ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಳಾಗಿಸುವ ಹೊಳೆವ ನೆರಳು

Last Updated 11 ಜೂನ್ 2017, 19:30 IST
ಅಕ್ಷರ ಗಾತ್ರ

ಒಣ ನೆಲದ ಮೇಲೆ ಮಳೆ ಬಿದ್ದೊಡನೆ ಮೇಲೇಳುವ ಭಾರೀ ಗಾತ್ರದ ಕೊಡೆಗಳನ್ನು ಹಿಡಿದು ನಿಂತಿರುವ ಅಣಬೆಗಳನ್ನು ನೋಡಿದರೆ ನಿಸರ್ಗದ ವಿಸ್ಮಯಗಳ ಕುರಿತು ಏನೂ ತಿಳಿಯದವರಿಗೆ ಒಂದು ಕ್ಷಣ ವಿಸ್ಮಯವಾಗಿಯೇ ಆಗುತ್ತದೆ. ಅದನ್ನು ಮುಟ್ಟಲು ಕೂಡ ಎಷ್ಟೋ ಮಂದಿಗೆ ಭಯವಾಗುತ್ತದೆ. ಈ ಅಣಬೆಗಳ ಅಸ್ತಿತ್ವ ಕೆಲವೇ ದಿನಗಳು ಅಥವಾ ಗಂಟೆಗಳು.

ಇವತ್ತು ಹಣದ ಮಳೆಯಲ್ಲಿ ಮಿಂದು ಥಟ್ಟನೆದ್ದುನಿಲ್ಲುವ ಚಲನಚಿತ್ರಗಳ ಅಸ್ತಿತ್ವ ಕೂಡ ಅಣಬೆಗಳಂತೆ ಹೃಸ್ವ ಎಂಬುದು ಲೋಕಕ್ಕೇ ಗೊತ್ತಿದೆ. ಹಾಗಿದ್ದರೂ ಚಲನಚಿತ್ರ ಎಂಬ ಕೃತಕ ಸಾಧನದ ಬೆಳೆಗೆ ನೂರಾರು ಕೋಟಿ ಹಣ ಸುರಿದು, ಇದು ಪ್ರಪಂಚದಲ್ಲಿ ಎಲ್ಲರಿಗೂ ಅಗತ್ಯವಾಗಿ ಬೇಕಾದ್ದು, ಅತ್ಯಂತ ಅದ್ಭುತವಾದದ್ದು, ಅತ್ಯಂತ ಆಕರ್ಷಕವಾದದ್ದು  ಎಂಬ ಭ್ರಮೆ ಹುಟ್ಟಿಸಿ, ದೇವರುಗಳೇ ಭೂಮಿಗಿಳಿದು ಇದನ್ನು ಸೃಷ್ಟಿಸಿದರೆಂಬಂತೆ  ಹಾಡಿ ಹೊಗಳುತ್ತಿದ್ದೇವೆ.  ದುರ್ಬಲ ಮನಸ್ಸುಗಳನ್ನು ಕೆಲದಿನಗಳ ಕಾಲ ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳುವ ಚಲನಚಿತ್ರಗಳಿಂದ ಸಮಾಜಕ್ಕೆ ಏನು ಸಿಗುತ್ತದೆ ಎಂಬ ಬಗ್ಗೆ ಯೋಚಿಸಬಲ್ಲವರು ಯೋಚಿಸಬೇಕಾದದ್ದು ಅಗತ್ಯವಲ್ಲವೇ?

ಪುಸ್ತಕಗಳ ಕುರಿತು ಅರ್ಥಾತ್ ಸಾಹಿತ್ಯ ಕೃತಿಗಳ ಕುರಿತು ವಿಮರ್ಶೆ, ವಿಶ್ಲೇಷಣೆ ನಡೆಯುವಂತೆಯೇ ಪುಸ್ತಕ ಓದುಗರಿಗಿಂತ ದೊಡ್ಡ ಸಂಖ್ಯೆಯಲ್ಲಿ ವೀಕ್ಷಕರನ್ನು ಹೊಂದಿರುವ ಚಲನಚಿತ್ರಗಳ ಕುರಿತು ಕೂಡ ಗಂಭೀರ ವಿಮರ್ಶೆ, ವಿಶ್ಲೇಷಣೆ ನಡೆಯಬೇಕಾದ್ದು ಅಗತ್ಯವಲ್ಲವೇ?

ಚಲನಚಿತ್ರಗಳನ್ನು ವೀಕ್ಷಿಸುವ ಸಮುದಾಯ  ಸಕಾರಾತ್ಮಕವಾದುದನ್ನು ಏನು ಪಡೆಯುತ್ತದೆ? ವೀಕ್ಷಕರಿಗೆ ಲಭಿಸುವ ಜ್ಞಾನ ಏನು? ಸಂತೋಷ ಯಾವ ಬಗೆಯದು? ಚಲನಚಿತ್ರದ ಹೀರೊ ಆನೆಯಂತೆ, ಕುದುರೆಯಂತೆ ಆಕಾಶಕ್ಕೆ ನೆಗೆಯುವ ದೃಶ್ಯಗಳನ್ನು ನೋಡಿ ವೀಕ್ಷಕರು ನಿಜವಾಗಿಯೂ ಮುದ ಪಡೆಯುತ್ತಾರೆಯೇ?

ನಿಮಿಷ ನಿಮಿಷವೂ ಮೂಡಿಬರುವ ಕಡಿಯುವ ಕೊಚ್ಚುವ,  ನೆತ್ತರು ಹರಿಸುವ, ಗುಂಡು ಹಾರಿಸಿ ಸುಟ್ಟು ಹಾಕುವ ಕೃತಕ ಆ್ಯಕ್ಷನ್ ದೃಶ್ಯಗಳು ಮುದ ನೀಡುತ್ತವೆಯೇ? ತಮ್ಮಂತಿರುವ ಮನುಷ್ಯರ ಮೇಲೆ ನಡೆಯುವ ದೌರ್ಜನ್ಯದ ದೃಶ್ಯಗಳನ್ನು ನೋಡುವಾಗ ನೋಡುಗರಲ್ಲಿ ಉಂಟಾಗುವ ಮಾನಸಿಕ, ಭಾವನಾತ್ಮಕ ಅನುಭವ ಏನು? ಮರಳಿ ಮರಳಿ ನೋಡುವುದರಿಂದ ಮನಸ್ಸಿನಲ್ಲಿ ತಾತ್ಕಾಲಿಕವಾಗಿಯಾದರೂ ನೆಲೆಸುವ ಮನೋವಿಕಾರ, ಮುಖ್ಯವಾಗಿ ಎಳೆಯ ಮನಸ್ಸಿನ ಮೇಲೆ ಕೆಟ್ಟ ನೆನಪುಗಳನ್ನು ಛಾಪಿಸುವುದಿಲ್ಲವೇ?  

ಎಲ್ಲಾ ಆ್ಯಕ್ಷನ್ ಸಿನಿಮಾಗಳೂ ಒಂದೇ ಸಿನಿಮಾ ಎನ್ನುವುದನ್ನು ವೀಕ್ಷಕರಿನ್ನೂ ಅರ್ಥ ಮಾಡಿಕೊಂಡಿಲ್ಲವೆನಿಸುತ್ತದೆ. ಅದನ್ನು ಮತ್ತೆ ಮತ್ತೆ ವೀಕ್ಷಿಸುವುದೆಂದರೆ  ಅಪೀಮು, ಗಾಂಜಾ, ಎಲ್‌ಎಸ್‌ಡಿಯನ್ನು ತಿನ್ನುವಂತೆಯೇ ಅಲ್ಲವೇ?‌

ಕೆಟ್ಟದಲ್ಲದ ಚಲನಚಿತ್ರಗಳು ಕೂಡ ಇವೆ ಎಂದು ಒಪ್ಪಿಕೊಳ್ಳೋಣ. ಆದರೆ ಇವತ್ತು ಮನೋರಂಜನೆಯ ಮುದ್ರೆ  ಒತ್ತಿಕೊಂಡು ನಿರ್ಮಾಣವಾಗುವ ಹೆಚ್ಚಿನ ಸಿನಿಮಾ ವೀಕ್ಷಕನ ಮನಸ್ಸನ್ನು ಜಡ್ಡುಗಟ್ಟಿಸುವ ಕೆಲಸವನ್ನಷ್ಟೇ ಮಾಡುತ್ತದೆ. ಅದರಿಂದ ವೀಕ್ಷಕನಿಗೆ ಸಕಾರಾತ್ಮಕವಾದುದು ಏನೂ ಸಿಗುವುದಿಲ್ಲ. ಸಿಗುವುದು ನಿರ್ಮಾಪಕನಿಗೆ ನೂರಾರು ಕೋಟಿಗಳು; ನೋಡುಗನಿಗೆ ದುರ್ನಡತೆ, ದುಷ್ಕೃತ್ಯದ ನೂರಾರು ಮಾದರಿಗಳು!

ಒಂದು ಸಿನಿಮಾ ತೋರಿಸಿದ ತರಹೇವಾರು ಕ್ರೌರ್ಯದ ಘೋರ ದೃಶ್ಯಗಳನ್ನು ನೋಡಿ ಥಿಯೇಟರಿನಿಂದ ಹೊರಬರುವ ನೋಡುಗನ ಮನಸ್ಸು ಹೇಗಿರುತ್ತದೆ?

ಕೋಟಿಗಟ್ಟಲೆ ಹಣ ಹಾಕಿ ಇಂಥ ಸಿನಿಮಾಗಳನ್ನು ನಿರ್ಮಿಸುವ  ನಿರ್ಮಾಪಕರ, ನಿರ್ದೇಶಕರ ಉದ್ದೇಶವಾದರೂ ಏನು? ಅವರ ಮನಸ್ಸಿನಲ್ಲಿ ಸಮಾಜದ ಕುರಿತಾಗಿ ಏನು ಭಾವನೆ ಇದೆ? ಸಮಾಜಕ್ಕೆ ಇವರು ಏನು ಒಳ್ಳೆಯ ಮೌಲ್ಯಗಳನ್ನು ಕೊಡುತ್ತಿದ್ದಾರೆ? ಜನಸಮಷ್ಟಿಗೆ ಏನು ಆದರ್ಶ, ಏನು ಒಳ್ಳೆಯ ಚಿಂತನೆ ಇಂಥ ಚಿತ್ರಗಳಿಂದ ಸಿಗುತ್ತದೆ?

ಇಂಥ ಚಿತ್ರಗಳನ್ನು ನೋಡುವ ವೀಕ್ಷಕರ ಮನಸ್ಸಿನಲ್ಲಿ ಏನು ವ್ಯಕ್ತಿತ್ವ ವಿಕಸನ ಸಂಭವಿಸುತ್ತದೆ? ಸಿನಿಮಾ ಹೀಗೆಯೇ ಇರಬೇಕೇ? ಸಿನಿಮಾ ಬೇರೆಯಾಗಲು ಸಾಧ್ಯವಿಲ್ಲವೇ? ಏನು ಮನೋರಂಜನೆ ಇದು? ಜನರನ್ನು ಗಂಭೀರವಾಗಿ, ಸಕಾರಾತ್ಮಕವಾಗಿ, ಮೌಲ್ಯಯುತವಾದ ಚಿಂತನೆಗೆ ಹಚ್ಚುವ ವಸ್ತು ವಿಚಾರಗಳು ಸಿಗುವಂತೆ ಸಿನಿಮಾ ತಯಾರಕರು ಯಾಕೆ ಯೋಚಿಸುತ್ತಿಲ್ಲ? ಕ್ರೌರ್ಯವನ್ನು ಆಕರ್ಷಕವಾಗಿಸಿ ಕೇವಲ ಕಣ್ಣುಗಳಿಗೆ ರುಚಿಯಾಗಿಸಿ ಮನಸ್ಸನ್ನು ಮಂಕಾಗಿಸುವ ಮನೋರಂಜನೆಯನ್ನು ನೀಡುವ ಸಿನಿಮಾವನ್ನು ನೋಡುತ್ತಾ ನೋಡುತ್ತಾ ಮನುಷ್ಯ ಚಿಂತನೆ ಮಾಡುವ ಗುಣವನ್ನು ಕಳೆದುಕೊಳ್ಳಬಹುದು.

ಸಿನಿಮಾ ಮಾಧ್ಯಮ ಮಹಾ ಯಾವುದೋ ಎಂಬಂತೆ ತೋರಿಸುವುದು, ಅದರ ಕುರಿತು ಸತತವಾಗಿ ಜನಮನವನ್ನು ತಟ್ಟುವ ಜಾಹೀರಾತು-ಮಾತಿನಿಂದ ಸಮಾಜದಲ್ಲಿ ಏನು ಮನೋವಿಕಸನ ಉಂಟಾಗುತ್ತದೆ? ಚರಿತ್ರೆ– ಪುರಾಣಗಳನ್ನು ಹಿಂಜಿ, ಮೂಲದಲ್ಲಿ ಇಲ್ಲದ್ದನ್ನು ತುಂಬಿ  ಎಳೆದೆಳೆದು ರಂಗು ರಂಗಾಗಿಸಿ ತೋರಿಸುವುದರಿಂದ ಅದರ ಒಳ್ಳೆಯ ಗುಣ ನಷ್ಟವಾಗುತ್ತದೆ. ನಮ್ಮ ಮಕ್ಕಳಿಗೆ ಪುರಾಣ ಮತ್ತು ಚರಿತ್ರೆ ಅವು ಇರುವಂತೆಯೇ ಸಿಗಬೇಕು. ಅದರಲ್ಲಿನ ಮೌಲ್ಯಗಳನ್ನು ಆರ್ಜಿಸಬೇಕು.

ಮನೋರಂಜನೆಯಲ್ಲಿ ಆನಂದ ಸಿಗಬೇಕು. ದಾರುಣ ದೃಶ್ಯ ವೀಕ್ಷಣೆಯಲ್ಲಿ ಆನಂದ ಸಿಗಲು ಸಾಧ್ಯವೇ? ಮನಸ್ಸು ಪ್ರಫುಲ್ಲವಾಗಲು ಸಾಧ್ಯವೇ? ಕ್ರೌರ್ಯ ಮತ್ತು ವೇದನೆಯ ದೃಶ್ಯ ವೀಕ್ಷಣೆಯು ಕುಡಿತದಂತೆ, ಮಾದಕ ದ್ರವ್ಯ ಸೇವನೆಯಂತೆ ಒಂದು ವ್ಯಸನವಾಗಲು ಮಾತ್ರ ಸಾಧ್ಯ. ಟೆಲಿವಿಷನ್ ಸೀರಿಯಲ್‌ಗಳಲ್ಲಿ ವೇದನೆ, ಹತಾಶೆ,  ಸೇಡು, ದುಃಖ, ಅಸಹನೆ, ಹಗೆ, ದ್ವೇಷ ಮುಂತಾದವುಗಳ ಪ್ರದರ್ಶನ ನಿರಂತರವಾಗಿರುತ್ತದೆ. ಕೊಲ್ಲುವುದು ಮತ್ತು ಕೊಲ್ಲುವ ಮಾತು ಇದ್ದೇ ಇರುತ್ತದೆ. ಹಿಂದೆ ಮನುಷ್ಯ ಮೃಗಪಕ್ಷಿಗಳನ್ನು ಕೊಲ್ಲುತ್ತಿದ್ದ.

ಅದು ಕೊಲೆಯಲ್ಲ; ಅದು ಅವನ ಆಹಾರಕ್ಕಾಗಿಯಾಗಿತ್ತು. ಈಗ ಸುಮ್ಮ ಸುಮ್ಮನೆ ಮನುಷ್ಯರು ಮನುಷ್ಯರನ್ನು ಕೊಲ್ಲುತ್ತಿದ್ದಾರೆ. ಜ್ಞಾನ ಶಕ್ತಿಗಿಂತ, ಶರೀರ ಶಕ್ತಿ ಶ್ರೇಷ್ಠ ಎಂದು ಇವತ್ತಿನ ಮಹಾ ಸಿನಿಮಾಗಳು ಸಾರುತ್ತವೆ. ಇತ್ತೀಚೆಗೆ, ಪ್ರಜ್ಞಾವಂತರು, ಇಷ್ಟು ಸಿನಿಮಾ, ಇಷ್ಟು ಸೀರಿಯಲ್‌ಗಳ ಅಗತ್ಯ  ನಮ್ಮ ಸಮಾಜಕ್ಕೆ ಇದೆಯೇ ಎಂಬ ಚಿಂತನೆಯನ್ನು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆಯೆನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT