ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘದಿಂದ ಅಣಕು ಶವದ ಮೆರವಣಿಗೆ

Last Updated 10 ಜೂನ್ 2017, 10:16 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ರೈತರು ಅಧಿಕಾರಿಗಳನ್ನು ಬೆದರಿಸಿ ಗೋಶಾಲೆಯಿಂದ ಮೇವು ಹೊತ್ತೊಯ್ದಿದ್ದಾರೆ ಎಂದು ಆರೋಪಿಸಿದ್ದ ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಸದಸ್ಯರ ಅಣಕು ಶವದ ಮೆರವಣಿಗೆ ನಡೆಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ರೈತ ಸಂಘದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಬ್ಬಹಳ್ಳಿ ಕ್ಷೇತ್ರದ ಸದಸ್ಯ ಕೆ.ಎಸ್. ಮಹೇಶ್ ಹಾಗೂ ಬರಗಿ ಕ್ಷೇತ್ರದ ಸದಸ್ಯ ಪಿ.ಚನ್ನಪ್ಪ ಅವರ ಅಣಕು ಶವಗಳನ್ನು ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಎದುರು ಇಟ್ಟು ರಸ್ತೆ ತಡೆ ನಡೆಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್ ಮಾತನಾಡಿ, ಕಳೆದ ತಿಂಗಳು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಬ್ಬರು ಜಿ.ಪಂ ಸದಸ್ಯರು ಮಾತನಾಡುತ್ತಾ ರೈತರು ಅಧಿಕಾರಿಗಳನ್ನು ಬೆದರಿಸಿ ಗೋಶಾಲೆಯಿಂದ ಮೇವು ಕದ್ದೊಯ್ಯುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಸದಸ್ಯರು ತಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಮರೆತು ರೈತರ ಹಿತ ಕಾಪಾಡದ ಪರಿಣಾಮವಾಗಿ ಗೋಶಾಲೆಯಲ್ಲಿ ಸಮರ್ಪಕ ಮೇವು ವಿತರಣೆ ಮಾಡುತ್ತಿರಲಿಲ್ಲ.
ಮಧ್ಯಾಹ್ನವಾದರೂ ಮೇವು ವಿತರಿಸದಿರುವುದನ್ನು ವಿರೋಧಿಸಿದ ಜಾನುವಾರು ಮಾಲೀಕರು ಮೇವನ್ನು ತಮ್ಮ ರಾಸುಗಳಿಗೆ ಹಾಕಿದ್ದರು.

ಇದನ್ನೇ ಮಹಾಪರಾಧವೆಂಬಂತೆ ಬಿಂಬಿಸಲು ಇಬ್ಬರು ಸದಸ್ಯರು ಪ್ರಗತಿಪರಿಶೀಲನಾ ಸಭೆಯಲ್ಲಿ ರೈತ ಮುಖಂಡರ ವಿರುದ್ಧ ಆರೋಪ ಮಾಡಿದ್ದಾರೆ. ಆದ್ದರಿಂದ ಇವರ ಅಣಕುಶವಯಾತ್ರೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವರು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದರು.

ಮಧ್ಯಪ್ರದೇಶದಲ್ಲಿ ರೈತರ ಮೇಲೆ ನಡೆದ ಗೋಲಿಬಾರ್‌ ಘಟನೆಯನ್ನೂ ಸಂಘ ಖಂಡಿಸಿತು. ತೀವ್ರ ಬರಗಾಲದಿಂದ ಕಂಗೆಟ್ಟಿರುವ ರೈತರ ಸಾಲಮನ್ನಾ ಮಾಡಲು ಸರ್ಕಾರಗಳು ಹಿಂದೇಟು ಹಾಕುತ್ತಿದ್ದು ಈ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗುಂಡುಹಾರಿಸುವ ಮೂಲಕ ದೌರ್ಜನ್ಯವೆಸಗುತ್ತಿವೆ.

ಇದನ್ನು ಖಂಡಿಸಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಬೇಕಾಗಿದೆ ಎಂದರು. ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಗುರು, ಮಹೇಶ್, ಹಕ್ಕಲಪುರ ಮಹದೇವಪ್ಪ, ಪಾಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT