ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಚುನಾವಣಾ ಕಾರ್ಯತಂತ್ರಕ್ಕೆ ಪ್ರತಿತಂತ್ರ: ಪರಮೇಶ್ವರ್‌ ಮುಂದುವರಿಕೆ?

Last Updated 29 ಮೇ 2017, 19:56 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆಯ ಹೊಸ್ತಿಲಲ್ಲಿ ಬದಲಾವಣೆಗೆ ಮನಸ್ಸು ಮಾಡದ ಕಾಂಗ್ರೆಸ್‌ ಹೈಕಮಾಂಡ್‌, ದಲಿತ ಸಮುದಾಯಕ್ಕೆ ಸೇರಿರುವ ಜಿ.ಪರಮೇಶ್ವರ್‌ ಅವರನ್ನೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರನ್ನಾಗಿ ಮುಂದುವರಿಸುವ ಸಾಧ್ಯತೆ ಇದೆ.

15 ದಿನಗಳಿಂದ ನಡೆಸಲಾದ ಪಕ್ಷದ ಕಸರತ್ತಿಗೆ ಸೋಮವಾರ ಬಹುತೇಕ ತೆರೆ ಬಿದ್ದಿದ್ದು, ಮಂಗಳವಾರ ಅಥವಾ ಬುಧವಾರ ಈ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ.

‘ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸ ಬೇಕೋ ಅಥವಾ ಮುಂದುವರಿಸಬೇಕೋ’ ಎಂಬ ಕುರಿತು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರ ಮೂಲಕ ಪಕ್ಷದ ಪ್ರತಿ ಜಿಲ್ಲೆಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿರುವ ಹೈಕಮಾಂಡ್‌, ಸೋಮವಾರವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲದೆ  ಪಕ್ಷದ 18 ಮುಖಂಡರೊಂದಿಗೆ ಸಮಾಲೋಚನೆ ನಡೆಸಿತು.

ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಅಧ್ಯಕ್ಷ ಸ್ಥಾನದ ನೇಮಕಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಪಕ್ಷದ ಪ್ರಮುಖ ರಾಜ್ಯ ಮುಖಂಡರೊಂದಿಗೆ ‘ಆಪ್ತ ಸಮಾಲೋಚನೆ’ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.

ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಪ್ರತಿಯೊಬ್ಬ ಮುಖಂಡರೊಂದಿಗೆ ತಮ್ಮ ನಿವಾಸದ ಕೋಣೆಯಲ್ಲಿ ಪ್ರತ್ಯೇಕವಾಗಿ ಚರ್ಚಿಸಿ, ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಧ್ಯಾಹ್ನ ಮತ್ತೆ ಚರ್ಚಿಸಿ ಜಿ.ಪರಮೇಶ್ವರ್‌ ಅವರನ್ನು ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದರು ಎಂದು ಮೂಲಗಳು ಖಚಿತಪಡಿಸಿವೆ.

ಪ್ರತ್ಯೇಕ ಸಮಾಲೋಚನೆ: ಲೋಕಸಭೆ ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಆಸ್ಕರ್‌ ಫರ್ನಾಂಡಿಸ್‌, ಎಂ.ವೀರಪ್ಪ ಮೊಯಿಲಿ, ಕೆ.ಎಚ್‌. ಮುನಿಯಪ್ಪ, ರೆಹಮಾನ್‌ ಖಾನ್‌, ಬಿ.ಕೆ. ಹರಿಪ್ರಸಾದ್‌, ಧ್ರುವನಾರಾಯಣ, ಪ್ರಕಾಶ್‌ ಹುಕ್ಕೇರಿ, ಬಿ.ವಿ. ನಾಯಕ್‌, ಸಚಿವರಾದ ಎಚ್‌.ಕೆ. ಪಾಟೀಲ, ಜಿ. ಪರಮೇಶ್ವರ್‌, ರೋಷನ್‌ ಬೇಗ್‌, ಕೆ.ಜೆ. ಜಾರ್ಜ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಡಿ.ಕೆ. ಶಿವಕುಮಾರ್‌, ಎಂ.ಬಿ. ಪಾಟೀಲ, ಎಸ್‌.ಆರ್‌. ಪಾಟೀಲ ಅವರೊಂದಿಗೆ ತಮ್ಮ ಕೊಠಡಿಯಲ್ಲಿ ಪ್ರತ್ಯೇಕವಾಗಿ 5ರಿಂದ 10 ನಿಮಿಷ ಸಮಾಲೋಚನೆ ನಡೆಸಿದ ರಾಹುಲ್‌ ಗಾಂಧಿ, ಸಾಧಕ– ಬಾಧಕಗಳ ಕುರಿತು ಚರ್ಚಿಸಿದರು.

ನಂತರ ಎಲ್ಲ ಮುಖಂಡರ ಸಮ್ಮುಖದಲ್ಲಿ ಮತ್ತೊಂದು ಸಭೆ ನಡೆಸಿ ಬಹಿರಂಗವಾಗಿ ಅಭಿಪ್ರಾಯ ತಿಳಿಸುವಂತೆ ಸೂಚಿಸಿದರು.

ಎರಡು ದಿನದಲ್ಲಿ ಆದೇಶ: ‘ವರಿಷ್ಠರು ರಾಜ್ಯದ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ನಾವೆಲ್ಲ ಅಭಿಪ್ರಾಯ ಹೇಳಿಯಾಗಿದೆ. ಎರಡು ದಿನಗಳೊಳಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ’ ಎಂದು ಸಿದ್ದರಾಮಯ್ಯ ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಪಕ್ಷವನ್ನು ಸನ್ನದ್ಧಗೊಳಿಸುವ ಬಗೆ,  ರೂಪಿಸಬಹುದಾದ ಕಾರ್ಯತಂತ್ರ ಕುರಿತು ರಾಹುಲ್‌ ಸುದೀರ್ಘ ಚರ್ಚೆ ನಡೆಸಿದರು. ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳಿಗೆ ಭರ್ತಿ ಮಾಡುವ ಬಗ್ಗೆ ಚರ್ಚೆ ನಡೆದಿಲ್ಲ. ಜೂನ್‌ನಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದ ನಂತರ ಈ ಎರಡು ಸ್ಥಾನಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ದಲಿತರ ಪರ ನಿಲುವು: ಬಿಜೆಪಿ ಮುಖಂಡರು ರಾಜ್ಯದ ವಿವಿಧೆಡೆ ದಲಿತರ ನಿವಾಸಕ್ಕೆ ತೆರಳಿ ಊಟ, ಉಪಾಹಾರ ಸೇವಿಸುತ್ತ ಕಾಂಗ್ರೆಸ್‌ನ ಮತಬ್ಯಾಂಕ್‌ಗೆ ಕೈ ಹಾಕುತ್ತಿದ್ದಾರೆ. ದಲಿತ ಸಮುದಾಯಕ್ಕೆ ಸೇರಿರುವ ಪರಮೇಶ್ವರ್‌ ಅವರನ್ನು ಈಗ ಬದಲಿಸಿ ಬೇರೆ ಸಮುದಾಯಕ್ಕೆ ಆದ್ಯತೆ ನೀಡಿದರೆ, ದಲಿತ ಸಮುದಾಯಕ್ಕೆ ತಪ್ಪು ಸಂದೇಶ ರವಾನಿಸಿದಂತಾಗಲಿದೆ. ಮುಖ್ಯವಾಗಿ ಬಿಜೆಪಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂಬ ಅಭಿಪ್ರಾಯವನ್ನು ಅನೇಕ ಮುಖಂಡರು ವ್ಯಕ್ತಪಡಿಸಿದರು.

‘ಚುನಾವಣೆಗೆ 11 ತಿಂಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಅಧ್ಯಕ್ಷರನ್ನು ಬದಲಿಸಿ ಹೊಸಬರನ್ನು ನೇಮಿಸಿದರೆ, ಅವರು ಪಕ್ಷದ ಸ್ಥಿತಿಗತಿ ಅಧ್ಯಯನ ಮಾಡಿ ಅರ್ಥೈಸಿಕೊಳ್ಳುವುದು ಅಸಾಧ್ಯ. ಅದರ ಬದಲಿಗೆ, ಎಲ್ಲ ಸಮುದಾಯದ ಮುಖಂಡರಿಗೂ ಒಂದಿಲ್ಲೊಂದು ಜವಾಬ್ದಾರಿ ವಹಿಸಿದಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ’ ಎಂದು ಬಹುತೇಕ ಮುಖಂಡರು ಸಲಹೆ ನೀಡಿದರು.

ಸಿದ್ದರಾಮಯ್ಯಗೆ ಹಿನ್ನಡೆ: ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರು ಇತ್ತಿಚೆಗಷ್ಟೇ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭ, ಪಕ್ಷದಲ್ಲಿ ಮೊದಲಿನಿಂದಲೂ ಇರುವವರಿಗೆ ಆದ್ಯತೆ ಸಿಗುತ್ತಿಲ್ಲ ಎಂಬ ಕೂಗು ಕೇಳಿಬಂದಿತ್ತು.

ಅದೇ ಮಾದರಿಯ ಅಭಿಪ್ರಾಯವನ್ನು ರಾಹುಲ್‌ ಗಾಂಧಿ ಅವರೆದುರೂ ಅನೇಕ ಮುಖಂಡರು ವ್ಯಕ್ತಪಡಿಸಿದ್ದರಿಂದ, ಅನೇಕ ವರ್ಷಗಳಿಂದ ಶ್ರಮಿಸಿರುವ ಮೂಲ ಕಾಂಗ್ರೆಸ್ಸಿಗರಿಗೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಯಾವುದಾದರೂ ಸ್ಥಾನಮಾನ ನೀಡಬೇಕು ಎಂಬ ನಿರ್ಧಾರವನ್ನು ವರಿಷ್ಠರು ಕೈಗೊಂಡಿದ್ದಾರೆ.

ಪರಮೇಶ್ವರ್‌ ಅವರನ್ನು ಬದಲಿಸಿ, ಎಸ್‌.ಆರ್‌. ಪಾಟೀಲ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೇಡಿಕೆಯನ್ನೂ ಅವರು ಈ ಕಾರಣದಿಂದಲೇ ಪುರಸ್ಕರಿಸಿಲ್ಲ.

ಮೊದಲಿನಿಂದಲೂ ಪಕ್ಷದ ನಂಬಿಕೆಗೆ ಅರ್ಹವಾಗಿರುವ ದಲಿತ ಸಮುದಾಯಕ್ಕೆ ಆದ್ಯತೆ ನೀಡುವುದೇ ಸೂಕ್ತ. ಜೊತೆಗೆ ಇತರ ಸಮುದಾಯಗಳಿಗೂ ಮನ್ನಣೆ ನೀಡಬೇಕು ಎಂಬ ಹಿರಿಯ  ಮುಖಂಡರ ಒಕ್ಕೊರಲಿನ ಬೇಡಿಕೆಗೇ ವರಿಷ್ಠರು ಸೈ ಎಂದಿದ್ದಾರೆ.

**

ನಾನು ಅಧ್ಯಕ್ಷನಾಗಬೇಕು ಎಂಬುದು ಕಾರ್ಯಕರ್ತರ ಬಯಕೆ. ಹೈಕಮಾಂಡ್‌ ನಿರ್ಧಾರಕ್ಕೆ ನನ್ನ ಬೆಂಬಲ ಇದೆ. ಪರಮೇಶ್ವರ್‌ ಮುಂದುವರಿಕೆಗೆ  ಸಂತೋಷವಿದೆ

-ಡಿ.ಕೆ. ಶಿವಕುಮಾರ್‌, ಅಧ್ಯಕ್ಷ ಸ್ಥಾನದ ಆಕಾಂಕ್ಷಿ

**

ಎಲ್ಲ ಸಮುದಾಯಗಳ ಆದ್ಯತೆಗೆ ಒಲವು

ನವದೆಹಲಿ: ‘ನನ್ನನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿದ್ದೇ ಆದಲ್ಲಿ ಸಚಿವ ಸ್ಥಾನ ಬಿಟ್ಟುಕೊಡುವೆ’ ಎಂದು ಜಿ.ಪರಮೇಶ್ವರ್‌ ತಿಳಿಸಿದ್ದು, ಗೃಹ ಖಾತೆಯನ್ನು ಬೇರೊಬ್ಬರಿಗೆ ವಹಿಸಲು ನಿರ್ಧರಿಸಲಾಗಿದೆ.

ಪರಮೇಶ್ವರ್‌ ಸಚಿವ ಸ್ಥಾನ ಬಿಟ್ಟುಕೊಟ್ಟರೆ ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿ ಆದಂತಾಗಲಿದೆ. ಆ ಸ್ಥಾನಗಳನ್ನು ಲೆಕ್ಕಾಚಾರದೊಂದಿಗೆ ಹಂಚಿಕೆ ಮಾಡಿ ಅತೃಪ್ತ ಸಮುದಾಯಗಳನ್ನು ಸಮಾಧಾನಪಡಿಸಬಹುದು ಎಂಬ ಸಲಹೆಯನ್ನು ನೀಡಲಾಗಿದೆ.

ಈ ಸಲಹೆಗಳ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ಪ್ರಚಾರ ಸಮಿತಿ, ಎಂ.ಬಿ. ಪಾಟೀಲ ಅವರಿಗೆ ಚುನಾವಣಾ ಪ್ರಣಾಳಿಕೆ ಸಮಿತಿಯ ಜವಾಬ್ದಾರಿ ವಹಿಸುವ ಸಾಧ್ಯತೆಗಳಿವೆ.

ಎಸ್‌.ಆರ್‌. ಪಾಟೀಲ ಅವರಿಗೆ ವಿಧಾನ ಪರಿಷತ್‌ನ ಸಭಾಪತಿ ಸ್ಥಾನ ಅಥವಾ ಸಚಿವ ಸ್ಥಾನ ನೀಡುವ ಮೂಲಕ ಆದ್ಯತೆ ನೀಡಬಹುದಾಗಿದೆ ಎಂಬ ಸಲಹೆಯತ್ತ  ಹೈಕಮಾಂಡ್‌ ಒಲವು ತೋರಿದೆ.

**

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಎರಡು ದಿನಗಳಲ್ಲಿ ಆದೇಶ ಹೊರಡಿಸಲಾಗುತ್ತದೆ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷವು ಚುನಾವಣೆ ಎದುರಿಸಲಿದೆ
-ಕೆ.ಸಿ. ವೇಣುಗೋಪಾಲ್‌
ಕಾಂಗ್ರೆಸ್‌ ರಾಜ್ಯ ಉಸ್ತುವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT