ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ–ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌–ಲಾರಿ ಡಿಕ್ಕಿ: 24 ಪ್ರಯಾಣಿಕರ ಸಜೀವ ದಹನ

Last Updated 5 ಜೂನ್ 2017, 19:55 IST
ಅಕ್ಷರ ಗಾತ್ರ

ಬರೇಲಿ, ಉತ್ತರಪ್ರದೇಶ : ಬಸ್‌  ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 24 ಪ್ರಯಾಣಿಕರು ಸಜೀವ ದಹನವಾದ ದಾರುಣ ಘಟನೆ ದೆಹಲಿ–ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.

ಅಪಘಾತದಲ್ಲಿ 14 ಜನರು ಗಾಯಗೊಂಡಿದ್ದಾರೆ. ಉತ್ತರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ನಲ್ಲಿ ಒಟ್ಟು 41 ಪ್ರಯಾಣಿಕರಿದ್ದರು.
ದೆಹಲಿಯಿಂದ ಪೂರ್ವ ಉತ್ತರಪ್ರದೇಶದ ಗೊಂಡಾಕ್ಕೆ ತೆರಳುತ್ತಿದ್ದ ಬಸ್‌, ಬರೇಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ–24ರ ಬಾಡಾ ಬೈಪಾಸ್‌ ಸಮೀಪ ಅಪಘಾತಕ್ಕೀಡಾಯಿತು. ಇದರಿಂದಾಗಿ ಡೀಸೆಲ್‌ ಟ್ಯಾಂಕ್‌ ಸ್ಫೋಟಗೊಂಡು ಬೆಂಕಿಗೆ ಆಹುತಿಯಾಯಿತು. ಈ ಘಟನೆ ಸಂಭವಿಸಿದಾಗ ಬಹುತೇಕ ಪ್ರಯಾಣಿಕರು ನಿದ್ದೆ  ಮಾಡುತ್ತಿದ್ದರು.  ಬೆಂಕಿಯ ಜ್ವಾಲೆಗಳು  ವೇಗವಾಗಿ ಆವರಿಸಿಕೊಂಡಿದ್ದರಿಂದ ಬಸ್‌ನಿಂದ ಹೊರಗೆ ಬರಲು ಪ್ರಯಾಣಿಕರಿಗೆ ಸಮಯಾವಕಾಶವೇ ದೊರೆತಿಲ್ಲ. ಬಸ್‌ನ ಹಿಂದಿನ ಬಾಗಿಲು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದರಿಂದ ಪ್ರಯಾಣಿಕರು ಒಳಗೆ ಸಿಲುಕಿ ಹಾಕಿಕೊಂಡಿದ್ದಾರೆ ಎಂದು  ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ಬಸ್‌ ಚಾಲಕ ಕೂಡ ಮೃತಪಟ್ಟಿದ್ದು, ನಿರ್ವಾಹಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಸಂಪೂರ್ಣ ಜಖಂಗೊಂಡಿದ್ದು, ಅದರ ಚಾಲಕ ನಾಪತ್ತೆಯಾಗಿದ್ದಾರೆ ಎಂದು ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಜೋಗೇಂದ್ರ ಕುಮಾರ್‌ ತಿಳಿಸಿದ್ದಾರೆ.

‘ಮೃತದೇಹಗಳು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಕರಕಲಾಗಿದ್ದರಿಂದ ಲಿಂಗ ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾ ಆಸ್ಪತ್ರೆ ವೈದ್ಯ ಡಾ. ಶೈಲೇಶ್‌ ರಂಜನ್‌ ತಿಳಿಸಿದ್ದಾರೆ.

‘ಮೃತದೇಹಗಳ ಮರಣೋತ್ತರ ಪರೀಕ್ಷೆ ನಂತರವೇ ಮಹಿಳೆ ಮತ್ತು ಪುರುಷ ಪ್ರಯಾಣಿಕರ ಸಂಖ್ಯೆಯನ್ನು ನಿಖರವಾಗಿ ಹೇಳಲಾಗುವುದು’ ಎಂದು ಮುಖ್ಯ ವೈದ್ಯಾಧಿಕಾರಿ ವಿಜಯ್‌ ಯಾದವ್‌ ತಿಳಿಸಿದರು.

ಪರಿಹಾರ ಘೋಷಣೆ: ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ಮೃತರಿಗೆ ತಲಾ ₹ 2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹ 50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಮೃತರಿಗೆ ತಲಾ ₹2 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹ 50 ಸಾವಿರ ಮತ್ತು ಸಣ್ಣಪುಟ್ಟ ಗಾಯಗಳಾಗಿರುವವರಿಗೆ ತಲಾ ₹ 25 ಸಾವಿರ ಪರಿಹಾರ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT