ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್, ಬಯೋಮೆಟ್ರಿಕ್ ಇಡ್ತೀರಾ?’

Last Updated 3 ಜೂನ್ 2017, 19:30 IST
ಅಕ್ಷರ ಗಾತ್ರ

ಹಾವೇರಿ: ನಗರದಲ್ಲಿ ಈಚೆಗೆ ಪತ್ರಿಕಾಗೋಷ್ಠಿ ನಡೆಸಿದ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರು, ‘ಶಾಸಕರು ಸದನವನ್ನು ಗಂಭೀರವಾಗಿ ಪರಿಗಣಿಸಬೇಕು. ಅದಕ್ಕಾಗಿ ಅವರ ಹಾಜರಾತಿಯನ್ನು ದಾಖಲಿಸಲು ಹೊಸ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ಅದರಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು, ಶಾಸಕರೆಲ್ಲ ಸದನಕ್ಕೆ ಹಾಜರಾದ ಪ್ರತಿ ಗಂಟೆಯೂ ದಾಖಲಾಗುತ್ತದೆ. ಇದನ್ನು ಅಂತರ್ಜಾಲದ ಮೂಲಕ ಜನತೆ ವೀಕ್ಷಿಸಬಹುದಾಗಿದೆ. ಅಧಿವೇಶನಕ್ಕೆ ಹೋದ ಶಾಸಕರು ಏನು ಮಾಡುತ್ತಿದ್ದಾರೆ ಎಂದು  ಕ್ಷೇತ್ರದ ಜನತೆ ಅಂತರ್ಜಾಲದ ಮೂಲಕ ತಿಳಿಯಬಹುದು’ ಎಂದರು.

ಆಗ, ಪಕ್ಕದಲ್ಲಿ ಕುಳಿತ್ತಿದ್ದ ಜವಳಿ ಸಚಿವ ರುದ್ರಪ್ಪ ಲಮಾಣಿ, ‘ಸರ್, ಮತ್ತೆ ಬಯೋಮೆಟ್ರಿಕ್‌ ಏನಾದರೂ ಇಡ್ತೀರಾ?’ ಎಂದು ಕೇಳಿದರು. ‘ನಿಮ್ಮ ಹಾಜರಾತಿ ನೋಡೋಣ’ ಎಂದು ಸಭಾಧ್ಯಕ್ಷರು ಕುಟುಕಿದರು. 

*
‘ಆಂಬುಲೆನ್ಸ್  ಕೊಟ್ರೆ  ಸಮಸ್ಯೆಯಿಲ್ಲ’
ಶಿರಸಿ:
ತಾಲ್ಲೂಕು ಪಂಚಾಯ್ತಿಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸುವಾಗ, ‘ಸರ್ಕಾರ ಮಾತೃಪೂರ್ಣ ಎಂಬ ಹೊಸ ಯೋಜನೆ ಜಾರಿಗೊಳಿಸಿದೆ. ಇದರ ಬಗ್ಗೆ ಗೊತ್ತಿದೆಯಾ ನಿಮಗೆ’ ಎಂದು ಪ್ರಶ್ನಿಸಿದರು.

ಸದಸ್ಯರು ಪರಸ್ಪರ ಮುಖ ನೋಡಿಕೊಳ್ಳುತ್ತಿರುವುದನ್ನು ಗಮನಿಸಿದ ಅವರು ಮಾತು ಮುಂದುವರಿಸಿ, ‘ಹೊಸ ಯೋಜನೆಯಂತೆ ಗರ್ಭಿಣಿ ಮತ್ತು  ಬಾಣಂತಿಯರು ಸಮೀಪದ ಅಂಗನವಾಡಿಗೆ ಹೋಗಿ ಮಧ್ಯಾಹ್ನದ ಪೌಷ್ಟಿಕ ಆಹಾರ ಸೇವಿಸಿ ಬರಬೇಕು.

ಮಲೆನಾಡಿನ ಪ್ರದೇಶಗಳಲ್ಲಿ ಇದು ಪ್ರಾಯೋಗಿಕವಾಗಿ ಸಾಧ್ಯವೇ’ ಎಂದು ಪ್ರಶ್ನಿಸಿದರು. ‘ಯಾರಪ್ಪಾ ಈ ಯೋಜನೆ ಸಿದ್ಧಪಡಿಸಿದವರು, ಮೇಲೆ ಕುಳಿತವರು ಪುರುಷರಿರಬೇಕು, ಅವರಿಗೆ ಮಹಿಳೆಯರ ಸಮಸ್ಯೆ ಅರ್ಥವಾಗುವುದಿಲ್ಲ ಎಂದು ವಿಚಾರಿಸಿದರೆ ಅಲ್ಲಿ ಕುಳಿತವರೂ ಮಹಿಳೆಯರೇ, ಏನೆಲ್ಲ ಯೋಜನೆ ಮಾಡುತ್ತಾರೋ’ ಎಂದು ಗೊಣಗಿದರು.

ಅಷ್ಟರಲ್ಲಿ ಸದಸ್ಯರೊಬ್ಬರು ‘ಸರ್ಕಾರ ಈ ಯೋಜನೆ ಜೊತೆಗೆ ಊರಿಗೊಂದು ಆಂಬುಲೆನ್ಸ್ ಕೊಡುತ್ತದೆಯೇ, ಹಾಗಿದ್ದರೆ ಸಮಸ್ಯೆ ಇಲ್ಲ’ ಎಂದಾಗ ಸಭೆಯಲ್ಲಿ ಸದಸ್ಯರ (ಕಾಂಗ್ರೆಸ್ ಸದಸ್ಯರೂ ಸೇರಿ) ನಗೆ ಕಂಪನ ಮೂಡಿಸಿತ್ತು. 

*
ಮದ್ಯದ ಅಂಗಡಿಗಾಗಿ ಪತ್ರಿಕಾಗೋಷ್ಠಿ
ಮೈಸೂರು:
ಮದ್ಯದ ಅಂಗಡಿ ಆರಂಭವಾಗಬೇಕು, ಇದಕ್ಕಾಗಿ ಜಿಲ್ಲಾಧಿಕಾರಿ ಪರವಾನಗಿ ನೀಡಬೇಕೆಂದು ಪತ್ರಿಕಾಗೋಷ್ಠಿ ನಡೆಸುವುದು ಅಪರೂಪ. ಇಂಥದೊಂದು ಪತ್ರಿಕಾಗೋಷ್ಠಿ ಮೈಸೂರಿನಲ್ಲಿ ನಡೆಯಿತು.

ಎಚ್‌.ಡಿ.ಕೋಟೆ ತಾಲ್ಲೂಕಿನ ಸರಗೂರು ಪಟ್ಟಣದಲ್ಲಿ ಎಂಎಸ್‌ಐಎಲ್‌ ಮಳಿಗೆ ಮಂಜೂರಾಗಿದೆ. ಆದರೆ, ಹಾಲಿ ಶಾಸಕರು ಅಡ್ಡಗಾಲು ಹಾಕುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಸರಗೂರಿಗೆ ಬಂದು ಮಳಿಗೆ ಪರಿಶೀಲಿಸಿ, ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಸರಗೂರಿನ ಸಾರ್ವಜನಿಕರು ಮೈಸೂರಿಗೆ ಬಂದು ಪತ್ರಿಕಾಗೋಷ್ಠಿ ಮಾಡಿದರು.

ಮದ್ಯದಂಗಡಿ ಏಕೆ ಬೇಕು ಎಂದು ಕೇಳಿದರೆ, ‘18,000 ಜನಸಂಖ್ಯೆ ಇರುವ ಸರಗೂರಲ್ಲಿ ಐದು ಮದ್ಯದಂಗಡಿಗಳಿವೆ. ಎಲ್ಲದರಲ್ಲೂ ಕಲಬೆರಕೆ ಮಾರಾಟ ನಡೆಯುತ್ತಿದೆ. ಜತೆಗೆ, ದರವೂ ದುಪ್ಪಟ್ಟು. ಇದನ್ನು ತಪ್ಪಿಸಲು ಜನರಿಗೆ ಶುದ್ಧವಾದ ಮದ್ಯ ಸಿಗಬೇಕು. ದುಡಿದು ಸುಸ್ತಾದವರು ಕುಡಿದು ಮಲಗಲು ಅವಕಾಶ ಆಗಬೇಕು’ ಎನ್ನುವುದು ಪತ್ರಿಕಾಗೋಷ್ಠಿಯಲ್ಲಿದ್ದವರ ಮನವಿ.

ಮದ್ಯದ ಅಂಗಡಿ ಬೇಡವೆಂದು ಹೋರಾಟ ನಡೆಯುತ್ತಿರುವಾಗ ನೀವು ಬೇಕು ಎನ್ನುತ್ತೀರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಸರ್ಕಾರವೇ ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡಿದೆ. ಜನರಿಗೆ ಕಡಿಮೆ ದುಡ್ಡಲ್ಲಿ, ಶುದ್ಧವಾದ ಮದ್ಯ ಸಿಗಲಿಬಿಡಿ’ ಎಂದು ಉತ್ತರಿಸಿದಾಗ ಪತ್ರಕರ್ತರು ಸುಸ್ತು.
-ಗಣೇಶ ಅಮೀನಗಡ, ಸಂಧ್ಯಾ ಹೆಗಡೆ, ಹರ್ಷವರ್ಧನ ಪಿ.ಆರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT