ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯದ ಕಥಾಪ್ರಸಂಗ

Last Updated 31 ಮೇ 2017, 19:30 IST
ಅಕ್ಷರ ಗಾತ್ರ

ಕಥೆಗಳ ಸೆಷನ್ ಹೀಗಿತ್ತು
ಅಚ್ಚರಿಗಳ ನಿಧಿ ಈ ಬಾಲ್ಯ. ಬತ್ತದ ಸಿರಿ ಅದು. ಈ ಹೊತ್ತು ನಿಂತು ಒಮ್ಮೆ ತಿರುಗಿ ನೋಡಿದರೆ ಈ ಕಾವ್ಯ, ಕತೆ, ಸಾಹಿತ್ಯ, ಸೃಜನಶೀಲತೆಯ ಮೂಲ ಸ್ರೋತವಾಗಿ ಕಾಡುವ ವ್ಯಕ್ತಿ, ಸಂಗತಿಗಳು ಇನ್ನಷ್ಟು ಆಪ್ತವಾಗುತ್ತವೆ.

ಪ್ರತಿ ಬೇಸಿಗೆ, ಒಂದಿಪ್ಪತ್ತು ಮೊಮ್ಮಕ್ಕಳು ಹಳ್ಳಿಯ ಅಜ್ಜಿ ತಾತನ ಮನೆಯಲ್ಲಿ ಠಿಕಾಣಿ ಹೂಡುವ ಕಾಲ. ದೇವರ ಮನೆಯ ಎತ್ತರದ ಕಟ್ಟೆಯ ಮೇಲೆ ಗುಟ್ಟಾಗಿ ಕೂತ ಸಾಲಿಗ್ರಾಮ ಈಗಲೂ ಸಸ್ಪೆನ್ಸ್ ಸಿನಿಮಾವೇ. ಸ್ನಾನ, ದೇವರ ಪೂಜೆ ಮಾಡದೆ ತೊಟ್ಟು ನೀರೂ ಕುಡಿಯದ ಅಜ್ಜಿ, ಕಟ್ಟಿಗೆಯ ಎರಡು ಒಲೆ ಮೇಲೆ ಅಕ್ಕಿ ಮತ್ತು ಬೇಳೆ ಬೇಯಲಿಟ್ಟು ಮುಂಬಾಗಿಲಿಗೆ ಒರಗಿಕೊಂಡು ಮಹಾಭಾರತವನು ಜೋರಾಗಿ ಓದುತ ಕೂತುಬಿಡುತಿದ್ದಳು.

ವಿದುರನ ಮನೆಗೆ ಕೃಷ್ಣ ಬಂದ ಸನ್ನಿವೇಶ ಮತ್ತು ಧರ್ಮರಾಯನು ದ್ಯೂತದಲ್ಲಿ ಸೋತು ಪಟ್ಟ ಪಾಡನ್ನು ಭಾವಪೂರ್ಣವಾಗಿ ಓದುತ್ತ ಮಂಜಾದ ಕಣ್ಣನ್ನು, ಕನ್ನಡಕದ ಮೇಲೆ ಬಿದ್ದ ಹನಿಯನ್ನು, ಸೊರ ಸೊರಗುಟ್ಟುವ ಮೂಗನ್ನು ಒರೆಸಿಕೊಳ್ಳುತ್ತ ಏರಿಸಿಳಿಸುತ್ತ ಮಾಗುತಿದ್ದಳು. ಭಾವುಕ ಸನ್ನಿವೇಶಕ್ಕೆ ಆಹಾ ಓಹೋ ಅಂತ ತನಗೆ ತಾನೇ ಮಾತಾಡಿಕೊಳ್ಳುತ್ತ ಓದುವ ಆಕೆಯ ಜೀವ ಕಾರುಣ್ಯದ ಮೂಸೆಯಲ್ಲಿ ಕೃಷ್ಣ ವಿದುರ ಧರ್ಮರಾಯ ಹೊಸ ಪ್ರತಿಮೆಗಳಾಗಿ ನನ್ನೆದೆಯೊಳಗೆ ಅಚ್ಚಳಿಯದೆ ನಿಂತರು.

ಇನ್ನು ರಾತ್ರಿ ಊಟದ ಮುಂಚೆ ಸಂಜೆ ಗಾಢಗೊಂಡ ಹೊತ್ತು ಅಜ್ಜನ ಕಥಾವಳಿ... ಆಮೇಲೆ ಆಮೇಲೆ ಅಂತ ತನಗೆ ತಾನೆ ಹೇಳಿಕೊಳ್ಳುತ್ತ ಚಂದ್ರಹಾಸ ಪಟ್ಟ ಕಷ್ಟಗಳ ಬಗ್ಗೆ, ಸಿಂಹಾಸನ ಏರಲು ಹೋಗಿ ಮಲತಾಯಿಯಿಂದ ತಳ್ಳಿಸಿಕೊಂಡು ಕಾಡುಪಾಲಾಗಿ ನಕ್ಷತ್ರವಾದ ಧ್ರುವನ ಬಗೆಗೆ, ಧೋ ಎಂದು ಸುರಿವ ಮಳೆಗೆ ಕೊಚ್ಚಿಹೋಗುವ ತನ್ನ ಗುರುವಿನ ಗದ್ದೆಯನ್ನು ಉಳಿಸಲು ರಾತ್ರಿಯಿಡೀ ಬೆನ್ನನ್ನು ಬದುವಾಗಿ ಮಾಡಿಕೊಂಡು ಮಲಗಿದ ಉದ್ಧಾಲಕನ ಬಗೆಗೆ, ಹತ್ತನೇ ವಯಸಿನಲ್ಲಿಯೇ ಮೂರು ರಾತ್ರಿ ಮೂರು ಹಗಲು ಭೇಟಿಗಾಗಿ ಕಾದು ಭಯಂಕರ ಯಮನನ್ನು ಮಾತಾಡಿಸಿ ಬಂದ ನಚಿಕೇತನ ಬಗೆಗೆ, ಮೂರನೇ ಪಾದ ಊರಲು ಜಾಗವಿರದ ವಾಮನನಿಗಾಗಿ ತನ್ನೆ ತಲೆಯನೇ ಒಡ್ಡಿದ ಬಲಿಯ ಬಗೆಗೆ ಹೇಳುತ್ತ ಹೊರಟಾಗ ಮನದಲ್ಲಿ ಉಳಿದುಬಿಟ್ಟ ರೂಪಕಗಳು...

ಇನ್ನು ದಿನದ ಮೂರನೇ ಮತ್ತು ಕಡೆಯ ಸೆಷನ್ –ಸರಿ ರಾತ್ರಿ ಊಟ ಮುಗಿದ ಮೇಲೆ ಎಲ್ಲರನ್ನೂ ಒಟ್ಟು ಹಾಕಿಕೊಂಡು ಬಾಯಿಯಿಂದ ಸೌಂಡ್ ಎಫೆಕ್ಟ್ ಕೊಡುತ್ತ ಭೂತ ದೆವ್ವ ಮೋಹಿನಿಯರ ಕತೆಗಳನ್ನು ಶುರು ಹಚ್ಚಿಕೊಳ್ಳುತಿದ್ದ  ಚಿಕ್ಕಪ್ಪ.

ರಾತ್ರಿ ಸರಿಯಾಗಿ 12 ಗಂಟೆ ಸುಯ್ ಅಂತ ಬೀಸುವ ಗಾಳಿ (ಶಬ್ದ ಸಹಿತ!) ಕಿರ್... ಅಂತ ತೆರೆವ ಹಿತ್ತಲ ಬಾಗಿಲು... ಘಲ್ ಘಲ್ ಗೆಜ್ಜೆ ಸದ್ದು... ಒಣಗಿದ ತರಗೆಲೆಗಳು ಪಟಪಟ ಅಂತ ಹಾರುವ ಶಬ್ದ... ನರಿಯೊಂದು ಊಳಿಟ್ಟ ದನಿ.. ವೃದ್ಧನೊಬ್ಬನ ಗೂರಲು ಕೆಮ್ಮು ಇತ್ಯಾದಿ ಎಲ್ಲ ಶಬ್ದ ಮತ್ತು ಅಭಿನಯ ಸಹಿತ ಚಿಕ್ಕಪ್ಪ ಶುರುವಿಟ್ಟುಕೊಂಡರೆ, ಒಬ್ಬೊಬ್ಬರೇ ಉಚ್ಚೆಗೆ ಅವಸರವೋ ಅಥವಾ ನಿದ್ದೆಯ ನೆಪವೋ ಹೂಡಿ ಸದ್ದಿಲ್ಲದೇ ಜಾಗ ಖಾಲಿ ಮಾಡುತ್ತಿದ್ದರು. ಬಹುತೇಕ ಕೊನೆಗೆ ಉಳಿಯುತ್ತಿದ್ದವ ನಾನೊಬ್ನೆ ಅನಿಸುತ್ತೆ.

ಒಂದಾನೊಂದು  ಕಾಲದಲ್ಲಿಯ ಅದೆಷ್ಟೋ  ಪಾತ್ರಗಳು ಈಗಲೂ ಅಂತರಂಗದಲ್ಲಿ ರಿಂಗಣಿಸುತ್ತಿವೆ. ಮಾಂತ್ರಿಕತೆಯ ಸ್ಪರ್ಶ ಕೊಟ್ಟ ಎಷ್ಟೊಂದು ಜೀವಗಳು ಈ ಹೊತ್ತು ನನ್ನ ಜೀವಸ್ರೋತವನ್ನು ಪೊರೆಯುತ್ತಿವೆ... ರೂಪಕಗಳಾಗಿ ಹರಿಯುತ್ತಿವೆ...
–ವಾಸುದೇವ ನಾಡಿಗ್ ನೆಲಮಂಗಲ

*
ಹತ್ತಾರು ಸಿನಿಮಾಗಳಿಗೆ ಕಥೆ ಕೊಡುತ್ತಿದ್ದೆ
ಆಗಿನ್ನೂ ನಾಲ್ಕೈದು ವರ್ಷದ ಪ್ರಾಯ. ಉದ್ಯೋಗದ ದೃಷ್ಟಿಯಿಂದ ತುಂಬು ಕುಟುಂಬದಿಂದ ಹೊರಬಂದು ವಿಭಕ್ತವಾಗಿ ನೆಲೆಸಿದ್ದ ಅಪ್ಪ, ಅಮ್ಮ ಹಾಗೂ ಅಣ್ಣನೊಡನೆ ವಾಸಿಸುತ್ತಿದ್ದ ಕಾಲ. ನಮ್ಮ ಹಳ್ಳಿಯಲ್ಲಿ ಆಗೆಲ್ಲಾ ಟಿ.ವಿಯ ಆರ್ಭಟವಿರಲಿಲ್ಲ. ಶಾಲೆಯಲ್ಲಿ ಹೇಳೋ ಹಾಡು ಕಥೆಗಳನ್ನು ಅಣ್ಣ ಬಂದು ಹೇಳುತ್ತಿದ್ದದ್ದೇ ನನಗೆ ಏಕೈಕ ಮನರಂಜನೆ. ಅದೂ ಅವನನ್ನು ರಮಿಸಿ, ಮುದ್ದಿಸಿ ಕೇಳಿ ಪಡೆಯಬೇಕಿತ್ತು. ಅಂಥ ಸಮಯದಲ್ಲಿ ಆಗಾಗ ಬಂದು ಹೋಗುತ್ತಿದ್ದ ಅಜ್ಜಿಯೇ ನನ್ನ ಆಗಿನ ‘ಸಾಂಸ್ಕೃತಿಕ ರಾಯಭಾರಿ’. ನನ್ನೆಲ್ಲಾ ಭಾವನೆಗಳ, ಜಾನಪದ ಲೋಕದ ಕಥಾನಿರ್ದೇಶಕಿ.

ರಾತ್ರಿಯಾದೊಡನೆಯೇ ಅಮ್ಮನ ಹಾಸಿಗೆ ತೊರೆದು ಅಜ್ಜಿಯ ಚಾದರದೊಳಗೆ ಹೊಕ್ಕಿಬಿಡುತ್ತಿದ್ದ ನನಗೆ ನಿದ್ದೆ ಬಲು ದೂರ.  ವಯೋ ಸಹಜವೆಂಬಂತೆ ಅಜ್ಜಿಗೂ ನಿದ್ದೆ ಕಡಿಮೆಯೇ. ಎಲ್ಲರೂ ಮಲಗಿದ ಮೇಲೆ ನನ್ನ ಮತ್ತು ಅಜ್ಜಿಯ ಕಥಾಲೋಕವೇ ಅನಾವರಣಗೊಳ್ಳುತ್ತಿತ್ತು. ನಮ್ಮಜ್ಜಿಗೆ ತಿಳಿಯದ ಕಥೆಗಳೇ ಇರಲಿಲ್ಲ.

‘ಮಳೆ ಏಕೆ ಬರುತ್ತೆ, ಗುಡುಗುವುದು ಏಕೆ, ಸಮುದ್ರದ ನೀರೇಕೆ ಉಪ್ಪಾಯ್ತು, ಕಾಗೆಯೇಕೆ ಕಪ್ಪು’ ಎಂಬಿತ್ಯಾದಿ ವಿಷಯಗಳಿಗೆ ತನ್ನದೇ ಕಥೆಕಟ್ಟಿ ಹೇಳಿ ನಂಬಿಸುತ್ತಿದ್ದ ಅಜ್ಜಿಯ ನಿರೂಪಣಾ ಶೈಲಿ ಇಂದಿಗೂ ನನ್ನನ್ನು ಹಿಡಿದಿಟ್ಟಿದೆ. ಅವಳ ಕಥೆಯಲ್ಲಿರುತ್ತಿದ್ದ ನೈತಿಕ ಮೌಲ್ಯಗಳು ಯಾವತ್ತೂ ಪ್ರಸ್ತುತವೇ. ಬಹುಶಃ ಅವಳು ಬದುಕಿರುತ್ತಿದ್ದರೆ ಅಥವಾ ಅವಳಿದ್ದಾಗ ನನಗೆ ಬರೆಯುವ ಚೈತನ್ಯವಿದ್ದಿದ್ದರೆ ಅವಳ ಕಥೆಗಳನ್ನೊಳಗೊಂಡ ಹತ್ತಾರು ಕಥಾಸಂಕಲನಗಳನ್ನೇ ರಚಿಸಬಹುದಾದಷ್ಟು ಸಾಹಿತ್ಯ ಶ್ರೀಮಂತಿಕೆ ಅವಳಲ್ಲಿತ್ತು.

ಇಂದಿಗೂ ಶಾಲಾ ಶಿಕ್ಷಕನಾಗಿ ಮಕ್ಕಳಿಗೆ ನೀತಿಕಥೆಗಳನ್ನು ಹೇಳುವಾಗ, ಒಬ್ಬ ಬರಹಗಾರನಾಗಿ ಮಕ್ಕಳ ಕಥೆಗಳನ್ನು ರಚಿಸುವಾಗ, ಅಜ್ಜಿಯ ಭಾಷಾ ಶೈಲಿ, ನಿರೂಪಣೆ, ಪ್ರಾಸಪದಗಳು ನನಗರಿವಿಲ್ಲದೆಯೇ ನನ್ನ ಬರಹಗಳೊಳಗೆ, ಮಾತಿನೊಳಗೆ ನುಸುಳುತ್ತಿರುತ್ತವೆ. ಅವಳೀಗಲೂ ಬದುಕಿರುತ್ತಿದ್ದರೆ ಎಷ್ಟೋ  ಸಿನಿಮಾಗಳಿಗೆ ಕತೆ ಒದಗಿಸಬಹುದಿತ್ತು ಎಂದು ಸುಮ್ಮನೆ ಆಗಾಗ ಅನ್ನಿಸುತ್ತದೆ.
–ಪ.ನಾ.ಹಳ್ಳಿ.ಹರೀಶ್ ಕುಮಾರ್
ತುಮಕೂರು

*
ಅಪ್‌ಡೇಟ್ ಆಗಿರಬೇಕು
ಬಾಲ್ಯದಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು ಟೋಪ ಮಾರುವವನ ಕತೆ. ಅದು ಮನೇಲಿ ದೊಡ್ಡೋರು ಹೇಳಿದ್ದೋ, ಶಾಲೆಯಲ್ಲಿ ಕೇಳಿದ್ದೋ ಸರಿಯಾಗಿ ನೆನಪಾಗುತ್ತಿಲ್ಲ. ಆದರೆ ಈ ಕತೆ ನನ್ನನ್ನು ದಟ್ಟವಾಗಿ ತಟ್ಟಿದೆ. ಅವನಿಗೋ ಟೋಪಿ ಮಾರುವುದು ದಿನನಿತ್ಯಕ್ಕೆ ಅನ್ನ ಕೊಡುವ ಕಸುಬು.

ಬಿಸಿಲಲ್ಲಿ ಸುತ್ತಾಡಿ ಸುಸ್ತಾಗಿ ಮರದ ನೆರಳಲ್ಲಿ ವಿಶ್ರಮಿಸುತ್ತಾ ಹೆಂಡತಿ ಕಟ್ಟಿಕೊಟ್ಟ ಬುತ್ತಿ ಬಿಚ್ಚಿ ರೊಟ್ಟಿ ತಿಂದು ತೇಗುತ್ತಿದ್ದಂತೆ ತಂಗಾಳಿ ಮೈ ಸೋಕಿ ನಿದ್ದೆ ಹತ್ತಿದ್ದು ಸಹಜವೇ. ಎಚ್ಚರವಾದಾಗ ಗಂಟೊಳಗಿರುವ ಟೋಪಿಗಳೆಲ್ಲಾ ಮಾಯವಾಗಿದ್ದರೆ ಪಾಪ ಹೇಗಾಗಿರಬೇಡ! ನಾಳೆ ಹೊಟ್ಟೆಗೆ ಹಿಟ್ಟು? ಅವನು ಕಣ್ಣೀರು ಹಾಕುವಾಗ ನನ್ನ ಎಳೆಯ ಹೃದಯವೂ ಒದ್ದೆ.

ಟೋಪಿಗಳೆಲ್ಲಾ ಮರದ ಮೇಲಿರುವ ಮಂಗಗಳ ತಲೆಯೇರಿವೆ. ದುಃಖದಿಂದ, ಮೈಮರೆತು ನಿದ್ದೆ ಮಾಡಿದ ಬೇಜಾಬ್ದಾರಿತನದಿಂದ ಕಂಗೆಟ್ಟು ತನ್ನ ತಲೆ ಮೇಲಿದ್ದ ಆ ಒಂದು ಟೋಪಿ ತೆಗೆದೆಸೆದಾಗ ಅವನನ್ನೇ ಅನುಕರಿಸುವ ಕೋತಿಗಳು ತಮ್ಮ ತಲೆಯ ಮೇಲಿದ್ದನ್ನು ಎಸೆದು ಬಿಡುತ್ತವೆ. ಕೋತಿ ಬುದ್ಧಿ ಅಂದರೆ ಇದೇ ಅಲ್ವಾ? ಈ ಅನಿರೀಕ್ಷಿತ ಘಟನೆಯಿಂದ ಟೋಪಿವಾಲನಷ್ಟೇ ಖುಷಿಪಟ್ಟವನು ನಾನು.

ಹೌದು, ಕಾಯಕದಲ್ಲಿ ಕೈಲಾಸ ಕಾಣುವಂಥ ಶ್ರಮಜೀವಿಗಳನ್ನು ದೇವರು ಕೈಬಿಡನು, ಎಚ್ಚರಿಕೆ ಸದಾ ಅಗತ್ಯ ಎಂಬಂತಹ ಸಂದೇಶಗಳನ್ನು ಸಾರುವ ಈ ಕತೆಯ ಮುಂದಿನ ಭಾಗ ಕೇಳಿದ್ದು ನನ್ನ ಬಾಲ್ಯ ಕಳೆದ ನಂತರ, ವ್ಯಕ್ತಿತ್ವ ವಿಕಸನ ತರಗತಿಯೊಂದರಲ್ಲಿ. ರೋಚಕವಾಗಿರುವ ಈ ಭಾಗವೂ ನನಗೆ ಬಲು ಪ್ರಿಯ. ಹಲವು ವೃತ್ತಿಗಳು ವಂಶಪಾರಂಪರ್ಯ. ಈ ಟೋಪಿ ಮಾರುವವನ ಮಗನೂ ಅದೇ ಕಸುಬು ಮಾಡಿದ್ದು. ಮೊಮ್ಮಗ ತುಳಿದಿದ್ದೂ ಅದೇ ದಾರಿ. ಇವನಜ್ಜ ಟೋಪಿ ಮಾರುವಾಗಲಿನ ಘಟನೆ ಇಲ್ಲಿ ಪುನರಾವರ್ತನೆಯಾಗುತ್ತದೆ.

ಮರದಡಿ  ನಿದ್ರಿಸಿ ಎದ್ದವನ ಟೋಪಿ ಗಂಟು ಮಾಯವಾದಾಗ ಅವನು ಅಜ್ಜನಂತೆ ಗಾಬರಿ ಬೀಳುವುದಿಲ್ಲ. ಯಾಕೆಂದರೆ ಅಜ್ಜ ತನ್ನ ಅನುಭವದ ಈ ಕತೆಯನ್ನು ಮೊಮ್ಮಗನಿಗೆ ಎಂದೋ ಹೇಳಿದ್ದ. ಒಂದಿನಿತೂ ತಲೆಕೆಡಿಸಿಕೊಳ್ಳದೆ ತನ್ನ ಟೊಪ್ಪಿಯನ್ನು ದೂರ ಎಸೆದು ಈಗ ಎಲ್ಲಾ ಟೋಪಿಗಳು ಕೆಳಕ್ಕೆ ಬೀಳುತ್ತವೆ ಎಂದು ಕಣ್ಣು ಮುಚ್ಚಿ ಕುಳಿತ.

ಟೊಪ್ಪಿಗಳು ಕೆಳಗೆ ಬೀಳುವ ಬದಲು ಚಕಚಕನೆ ಮರವಿಳಿದು ಬಂದ ಒಂದು ಮರಿ ಮಂಗ ಅವನೆಸೆದ ಆ ಟೊಪ್ಪಿಯನ್ನೂ ತನ್ನ ಮಂಡೆಗೇರಿಸಿಕೊಂಡು ‘ಏನು ಇವನಜ್ಜ ಮಾತ್ರ ಕತೆ ಹೇಳೋದಾ? ನಮ್ಮಜ್ಜನೂ ಇದೇ ಕತೆ ಹೇಳಿದ್ದ’ ಎಂದು ಅಣಕಿಸುತ್ತಾ ಮರವೇರಿತು! ಇದನ್ನು ಊಹಿಸದ ಮೊಮ್ಮಗ  ರೋದಿಸತೊಡಗಿದ. ಹೌದು, ನಾವು ಸದಾ ಕತೆಗಳನ್ನು ಓದುತ್ತಿರಬೇಕು.

ಕತೆಗಳಿಗೆ ಮುಕ್ತಾಯವಿಲ್ಲ, ಬೇರೆ ಬೇರೆ ರೂಪದಲ್ಲಿ ಅವು ಮುಂದುವರೆಯುತ್ತವೆ ಎಂದು ಪಾಠ ಹೇಳಿದ ಕತೆಯಿದು. ನಮ್ಮ ಮಾಹಿತಿ, ಜ್ಞಾನ ಯಾವಾಗಲೂ ಅಪ್‌ಡೇಟ್ ಆಗಿರಬೇಕೆಂದು ಸಾರಿ ಹೇಳುವ ಈ ಕತೆಯನ್ನು ಬಹುವಾಗಿ ಬಳಸಿಕೊಳ್ಳುತ್ತೇನೆ. 
–ಡಾ. ಮುರಳೀಧರ ಕಿರಣಕೆರೆ ಶಿವಮೊಗ್ಗ

*
ಕೈತುತ್ತಿನೊಂದಿಗಿನ ಕಥೆ
ಒಂದು ಕಾಲಕ್ಕೆ ದೊಡ್ಡಹಟ್ಟಿ ಮನೆಯೆಂದು ಖ್ಯಾತವಾಗಿ ಮನೆ ತುಂಬ ಜನರಿದ್ದ ಮನೆ ನಮ್ಮದು. ಹಿರಿಯರು ಅಳಿದು, ಕಿರಿಯರೆಲ್ಲ ಮದುವೆ, ಉದ್ಯೋಗ ಎಂದು ಗೂಡು ಬಿಟ್ಟು ಹಾರಿದ ಮೇಲೆ ಉಳಿದದ್ದು ಅಜ್ಜಿಯೊಬ್ಬರೇ. ಊರು, ಮನೆ, ಹೇಮಾವತಿ ಹೊಳೆ, ಈಶ್ವರ ದೇವಸ್ಥಾನ ಅವರನ್ನು ಅಲ್ಲೆ ಕಟ್ಟಿ ಹಾಕಿತ್ತು. ಅವರು ಕೂಡ ರಜೆಗೆ ಮೊಮ್ಮಕ್ಕಳು ಬರುವುದನ್ನೇ ಕಾಯುತ್ತಿದ್ದರು.

ಅಜ್ಜಿ ನಮ್ಮೆಲ್ಲರನ್ನು ಸುತ್ತ ಕೂರಿಸಿ ಕೈತುತ್ತು ಹಾಕುತ್ತ ಕಥೆ ಹೇಳುತ್ತಿದ್ದರು. ರಾತ್ರಿ ಮಲಗುವಾಗಲಂತೂ ಕಡ್ಡಾಯವಾಗಿ ಕಥೆ ಹೇಳಲೇಬೇಕಿತ್ತು. ಕಾಗಕ್ಕ, ಗುಬ್ಬಕ್ಕನ ಕತೆ, ಕೋತಿ ಮತ್ತು ಮೊಸಳೆ ಕಥೆ, ಏಳು ಮಲ್ಲಿಗೆ ತೂಕದ ರಾಜಕುಮಾರಿ ಕಥೆ, ಭಕ್ತ ಪ್ರಹ್ಲಾದ, ಹರಿಶ್ಚಂದ್ರ, ಧ್ರುವ, ಬಕಾಸುರ ಹೀಗೆ ಕಥೆಗಳ ಸಾಲು ಸಾಗುತ್ತಿತ್ತು.

ಅಜ್ಜಿ ಹೇಳುತ್ತಿದ್ದ ಬಾಲ ತುಂಡಾದ ಕೋತಿಯ ಕತೆಯಲ್ಲಿನ ಹಾಡನ್ನು ಹಾಡುತ್ತ ನಾವೆಲ್ಲ ಕುಣಿಯುತ್ತಿದ್ದುದೇ ಸೊಗಸು.ರಾತ್ರಿ ಕತ್ತಲಲ್ಲಿ ಬುಡ್ಡಿ ದೀಪದ ಬೆಳಕಲ್ಲಿ ಮಧ್ಯೆ ಕುಳಿತ ಅಜ್ಜಿ ಸುತ್ತ ಕುಳಿತ ವಾನರ ಸೈನ್ಯದಂಥ ಮೊಮ್ಮಕ್ಕಳಿಗೆ ಕೈತುತ್ತು ನೀಡುತ್ತ ಕಥೆ ಹೇಳುತ್ತಿದ್ದರೆ ಕಲ್ಪನಾ ಲೋಕ ಹೊಕ್ಕ ನಮಗೆ ಪಾತ್ರೆ ಖಾಲಿಯಾದದ್ದು, ಕೈ ಒಣಗಿದ್ದೆ ತಿಳಿಯುತ್ತಿರಲಿಲ್ಲ. ಬಾಲ್ಯದ ಇಂಥ ಸುಂದರ ದಿನಗಳು ನೆನಪಾದಾಗಲೆಲ್ಲ ಮನಸ್ಸು ಮುದಗೊಳ್ಳುತ್ತದೆ, ಇನ್ನೊಮ್ಮೆ ಆ ದಿನಗಳು ಬರಬಾರದೆ ಎಂದು ಹಂಬಲಿಸುತ್ತದೆ.
– ರೇಖಾ ರಾಮಕೃಷ್ಣ ಮೈಸೂರು

*
ಮಲೆನಾಡಿನ ಮಳೆ ಜೊತೆಗಿನ ಕಥೆ
ಅದು ಟಿ.ವಿ, ಸಿನೆಮಾಗಳು ಅಷ್ಟಾಗಿ ದಾಂಗುಡಿ ಇಡದ ಮಲೆನಾಡಿನ ಹಳ್ಳಿ. ಬೇಸಿಗೆ, ಚಳಿಗಾಲದಲ್ಲಿ ಶಾಲಾ ಅವಧಿ ಹೊರತುಪಡಿಸಿ ಉಳಿದ ಸಮಯದಲ್ಲಿ, ಬ್ಯಾಣ, ಬೆಟ್ಟ, ತೋಟ, ಗದ್ದೆ  ಅಂತ ಸುತ್ತುತ್ತಾ, ಕಾಡು ಹಣ್ಣುಗಳನ್ನು ತಿನ್ನುತ್ತಾ, ರಾತ್ರಿ ವೇಳೆ ತಾಳಮದ್ದಲೆಯೋ, ಯಕ್ಷಗಾನವನ್ನೋ ನೋಡುತ್ತಾ ಕಾಲ ಕಳೆಯುತ್ತಿದ್ದೆವು. ಆದರೆ ಮಳೆಗಾಲ ಬಂತೆಂದರೆ ಸಂಜೆ ಕಾಲ ಕಳೆಯುವುದು ತುಸು ಕಷ್ಟವೇ ಆಗುತ್ತಿತ್ತು.

ಬೋರೆಂದು ಸುರಿವ ಮಲೆನಾಡಿನ ಮಳೆ ಬೇಸರ ತರಿಸುತ್ತಿತ್ತು. ನಮ್ಮದು ಕೂಡು ಕುಟುಂಬ. ಮೊದಲೇ ಮನೆಯಲ್ಲಿ ಮಕ್ಕಳ ಸಂಖ್ಯೆ ದೊಡ್ಡದಿತ್ತು. ಇನ್ನು ಅಕ್ಕ-ಪಕ್ಕದ ಮನೆಯ ಮಕ್ಕಳು, ಗದ್ದಲಕ್ಕೆ ಕಡಿಮೆಯೇ...!  ಮಕ್ಕಳ ಈ ಗದ್ದಲಕ್ಕೆ ಹಿರಿಯರು ಕಂಡುಕೊಂಡ ಮದ್ದು ಎಂದರೆ ನಮ್ಮನ್ನೆಲ್ಲಾ ಒಂದೆಡೆ ಕೂಡಿ ಹಾಕಿ ಕಥೆ ಹೇಳುವುದು.

ಸಂಜೆ ದಬ್ಬಣ ಗಾತ್ರ ಏಕವಾಗಿ ಸುರಿವ ಮಳೆ. ಕರೆಂಟ್‌ ಇಲ್ಲದ ಆ ದಿನಗಳಲ್ಲಿ ಮನೆಯ ಜಗುಲಿ ಮೇಲೆ ಅಪ್ಪನೆದುರು ಮಕ್ಕಳ ಮೇಳ ಅರ್ಧಚಂದ್ರಾಕೃತಿಯಲ್ಲಿ ಚಕ್ಕಲಪಟ್ಟೆ ಹಾಕಿ ಕುಳಿತುಕೊಂಡು, ಅಪ್ಪನ ಕಥಾ ಲೋಕದಲ್ಲಿ ಮೈ ಮರೆಯುವ ಸಂತಸದ ಕ್ಷಣಕ್ಕಾಗಿ ಕಾಯುತ್ತಿತ್ತು. ಮಳೆಗಾಲವೆಂದರೆ ಕಥೆಗಳ ಸುಗ್ಗಿ; ಮಳೆಯ ಆರ್ಭಟ ಹೆಚ್ಚಾದಷ್ಟೂ ಕಥೆಯ ಗಮ್ಮತ್ತು ಹೆಚ್ಚು. ಅಪ್ಪನಾದರೋ ಕಿನ್ನರಿ ಜೋಗಿಯಂತೆ ತನ್ನ ವಾಚಿಕ ಹಾಗೂ ಆಂಗಿಕಾಭಿನಯದಿಂದ ಮಕ್ಕಳ ಮನಸ್ಸನ್ನ ಮಾಯಾಲೋಕಕ್ಕೆ ಸೆಳೆದೊಯ್ಯುತ್ತಿದ್ದ.

ತನ್ನ ಅಭಿವ್ಯಕ್ತ ಶಕ್ತಿಯಿಂದ ದೃಶ್ಯ ರೂಪವನ್ನು ಮನದಲ್ಲಿ ಮೂಡಿಸುತ್ತಾ, ನಮ್ಮನ್ನು ಬೆರಗಿನ ಬೇರೆಯದೇ ಲೋಕಕ್ಕೆ ಎಳೆದೊಯ್ದು ಬಿಡುತ್ತಿದ್ದ. ಹೊರ ನೋಟದ ರಂಜನೆಯ ಜೊತೆಗೆ ಒಳ ನೋಟದ ಚಿಂತನೆಯೇ ಈ ಕಥೆಗಳ ಜೀವಾಳ. ಗಿಳಿ-ಗುಬ್ಬಚ್ಚಿ, ಅಳಿಲು-ಆಮೆ, ಮೊಲ-ಮಂಗ ಹೀಗೆ ಚಿಕ್ಕ-ಪುಟ್ಟ ಪ್ರಾಣಿಗಳೇ ಆತನ ಕಥೆಯ ನಾಯಕರಾಗಿ ನಮ್ಮನ್ನು ರಂಜಿಸುತ್ತಿದ್ದವು.

ಅವು ಸವಾಲುಗಳನ್ನು ಹೇಗೆ ಬುದ್ದಿವಂತಿಕೆಯಿಂದ, ತಮಾಷೆಯಿಂದ ನಿಭಾಯಿಸುತ್ತಿದ್ದವೆಂಬುದನ್ನು ತಿಳಿಸುತ್ತಾ, ಮಕ್ಕಳಾದ ನಾವು ಸಹ ಚಿಕ್ಕವರೆಂದುಕೊಳ್ಳದೇ ಅದ್ಭುತ ಸಾಧಿಸಬಹುದೆಂಬುದನ್ನು ಬಹು ರಂಜನೀಯವಾಗಿ ನಿರೂಪಿಸುತ್ತಿದ್ದ. ಅವ್ಯಾವುವು ‘ನೆಗೆಟಿವಿಸಮ್ಮಿನತ್ತ’ ಕೈತೋರುವ ಕಥೆಗಳಾಗಿರಲಿಲ್ಲ.

ಮಕ್ಕಳ ಬೇಸರ, ಹಸಿವು, ಕೊನೆಗೆ ನಿದ್ರೆ ಎಲ್ಲವೂ ಆತನ ಕಥೆಯ ಚುಂಬಕ ಶಕ್ತಿಗೆ ಮರೆಯಾಗಿ ಬಿಡುತ್ತಿದ್ದವು. ಅಪ್ಪ ಈ ಕಥೆಗಳ ಮೂಲಕವೇ, ಜೀವನಾನುಭವವನ್ನು, ಬದುಕಿನ ಏರಿಳಿತಗಳನ್ನು ಬಿಚ್ಚಿಟ್ಟು, ನಮ್ಮಲ್ಲಿ ಮುಗ್ಧ ಕನಸುಗಳ ಜೊತೆಗೆ ಸಂಭ್ರಮವನ್ನು ತಂದು ಕೊಟ್ಟವನು. ಅಪ್ಪನ ಮೂಲಕ, ಆತನ ಕಥೆಯ ಮೂಲಕ ಹೊರ ಜಗತ್ತನ್ನು ಹೊಸದಾಗಿ ನೋಡುವುದರ ಅನುಭವ ಪಡೆದುಕೊಂಡೆ. ಹೀಗಾಗಿಯೇ ಅವತ್ತಿನಿಂದ ಇವತ್ತಿಗೂ ಆತ ನಮ್ಮನ್ನ ಹಲವು ಪರಿಗಳಲ್ಲಿ ಆವರಿಸಿಕೊಂಡಿದ್ದಾನೆ.

ಓದುವ ಕಥೆಗಿಂತ ಕೇಳುವ ಕಥೆ ನೇರ ಮನಸ್ಸಿಗೆ ತಾಗಿ ಬೇರೆಯದೇ ಪರಿಣಾಮ ಉಂಟು ಮಾಡುತ್ತದೆ. ಆತನ ವಾಚಿಕ, ಆಗಿಂಕ ಅಭಿನಯ ಎಷ್ಟು ಪರಿಣಾಮಕಾರಿ ಎಂದರೆ, ಕಥೆಯ ಪಾತ್ರವಾಗಿರುವ ರಾಕ್ಷಸರು, ಭೂತದ ಪಾತ್ರಗಳು ರಾತ್ರಿ ಕನಸಲ್ಲಿ ಪುನರ್ ಸೃಷ್ಟಿಗೊಂಡು ಅಕರಾಳ-ವಿಕರಾಳ ರೂಪತಾಳಿ ಚಡ್ದಿ ಒದ್ದೆಯಾಗಿಸಿದ ದಿನಗಳಿಗೇನು ಕಮ್ಮಿ ಇಲ್ಲ.

ಪರರ ಕಷ್ಟಕ್ಕೆ ಮರುಗುವ ಸರಳತೆಯನ್ನು, ಪರರ ಯಶಸ್ಸಿಗೆ ಕುಣಿಯುವ ಮನಸ್ಸನ್ನ ನಿಚ್ಛಳವಾಗಿ ಕಾಣಿಸಿಬಿಡುವ ಕಥೆಗಳು, ಕೆಲವು ಸಲ ಕಣ್ಣಂಚಿನಲ್ಲಿ ಹನಿಯೊಂದನ್ನು ತುಳುಕಿಸಿ ಬಿಡುತ್ತಿದ್ದವು.

ಕಥಾ ಶ್ರವಣದಿಂದ ಅಧ್ಯಯನದ ಆಸಕ್ತಿ, ಭಾಷಾ ಜ್ಞಾನ, ಕೇಳಿಸಿಕೊಳ್ಳುವ ತಾಳ್ಮೆ ಸಾಧ್ಯವಾಗಿದೆ. ಸರಳವೂ, ಸ್ವಾರಸ್ಯವೂ ಆದ ಆ ಕಥಾ ಪ್ರಸಂಗಗಳ ಅನುಭವಿಸುವಿಕೆಯಿಂದ ಜೀವನ ದರ್ಶನದ ಹಲವು ಮುಖಗಳು ಪರಿಚಯವಾದವು. ಈ ಕಥಾ ಪ್ರಸಂಗಗಳು ಅದೆಷ್ಟೋ ಅಂದರೆ ಅದೆಷ್ಟೋ ರಸ ನಿಮಿಷಗಳನ್ನ ನನ್ನ ಭಾವಕೋಶದಲ್ಲಿ ಸ್ಥಿರಗೊಳಿಸಿದೆ.
–ಹೊಸ್ಮನೆ ಮುತ್ತು ಬೆಂಗಳೂರು

*
ನಾನು ಭೀಮ, ನಾನು ರಾಜ
ಬಾಲ್ಯ ಯಾರಿಗ್ ಇಷ್ಟವಿಲ್ಲಾ ಹೇಳಿ! ಕೀಟಲೆ, ತುಂಟಾಟ ಸಹಜವಾಗಿತ್ತು. ನನ್ನ ಜೀವನದಲ್ಲಿ ತುಂಟಾಟಗಳಿಗೆಲ್ಲ ಕಡಿವಾಣ ಹಾಕಿದ್ದು ನನ್ನಜ್ಜಿ. ರೇಷ್ಮೆ ಕೂದಲು, ಕೆಂಪು ಹಲ್ಲು, ಪಟ್ಟಾಪಟ್ಟಿ ಕುಬುಸ, ಸೀರೆ, ಕನ್ನಡಕ ಹಾಕುತ್ತಿದ್ದ ಸುಂದರಿ ನಮ್ಮಜ್ಜಿ. ಮಾತಿನಲ್ಲಿ ಚಾಟಿ ಏಟ್ ಹಾಕಿದಂತೆ ಮಾತಾಡೊ ಪಾಂಡಿತ್ಯ ನನ್ನಜ್ಜಿಗಿತ್ತು. ಪ್ರತಿದಿನ ರಾತ್ರಿ ಅವಳ ತೊಡೆಯ ಮೇಲೆ ಮಲಗಿ ಕಥೆ ಕೇಳುವ ಖುಷಿನೆ ಬೇರೆ.

‘ಒಂದೂರಲೊಬ್ಬ ರಾಜನಿದ್ದ. ಧೈರ್ಯಶಾಲಿ ಮತ್ತು ವೀರನಾಗಿದ್ದ. ಸುತ್ತಲಿನ ರಾಜ್ಯಗಳನ್ನು ಗೆದ್ದುಕೊಂಡು ತನ್ನಧೀನದಲ್ಲಿಟ್ಟುಕೊಂಡಿದ್ದ’ ಎಂದು ಕಥೆ ಹೇಳುವಾಗ ರಾಜ ನೋಡುವುದಕ್ಕೆ ಹೇಗಿರುತ್ತಾನೆ ಎಂದು ಕೇಳುತ್ತಿದ್ದೆ. ತಲೆಗೆ ಕಿರೀಟ ಹಾಕಿಕೊಂಡು, ಸೊಂಟದಲ್ಲಿ ಖಡ್ಗ  ಸಿಕ್ಕಿಸಿ, ಬಂಗಾರದ ಆಭರಣಗಳನ್ನು ಹಾಕಿಕೊಂಡು ಸುಂದರವಾಗಿ ಕಾಣುತ್ತಾನೆಂದು ಅಜ್ಜಿ ಹೇಳುತ್ತಿದ್ದಳು. ಇದನ್ನು ಕೇಳಿ ಅಜ್ಜನ ಪೇಟವನ್ನು ಕದ್ದು ತಲೆಗೆ ಸುತ್ತಿಕೊಂಡು, ಒಂದು ಕಟ್ಟಿಗೆಯನ್ನು ಕೈಯಲ್ಲಿ ಹಿಡಿದುಕೊಂಡು, ಅಕ್ಕನ ಬಂಗಾರದ ಸರವನ್ನು ಕೊರಳಿಗೆ ಹಾಕಿಕೊಂಡು ಮನೆಯಲ್ಲಿ ಓಡಾಡಿ ಅಕ್ಕನ ಸರವನ್ನು ಕಳೆದಾಗ ಅವ್ವನಿಂದ ಏಟು ಸಖತ್ತಾಗೆ ಬಿದ್ದಿತ್ತು.

ಒಂದೂರಿನಲ್ಲಿ ಬಕಾಸುರನೆಂಬ ರಾಕ್ಷಸನಿದ್ದ. ಪ್ರತಿದಿನ ಊರಿನಲ್ಲಿರುವವರನ್ನು ಸರದಿಯಾಗಿ ತಿನ್ನುತ್ತಿದ್ದ. ಒಂದು ದಿನ ಭೀಮನ ಸರದಿ ಬಂದಾಗ ಒಂದು ಬಂಡೆಯಲ್ಲಿ ಅನ್ನ ಸಾರನ್ನು ತೆಗೆದುಕೊಂಡು ಹೋಗಿ ತಾನೇ ತಿಂದು ಬಕಾಸುರನನ್ನು ಕೊಂದ ಎಂಬ ಕಥೆ ಹೇಳಿ ಭೀಮನಂತೆ ನೀನು ಧೈರ್ಯದಿಂದಿರಬೇಕೆಂದು ಹೇಳುತ್ತಿದ್ದಳು. ಓಣಿಯಲ್ಲಿ ಹುಡುಗರೊಂದಿಗೆ ಆಡುತ್ತಿರುವಾಗ  ಜಗಳವಾಡಿ ಕಲ್ಲಿನಿಂದ ಹೊಡೆದು ಓಡಿಬರುತ್ತಿದ್ದೆ. ಸುದ್ದಿ ಅಪ್ಪನ ಹತ್ರ ಮುಟ್ಟಿದಾಗ ಹೊಡೆತ ತಪ್ಪಿಸಿಕೊಳ್ಳಲು ಅಜ್ಜಿಯ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುವುದು ನನ್ನ ರಕ್ಷಣಾ ತಂತ್ರವಾಗಿತ್ತು.

ತಮ್ಮ, ನಾನು ಗುಮ್ಮನ ಕಥೆ ಕೇಳಿದ ದಿನ ರಾತ್ರಿ ಹೊರಗೆ ಹೋಗಲು ಹೆದರುತ್ತಿದ್ದೆವು. ಬೆಳಿಗ್ಗೆಯಾದಾಗ ಹಾಸಿಗೆಗಳು ಒದ್ದೆಯಾಗಿರುತ್ತಿದ್ದವು. ಓದಿಗಾಗಿ ಬಾಲ್ಯದಲ್ಲಿಯೇ ವಸತಿ ಶಾಲೆಗೆ ಹಾಕಿಬಿಟ್ಟರು. ರಜೆಯಲ್ಲಿ ಊರಿಗೆ ಬಂದಾಗ ಅಜ್ಜಿ ನಮಗೆ ಕಥೆಗಳ ಲೋಕವನ್ನೇ ಕಟ್ಟಿಕೊಡುತ್ತಿದ್ದಳು.
–ಮಹಾಂತೇಶ ದೊಡವಾಡ ಬೆಳಗಾವಿ

*
ಮಾವನ ಕಥಾ ಪರಿಷೆ
ರಜೆಯ ಆಕರ್ಷಣೆಯೇ ಕತೆಗಳು. ನಮ್ಮ ದೊಡ್ಡ ಸೋದರಮಾವ ಕನ್ನಡ ಎಂ.ಎ. ಪದವೀಧರ. ಕತೆ ಹೇಳುವುದರಲ್ಲಿ ನಿಸ್ಸೀಮ. ಸಂಜೆಯಾಗುತ್ತಿದ್ದಂತೆ ಓಣಿಯ ದೊಡ್ಡವರು-ಸಣ್ಣವರು ನಮ್ಮ ಮನೆ ಹತ್ತಿರ ಬಂದು ನಿಮ್ಮ ಮಾವ ಕತೆ ಹೇಳುತ್ತಾನಾ? ಎಂದು ಕೇಳಿ ಹೇಳುತ್ತಾನೆ ಎಂದರೆ ಎಲ್ಲರೂ ನಮ್ಮ ಮನೆಯ ಮುಂದಿರುವ ಕಟ್ಟೆಯ ಕಡೆ ಸೇರುತ್ತಿದ್ದರು. ಕಟ್ಟೆಯ ಮೇಲೆ ನಮ್ಮ ಮಾಮಾ. ಕತೆ ಕೇಳುವವರೆಲ್ಲ ಕೆಳಗೆ ಕುಳಿತುಕೊಳ್ಳುತ್ತಿದ್ದೆವು.

ನಮ್ಮ ಮಾಮ ಗಂಭೀರವಾಗಿ ಬಂದು ಕಟ್ಟೆಯ ಮೇಲೆ ಕುಳಿತೊಡನೆ ಎಲ್ಲರೂ ಒಂದು ಮಾತಾಡದೇ ಅವನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದೆವು. ಅವನ ಬಾಯಿಯಿಂದ ಯಾವಾಗ ‘ಹೀಗೊಂದ ಊರಾಗ.......’ ಎಳೆದ ಧ್ವನಿಯಲ್ಲಿ ಕತೆಯ ಪ್ರಾರಂಭ. ಅವನ ಧ್ವನಿಯಲ್ಲಿ ಎಂತಹ ಮೋಡಿ! ಕತೆ ನಿರೂಪಣೆಯ ಶೈಲಿ ನೆನಪಾದರೆ ಕತೆ ಎಲ್ಲರಿಗೂ ಹೇಳಲಿಕ್ಕೆ ಬರುವುದಿಲ್ಲ ಎಂಬುದಂತೂ ಸತ್ಯ. ಎಳೆಎಳೆಯಾಗಿ ಕತೆ ಹೇಳುವ ಪರಿ! ಚಿಕ್ಕಮಕ್ಕಳು ಬಾಯಿತೆರೆದು, ಕಣ್ಣಗಲಿಸಿ ಕೂತರೆ, ಹೆಣ್ಣುಮಕ್ಕಳು ಗದ್ದಕ್ಕೆ ಕೈಹಚ್ಚಿ ಮುಂದೇನು ಹೇಳುತ್ತಾನೋ ಎಂದು ತನ್ಮಯರಾಗಿ ಕುಳಿತಿರುತ್ತಿದ್ದೆವು.

ಗಂಡಸರು ಇನ್ನೊಂದು ಕಟ್ಟೆಯ ಮೇಲೆ ಕುಳಿತು ಆಸಕ್ತಿಯಿಂದ ಕೇಳುತ್ತಿದ್ದರು. ರಾಜಕುಮಾರಿಯನ್ನು ಕದ್ದೊಯ್ದು ಏಳು ಪರ್ವತ,
ಏಳು ಸಮುದ್ರದಾಚೆ ಇರುವ ದ್ವೀಪದ ಒಂದು ಅರಮನೆಯ ಉಗ್ರಾಣದಲ್ಲಿ ಪಂಜರದೊಳಗೆ ಇರುವ ಗಿಳಿಯಲ್ಲಿ ರಾಜಕುಮಾರಿಯ ಪ್ರಾಣ ಇಟ್ಟದ್ದನ್ನು ಹೇಳಿದಾಗ ನಾವ್ಯಾರೂ ಪ್ರಶ್ನೆ ಮಾಡಲಿಲ್ಲ.

ಶತ್ರುಗಳನ್ನು ಹೊಡೆದುರುಳಿಸಿ ರಾಜಕುಮಾರ ರಾಣಿಯನ್ನು ಬದುಕಿಸಿ ಮದುವೆಯಾದ ಕತೆಯನ್ನು ಹಾವಭಾವಗಳ ಮೂಲಕ ರಸವತ್ತಾಗಿ ಹೇಳಿದಾಗ ಸಂತೋಷದಿಂದ ಎಲ್ಲರೂ ಕೇಳುತ್ತಿದ್ದೆವು. ಪಂಚತಂತ್ರದ ಕತೆಗಳನ್ನಂತೂ ಹೇಳುತ್ತಿದ್ದಾಗ ಪ್ರಾಣಿಗಳೇ ನಮ್ಮೆದುರಿಗೆ ನಿಂತು ಮಾತಾಡುತ್ತಿದ್ದಾವೇನೋ ಎನ್ನಿಸುತ್ತಿತ್ತು. ವಡ್ಡಾರಾಧನೆಯ ಕತೆಗಳು-ಉಪಕತೆಗಳು, ಪ್ರವಚನ-ಕೀರ್ತನೆಗಳಲ್ಲಿ ಬರುವ ಕತೆಗಳು ಅಬ್ಬಾ! ಎಷ್ಟೊಂದು ಕತೆಗಳು.

ಕೆಲವು ಕತೆಗಳಲ್ಲಿಯೇ ಪ್ರಶ್ನೆಗಳನ್ನು ಹುಟ್ಟು ಹಾಕುವಂಥವು. ಅಂತಹ ಕತೆ ಹೇಳಿ ಉತ್ತರ ಹೇಳಲು ನಮ್ಮನಮ್ಮಲ್ಲಿಯೇ ಚರ್ಚೆ ಮಾಡುವಂತೆ ಮಾಡುತ್ತಿದ್ದ. ಎಲ್ಲರೂ ತಮಗೆ ತಿಳಿದಂತೆ ಉತ್ತರಗಳನ್ನು ಹೇಳಿದಾಗ ಅವುಗಳನ್ನೆಲ್ಲಾ ಕಲೆಹಾಕಿ ತಾನು ಮುಕ್ತಾಯ ಹಾಡುತ್ತಿದ್ದ. ರಾತ್ರಿ ಊಟ ಮಾಡುವಾಗ ಹೇಳಿದ ಕತೆಯನ್ನು ಓಣಿಯಲ್ಲಿ ಚರ್ಚೆ ಮಾಡುತ್ತಿದ್ದ ನೆನಪು. ನಮ್ಮಜ್ಜಿಯಲ್ಲೂ ಶರಣರ ಕತೆಗಳನ್ನು ರಸವತ್ತಾಗಿ ಹೇಳುವ ಕಲೆ ರಕ್ತಗತವಾಗಿ ಬಂದಿತ್ತು. ಕತೆಯ ಮಧ್ಯದಲ್ಲಿ ಹಾಡು, ಸಂಭಾಷಣೆ ತಂದು ಚಿಕ್ಕಮಕ್ಕಳನ್ನು ಆಕರ್ಷಿಸುವ ಶಕ್ತಿ ಇಂದಿನ ಹೆಣ್ಣುಮಕ್ಕಳಲ್ಲಿ ಕಾಣುತ್ತಿಲ್ಲ.
–ಡಾ. ಉಮಾ ಅಕ್ಕಿ ಬಾಗಲಕೋಟ­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT