ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳ ನರಳಾಟ ಹೆಚ್ಚಿಸುತ್ತದೆ

Last Updated 19 ಜೂನ್ 2017, 19:30 IST
ಅಕ್ಷರ ಗಾತ್ರ

‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ)– 2017’ ಮಸೂದೆಯ ಹಲವು ಮುಖಗಳನ್ನು ‘ವೈದ್ಯರ ಕೈ ಕಟ್ಟುವ ಕರಾಳ ಮಸೂದೆ’ ಬರಹ ತೆರೆದಿಟ್ಟಿದೆ (ಪ್ರ.ವಾ., ಚರ್ಚೆ,  ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಜೂನ್‌ 15).  ವೈದ್ಯಕೀಯ ಜಗತ್ತಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಎಷ್ಟು ನಿರ್ಲಕ್ಷ್ಯದಿಂದ ಮಾಡಲಾಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ ಎನ್ನಬಹುದು.

ಯಾವುದೇ ಕಾನೂನು ಸದುಪಯೋಗವಾಗಬೇಕಿದ್ದರೆ ಅದು ಸರಳವಾಗಿರಬೇಕು, ಸ್ಪಷ್ಟತೆಯಿಂದ ಕೂಡಿರಬೇಕು. ಪ್ರಸ್ತುತ ಮಸೂದೆ ಸರಳವಾಗಿಯೂ ಇಲ್ಲ, ಸ್ಪಷ್ಟವಾಗಿಯೂ ಇಲ್ಲ. ವೈದ್ಯರು ಚಿಕಿತ್ಸೆ ನೀಡುವುದಕ್ಕೇ ಹೆದರಿಕೊಂಡು ರೋಗಿಗಳು ಮತ್ತಷ್ಟು ನರಳುವ ಸನ್ನಿವೇಶವನ್ನು ಈ ಮಸೂದೆ ಹುಟ್ಟು ಹಾಕುತ್ತದೆ.

ಯಾವುದೇ ಸರ್ಕಾರಕ್ಕೆ ಕೆಲವೊಂದು ಮೂಲಭೂತ ಕರ್ತವ್ಯಗಳಿರುತ್ತವೆ. ಸರ್ಕಾರದ ಕೆಲಸ– ಕಾರ್ಯಗಳು ಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಯೇ ರೂಪುಗೊಳ್ಳಬೇಕು. ಅಂಥ ಜನಕಲ್ಯಾಣದ  ಯೋಜನೆಗಳೂ ಕೆಲವೊಮ್ಮೆ ಜನರಿಗೆ ಅಹಿತವನ್ನು ತರಲು ಸಾಧ್ಯವಿದೆ. ಉದಾಹರಣೆಗೆ ಇಎಸ್‌ಐ, ಯಶಸ್ವಿನಿ ಮೊದಲಾದ ಯೋಜನೆಗಳನ್ನೇ ತೆಗೆದುಕೊಳ್ಳೋಣ. ಈ ಹಿಂದೆ ಸಾದಾ ನೆಗಡಿ, ತಲೆನೋವಿಗೆ ಕಾರ್ಮಿಕ ತಮ್ಮ ಮನೆಗೆ ಹತ್ತಿರವಿರುವ ಕುಟುಂಬ ವೈದ್ಯನ ಬಳಿ  ತೆರಳಿ ಒಂದೆರಡು ದಿನ ಔಷಧ ಸೇವಿಸಿ ಗುಣಮುಖನಾಗುತ್ತಿದ್ದ.  ಈಗ ತಾನೇನೂ ದುಡ್ಡು ಕೊಡಬೇಕಾಗಿಲ್ಲ ಎಂದು ಬಹುದೂರದ ದೊಡ್ಡ ಆಸ್ಪತ್ರೆಗೆ ಓಡುತ್ತಾನೆ. ಅದೂ ಇಎಸ್ಐ ಅಧಿಕಾರಿಯ ಬಳಿ ರೆಫೆರಲ್ ತರಲು ಅರ್ಧದಿನ ರಜೆ ಹಾಕಿ! ಅಲ್ಲಿ ತನ್ನ ದೇಹ ಸರಿಯಿದೆ ಎಂದು ಸಾಬೀತುಪಡಿಸಿಕೊಳ್ಳಲು ಇಡೀ ದೇಹಕ್ಕೆ ವಿವಿಧ ತಪಾಸಣೆ ಮಾಡಿಸುತ್ತಾನೆ. ಎಷ್ಟೋ ಬಾರಿ ಯಾವ ವೈದ್ಯನ ಮಾತನ್ನೂ ಆತ ಕೇಳುವುದಿಲ್ಲ ಎಂಬುದು ನಿಜದ ಸಂಗತಿ. ಇಂಥ ನಡವಳಿಕೆಗಳು ಅಪಾಯವನ್ನೂ ತರಬಲ್ಲವು.

ಮೊನ್ನೆ ಇಂತಹ ಕಾರ್ಮಿಕನೊಬ್ಬ ಸುಮ್ಮನೆ ಹೊಟ್ಟೆ ಸ್ಕ್ಯಾನ್‌ ಮಾಡಿಸಿಕೊಂಡ. ಆಗ ಆತನ ಎರಡೂ ಮೂತ್ರಪಿಂಡಗಳು ಎಡ- ಬಲದಲ್ಲಿ ಇರುವ ಬದಲು ಬಲಭಾಗದಲ್ಲಿಯೇ ಇವೆ ಎಂಬುದು ಗೊತ್ತಾಯಿತು! ಅದರಿಂದ ಯಾವುದೇ ತೊಂದರೆಯಿಲ್ಲವೆಂದರೂ, ಅದೊಂದು ಆಕಸ್ಮಿಕ ಕಾಣ್ಕೆ ಎಂದರೂ ಆತ ಮುಂದೆ ತನಗೇನಾದರೂ ಆದೀತೆಂಬ ಶಂಕೆ ಹೊತ್ತು ಭಯದಿಂದಲೇ ಮನೆಗೆ ಹಿಂದಿರುಗಿದ.

ವೈದ್ಯಕೀಯ ಕ್ಷೇತ್ರದ ಹಲವು ನಿರ್ಧಾರಗಳು ಸಂಕೀರ್ಣವಾದವು. ಎಷ್ಟೋ ಬಾರಿ ‘ಇದಮಿತ್ಥಂ’ ಎನ್ನಲು ಬಾರದಂತಹವು. ‘ವೈದ್ಯನೇ ದೇವರು’  ಎಂದು ಹಿಂದೆ ಇದ್ದಂಥ ಅಪಾರವಾದ ಗೌರವ ಬಿಡಿ, ಕನಿಷ್ಠ ಆತನೂ ಮನುಷ್ಯ ಎಂದು ಪರಿಗಣಿಸುವ ಪರಿಸ್ಥಿತಿಯೂ ಈಗ ಇಲ್ಲವಾಗಿದೆ. ಸಾರಾಸಗಟಾಗಿ ವೈದ್ಯರೆಲ್ಲರೂ ಧನದಾಹಿಗಳು ಎಂಬ ಚಿತ್ರವನ್ನು ಮಾಧ್ಯಮದವರು ಮತ್ತು ರಾಜಕಾರಣಿಗಳು ಬಿಂಬಿಸುತ್ತಿದ್ದಾರೆ. ಹೀಗೆ ಬಿಂಬಿಸುವುದರಿಂದ ರೋಗಗಳು ಬೆಳೆಯುತ್ತಿವೆ! ಪ್ರಾಥಮಿಕ ಲಕ್ಷಣಗಳ ಹಂತದಲ್ಲಿ ಜನರು ಚಿಕಿತ್ಸೆಗೆ ಬರಲು ಹೆದರುತ್ತಿದ್ದಾರೆ. ವೈದ್ಯರು ತಮ್ಮನ್ನು ಸುಲಿಯುತ್ತಾರೆ ಎಂದು ಭ್ರಮಿಸಿ ರೋಗವನ್ನು ಹಾಗೇ ಬಿಟ್ಟು ಬೆಳೆಯಗೊಡುತ್ತಾರೆ. ಹೋಗಲಿ, ಹೀಗೆ ಬಿಂಬಿಸುತ್ತಲೇ ಸರ್ಕಾರಿ ಆಸ್ಪತ್ರೆಗಳ ಮೂಲ ಸೌಲಭ್ಯಗಳನ್ನಾದರೂ ಅಭಿವೃದ್ಧಿಪಡಿಸಲಾಗಿದೆಯೇ?  ಆಗಾಗ್ಗೆ ರಾಜಕಾರಣಿಗಳು ಭೇಟಿ ನೀಡಿ ಅಲ್ಲಿರುವ ವೈದ್ಯರ ಮೇಲೆ ಹರಿಹಾಯುವ ಪ್ರಸಂಗಗಳು ಮಾತ್ರ ನಡೆದಿವೆ. ಇಡೀ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ಆರಂಭವಾಗಿಲ್ಲ.

ಹಾಗೊಮ್ಮೆ ಸರ್ಕಾರ ಆರೋಗ್ಯದ ಬಗ್ಗೆ ತನ್ನ ಧೋರಣೆಯನ್ನು ಬದಲಿಸಿ ಸೌಲಭ್ಯಗಳನ್ನು ಸುಲಭವಾಗೇ ಕೈಗೆಟುಕುವಂತೆ ಮಾಡಿತೆನ್ನಿ, ಆಗಲೂ ಜನರು ಸರ್ಕಾರಿ ಸೇವೆಗಳನ್ನು ಒಪ್ಪಿಕೊಳ್ಳುವಂತೆ ಮಾಡುವುದು ಸುಲಭಸಾಧ್ಯವಲ್ಲ!  ಸರ್ಕಾರಿ ಸೇವೆಗಳ ಬಗೆಗೆ ಅಷ್ಟು ಬಲವಾಗಿ ಅಪನಂಬಿಕೆ ಜನರಲ್ಲಿ ಬೇರೂರಿದೆ. ಇದಕ್ಕೆ ಕಾರಣ ವೈದ್ಯರಲ್ಲ! ‘ಸರ್ಕಾರಿ’ ಎಂಬ ಹೆಸರು!

ನನ್ನ ಬಳಿ ಬರುವ ಎಷ್ಟೋ ಬಡ ರೋಗಿಗಳಿಗೆ ‘ಸರ್ಕಾರಿ ಆಸ್ಪತ್ರೆಯಲ್ಲಿ ತೆಗೆದುಕೊಂಡರೆ ಔಷಧ ಉಚಿತವಾಗಿಯೇ ದೊರಕುತ್ತದೆ’ ಎಂದರೆ ಅವರ ಬಾಯಲ್ಲಿ ಬರುವ ಉತ್ತರ ‘ಅದರಿಂದ ಗುಣವಾಗಲ್ಲ!’

ಮನುಷ್ಯನಲ್ಲಿ ರೋಗ ಬರಲು ಸಾಮಾಜಿಕ, ಜೈವಿಕ, ಭಾವನಾತ್ಮಕ ಕಾರಣಗಳಿರುತ್ತವೆ. ಅದೇ ರೀತಿ ಆ ರೋಗದ ಚಿಕಿತ್ಸೆಗೂ ಸಾಮಾಜಿಕ-ಜೈವಿಕ-ಭಾವನಾತ್ಮಕ ಆಯಾಮಗಳಿರುತ್ತವೆ. ಹಾಗಾಗಿ ವೈದ್ಯಕೀಯ ಸೇವೆ ಇಂದು ವೈದ್ಯನ ಹೊಣೆ ಮಾತ್ರವಲ್ಲ ಎಂಬುದು ಸುಸ್ಪಷ್ಟ. ಮಿದುಳಿನ ಒಂದು ಸ್ಕ್ಯಾನ್ ಬರೆಯುವಲ್ಲಿ ವೈದ್ಯನ ನಿರ್ಣಾಯಕತೆ-ಕ್ಷಮತೆಗಳಷ್ಟೇ ರೋಗಿಯ ಮತ್ತು ಆತನ ಕಡೆಯವರ ಒತ್ತಾಯವೂ ಪಾತ್ರ ವಹಿಸಬಹುದು! ಇಂತಹ ಎಷ್ಟೋ ಸಂದರ್ಭಗಳಲ್ಲಿ ಬೇಕಾದ ಪರೀಕ್ಷೆಯನ್ನು ನಿರಾಕರಿಸುವ, ಬೇಡದ ಪರೀಕ್ಷೆಯನ್ನು ಬೇಕೆಂದು ಹಟ ಹಿಡಿಯುವ ರೋಗಿಗಳ ನಡವಳಿಕೆ ಮಾಧ್ಯಮಗಳ ಪ್ರಚಾರ, ರಾಜಕೀಯ ಹೇಳಿಕೆಗಳಿಂದ ಪ್ರಭಾವಿತ ಎಂಬುದನ್ನು ನಾವು ಗಮನಿಸಬೇಕು.

ಹಾಗೆಂದು ವೈದ್ಯಕೀಯ ಸೇವೆಗೆ ನಿಯಮಗಳನ್ನೇ ತರಬಾರದು ಎಂದಲ್ಲ.  ಪಕ್ಕದ ರಾಜ್ಯಗಳಲ್ಲಿ ನಡೆದ ಸುಧಾರಣೆಗಳನ್ನು ಸರ್ಕಾರ ಅವಶ್ಯವಾಗಿ ಗಮನಿಸಬೇಕು. ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ರೇಡಿಯಾಲಜಿಸ್ಟರ ಸಂಘವು ಯಾವುದೇ ರೀತಿಯ ‘ಕಟ್‌’ಗಳನ್ನು (ಕಮಿಷನ್‌) ವೈದ್ಯರಿಗೆ ಕೊಡುವುದನ್ನು ನಿಲ್ಲಿಸಿದೆ. ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಪರೀಕ್ಷೆ ಉಚಿತ ಎಂಬ ನಿಯಮವಿದೆ. ಇಂತಹ ಸುಧಾರಣೆಗಳನ್ನು ತರುವಾಗ ಆಡಳಿತದಲ್ಲಿರುವವರು ತೆರೆದ ಮನಸ್ಸಿನಿಂದ ಇರಬೇಕು, ಎಲ್ಲಾ ದೃಷ್ಟಿಕೋನಗಳಿಂದ ಯೋಚಿಸಬೇಕು, ಪೂರ್ವಗ್ರಹಪೀಡಿತರಾಗದೆ 
ಸಂಯಮದಿಂದ ವರ್ತಿಸಬೇಕು.

ವೈದ್ಯರೆಲ್ಲರೂ ಧನದಾಹಿಗಳು ಎಂಬ ಮಸೂರವನ್ನು ತೊಟ್ಟು ಮಾಡುವ ಮಸೂದೆ  ಸಮಾಜಕ್ಕಾಗಲೀ ರೋಗಿಗಳಿಗಾಗಲೀ ಉಪಯುಕ್ತವಲ್ಲ.  ವಸ್ತುನಿಷ್ಠತೆ ಈ ಹೊತ್ತಿನ ತುರ್ತು. ಜೊತೆಗೆ ತಾನು ಈಗಾಗಲೇ ಹಾಕಿಕೊಂಡಿರುವ ಆರೋಗ್ಯದ ಕುರಿತಾದ ಯೋಜನೆಗಳ ಅನುಷ್ಠಾನ, ಯಶಸ್ಸಿನ ಮೌಲ್ಯಮಾಪನವನ್ನೂ ಸರ್ಕಾರ ಮಾಡಬೇಕಿದೆ.

ಜನರ ಅರಿವನ್ನು ಹೆಚ್ಚಿಸಿ, ಆರೋಗ್ಯ ಕ್ಷೇತ್ರದ ಬಗ್ಗೆ ಎಚ್ಚರದ ಜೊತೆಗೆ ವಿಶ್ವಾಸವನ್ನೂ ಕಾಯ್ದುಕೊಳ್ಳುವಂತೆ ಮಾಡುವುದರಿಂದ ಜನರ ರೋಗ ಗುಣಮುಖವಾಗುತ್ತದೆ. ಜೊತೆಗೆ ವೈದ್ಯರ ಕೆಲಸವನ್ನೂ ಹಗುರ ಮಾಡುತ್ತದೆ. ಆಡಳಿತದಲ್ಲಿರುವವರು ಇದನ್ನು ಅರಿಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT