ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಸ್ಲೆಕ್ಸಿಯಾ’ ಆಗದಿರಲಿ ಸಮಸ್ಯೆ!

Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ಕೆಲವು ಮಕ್ಕಳು ಕಲಿಕೆಯಲ್ಲಿ ಆಸಕ್ತಿಯಿದ್ದೂ, ಸಾಕಷ್ಟು ಪರಿಶ್ರಮಪಟ್ಟರೂ ಪರೀಕ್ಷೆಯಲ್ಲಿ ಅಂಕಗಳನ್ನು ಗಳಿಸುವಲ್ಲಿ ವಿಫಲರಾಗುತ್ತಾರೆ. ಈ ವಿಫಲತೆಯಿಂದಾಗಿ, ಮನಸ್ಸು ನೊಂದು ಖಿನ್ನರೂ ಆಗುತ್ತಾರೆ. ಈ ಗುಂಪಿನ ಮಕ್ಕಳ ಸಮಸ್ಯೆ ಏನೆಂದು ಪೋಷಕರು ಅರ್ಥ ಮಾಡಿಕೊಳ್ಳುವ ಸಮಯಕ್ಕೆ ತಡವಾಗಿರುತ್ತದೆ. ಈ ಸಮಸ್ಯೆಗೆ ‘ನಿರ್ದಿಷ್ಟ ಕಲಿಕಾ ಸಮಸ್ಯೆ / Dys*exia/specific *earning disabi*ity ಎನ್ನುತ್ತೇವೆ.
‘ನಿರ್ದಿಷ್ಟ ಕಲಿಕಾ ಸಮಸ್ಯೆ’ ಎಂದರೇನು?

ಮೆದುಳಿನಲ್ಲಿನ ಬೆಳವಣಿಗೆಯ ತೊಂದರೆಯಿಂದ ಉಂಟಾಗುವ ಸಮಸ್ಯೆ ಇದು. ಈ ಸಮಸ್ಯೆ ಇರುವ ಮಕ್ಕಳ ಕಲಿಕೆಯಲ್ಲಿನ ಸಾಮರ್ಥ್ಯ ತಮ್ಮ ಶಾಲಾ ತರಗತಿಗಿಂತ ಎರಡು ವರ್ಷಗಳು ಹಿಂದಿರುತ್ತದೆ. ಈ ಮಕ್ಕಳಿಗೆ ಕಿವಿಯಲ್ಲಿ ಕೇಳಿದ ಶಬ್ದಗಳನ್ನು ಬರವಣಿಗೆಗೆ ರೂಪಾಂತರಗೊಳಿಸುವುದರಲ್ಲಿ ಸಮಸ್ಯೆ ಇರುತ್ತದೆ.

ಓದುವಾಗ, ಬರೆಯುವಾಗ, ಲೆಕ್ಕ ಮಾಡುವಾಗ ಬಲ/ಎಡ ನಿರ್ಧರಿಸುವಾಗ ಕಷ್ಟಪಡುತ್ತಾರೆ. ತುಂಬಾ ಸುಲಭ, ಸರಳ ಎನ್ನಬಹುದಾದ ಸ್ಪೆಲ್ಲಿಂಗ್‌ಗಳಲ್ಲಿ ತಪ್ಪು ಮಾಡುತ್ತಾರೆ. ಕನ್ನಡದಲ್ಲಿ ಒತ್ತಕ್ಷರಗಳನ್ನು ಬರೆಯುವುದೇ ಇಲ್ಲ. ಸರಳವಾದ ಗಣಿತದ ಲೆಕ್ಕಗಳನ್ನು ಮಾಡುವಲ್ಲಿ ವಿಫಲರಾಗುತ್ತಾರೆ.

ಡಿಸ್ಲೆಕ್ಸಿಯಾ ಮಕ್ಕಳು ಸೋಮಾರಿಗಳಲ್ಲ!
ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವ ಮಕ್ಕಳು ಸೋಮಾರಿಗಳಲ್ಲ. ಕ್ಲಾಸಿನಲ್ಲಿ ಹೇಳಿದ ಪಾಠ, ಮನೆಯಲ್ಲಿ ಮಾಡಿಸಿದ ಲೆಕ್ಕ, ಈ ಮಕ್ಕಳಿಗೆ ಸರಿಯಾಗಿ ಅರ್ಥವಾಗಲಿಕ್ಕಿಲ್ಲ. ಎಷ್ಟೋ ಬಾರಿ ಟ್ರೇನ್ ಎನ್ನುವ ಪದದ ಸ್ಪೆಲ್ಲಿಂಗ್ ‘t.r.a.i.n’  ಎಂದು ಹೇಳಿಕೊಟ್ಟರೂ ಈ ಮಕ್ಕಳು ‘ಟ್ರೇನ್’ ಶಬ್ದದಲ್ಲಿ ‘a.i’ ಬರೆಯುವುದರಲ್ಲಿ ತಪ್ಪು ಮಾಡುತ್ತಾರೆ. ಇದು ಅವರ ತಪ್ಪಲ್ಲ. ಅವರ ಮೆದುಳಿನಲ್ಲಿ ಈ ವಿಷಯ ರಿಜಿಸ್ಟರ್ ಆಗುತ್ತಿರುವುದಿಲ್ಲವಷ್ಟೆ.

ಈ ಸಮಸ್ಯೆಯನ್ನು ಸರಿಯಾಗಿ ಗುರುತಿಸದೇ ಇರುವುದು ಪೋಷಕರ, ಶಿಕ್ಷಕರ ತಪ್ಪೇ. ಒಂದು ಮಗುವಿಗೆ, ಏನೋ ಒಳ್ಳೆಯ ಕೆಲಸ ಮಾಡಿದಾಗ, ಯಾವುದೋ ಕಾರ್ಯದಲ್ಲಿ ಯಶಸ್ವಿಯಾದಾಗ, ದೊಡ್ಡವರಿಂದ/ಶಿಕ್ಷಕರಿಂದ ಭೇಷ್ ಎನಿಸಿಕೊಂಡರೆ, ಆ ಮಗುವಿಗೆ ಸಂತಸವಾಗುತ್ತದಲ್ಲವೇ? ಇದು ಮುಂದೆ ಮತ್ತೂ ಶ್ರಮಪಡಲು ಉತ್ಸಾಹವನ್ನು ಕೊಡುತ್ತದೆ. ಆದರೆ ಈ ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಯಶಸ್ಸಿನ ರುಚಿಯೇ ಸಿಕ್ಕಿರುವುದಿಲ್ಲ. ಯಾವಾಗಲೂ ಬೈಗುಳವೇ. ಇದರ ಪರಿಣಾಮ ಮಕ್ಕಳು ಮತ್ತೂ ಮಂಕಾಗುವುದು, ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುವುದು ಮತ್ತು ಇದ್ದ ಆತ್ಮವಿಶ್ವಾಸವೂ ಇಲ್ಲದಂತಾಗುವುದು.

ಬುದ್ಧಿಮಾಂದ್ಯತೆ ಅಲ್ಲ
ಡಿಸ್ಲೆಕ್ಸಿಯಾದಿಂದ ಬಳಲುವ ಮಕ್ಕಳ ಪೋಷಕರ ಮತ್ತೊಂದು ಸಾಮಾನ್ಯ ಪ್ರಶ್ನೆ: ‘ಡಾಕ್ಟ್ರೇ, ನಮ್ಮ ಮಗು ಶಾಲಾಕಲಿಕೆ ಬಿಟ್ಟು ಬೇರೆಲ್ಲಾ ಚಟುವಟಿಕೆಗಳಲ್ಲಿ ಮುಂದು. ಟೀವಿ ರಿಮೋಟ್ ಬಳಸುತ್ತಾನೆ, ಟಚ್‌ಸ್ಕ್ರೀನ್ ಮೊಬೈಲ್ ಫೋನ್ ಬಳಸುತ್ತಾನೆ, ಹಾಳಾದ ಆಟದ ಸಾಮಾನು ರಿಪೇರಿ ಮಾಡುತ್ತಾನೆ, ಟೀವಿಯ ಎಲ್ಲ ಸೀರಿಯಲ್‌ಗಳ ವಿಷಯ ನೆನಪಿರುತ್ತದೆ. ಆದರೆ ಶಾಲಾ ಕಲಿಕೆಗೆ ಬಂದಾಗ ಹೀಗೇಕೆ?’
ಡಿಸ್ಲೆಕ್ಸಿಯಾ ಇರುವ ಮಕ್ಕಳ ಬುದ್ಧಿಶಕ್ತಿ ಸಹಜವಾಗಿರುತ್ತದೆ.

‘ಬುದ್ಧಿಮಾಂದ್ಯತೆ’ ಇರುವ ಮಕ್ಕಳು ದೈನಂದಿನ ಜೀವನದ ಎಲ್ಲ ಆಯಾಮಗಳಲ್ಲಿ ಸಮಸ್ಯೆ ಎದುರಿಸುತ್ತಾರೆ. ಆದರೆ ‘ಡಿಸ್ಲೆಕ್ಸಿಯಾ’ ಇರುವ ಮಕ್ಕಳಿಗೆ ಕಲಿಕೆಯಲ್ಲಿ ಮಾತ್ರ ತೊಂದರೆ. ಅದರಲ್ಲೂ, ಸಾಂಪ್ರದಾಯಿಕವಾಗಿ ನಾವು ಉಪಯೋಗಿಸುವ ಶಾಲಾ ಕಲಿಕೆಯ ಕ್ರಮಗಳಲ್ಲಿ ಕಲಿಯುವುದಕ್ಕೆ ಸಮಸ್ಯೆ. ಅದೇ ಈ ಮಕ್ಕಳಿಗೆ ಅಕಸ್ಮಾತ್ ವಿಶೇಷವಾಗಿ ಬೇರೆಯ ಕ್ರಮದಲ್ಲಿ ಕಲಿಸಿದರೆ, ಈ ಮಕ್ಕಳು ಬೇರೆಯ ಸಾಮಾನ್ಯ ಮಕ್ಕಳಿಗಿಂತ ಹೆಚ್ಚಿನದನ್ನು ಸಾಧಿಸಬಹುದು.

ಗುರುತಿಸುವುದು ಹೇಗೆ?
*ನಿಮ್ಮ ಮಗುವಿನಲ್ಲಿ ಈ ಕೆಳಗಿನ ಯಾವುದೇ ಸಮಸ್ಯೆಗಳಿದ್ದರೆ, ತಕ್ಷಣ ನಿಮ್ಮ ಹತ್ತಿರದ ಮನೋವೈದ್ಯರು ಅಥವಾ ಮನಃಶಾಸ್ತ್ರಜ್ಞರಲ್ಲಿ ಕರೆದೊಯ್ಯಿರಿ.
*ಕೆಲವು ಶಬ್ದಗಳನ್ನು ಕೇಳಿದಾಗ ಸರಿಯಾಗಿ ಅರ್ಥಮಾಡಿಕೊಂಡು, ಬರೆಯುವಾಗ ಮಾತ್ರ ಸ್ಪೆಲ್ಲಿಂಗ್ ತಪ್ಪು ಮಾಡುತ್ತಾರೆ.
*ಪುಸ್ತಕವನ್ನು ಓದಿ, ಕಲಿಯುವುದಕ್ಕಿಂತ ಬೇರೆಯವರನ್ನು ನೋಡಿ ತಾವೂ ಚಟುವಟಿಕೆಗಳನ್ನು ಮಾಡಿ ಕಲಿಯುವುದಕ್ಕೆ ಇಷ್ಟಪಡುತ್ತಾರೆ.
*ಗಣಿತದ ಸರಳವಾದ ಕ್ಯಾಲ್ಕುಲೇಶನ್‌ಗಳನ್ನು ತಪ್ಪು ಮಾಡುತ್ತಾರೆ.
*ಶಾಲೆಯ ಉತ್ತರಪತ್ರಿಕೆಗಳನ್ನು ನೋಡಿದರೆ ತುಂಬಾ ಸರಳವಾದ, ಸ್ಪೆಲ್ಲಿಂಗ್ ತಪ್ಪುಗಳಿರುತ್ತವೆ. ಉದಾ: ‘FIGHT ಶಬ್ದವನ್ನು ಎಷ್ಟೇ ಹೇಳಿಕೊಟ್ಟರೂ ‘FITE’ ಎಂದು ಬರೆಯುವುದು.

ಪರಿಹಾರ ಇದೆಯೇ?
ಬಾಲ್ಯದ ಪ್ರಾರಂಭದ ದಿನಗಳಲ್ಲಿಯೇ ಈ ಸಮಸ್ಯೆಯನ್ನು ಗುರುತಿಸಬೇಕು. ಅನಂತರ ಆ ಮಗುವಿಗೆ ಕಲಿಕೆಯ ಯಾವ ವಿಷಯದಲ್ಲಿ, ಅಂಶಗಳಲ್ಲಿ ಸಮಸ್ಯೆ ಇದೆಯೆಂದು ಮನೋವೈದ್ಯರು/ಮನಃಶಾಸ್ತ್ರಜ್ಞರ ಹತ್ತಿರ ಹೋಗಿ ಪರೀಕ್ಷೆಗೆ ಒಳಗಾಗಿ ನಿರ್ಧರಿಸಬೇಕು. ಆ ಕಷ್ಟದ ವಿಷಯವನ್ನು ಕೆಲವು ವಿಶೇಷ ರೀತಿಯ ಕಲಿಕಾಕ್ರಮದಿಂದ ಸುಲಭ ಮಾಡಬಹುದು.

ಇದರ ಜೊತೆಗೆ ಶಾಲಾ ಕಲಿಕೆಯನ್ನು ಬಿಟ್ಟು ಬೇರೆಯ ವಿಷಯಗಳಲ್ಲಿ: ಕಲೆ, ಕ್ರೀಡೆ, ಸಾಹಿತ್ಯ ಇವುಗಳಲ್ಲಿ ಆ ಮಗುವಿಗೆ ಆಸಕ್ತಿ/ಪ್ರತಿಭೆ ಇದ್ದರೆ ಅದನ್ನು ಪ್ರೋತ್ಹಾ ಹಿಸುವುದು  ಅಗತ್ಯ. ಈ ಯಾವ ಬದಲಾವಣೆಗಳೂ ಸಹಾಯ ಮಾಡದಿದ್ದರೆ, ‘*.D. Certificate’ / ಡಿಸ್ಲೆಕ್ಸಿಯಾ ಪ್ರಮಾಣಪತ್ರ ಪಡೆದು, ಸರ್ಕಾರ ಈ ಮಕ್ಕಳಿಗೆ ನೀಡಿರುವ ವಿಶೇಷ ಸವಲತ್ತುಗಳನ್ನು 10ನೇ ತರಗತಿ ಪರೀಕ್ಷೆಯಲ್ಲಿ ಉಪಯೋಗಿಸಿಕೊಳ್ಳಬಹುದು.

‘ಡಿಸ್ಲೆಕ್ಸಿಯಾ’ ಭಯ ಬೇಡ
ಸ್ಪೇನ್‌ನಲ್ಲಿ 1881ರಲ್ಲಿ ಈ ಹುಡುಗ ಹುಟ್ಟಿದ್ದು. ಸಹಜವಾದ ಬೆಳವಣಿಗೆ ಇದ್ದರೂ ಶಾಲಾ ಕಲಿಕೆಯಲ್ಲಿ ಹಿಂದೆ. ಅಕ್ಷರಗಳನ್ನು ಓದುವಾಗ, ಬರೆಯುವಾಗ ಬಹಳ ತಪ್ಪುಗಳನ್ನು ಮಾಡುತ್ತಿದ್ದ ಈ ಹುಡುಗ ಶಾಲೆಯಲ್ಲಿ ಫೇಲ್ ಆದ.  ಆದರೆ ಆತನ ತಂದೆ ಒಬ್ಬ ಕಲಾಶಿಕ್ಷಕನಾಗಿದ್ದ. ತನ್ನ ಮಗನ ಕಲಾಪ್ರತಿಭೆಯನ್ನು ಪ್ರೋತ್ಸಾಹಿಸಿ ಆತನ ಸೃಜನಶೀಲತೆಯನ್ನು ಗುರುತಿಸಿದ. ಇದರ ಪರಿಣಾಮವಾಗಿ ಈ ಹುಡುಗ ಮುಂದೆ ಪ್ರಖ್ಯಾತ ಚಿತ್ರಕಾರನಾದ. ಇವನ ಪೇಂಟಿಂಗ್‌ಗಳು ಜಗದ್ವಿಖ್ಯಾತವಾದವು. ಈ ಕಲಾಕಾರನಿಗೆ ಬಾಲ್ಯದಲ್ಲಿ ಶಾಲಾ ಕಲಿಕೆಯಲ್ಲಿ ಇದ್ದ ಸಮಸ್ಯೆ ‘ಡಿಸ್ಲೆಕ್ಸಿಯಾ’.

ಈ ಕಲಾಕಾರನೇ ಪ್ಯಾಬ್ಲೋ ಪಿಕಾಸ್ಸೋ. ಹೀಗೆ, ಡಿಸ್ಲೆಕ್ಸಿಯಾ ಸಮಸ್ಯೆ ಇದ್ದೂ ಪ್ರಖ್ಯಾತರಾದ, ಜೀವನದಲ್ಲಿ ಅಸಾಧ್ಯವನ್ನು ಸಾಧಿಸಿದ ಹಲವಾರು ಜನರಿದ್ದಾರೆ. ಪ್ರಸಿದ್ಧ ಹಾಲಿವುಡ್ ನಟ ಟಾಮ್‌ಕ್ರೂಸ್, ಪ್ರಖ್ಯಾತ ಉದ್ಯಮಿ ರಿಚರ್ಡ್ ಬ್ರ್ಯಾನ್‌ಸನ್, ವಿಜ್ಞಾನಿ ಥಾಮಸ್ ಎಡಿಸನ್, ಕಾದಂಬರಿಕಾರ ಜಾನ್ ಐರ್ವಿಂಗ್, ಹಾಲಿವುಡ್ ಸಿನಿಮಾ ನಿರ್ದೇಶಕ ಸ್ಟೀವನ್ ಸ್ಪಿಲ್‌ಬರ್ಗ್ ಇನ್ನೂ ಹಲವರು ಇದಕ್ಕೆ ಉದಾಹರಣೆ.

ಅಮೀರ್‌ಖಾನ್ ನಿರ್ದೇಶನದ ‘ತಾರೆ ಜಮೀನ್ ಪರ್’ ಡಿಸ್ಲೆಕ್ಸಿಯಾ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸ್ಥಿತಿಯ ನೈಜ ಚಿತ್ರಣ ಕೊಡುವ ಸಿನಿಮಾ. ಡಿಸ್ಲೆಕ್ಸಿಯಾ ಇರುವ ಮಕ್ಕಳ ಪೋಷಕರು ನೋಡಲೇಬೇಕಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT