ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನಮಂದೆಯಲ್ಲೇಕೆ ಅಷ್ಟೊಂದು ಕಲ್ಲುಗಳು?

Last Updated 5 ಜೂನ್ 2017, 19:30 IST
ಅಕ್ಷರ ಗಾತ್ರ

ಅರೆರೆ, ಇದೇನಿದು ಸ್ಮಶಾನದಲ್ಲಿ ಸಮಾಧಿಗಳ ಮುಂದೆ ನೆಡುವಂತೆ ಇಲ್ಲಿಯೂ ಕಲ್ಲುಗಳನ್ನು ನೆಡಲಾಗಿದೆಯಲ್ಲ? ಈ ಜಾಗ ಸ್ಮಶಾನವಲ್ಲ. ಅಕ್ಕ–ಪಕ್ಕ ಸಮಾಧಿಗಳು ಸಹ ಕಾಣುತ್ತಿಲ್ಲ’

–ಕೋಲಾರ ಜಿಲ್ಲೆಯ ಗಾಂಡ್ಲಹಳ್ಳಿ ಗ್ರಾಮದ ಅಲ್ಲಿನ ನೋಟವನ್ನು ಕಂಡು, ಸಂಶಯದಿಂದ ತಲೆ ಕೆರೆದುಕೊಂಡೆ. ‘ಏನಿದರ ಮಜಕೂರು’ ಎಂಬ ಪ್ರಶ್ನೆ ತಲೆಯಲ್ಲಿ ಗುಂಯ್‌ಗುಡುತ್ತಿತ್ತು. ದಾರಿಹೋಕರನ್ನು ನಿಲ್ಲಿಸಿ ಕೇಳಿದಾಗ, ಈ ಕಲ್ಲುಗಳ ರೋಚಕ ಕಥೆಯೊಂದು ತೆರೆದುಕೊಂಡಿತು. ಗ್ರಾಮಸ್ಥರ ಪ್ರಾಣಿ ಪ್ರೀತಿಯ ಅನನ್ಯ ಸಂಪ್ರದಾಯದ ಕುರಿತು ಮಾಹಿತಿಯೂ ಸಿಕ್ಕಿತು.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಸತ್ತವರ ಹೆಸರಲ್ಲಿ ಗೋಕಲ್ಲು ನೆಡುವ ಸಂಪ್ರದಾಯವಿದೆ. ಗಾಂಡ್ಲಹಳ್ಳಿ ಹಾಗೂ ಅದರ ಸಮೀಪದ ಬಂಗವಾದಿ ಗ್ರಾಮಗಳ ಜನರು, ಸತ್ತ ವ್ಯಕ್ತಿಯ ಹೆಸರಲ್ಲಿ ದನಮಂದೆಯಲ್ಲಿ ಕಲ್ಲೊಂದನ್ನು ನೆಡುತ್ತಾರೆ. ಹಾಗೆ ನೆಟ್ಟ ಕಲ್ಲನ್ನು ಸ್ಥಳೀಯವಾಗಿ ಗೋಕಲ್ಲು ಅಥವಾ ಗೋವಿನ ಕಲ್ಲು ಎನ್ನುತ್ತಾರೆ. ಈ ಸಂಪ್ರದಾಯದ ಹಿಂದೆ ಗ್ರಾಮದ ಗೋವುಗಳ ಕ್ಷೇಮ ಹಾಗೂ ಅವುಗಳ ಮೇಲೆ ಗ್ರಾಮಸ್ಥರಿಗೆ ಇರುವ ಪ್ರೀತಿ ಅಡಗಿದೆ.

ಗ್ರಾಮದ ಹೊರಭಾಗದ ಬಯಲಲ್ಲಿ ನೂರಾರು ವರ್ಷಗಳ ಹಿಂದೆ ನೆಡಲಾಗಿರುವ ಕಲ್ಲು ಚಪ್ಪಡಿಗಳು ಹಾಗೂ ಅವುಗಳ ಪಕ್ಕದಲ್ಲಿ ಬೆಳೆಯಲಾಗಿರುವ ನೆರಳು ಕೊಡುವ ಪುರಾತನ ಮರಗಳು ಕಾಣಸಿಗುತ್ತವೆ. ಗಾಂಡ್ಲಹಳ್ಳಿ ಗ್ರಾಮದ ಹಿರಿಯರು ದನಮಂದೆ ಪಕ್ಕದಲ್ಲಿಯೇ ಒಂದು ದೊಡ್ಡ ಗೋಕುಂಟೆಯನ್ನೂ ನಿರ್ಮಿಸಿರುವುದು ವಿಶೇಷ.

ರೈತರು ಹಾಲಿಗಾಗಿ, ಸಗಣಿಗಾಗಿ ಹಾಗೂ ಕೃಷಿ ಚಟುವಟಿಕೆಗಾಗಿ ಹಸು, ಎಮ್ಮೆಗಳನ್ನು ಸಾಕುವುದು ಸಾಮಾನ್ಯವಾಗಿತ್ತು. ಪ್ರತಿ ಮನೆಯಲ್ಲೂ ಅಗತ್ಯಕ್ಕೆ ತಕ್ಕಂತೆ ದನಕರುಗಳು ಇರುತ್ತಿದ್ದವು. ದನಗಾಹಿಗಳು ಈ ಜಾನುವಾರುಗಳನ್ನು ಮೇಯಲು ಕಾಡಿಗೆ ಕೊಂಡೊಯ್ಯುತ್ತಿದ್ದರು. ಕಾಡಿಗೆ ಹೋಗುವ ಮೊದಲು ಗ್ರಾಮದ ಎಲ್ಲ ಹಸು, ಕರು, ಎತ್ತು ಹಾಗೂ ಎಮ್ಮೆಗಳನ್ನು ಒಂದು ಬಯಲಲ್ಲಿ ಸೇರಿಸುತ್ತಿದ್ದರು. ಆ ಸ್ಥಳವೇ ‘ದನಮಂದೆ’.

ಕಾಡಿಗೆ ಮೇಯಲು ಹೋಗುವ ದನಗಳನ್ನು ದನಮಂದೆಯಲ್ಲಿ ಸ್ವಲ್ಪ ಕಾಲ ಉಳಿಸಿಕೊಂಡರೆ, ಎಲ್ಲಾ ದನಗಳೂ ಒಂದೇ ಕಡೆ ಸಗಣಿ ಹಾಕುತ್ತಿದ್ದವು. ಕೃಷಿಕ ಮಹಿಳೆಯರು ಆ ಸಗಣಿಯನ್ನು ಮಕ್ಕರಿಯಲ್ಲಿ ತುಂಬಿಕೊಂಡು ಹೋಗಿ ತಿಪ್ಪೆಗೆ ಸುರಿಯುತ್ತಿದ್ದರು. ಇದು ಎಲ್ಲಾ ಗ್ರಾಮಗಳಲ್ಲಿಯೂ ನಡೆಯುತ್ತಿತ್ತು.

ಆದರೆ ಗಾಂಡ್ಲಹಳ್ಳಿ ಹಾಗೂ ಬಂಗವಾದಿ ಗ್ರಾಮಗಳ ದನಗಳು ದನಮಂದೆಯಲ್ಲಿ ನೆಟ್ಟಿರುವ ಕಲ್ಲು ಚಪ್ಪಡಿಗಳ ನಡುವೆ ನುಗ್ಗಿ ಮೈಯನ್ನು ಉಜ್ಜುವುದರ ಮೂಲಕ ತುರಿಕೆ ನಿವಾರಣೆ ಮಾಡಿಕೊಳ್ಳುತ್ತಿದ್ದವು. ಕುರಿ, ಮೇಕೆಗಳೂ ಇದನ್ನೇ ಅನುಸರಿಸುತ್ತಿದ್ದವು.

ನೆಟ್ಟ ಕಲ್ಲುಗಳಿಗೆ ದನಗಳು ಮೈಯುಜ್ಜಿದರೆ ಸತ್ತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದು. ಆದ್ದರಿಂದಲೇ ಸತ್ತವರ ನೆನಪಿಗಾಗಿ ಕಲ್ಲು ಚಪ್ಪಡಿಯೊಂದನ್ನು ನೆಡುವುದು ರೂಢಿ.

ಮೈತುರಿಕೆ ನಿವಾರಿಸಿಕೊಳ್ಳುತ್ತಿರುವ ಎಮ್ಮೆ

ದನಮಂದೆಯಲ್ಲಿ ಕಲ್ಲನ್ನು ನೆಡಲು ಜಾತಿ, ಮತ ಅಥವಾ ಲಿಂಗಭೇದವಿಲ್ಲ.  ಗ್ರಾಮದಲ್ಲಿ ಯಾರೇ ಸತ್ತರೂ, ಶವವನ್ನು ಗ್ರಾಮದ ಹೊರ ವಲಯದಲ್ಲಿನ ಸ್ಮಶಾನದಲ್ಲಿ ಹೂಳುತ್ತಾರೆ. ಶವ ಸಂಸ್ಕಾರ ಮುಗಿದ ಒಂದೆರಡು ದಿನಗಳಲ್ಲಿ ವಾಡಿಕೆಯಂತೆ ದನಮಂದೆಯಲ್ಲಿ ಕಲ್ಲನ್ನು ನೆಟ್ಟು ಪೂಜೆ ಸಲ್ಲಿಸುತ್ತಾರೆ. ಇದಾಗದ ಹೊರತು ಶವ ಸಂಸ್ಕಾರ ಪೂರ್ಣಗೊಳ್ಳುವುದಿಲ್ಲ ಎಂಬ ನಂಬಿಕೆ ಅವರದಾಗಿದೆ.

ಗ್ರಾಮದ ಹಿರಿಯರು ಹೇಳುವಂತೆ ಕಾಡಿಗೆ ಮೇಯಲು ಹೋಗುವ ದನಕರುಗಳು ಮೈ ತುರಿಕೆಯನ್ನು ನಿವಾರಿಸಿಕೊಳ್ಳಲು ಮುಳ್ಳಿನ ಪೊದೆಗಳಿಗೆ ಮೈಯುಜ್ಜಿ ಗಾಯ ಮಾಡಿಕೊಳ್ಳುತ್ತವೆ. ಕಳ್ಳಿಯಂಥ ಹಾಲು ಗಿಡಗಳಿಗೆ ಮೈಯುಜ್ಜಿ ಹುಣ್ಣು ಮಾಡಿಕೊಳ್ಳುತ್ತವೆ. ಇದರಿಂದ ದನಗಳು ಅನಾರೋಗ್ಯಕ್ಕೆ ಈಡಾಗುತ್ತವೆ. ಇದನ್ನು ತಪ್ಪಿಸಲು ದನಮಂದೆಯಲ್ಲಿ ಭುಜಮಟ್ಟದ ಕಲ್ಲುಗಳನ್ನು ನೆಡುತ್ತಾರೆ.

ಗೋವುಗಳು ಬೆಳಿಗ್ಗೆ ಕಾಡಿಗೆ ಹೋಗುವಾಗ, ಸಂಜೆ ಕಾಡಿನಿಂದ ಹಿಂದಿರುಗಿದಾಗ ನೆಟ್ಟ ಕಲ್ಲುಗಳಿಗೆ  ಮೈಯುಜ್ಜುವುದರಿಂದ ಗಾಯ ಮಾಡಿಕೊಳ್ಳುವುದು ತಪ್ಪುತ್ತದೆ. ಹೀಗಾಗಿಯೇ ಹಿರಿಯರು ಇಂಥ ಒಂದು ಸಂಪ್ರದಾಯವನ್ನು ಆರಂಭಿಸಿದ್ದಾರೆ.

ಸ್ಮಶಾನದಲ್ಲಿ ಗುಳಿ ಹೊಡೆದು ಶವ ಹೂತ ಮೇಲೆ ಮಣ್ಣನ್ನು ಮೊಳಕಾಲು ಎತ್ತರ ಹಾಕಿಬಿಡುತ್ತಾರೆ. ಗುಳಿಯನ್ನು ಚಪ್ಪಡಿ ಅಥವಾ ಸಿಮೆಂಟ್‌ನಿಂದ ಮುಚ್ಚಿ ಸಮಾಧಿ ನಿರ್ಮಿಸುವ ಕಾರ್ಯ ಮಾಡುತ್ತಿರಲಿಲ್ಲ. ಸಮಾಧಿಯ ಮೇಲೆ ಹುಲ್ಲು ಬೆಳೆದು, ಅದು ದನಗಳಿಗೆ ಆಹಾರವಾದಾಗ ಮಾತ್ರ ಸತ್ತ ವ್ಯಕ್ತಿಗೆ ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆ ಇದಕ್ಕೆ ಕಾರಣ. ಬದಲಾದ ಪರಿಸ್ಥಿತಿಯಲ್ಲಿ ವ್ಯಕ್ತಿ ಪ್ರತಿಷ್ಠೆ ಹೆಚ್ಚಿ, ಈ ನಂಬಿಕೆಗೆ ತಿಲಾಂಜಲಿ ನೀಡಲಾಗಿದೆ.

ಈ ಗ್ರಾಮಗಳ ದನಮಂದೆಗಳಲ್ಲಿ ಮೂರು ಬಗೆಯ ಕಲ್ಲುಗಳನ್ನು ನೋಡಬಹುದಾಗಿದೆ. ಹಲವು ಶತಮಾನಗಳಷ್ಟು ಹಿಂದೆ ಒರಟು ಕಲ್ಲುಗಳನ್ನು ನೆಡಲಾಗಿದೆ. ಹಳ್ಳಿಗೆ ಅಕ್ಷರ ಬಂದ ಕಾಲಘಟ್ಟದಿಂದ ಸ್ವಲ್ಪ ನಯವಾದ ಕಲ್ಲು ಚಪ್ಪಡಿಗಳನ್ನು ನೆಟ್ಟು, ಅವುಗಳ ಮೇಲೆ ಸತ್ತವರ ಹೆಸರು ಹಾಗೂ ಸತ್ತ ದಿನಾಂಕ ಕೆತ್ತಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೆಲವರು, ಸತ್ತವರ ಹೆಸರಲ್ಲಿ ಬೆಲೆ ಬಾಳುವ ಗ್ರಾನೈಟ್‌ ಚಪ್ಪಡಿಗಳನ್ನು ನೆಟ್ಟಿದ್ದಾರೆ.

ಅವುಗಳ ಮೇಲೆ ವ್ಯಕ್ತಿಯ ಹೆಸರು, ಹುಟ್ಟಿದ ಮತ್ತು ಮರಣ ಹೊಂದಿದ ದಿನಾಂಕವನ್ನು ಸುಂದರವಾಗಿ ಕೆತ್ತಿಸಿದ್ದಾರೆ. ಕೆಲವು ಗ್ರಾನೈಟ್‌ ಗೋಕಲ್ಲುಗಳ ಮೇಲೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಸಾಲುಗಳನ್ನೂ ಕೆತ್ತಿಸಲಾಗಿದೆ. ವಿಷ್ಣುವಿನ ಶಂಖ, ಚಕ್ರ, ಗದೆ ಗೋಕಲ್ಲನ್ನು ಅಲಂಕರಿಸಿವೆ.

ಸಾಹಿತ್ಯದ ಸಾಲುಗಳು ಮರಣ ಹೊಂದಿದ ವ್ಯಕ್ತಿಯ ಸ್ಮರಣಾರ್ಥ ನೆಡಲಾದ ಕಲ್ಲು ಚಪ್ಪಡಿಯ ಬೆನ್ನೇರುವುದರೊಂದಿಗೆ, ಈ ಸಂಪ್ರದಾಯ ಹೊಸ ಆಯಾಮ ಪಡೆದುಕೊಂಡಿದೆ.

ಈ ಗ್ರಾಮಗಳ ಎತ್ತುಗಳಿಗೆ ಪ್ರತಿ ಸೋಮವಾರ ರಜಾ ದಿನ. ಎಷ್ಟೇ ಕೆಲಸವಿದ್ದರೂ ಆ ದಿನ ಎತ್ತುಗಳನ್ನು ಕೆಲಸಕ್ಕೆ ಹಚ್ಚುವುದಿಲ್ಲ. ಹೊಲ ಬಿತ್ತಿದ ದಿನ ರಾಗಿ ಹಿಟ್ಟಿನಿಂದ ಕಡಬು (ಹೊಲ ಕಡಬು) ಮಾಡಿ, ಹುಚ್ಚೆಳ್ಳಿನ ಪುಡಿ ಹಾಗೂ ಬೆಲ್ಲದ ಪಾನಕದೊಂದಿಗೆ ದುಡಿಯುವ ಎತ್ತುಗಳಿಗೆ ಇಡುವುದು ರೂಢಿ. ಇನ್ನು ಸಂಕ್ರಾಂತಿ ಹಬ್ಬವನ್ನು ‘ಎತ್ತುಗಳ ಹಬ್ಬ’ ಎಂದೇ ಕರೆಯುತ್ತಾರೆ. ಹಬ್ಬದ ದಿನವೂ ಅವುಗಳಿಗೆ ಕೆಲಸದಿಂದ ಮುಕ್ತಿ ದೊರೆಯುತ್ತದೆ. ಬಿಸಿನೀರಿನ ಸ್ನಾನದ ಭಾಗ್ಯವೂ ಸಿಗುತ್ತದೆ. ಅಲಂಕಾರ, ಮೆರವಣಿಗೆಯ ಸಂಭ್ರಮ ಸಹ ಇರುತ್ತದೆ.‌

ಎತ್ತುಗಳಿಂದ ಹೆಚ್ಚು ಕೆಲಸ ತೆಗೆಯುವ ಸ್ವಾರ್ಥದಿಂದ ರೈತರು ಚಾಟಿಯಿಂದ ಹೊಡೆಯುವುದು, ಮುಳ್ಳುಕೋಲಿನಿಂದ ಚುಚ್ಚುವುದು ಸಾಮಾನ್ಯ. ಆದರೆ ಗೋಕಲ್ಲು ಗ್ರಾಮಗಳಲ್ಲಿ ದುಡಿಯುವ ಎತ್ತುಗಳ ಮೇಲಿನ ದೌರ್ಜನ್ಯ ತಡೆಯುವ ಉದ್ದೇಶದಿಂದ ಮುಳ್ಳುಕೋಲು ಬಳಸುವುದನ್ನು ನಿಷೇಧಿಸಲಾಗಿದೆ. ಹಾಗೆಂದು ಯಾವುದೇ ಕಾಯ್ದೆ ಇಲ್ಲದಿದ್ದರೂ, ಅದೊಂದು ನೈತಿಕ ನಿಯಮವಾಗಿ ಚಾಲ್ತಿಯಲ್ಲಿದೆ. ‘ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ’ ಎಂಬ ಬಸವಣ್ಣನವರ ವಚನದ ಸಾಲಿನ ಅರ್ಥ ಇದೇ ತಾನೆ?

ನಿರ್ವಹಣೆ ಕೊರತೆಯಿಂದಾಗಿ ಅತಿ ಪುರಾತನ ಗೋಕಲ್ಲುಗಳು ಮಣ್ಣಿನ ಸವೆತಕ್ಕೆ ಸಿಕ್ಕಿ ನೆಲಕಚ್ಚಿವೆ. ಕೆಲವು ಕಲ್ಲುಗಳ ಮೇಲೆ ಬೆಳೆದಿರುವ ಪೊದೆಗಳ ಕೆಳಗೆ ಮರೆಯಾಗಿವೆ. ಇನ್ನು ಕೆಲವು ಒತ್ತುವರಿಗೆ ಬಲಿಯಾಗಿವೆ. ಇಷ್ಟರ ನಡುವೆಯೂ ಹೊಸ ಕಲ್ಲುಗಳು ತಲೆಯೆತ್ತುತ್ತಿವೆ.

ಮಳೆ ಕೊರತೆ, ಕೃಷಿಯಲ್ಲಿ ಟ್ರ್ಯಾಕ್ಟರ್‌ಗಳ ಪ್ರವೇಶದಿಂದ ಎಲ್ಲ ಕಡೆಗಳಂತೆ ಈ ಗ್ರಾಮಗಳಲ್ಲಿಯೂ ದನಕರುಗಳ ಸಂಖ್ಯೆ ಕುಸಿದಿದೆ. ದನಗಾಹಿಗಳು ವಿರಳವಾಗುತ್ತಿದ್ದಾರೆ. ಆದರೂ ಗೋಕಲ್ಲು ನೆಡುವ ಸಂಪ್ರದಾಯ ಮಾತ್ರ ನಿಂತಿಲ್ಲ. ಗೋವಿನ ಕ್ಷೇಮ ಕೋರುವ ಸಾಂಪ್ರದಾಯಿಕ ಆಶಯ ಜೀವಂತವಾಗಿ ಉಳಿದಿದೆ.
ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT