ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು–ಗೆಲುವನ್ನು ಮೀರಿದ ಬದುಕೆಂಬ ಕನಸು

Last Updated 13 ಜೂನ್ 2017, 19:30 IST
ಅಕ್ಷರ ಗಾತ್ರ

-ಭರತ್‌ ಮತ್ತು ಶಾಲನ್‌ ಸವೂರ್‌

**

ಅದೊಂದು ಸಂಜೆ. ಜೋರು ಮಳೆ ಸುರಿಯುತ್ತಿತ್ತು. ಆ ಮಳೆಯಲ್ಲಿಯೇ ಗುರುಕುಲದೊಳಕ್ಕೆ ಒಬ್ಬ ಹುಡುಗ ಪ್ರವೇಶಿಸಿದ. ಹಸಿವೆಯಿಂದ ಕಂಗೆಟ್ಟಿರುವುದು ಅವನ ಮುಖ ನೋಡಿದರೆ ತಿಳಿಯುತ್ತಿತ್ತು. ನೇರವಾಗಿ ಹಿರಿಯ ಗುರುಗಳಿದ್ದಲ್ಲಿಗೆ ಬಂದ ಅವನು ‘ತಿನ್ನಲು ಏನಾದರೂ ಸಿಗಬಹುದೇ?’ ಎಂದು ಕೇಳಿದ.

ಗುರುಗಳು ಅವನನ್ನು ಕರೆದು ಕೂರಿಸಿ, ದೊಡ್ಡ ಬಟ್ಟಲ ತುಂಬ ಗಂಜಿ  ಮತ್ತು ಸಣ್ಣ ತುಣುಕು ಬ್ರೆಡ್ಡನ್ನು ಕೊಟ್ಟರು. ಲಗುಬಗೆಯಿಂದ ತಿಂದು ಮುಗಿಸಿ ತನ್ನನ್ನೇ ಕರುಣೆಯಿಂದ ನೋಡುತ್ತಿದ್ದ ಗುರುಗಳತ್ತ ತಿರುಗಿ, ‘ನಾನು ಶಾಲೆಗೆ ಹೋದವನಲ್ಲ, ಓದಲು ಬರೆಯಲು ಬರುವುದಿಲ್ಲ. ಆದರೆ ಈ ಗುರುಕುಲವನ್ನು ಗುಡಿಸಿ ಸ್ವಚ್ಛವಾಗಿಡುವ ಕೆಲಸ ಮಾಡಬಲ್ಲೆ. ಹಾಗೆಯೇ ಪಾತ್ರೆಗಳನ್ನೂ ತೊಳೆಯಬಲ್ಲೆ. ನನಗೆ ಇಲ್ಲಿ ಕೆಲಸ ಕೊಡುತ್ತೀರಾ?’ ಎಂದು ದೈನ್ಯತೆಯಿಂದ ಕೇಳಿಕೊಂಡ.
‘ಒಳ್ಳೆಯದು’ - ಗುರುಗಳು ಅದೇ ಕರುಣಾರ್ದ್ರದೃಷ್ಟಿಯಿಂದ ನೋಡುತ್ತ ಕೇಳಿದರು: ‘ನಿನಗೆ ಇನ್ನೇನೂ ಮಾಡಲು ಬರುವುದಿಲ್ಲವೇ?’

‘ಚೆಸ್‌ ಆಡಲು ಬರುತ್ತದೆ. ಅದು ನನ್ನ ತಾತನಿಂದ ಕಲಿತಿದ್ದು’ - ಥಟ್ಟನೆ ನೆನಪಿಸಿಕೊಂಡು ಹೇಳಿದ ಹುಡುಗ ಮತ್ತೆ ಸಹಜಧ್ವನಿಯಲ್ಲಿ ‘ಕಾಲನ್ನು ಚೆನ್ನಾಗಿ ಮಸಾಜ್‌ ಮಾಡಬಲ್ಲೆ’ ಎಂದ.

ಗುರುಗಳು ಅದೇ ಶಾಂತಧ್ವನಿಯಲ್ಲಿ ‘ಬಾ ಮಗೂ, ಚೆಸ್‌-ಆಟ ಆಡೋಣ. ನಾನು ನಿನ್ನ ಆಟವನ್ನು ಪರೀಕ್ಷಿಸಬೇಕು’ ಎಂದರು.

ಇಬ್ಬರೂ ಚೆಸ್‌-ಬೋರ್ಡಿನ ಎದುರು ಮುಖಾಮುಖಿ ಕುಳಿತು ಇನ್ನೇನು ಆಟ ಶುರುಮಾಡಬೇಕು, ಅಷ್ಟರಲ್ಲಿ ಗುರುಗಳು ‘ಆದರೆ ಒಂದು ಷರತ್ತಿದೆ’ ಎಂದರು. ಹುಡುಗ ಆಶ್ಚರ್ಯದಿಂದ ಅವರ ಮುಖ ನೋಡಿದ. ತನ್ನ ಪಕ್ಕದಲ್ಲಿ ಹರಿತವಾಗಿ ಹೊಳೆಯುತ್ತಿದ್ದ ಖಡ್ಗವನ್ನು ನೋಡುತ್ತ ಹೇಳಿದರು: ‘ಆಟದಲ್ಲಿ ಯಾರು ಸೋಲುತ್ತಾರೋ ಅವರು ಈ ಕತ್ತಿಯಿಂದ ತಮ್ಮ ಮೂಗನ್ನು ಕುಯ್ದುಕೊಳ್ಳಬೇಕು!.’ ಹುಡುಗ ಕೊಂಚ ಆತಂಕದಿಂದಲೇ ‘ಸರಿ’ ಎಂಬಂತೆ ಕತ್ತು ಅಲ್ಲಾಡಿಸಿದ.

ಆಟ ಶುರುವಾಯ್ತು.
ಮೊದಲಿಗೇ ತಪ್ಪು ನಡೆ ಇಟ್ಟು ಹುಡುಗನಿಗೆ ಆಟದಲ್ಲಿ ಹಿನ್ನಡೆಯಾಯ್ತು. ಆಟದಲ್ಲಿ ಸೋತುಬಿಡುತ್ತೇನೇನೋ ಅನಿಸಿಬಿಟ್ಟತು. ಆದರೆ ಮರುಕ್ಷಣದಲ್ಲಿಯೇ ಗೆಲ್ಲಲೇಬೇಕು ಎಂದು ದೃಢನಿರ್ಧಾರ ಮಾಡಿ ಎಚ್ಚರಿಕೆಯಿಂದ ಆಡಿ ಸ್ವಲ್ಪ ಸಮಯದಲ್ಲಿಯೇ ಆಟದ ಮೇಲೆ ಹಿಡಿತ ಸಾಧಿಸಿದ.

ಗೆಲುವು ಸಾಧಿಸಲು ಹುಡುಗ  ಇನ್ನೇನು ಕೆಲವೇ ನಡೆಗಳ ಅಂತರವಿತ್ತಷ್ಟೆ. ಸುಮ್ಮನೇ ಎದುರಿಗೆ ಕೂತಿದ್ದ ಗುರುಗಳ ಮುಖವನ್ನು ನೋಡಿದ. ಅವರು ಭಯಗೊಂಡಿಲ್ಲದಿದ್ದರೂ, ವಿಚಲಿತರಾಗಿರುವುದು ತಿಳಿಯುವಂತಿತ್ತು. ಅದು ಆ ಹುಡುಗನ ಮನಸ್ಸನ್ನೂ ಕದಡಿತು.

‘ಈ ಗುರುಗಳು ಎಷ್ಟೊಂದು ಕರುಣಾಮಯಿ, ದೈವಿಕರು. ಎಷ್ಟೊಂದು ಹಸಿದ ಜನರನ್ನು ತಮ್ಮ ಗುರುಕುಲದಲ್ಲಿರಿಸಿಕೊಂಡು ಊಟ ನೀಡುವುದಲ್ಲದೇ ಅವರಿಗೆ ಘನತೆಯಿಂದ ಬದುಕುವುದು ಹೇಗೆ ಎಂಬುದನ್ನೂ ಕಲಿಸುತ್ತಿದ್ದಾರೆ. ಈ ಆಟದಲ್ಲಿ ಸೋತು ಅವರು ತಮ್ಮ ಮೂಗನ್ನು ಕತ್ತರಿಸಿಕೊಳ್ಳುವಂತಾದರೆ ಆ ಎಲ್ಲ ಒಳ್ಳೆಯ ಕೆಲಸಗಳನ್ನು ಮಾಡುವುದು ಸಾಧ್ಯವಾಗುತ್ತದೆಯೇ? ಅದರ ಬದಲು ನಾನೇ ಆಟದಲ್ಲಿ ಸೋತು ಮೂಗು ಕತ್ತರಿಸಿಕೊಂಡರೆ ನನ್ನೊಬ್ಬನನ್ನು ಹೊರತುಪಡಿಸಿ ಯಾರಿಗೂ ನಷ್ಟವಿಲ್ಲ’ ಹುಡುಗನ ಯೋಚನಾಲಹರಿ ಹೀಗೆ ಸಾಗಿತ್ತು.

ಈಗವನು ಬೇಕಂತಲೇ ಆಟದಲ್ಲಿ ತಪ್ಪು ನಡೆ ಇಟ್ಟ. ಅದು ಗುರುಗಳಿಗೆ ಆಟದಲ್ಲಿ ಜಯ ತಂದುಕೊಡುವ ಹಾಗಿತ್ತು. ಅವರ ಪ್ರತಿಕ್ರಿಯೆಗಾಗಿ ಕಾಯುತ್ತ ಕೂತ. ಅವರ ಪ್ರತಿಕ್ರಿಯೆ ಪೂರ್ತಿ ಅನಿರೀಕ್ಷಿತವಾಗಿತ್ತು. ಕೂತಲ್ಲಿಂದ ಎದ್ದು ಪಕ್ಕದ ಖಡ್ಗವನ್ನು ತೆಗೆದುಕೊಂಡ ಗುರುಗಳು ಚೆಸ್‌ ಬೋರ್ಡ್‌ನ ಮೇಲೆ ಅದನ್ನು ಬೀಸಿ ತುಂಡು ಮಾಡಿ ‘ಆಟ ಮುಗಿಯಿತು’ ಎಂದು ಘೋಷಿಸಿದರು!

ಹುಡುಗ ಆಶ್ಚರ್ಯಚಕಿತನಾಗಿ ನೋಡುತ್ತಲೇ ಇದ್ದ. ಅವನತ್ತ ಬಂದು ನೆತ್ತಿ ನೇವರಿಸಿ ‘ನೀನು ನಮ್ಮ ಜೊತೆ ಗುರುಕುಲದಲ್ಲಿ ಇರಬಹುದು ಮಗೂ’ ಎಂದರು. ಹುಡುಗನ ಮುಖದಲ್ಲಿದ್ದ ಆಶ್ಚರ್ಯ ಕಡಿಮೆಯಾಗಿರಲಿಲ್ಲ. ಅವನ ಮನದ ಭಾವವನ್ನು ಅರ್ಥ ಮಾಡಿಕೊಂಡ ಗುರುಗಳು ಪಕ್ಕ ಕೂತು ವಿವರಿಸತೊಡಗಿದರು.

‘ನಾನು ನಿನ್ನೊಂದಿಗೆ ಚೆಸ್‌ ಆಡಿದ್ದು ನೀನು ಎಷ್ಟು ಒಳ್ಳೆಯ ಆಟಗಾರ ಎಂಬುದನ್ನು ಪರೀಕ್ಷಿಸಲಿಕ್ಕಾಗಿಯಲ್ಲ. ಬದಲಿಗೆ ಒಳ್ಳೆಯ ಮನುಷ್ಯನಲ್ಲಿ ಇರಬೇಕಾದ ಕೆಲವು ಮೂಲಭೂತ ಗುಣಗಳು ನಿನ್ನಲ್ಲಿ ಇವೆಯೇ ಎಂಬುದನ್ನು ಪರೀಕ್ಷಿಸಲು’; ಅವರು ಮುಂದುವರಿದು ಹೇಳಿದರು...

‘ಮೊದಲನೆಯದು ಎಚ್ಚರ. ನೀನು ಆಟದ ಆರಂಭದಲ್ಲಿ ಸೋಲುವ ಹಂತದಲ್ಲಿದ್ದೆ. ಆದರೆ ಆ ಸಂಕಷ್ಟವನ್ನು ಸವಾಲನ್ನಾಗಿ ಸ್ವೀಕರಿಸಿ, ಪೂರ್ತಿ ಏಕಾಗ್ರತೆಯಿಂದ ಆಡಿ ಆಟದ ಮೇಲೆ ಹಿಡಿತ ಸಾಧಿಸಿದೆ.

‘ಮತ್ತೊಂದು ಅಂಶ ಸಹಾನುಭೂತಿ. ಆಟದಲ್ಲಿ ನಿನ್ನ ಎದುರಾಳಿ ಸೋಲುವ ಹಂತದಲ್ಲಿರುವಾಗ ಅವರತ್ತ ಸಹಾನುಭೂತಿಯಿಂದ ನೋಡಿ, ಉದ್ದೇಶಪೂರ್ವಕವಾಗಿ ತಪ್ಪು ನಡೆ ಇಟ್ಟು ಅವರು ಗೆಲ್ಲಲು ಅವಕಾಶ ಮಾಡಿಕೊಟ್ಟೆ.’

ಗುರುಗಳು ಇನ್ನಷ್ಟು ಆಪ್ತವಾಗಿ ಗುಟ್ಟೊಂದನ್ನು ಹೇಳುವಂತೆ ಹೇಳಿದರು: ‘ನೀನು ಆಟದಲ್ಲಿ ಸೋತಿಲ್ಲ ಮಗೂ... ಬದುಕಿನ ಅರ್ಥ ಇರುವುದು ಸೋಲು–ಗೆಲುವಿನಲ್ಲಿ ಅಲ್ಲ. ಈ ಜೀವನದಲ್ಲಿ ಗೆಲ್ಲುವಂಥದ್ದು ಅಥವಾ ಸೋಲುವಂಥದ್ದು ಏನೂ ಇಲ್ಲ’

ಈ ಕಥೆಯಲ್ಲಿ ಗುರುಗಳು ಹೇಳುವ ಕೊನೆಯ ಮಾತು ಎಷ್ಟು ನಿಜ ಅಲ್ಲವೇ?

ಈ ಜಗತ್ತಿನಲ್ಲಿ ಉನ್ನತ ಚಿಂತನೆಗಳಿವೆ, ಶಕ್ತಿಶಾಲಿ ವಿಚಾರಗಳಿವೆ. ಆದರೆ ಸೋಲುವಂಥದ್ದು ಅಥವಾ ಗೆಲ್ಲುವಂಥದ್ದು ಏನಿದೆ?

‘ಬದುಕೆಂದರೆ ಒಂದು ಯುದ್ಧಭೂಮಿ. ಇಲ್ಲಿ ಗೆದ್ದವರಿಗೆ ಮಾತ್ರ ಉಳಿಗಾಲ’ ಎಂಬ ಹಳೆಯ ನಂಬಿಕೆಯಿಂದ ಬಿಡಿಸಿಕೊಂಡು ಹೊರಬನ್ನಿ. ನೀವು ಬರೀ ಈ ಲೌಕಿಕ ಜಗತ್ತಿಗೆ ಸೀಮಿತಗೊಂಡವರಲ್ಲ. ಈ ಲೌಕಿಕಜಗತ್ತಿನ ರಚನೆಗಳೆಲ್ಲ ಅಲೌಕಿಕವಾದ ಇನ್ನೊಂದು ಜಗತ್ತಿನ ವಿಸ್ತರಣೆಯಷ್ಟೇ. ನಾವು ಇಲ್ಲಿರುವುದು ಗೆಲ್ಲಲು ಅಥವಾ ಸೋಲಲಿಕ್ಕಾಗಿ ಅಲ್ಲ. ಇಲ್ಲಿ ಯಾವ ಸ್ಪರ್ಧೆಯೂ ಇಲ್ಲ. ಇಲ್ಲಿರುವವರೆಲ್ಲರೂ ವಿಜೇತರು ಮತ್ತು ಸಹವಿಜೇತರಷ್ಟೆ. ಭಿನ್ನ ಭಿನ್ನ ದಿಕ್ಕಿನ ಬದುಕಿನ ಚಲನೆಯಲ್ಲಿ ನಾವೆಲ್ಲರೂ ಸಹಪಯಣಿಗರು.

ಸ್ವಾತಂತ್ರ್ಯ ಮತ್ತು ಸಂತೋಷ ನಮ್ಮ ಅಲೌಕಿಕ ಬದುಕಿನ ಮೂಲಭೂತ ಅಂಶಗಳು. ಈ ಸ್ವಾತಂತ್ರ್ಯ ಮತ್ತು ಸಂತೋಷವನ್ನು ದೈಹಿಕವಾಗಿಯೂ ಅನುಭವಿಸಬೇಕು ಎಂಬುದೇ ಈ ಲೌಕಿಕ ಬದುಕಿನ ಮುಖ್ಯ ಉದ್ದೇಶವಾಗಿದೆ.

ಈ ಸಂಗತಿಯನ್ನು ಅರಿತುಕೊಂಡವರಿಗೆ ಬದುಕು ಎಂದಿಗೂ ಸ್ಪರ್ಧೆಯ ಕಣವಾಗಿ ಕಾಣಿಸುವುದಿಲ್ಲ. ಆಲ್‌ ಈಸ್‌್ ವೆಲ್‌! ನಿಜಕ್ಕೂ ಇಲ್ಲಿ ಎಲ್ಲವೂ ಸೌಖ್ಯವಾಗಿದೆ. ಅರಿತುಕೊಳ್ಳಿ. ಪ್ರತಿಸಲ ಈ ಸಂಗತಿಯನ್ನು ಅರಿತುಕೊಂಡು ನಿರಾಳಗೊಂಡಾಗಲೂ ನೀವು ಮಿತಿಯಿಲ್ಲದ ಸ್ವಾತಂತ್ರ್ಯದ ಸ್ವರ್ಗವನ್ನು ಭೂಮಿಗೆ ಇಳಿಸುತ್ತಿರುತ್ತೀರಿ!
ಕೆಟ್ಟ ನಿರ್ಧಾರ ಒಳ್ಳೆಯ ನಿರ್ಧಾರಗಳೆಂಬುದಿಲ್ಲ. ಕೇವಲ ನಿರ್ಧಾರಗಳಷ್ಟೇ ಇರುವುದು. ಬದುಕಿನ ದಾರಿಯಲ್ಲಿ ತಪ್ಪು ತಿರುವು ಒಳ್ಳೆಯ ತಿರುವು ಎನ್ನುವುದು ಇರುವುದಿಲ್ಲ. ತಿರುವುಗಳಿರುತ್ತವಷ್ಟೆ. ಇಂಥ ಮುಕ್ತ ಮನಸ್ಸಿನಿಂದ ಆಲೋಚಿಸುವುದು ನಮ್ಮ ಬದುಕಿಗೆ ನಿಜವ ಅರ್ಥದಲ್ಲಿ ಮೌಲ್ಯವನ್ನು ನೀಡುತ್ತದೆ. ಅನಗತ್ಯ ಪಶ್ಚಾತ್ತಾಪ, ಪಾಪಪ್ರಜ್ಞೆಯಿಂದ ತಪ್ಪಿಸಿ ವಿಶ್ವಾತ್ಮಕ ಆನಂದವನ್ನು ಅಪ್ಪುವಂತೆ ಮಾಡುತ್ತದೆ.  ಆತ್ಯಂತಿಕ ತೃಪ್ತಿಯತ್ತ ಮುಖಮಾಡುವಂತೆ ಮಾಡುತ್ತದೆ.

ಈ ಉದಾರ ಮನೋವೃತ್ತಿಯ ಜೊತೆಗೆ ಬದುಕಿನೆಡೆಗೆ ನಿಮ್ಮ ದೃಷ್ಟಿಕೋನ ಸಕಾರಾತ್ಮಕವಾಗಿರುವಂತೇ ನೋಡಿಕೊಳ್ಳಿ. ಏಕೆಂದರೆ ಬದುಕಿನಲ್ಲಿ ಎದುರಾಗುವ ಪ್ರತಿಯೊಂದು ಅನುಭವವೂ ನಿಮ್ಮ ಕ್ರಿಯೆಯ ಪ್ರತಿಫಲಗಳಷ್ಟೇ ಆಗಿರುತ್ತವೆ.

ಹಿರಿಯೊಬ್ಬರ ಮಾತು ಹೀಗಿದೆ: ‘ಈ ವಿಶ್ವ ಒಂದು ಬೃಹತ್‌ ಕನಸು ತಯಾರಿಕಾ ಯಂತ್ರ.  ಅದು ಕನಸುಗಳನ್ನು ಉತ್ಪಾದಿಸಿ ಅವುಗಳನ್ನು ನಮ್ಮ ಸುತ್ತಲಿನ ಬದುಕಿನ ಪರಿಕರಗಳಾಗಿ ಬದಲಾಯಿಸುತ್ತದೆ’. ಅವರು ಮುಂದುವರಿದು ಹೀಗೆ ವಿವರಿಸುತ್ತಾರೆ:

‘ನಮ್ಮೆಲ್ಲ ಕನಸುಗಳು ಬೃಹತ್‌ ಕನಸಿನ ಬೀಜಗಳು. ಸಕಾರಾತ್ಮಕತೆ ಮತ್ತು ಜೀವನಪ್ರೀತಿಯಿಂದ ಅವುಗಳನ್ನು ಪೋಷಿಸಿ. ಅವೇ ನಂತರ ದೊಡ್ಡ ಕನಸುಗಳಾಗಿ ಬೆಳೆದು ಬದುಕಾಗಿ ಮಾರ್ಪಡುತ್ತವೆ.’

ಈ ಜಗತ್ತಿನಲ್ಲಿ ಎಲ್ಲವೂ ಅಶಾಶ್ವತ. ಹಾಗಿರುವಾಗ ಗೆಲ್ಲುವುದರಲ್ಲಿ ಅಥವಾ ಸೋಲುವುದರಲ್ಲಿ ಯಾವ ಅರ್ಥವೂ ಇಲ್ಲ. ನಾವು ಬಿತ್ತಿದ ಕನಸುಗಳನ್ನು ಪೋಷಿಸಿ, ಬೇಕಾದ ರೂಪವನ್ನು ನೀಡಿ ಬೆಳೆಸುತ್ತ ಬದುಕನ್ನೇ ಒಂದು ಕನಸಂತೆ ಅನುಭವಿಸುವುದರಲ್ಲಿಯೇ ಅದರ ಸಾರ್ಥಕ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT