ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಗಾದಲ್ಲಿ ಎಸ್‌ಟಿಪಿ ನಿರ್ಮಾಣ; ವಿರೋಧ

Last Updated 31 ಮೇ 2017, 10:48 IST
ಅಕ್ಷರ ಗಾತ್ರ

ಬೆಳಗಾವಿ: ತ್ಯಾಜ್ಯ ಸಂಸ್ಕರಣಾ ಘಟಕದ (ಎಸ್‌ಟಿಪಿ) ಅವಶ್ಯಕತೆ ಇದೆ. ಆದರೆ, ಹಲಗಾದಲ್ಲಿ ನಿರ್ಮಿಸಬಾರದು. ಬೇರೆ ಪ್ರದೇಶದಲ್ಲಿ ನಿರ್ಮಿಸಲಿ ಎಂದು ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ಪಟ್ಟು ಹಿಡಿದರು.

ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿದ ಅವರು, ಎಸ್‌ಟಿಪಿ ನಿರ್ಮಿಸಲು ಬೇರೆ ಸ್ಥಳಗಳ ಪರಿಶೀಲನೆ ಮಾಡುವಂತೆ ಒತ್ತಾಯಿಸಿದರು.

ಈಗಾಗಲೇ ಹಲಗಾ ರೈತರು ಸುವರ್ಣ ವಿಧಾನಸೌಧ ನಿರ್ಮಿಸಲು ಜಮೀನು ನೀಡಿದ್ದಾರೆ. ಈಗ ಪುನಃ ಎಸ್‌ಟಿಪಿ ನಿರ್ಮಾಣಕ್ಕೆ ಅವರಿಂದ ಜಮೀನು ಕಿತ್ತುಕೊಳ್ಳುವುದು ಸರಿಯಲ್ಲ ಎಂದು ವಾದಿಸಿದರು.

ಈ ಹಿಂದೆ ಎಸ್‌ಟಿಪಿ ನಿರ್ಮಿಸಲು ಹಲಗಾ ಸೇರಿದಂತೆ ಐದು ಸ್ಥಳಗಳನ್ನು ಪರಿಶೀಲಿಸಲಾಗಿತ್ತು. ಅಲಾರವಾಡ, ಖಾಸಬಾಗ, ಹಳೆಯ ಪಿ.ಬಿ ರಸ್ತೆ ಬಳಿಯ ಸ್ಥಳಗಳನ್ನು ಪುನಃ ಪರಿಶೀಲಿಸಬಹುದು ಎಂದರು.

ಎಲ್ಲದಕ್ಕೂ ಕಾನೂನು ಅಂದರೆ ಆಗಲ್ಲ: ‘ಹಲಗಾ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದನ್ನು ವಾಪಸ್‌ ಕೊಡಲು ಕಾನೂನಿನಲ್ಲಿ ಸಾಧ್ಯವಿಲ್ಲ ವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಎಲ್ಲವನ್ನು ಕಾನೂನಿನ ಅಡಿಯಲ್ಲಿಯೇ ನೋಡಲು ಸಾಧ್ಯವಿಲ್ಲ. ಕಾನೂನು ಬೇಕಾದವರು ನ್ಯಾಯಾಲಯಕ್ಕೆ ಹೋಗಲಿ’ ಎಂದು ಅವರು ಹೇಳಿದರು.

‘ಸ್ವಾಧೀನ ಪ್ರಕ್ರಿಯೆಯನ್ನು ರದ್ದು ಗೊಳಿಸಿ, ರೈತರಿಗೆ ಜಮೀನುಗಳನ್ನು ವಾಪಸ್‌ ಕೊಡಿಸಿ. ಜಮೀನು ಕಳೆದು ಕೊಂಡಿರುವ ಜನರು ನಮ್ಮ ಬಳಿ ಬರುತ್ತಿದ್ದಾರೆ. ಜನರು ತೊಂದರೆಗೆ ಒಳಗಾದಾಗ ಜನಪ್ರತಿನಿಧಿಗಳಾದ ನಮ್ಮ ಬಳಿ ಬರುತ್ತಾರೆ. ನಾವು ಇವರಿಗೆ ಸಹಾಯ ಮಾಡಬೇಕಾಗುತ್ತದೆ. ಇಲ್ಲದಿ ದ್ದರೆ ಇವರ ವಿರೋಧ ಕಟ್ಟಿಕೊಳ್ಳಬೇಕಾ ಗುತ್ತದೆ’ ಎಂದು ನುಡಿದರು.

ಸಂಸದ, ಶಾಸಕರ ಜಮೀನು ಏಕೆ ಹೋಗಲ್ಲ?:  ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ರೈತರ ಜಮೀನುಗಳನ್ನೇ ಏಕೆ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಇದುವರೆಗೆ ಯಾವುದಾದರೂ ಸಂಸದರು, ಶಾಸಕರ ಜಮೀನು ಸ್ವಾಧೀನ ಪಡಿಸಿಕೊಂಡ ಉದಾಹರಣೆ ಇದೆಯೇ? ಎಂದು ಪ್ರಶ್ನಿಸಿದರು.

ಎಸ್‌ಟಿಪಿ ನಿರ್ಮಿಸಲು 9 ಎಕರೆ ಜಮೀನು ಸಾಕಿತ್ತು. ಆದರೆ, 19  ಎಕರೆ ಜಮೀನನ್ನು ಏಕೆ ಸ್ವಾಧೀನಪಡಿಸಿಕೊಂ ಡಿರಿ? ಜಮೀನು ಕಳೆದುಕೊಂಡ ರೈತರು ಈಗ ಬೀದಿಗೆ ಬಂದಿದ್ದಾರೆ. ಈ ಜಾಗ ವನ್ನು ಕೈಬಿಟ್ಟು, ಯಾರೂ ವಿರೋಧಿ ಸದಂತಹ ಜಮೀನನ್ನು ಸ್ವಾಧೀನಪಡಿಸಿ ಕೊಳ್ಳಬೇಕು ಎಂದು ಒತ್ತಾಯಿಸಿದರು.

ಸದಸ್ಯ ರಮೇಶ ಸೊಂಟಕ್ಕಿ ಮಾತನಾಡಿ, ಎಸ್‌ಟಿಪಿ ಆಗಬೇಕು ಆದರೆ ಹಲಗಾ ಜಾಗದಲ್ಲಿ ಬೇಡ ಎಂದು ಶಾಸಕರ ಮಾತಿಗೆ ಧ್ವನಿಗೂಡಿಸಿದರು. ಕಿರಣ ಸಾಯಿನಾಕ್‌ ಮಾತನಾಡಿ, ‘ಹಾವು ಸಾಯಬೇಕು, ಕೋಲೂ ಮುರಿಯಬಾರದು’ ಎನ್ನುವಂತೆ ಆಗಿದೆ. ಈ  ಹಿಂದೆ ಎರಡು ಬಾರಿ ಎಸ್‌ಟಿಪಿ ನಿರ್ಮಾಣಕ್ಕಾಗಿ ಬಂದಿದ್ದ ಅನುದಾನ ವಾಪಸ್‌ ಹೋಗಿದೆ. ಸ್ಥಳ ನಿರ್ಧಾರವಾಗ ದಿದ್ದರೆ ಈ ಸಲವೂ ಇದೇ ರೀತಿಯಾಗುವ ಅಪಾಯವಿದೆ ಎಂದರು.

ಶಾಸಕ ಫಿರೋಜ್‌ ಸೇಠ್‌ ಮಾತ ನಾಡಿ, ‘ಯೋಜನೆಗಳಿಗೆ ಜಮೀನು ಗುರುತಿಸುವುದು ಹಾಗೂ ಸ್ವಾಧೀನ ಪಡಿಸಿಕೊಳ್ಳುವುದು ಸರ್ಕಾರದ ತೀರ್ಮಾನವಾಗಿರುತ್ತದೆ. ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಲು ಪಾಲಿಕೆಗೆ ಅಧಿಕಾರವಿಲ್ಲ’ ಎಂದರು.

ಎಲ್ಲರ ಅಹವಾಲುಗಳನ್ನು ಆಲಿಸಿದ ಮೇಯರ್‌ ಸಂಜೋತಾ ಬಾಂದೇಕರ ಮಾತನಾಡಿ, ‘ಹಲಗಾ ಜಮೀನಿನಲ್ಲಿ ಎಸ್‌ಟಿಪಿ ನಿರ್ಮಿಸಲು ಸ್ಥಳೀಯರ ಹಾಗೂ ರೈತರ ವಿರೋಧ ಸಾಕಷ್ಟಿದೆ. ಆದರೆ, ಎಸ್‌ಟಿಪಿಯ ನಿರ್ಮಾಣವೂ ನಮಗೆ ಅವಶ್ಯಕತೆ ಇದೆ. ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎನ್ನುವುದರ ಬಗ್ಗೆ ಅಧಿಕಾರಿಗಳು ಇನ್ನಷ್ಟು ಮಾಹಿತಿ ಪಡೆಯಬೇಕು. ಮುಂದಿನ ಸಭೆಯಲ್ಲಿ ಚರ್ಚಿಸೋಣ’ ಎಂದರು.

 ‘ಹಲಗಾ ಜಮೀನಿಗೆ 2011ರಲ್ಲಿಯೇ ಒಪ್ಪಿಗೆ’
ಸದಸ್ಯರ ಆಗ್ರಹದ ಮೇರೆಗೆ ಎಸ್‌ಟಿಪಿ ಯೋಜನೆಯ ಬಗ್ಗೆ ಆಯುಕ್ತ ಶಶಿಧರ ಕುರೇರ ಸಭೆಗೆ ಸಂಪೂರ್ಣ ಮಾಹಿತಿ ನೀಡಿದರು.
* ಬೆಳಗಾವಿ ನಗರದಲ್ಲಿ ಪ್ರಸ್ತುತ ಶೇ 54ರಷ್ಟು ಭಾಗದಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ಇದೆ. ಇನ್ನುಳಿದ ಭಾಗದಲ್ಲಿ ಇಲ್ಲ. ಇಲ್ಲಿನ ಚರಂಡಿ   ನೀರು ಹರಿದುಕೊಂಡು ಹೋಗಿ        ಬಳ್ಳಾರಿ ನಾಲಾ ಸೇರುತ್ತದೆ. ಇದು ಮುಂದೆ ಮಾರ್ಕಂಡೇಯ ನದಿಗೆ ಸೇರಿಕೊಳ್ಳು ತ್ತದೆ. ಈ ವಿಷಯವು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ಬಂದ          ತಕ್ಷಣ ಮಹಾನಗರ ಪಾಲಿಕೆಯ ಪ್ರಕರಣ ದಾಖಲಿಸಿದರು. ಇದಕ್ಕೆ ಪ್ರತಿಯಾಗಿ ಎಸ್‌ಟಿಪಿ ನಿರ್ಮಿಸುವುದಾಗಿ ಪಾಲಿಕೆಯು ಮುಚ್ಚಳಿಕೆ ಬರೆದುಕೊಟ್ಟಿತು.
* ಜಾಗ ಗುರುತಿಸಲು ತಾಂತ್ರಿಕ ತಜ್ಞರ ಸಮಿತಿ ರಚಿಸಲಾಯಿತು. ಹಲಗಾ ಸೇರಿದಂತೆ ಐದು ಸ್ಥಳಗಳನ್ನು ಗುರುತಿಸಿತು. 2011ರ ಮೇ 7ರಂದು ಅಂದಿನ ಜಿಲ್ಲಾ ಉಸ್ತುವಾರಿ      ಸಚಿವ ಉಮೇಶ ಕತ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲಗಾ ಪ್ರದೇಶ ಸೂಕ್ತವೆಂದು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಎಲ್ಲ ಸ್ಥಳೀಯ ಜನಪ್ರತಿನಿಧಿಗಳು      ಹಾಗೂ ಶಾಸಕರು ಭಾಗವಹಿಸಿದ್ದರು.
* ಹಲಗಾದಲ್ಲಿ 19 ಎಕರೆ ಜಾಗವನ್ನು 2013ರಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳಲಾಯಿತು. ಕೆಲವು ರೈತರು ಇದನ್ನು ಪ್ರಶ್ನಿಸಿ, ಹೈಕೋರ್ಟ್‌ ಮೊರೆ ಹೋದರು. 2017ರ            ಫೆಬ್ರುವರಿ 17ರಂದು ಹೈಕೋರ್ಟ್‌ ಎಸ್‌ಟಿಪಿ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿತು. ಇದರ ಆಧಾರದ ಮೇಲೆ ಎಸ್‌ಟಿಪಿ ನಿರ್ಮಾಣ ಪ್ರಕ್ರಿಯೆಗೆ ಪುನರ್‌ಚಾಲನೆ              ನೀಡಲಾಯಿತು.
* ಅಮೃತ ಯೋಜನೆಯಡಿ ಎಸ್‌ಟಿಪಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಅಂದಾಜು 156 ಕೋಟಿ ವೆಚ್ಚ ತಗುಲಲಿದೆ. ಕೇಂದ್ರ ಸರ್ಕಾರದ ಶೇ 50ರಷ್ಟು, ರಾಜ್ಯ ಸರ್ಕಾರದ್ದು      ಶೇ 20 ಹಾಗೂ ಬಾಕಿ ಶೇ 30ರಷ್ಟು ಮಹಾನಗರ ಪಾಲಿಕೆ ಭರಿಸಲಿದೆ ಎಂದು ಮಾಹಿತಿ ನೀಡಿದರು.

‘ನಾವು ಸ್ಯಾಂಡ್‌ವಿಚ್‌ ಆಗಿದ್ದೇವೆ...’
ಎಸ್‌ಟಿಪಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತ ಮಾತನಾಡಿದ ಶಾಸಕ ಸಂಜಯ ಪಾಟೀಲ, ‘ನಿಮ್ಮ ಸರ್ಕಾರವಿದೆ. ಭೂ ಸ್ವಾಧೀನವನ್ನು ರದ್ದುಪಡಿಸಿ’ ಎಂದು ಕಾಂಗ್ರೆಸ್‌ ಶಾಸಕ ಫಿರೋಜ್‌ ಸೇಠ್‌ ಅವರನ್ನು ಕಿಚಾಯಿಸಿದರು.

ಇದಕ್ಕೆ ಉತ್ತರಿಸಿದ ಫಿರೋಜ್‌, ‘ಭೂ ಸ್ವಾಧೀನ ಮಾಡಿದ್ದು ಹಿಂದಿನ ನಿಮ್ಮ (ಬಿಜೆಪಿ) ಸರ್ಕಾರ’ ಎಂದು ತಿರುಗೇಟು ನೀಡಿದರು.   ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಶಾಸಕ ಸಂಭಾಜಿ ಪಾಟೀಲ ಮಧ್ಯೆಪ್ರವೇಶಿಸಿ, ‘ನಿಮ್ಮಿಬ್ಬರ ನಡುವೆ ಸಿಕ್ಕ ನಾವು ಸ್ಯಾಂಡ್‌ ವಿಚ್‌ನಂತೆ ಆಗಿದ್ದೇವೆ’ ಎಂದು ನಗೆಯ ಹೊನಲು ಹರಿಸಿದರು.

* * 

ಹಲಗಾ ರೈತರು ಸುವರ್ಣ ವಿಧಾನಸೌಧ ನಿರ್ಮಿಸಲು ಜಮೀನು ನೀಡಿದ್ದಾರೆ. ಈಗ ಪುನಃ ಎಸ್‌ಟಿಪಿ ನಿರ್ಮಾಣಕ್ಕೆ ಅವರಿಂದ ಜಮೀನು ಕಿತ್ತುಕೊಳ್ಳುವುದು ಸರಿಯಲ್ಲ
ಸಂಜಯ ಪಾಟೀಲ
ಬೆಳಗಾವಿ ಗ್ರಾಮೀಣ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT