ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ವೃದ್ಧಿ ದರ ಕುಸಿತ ಆತಂಕಕಾರಿ ವಿದ್ಯಮಾನ

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ದೇಶಿ ಆರ್ಥಿಕ ವೃದ್ಧಿ ದರವು (ಜಿಡಿಪಿ)  2016–17ನೇ ಹಣಕಾಸು ವರ್ಷದಲ್ಲಿ ಶೇ  7.1ರಷ್ಟು ಮಾತ್ರ ಬೆಳವಣಿಗೆ ದಾಖಲಿಸಿರುವುದು ನಿರಾಶಾದಾಯಕ ವಿದ್ಯಮಾನ.  ನಾಲ್ಕನೇ ತ್ರೈಮಾಸಿಕದಲ್ಲಿನ ವೃದ್ಧಿ ದರ  ಶೇ 6.1ರಷ್ಟು ಮಾತ್ರ ಬೆಳವಣಿಗೆ ಕಂಡಿದೆ.  ಇದರಿಂದಾಗಿ ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸುತ್ತಿರುವ ಆರ್ಥಿಕತೆ ಎನ್ನುವ ಹೆಗ್ಗಳಿಕೆ ತಪ್ಪಿದಂತಾಗಿದೆ.  ಹಣಕಾಸು ವರ್ಷದ ಆರಂಭದಿಂದಲೇ ಆರ್ಥಿಕ ಪ್ರಗತಿಯು ನಿರಾಶಾದಾಯಕ ಮಟ್ಟದಲ್ಲಿ ಇದ್ದ ಕಾರಣಕ್ಕೆ ಇದರಲ್ಲಿ ಅನಿರೀಕ್ಷಿತವಾದದ್ದು ಏನೂ ಇಲ್ಲ. ಈ ಕುಂಠಿತ ಪ್ರಗತಿಗೆ ನೋಟು ರದ್ದತಿಯು ಇನ್ನೊಂದು ದೊಡ್ಡ ಪೆಟ್ಟು ನೀಡಿದೆಯಷ್ಟೆ.  ನೋಟು ರದ್ದತಿ ನಿರ್ಧಾರದಿಂದಾಗಿ ಉಂಟಾದ ಕರೆನ್ಸಿ ಕೊರತೆಯು  ಸರಕು ಮತ್ತು ಸೇವೆಗಳ ಬಳಕೆ ಮತ್ತು ಉದ್ಯೋಗ ಅವಕಾಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎನ್ನುವುದು ಈಗ ದೃಢಪಟ್ಟಿದೆ. ಇದರಿಂದ ಸಹಜವಾಗಿಯೇ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ.  ಕೇಂದ್ರ ಸರ್ಕಾರ ಏನೇ ಸಬೂಬು ಹೇಳಲಿ,  ಗರಿಷ್ಠ ಮುಖ ಬೆಲೆಯ ನೋಟುಗಳ ರದ್ದತಿಯ ಆಘಾತದಿಂದ ಅರ್ಥ ವ್ಯವಸ್ಥೆಯು ಇನ್ನೂ ಹೊರಬಂದಿಲ್ಲದಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. 2016ರ ನವೆಂಬರ್‌ನಲ್ಲಿ ನಡೆದ ನೋಟು ರದ್ದತಿಯಿಂದ ಉದ್ಭವಿಸಿದ  ನಗದು ಕೊರತೆಯಿಂದಾಗಿ ಆರ್ಥಿಕ ಚಟುವಟಿಕೆಗಳೆಲ್ಲ ಹಳಿ ತಪ್ಪಿದ್ದವು. ಇದು ಎರಡು ತ್ರೈಮಾಸಿಕಗಳ ಜಿಡಿಪಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನೋಟು ರದ್ದತಿಯೊಂದೇ ಇದಕ್ಕೆ ಕಾರಣವಲ್ಲ ಎಂದು ಸರ್ಕಾರ ಎಷ್ಟೇ ಬಲವಾಗಿ ಸಮರ್ಥಿಸಿಕೊಂಡರೂ ಅದರ ವಾದವನ್ನು ಒಪ್ಪಲಾಗದು. ಅದೊಂದು ತಾತ್ಕಾಲಿಕ ಆಘಾತವಾಗಿದ್ದರೂ, ಅದರ ಪರಿಣಾಮಗಳು ಇನ್ನೂ ಗೋಚರಿಸುತ್ತಲೇ ಇವೆ.

ಕೃಷಿ ಕ್ಷೇತ್ರ ಮಾತ್ರ ಶೇ 0.7 ರಿಂದ ಶೇ 4.9ರಷ್ಟು ವೃದ್ಧಿ ದಾಖಲಿಸಿರುವುದು ಗಮನಾರ್ಹ ಸಾಧನೆಯಾಗಿದೆ. ಉತ್ತಮ ಮುಂಗಾರಿನ ಫಲವಾಗಿ ಕೃಷಿ ಉತ್ಪಾದನೆಯು ದಾಖಲೆ ಮಟ್ಟಕ್ಕೆ ತಲುಪಿದೆ. ಆದರೂ, ಇತರ ವಲಯಗಳಲ್ಲಿನ ಕುಸಿತದ ಪರಿಣಾಮ ತಗ್ಗಿಸಲು ಇದರಿಂದ ಸಾಧ್ಯವಾಗಿಲ್ಲ.  ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಮೂರು ವರ್ಷಗಳು ತುಂಬಿದ ಸಂದರ್ಭದಲ್ಲಿಯೇ ಜಿಡಿಪಿ ದರ  ಮೂರು ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿರುವುದು ಕಾಕತಾಳೀಯವೂ ಇದ್ದೀತು. ತಯಾರಿಕೆ ಮತ್ತು ಸೇವಾ ವಲಯದ ಕಳಪೆ ಸಾಧನೆಯ ಕಾರಣಕ್ಕೆ ದೇಶಿ ಅರ್ಥ ವ್ಯವಸ್ಥೆಯ ಬೆಳವಣಿಗೆಯು ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹಣಕಾಸು, ವಿಮೆ, ವ್ಯಾಪಾರ, ಹೋಟೆಲ್‌, ವಿದ್ಯುತ್‌ ಮತ್ತು ತಯಾರಿಕಾ ರಂಗಗಳ ಸಾಧನೆ ನಿರಾಶಾದಾಯಕವಾಗಿದೆ. ಗ್ರಾಮೀಣ ವಲಯದ ಕಾರ್ಮಿಕರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಕಟ್ಟಡ ನಿರ್ಮಾಣ ವಲಯವು ಶೇ 3.7ರಷ್ಟು ಕುಸಿದಿರುವುದು ಕಳವಳಕಾರಿ ಸಂಗತಿಯಾಗಿದೆ. ಹೊಸ ಬಂಡವಾಳ ಹೂಡಿಕೆ ಮತ್ತು ಗ್ರಾಹಕರ ಬೇಡಿಕೆ ಕಡಿಮೆಯಾಗಿರುವುದು ಆರ್ಥಿಕ ಚಟುವಟಿಕೆಗಳು ಕುಂಠಿತಗೊಳ್ಳಲು ಮುಖ್ಯ ಕಾರಣಗಳಾಗಿವೆ. 

ಆರ್ಥಿಕ ಚಟುವಟಿಕೆಗಳಿಗೆ ರಭಸದ ಉತ್ತೇಜನ ನೀಡುವಂತಹ ವಿತ್ತೀಯ ಬೆಂಬಲ ನೀಡಲು ಸರ್ಕಾರ  ಈಗ ತುರ್ತಾಗಿ ಗಮನಹರಿಸಬೇಕಾಗಿದೆ.  ಮೂಲಸೌಕರ್ಯ ವಲಯಗಳಲ್ಲಿ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಿಸಬೇಕು. ಜತೆಗೆ, ಬೇಡಿಕೆ ಕುಸಿತದ ಸಮಸ್ಯೆಗಳನ್ನು ನಿವಾರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡರೆ ಮಾತ್ರ  ಅರ್ಥ ವ್ಯವಸ್ಥೆ ಚೇತರಿಕೆಯ ಹಾದಿಗೆ ಮರಳಲಿದೆ. ನೋಟು ರದ್ದತಿಯ ಪ್ರತಿಕೂಲ ಪರಿಣಾಮಗಳು ಕ್ರಮೇಣ ಕಡಿಮೆಯಾಗುತ್ತಿವೆ. ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣಕ್ಕೆ ಕಡಿವಾಣ ಹಾಕಿ, ಸಾಲ ನೀಡಿಕೆಯ ಪ್ರಮಾಣ ಹೆಚ್ಚಿಸಬೇಕಾಗಿದೆ. ಒಂದೊಮ್ಮೆ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಸುಧಾರಿಸಿದರೆ ಅರ್ಥ ವ್ಯವಸ್ಥೆಯು ಮತ್ತೆ ಪ್ರಗತಿ ಪಥದತ್ತ ದಾಪುಗಾಲು ಹಾಕಬಹುದು. ಉತ್ತಮ ಮುಂಗಾರು, ನಗದು ಹರಿವು ಹೆಚ್ಚಳ ಮತ್ತು ಸರಕು– ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ಪರಿಣಾಮವಾಗಿ 2017–18ನೇ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರ ಹೆಚ್ಚಲಿದೆ ಎಂದು ಬಹುವಾಗಿ ಆಶಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT