗಾ ಇಟ್ಟು ಕೆಲಸಗಾರರು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಕುದ್ರಿಪದವಿನ ಇವರ ಲ್ಯಾಬ್‌ನಲ್ಲಿ ಏಳು ಜನ ಕೆಲಸಗಾರರಿದ್ದು, ಲ್ಯಾಬ್ ಕೆಲಸಕ್ಕೆಂದು ಬರುವ ಇವರು ಉನ್ನತ ಶಿಕ್ಷಣ ಪಡೆದವರಲ್ಲ. ಆದರೆ, ಕೃಷಿ ವಿಜ್ಞಾನಿಯ ಆಸೆಗೆ ಬೆಂಗಾವಲಾಗಿ ನಿಂತಿದ್ದಾರೆ.

ಲ್ಯಾಬ್‌ನಲ್ಲಿ ಗಿಡವೊಂದರ ಭಾಗದ ತಿರುಳನ್ನು ಕತ್ತರಿಸಿ ತೆಗೆದು ಆ ಮೂಲಕ ಲಕ್ಷಾಂತರ ಸಸಿಗಳನ್ನು ಉತ್ಪಾದಿಸುತ್ತಾರೆ. ತಿರುಳಿನ ಭಾಗವನ್ನು ಸಣ್ಣದಾಗಿ ಕತ್ತರಿಸಿ ಗಾಜಿನ ಬಾಟಲಿಗಳಲ್ಲಿ ಕೂಡಿಡುತ್ತಾರೆ. ಆನಂತರ ಅವುಗಳು ಚಿಗುರೊಡೆಯುತ್ತವೆ. ಬಳಿಕ ಮತ್ತೆ ಅವುಗಳನ್ನು ಹಲವು ಆಯಾಮಗಳಲ್ಲಿ ಸಂರಕ್ಷಿಸುವ ಮೂಲಕ ಲ್ಯಾಬ್‌ನಲ್ಲಿಟ್ಟು ಪೋಷಿಸಬೇಕಾಗುತ್ತದೆ. ಬಳಿಕ ಸಸಿಗಳನ್ನು ಲ್ಯಾಬ್‌ನಿಂದ ಹೊರತಂದು ಮುಚ್ಚಿದ ನರ್ಸರಿಯಲ್ಲಿ ಸಂಗ್ರಹಿಸಿಡಲಾಗುತ್ತದೆ. ಅಲ್ಲಿಂದ ರೈತರಿಗೆ ಮಾರಾಟ ಮಾಡಲಾಗುತ್ತದೆ.

ಕೃಷಿಕರಿಗೆ ಮಾರುಕಟ್ಟೆ ಬೆಲೆಗಿಂತಲೂ ಕಡಿಮೆ ದರದಲ್ಲಿ ಪೂರೈಸಲಾಗುತ್ತದೆ. ಆದರೆ ಇಲ್ಲಿ ಸಿಗುವ ಸಸಿಗಳು ಮಾರುಕಟ್ಟೆಗಳಲ್ಲಿ ಸಿಗುವ ಹಾಗೆ ಯಾವುದೇ ರಾಸಾಯನಿಕ ಭರಿತ ಉತ್ಪನ್ನಗಳಲ್ಲ.

ರಾಜ್ಯದಲ್ಲಿ ಒಟ್ಟು ಇಂತಹ 30 ಲ್ಯಾಬ್‌ಗಳಿದ್ದು ಅದರಲ್ಲಿ ಕೇವಲ ಒಂಬತ್ತು ಲ್ಯಾಬ್‌ಗಳು  ಸರಕಾರದಿಂದ ಮಾನ್ಯತೆ ಪಡೆದಿವೆ. ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮಾಣ ಪತ್ರ ಪಡೆದಿರುವ ಏಕೈಕ ಪ್ರಯೋಗಾಲಯ ಡಾ.ಮುರಳೀಧರ್ ರಾವ್ ಅವರದು. ಪ್ರಮಾಣೀಕೃತ ಲ್ಯಾಬ್‌ಗಳಲ್ಲಿ ಸಸಿಗಳನ್ನು ಖರೀದಿಸಿದರೆ ರೈತರಿಗೂ ಸರಕಾರದ ಸಬ್ಸಿಡಿ ಸಿಗುತ್ತದೆ.

ಸದ್ಯ ನೇಂದ್ರ, ಕ್ಯಾವೆಂಡಿಶ್ ಹಾಗೂ ಕದಲಿ ಬಾಳೆ ಸಸಿಗಳನ್ನು ತಮ್ಮ ಪ್ರಯೋಗಾಲಯದಲ್ಲಿ ಉತ್ಪಾದಿಸುತ್ತಿದ್ದಾರೆ. ಮುಂದೆ ಕಾಳು ಮೆಣಸು ಸೇರಿದಂತೆ ಹಲವು ತಳಿಗಳ ಅಂಗಾಂಶ ಕೃಷಿ ಯೋಜನೆ ಮತ್ತು ಯೋಚನೆಯನ್ನು ಡಾ.ಮುರಳೀಧರ್ ರಾವ್ ಮಾಡಿಕೊಂಡಿದ್ದಾರೆ.

‘ಕರಾವಳಿಯ ಕೆಲವೊಂದು ಕಾಲೇಜುಗಳು ಕೃಷಿ ಸಂಶೋಧನೆ ಉದ್ದೇಶಕ್ಕೆ ಬೇರೆ ಬೇರೆ ಕಡೆಗಳಿಗೆ ಪ್ರವಾಸ ಏರ್ಪಡಿಸುತ್ತವೆ. ಆದರೆ ನಾವು ಆಹ್ವಾನವಿತ್ತರೂ ಬರುತ್ತಿಲ್ಲ. ಕೆಲವೊಂದು ವಿದ್ಯಾರ್ಥಿಗಳು ನನ್ನ ಬಳಿ ಬಂದು ಮಾಹಿತಿ ಪಡೆದುಕೊಳ್ಳುತ್ತಾರೆ. ಎಲ್ಲರೂ ನಮ್ಮ ಲ್ಯಾಬ್‌ನ ಪ್ರಯೋಜನ ಪಡೆಯುವಂತಾಗಬೇಕು’ ಎಂದು ಅವರು ಹೇಳುತ್ತಾರೆ. ಸಂಪರ್ಕ: 9480266118.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT