ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ ಯೋಜನೆ ಅನುಷ್ಠಾನ ವಿಳಂಬ ಅಕ್ಷಮ್ಯ

Last Updated 19 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ‘ನಮ್ಮ ಮೆಟ್ರೊ’ ಮೊದಲ ಹಂತದ ಯೋಜನೆ ಅಂತೂ ಪೂರ್ಣಗೊಂಡಿದೆ. ಹೀಗಾಗಿ ಬೆಂಗಳೂರು ನಗರದಲ್ಲಿ 42.3  ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗದ ಸೇವೆ  ನಾಗರಿಕರಿಗೆ ಲಭ್ಯವಾಗಿದೆ.   ತ್ವರಿತ ಸಾರಿಗೆ ಕಲ್ಪಿಸುವಂತಹ  ಈ ಮೆಟ್ರೊ ಯೋಜನೆ ಅನುಷ್ಠಾನಗೊಂಡದ್ದು ಮಾತ್ರ  ಆಮೆಗತಿಯಲ್ಲಿ ಎಂಬುದು ದೊಡ್ಡ ವಿಪರ್ಯಾಸ.  ಬೆಳೆಯುತ್ತಿರುವ ಬೆಂಗಳೂರಿಗೆ  ಮೆಟ್ರೊ ರೈಲಿನ ಅಗತ್ಯ ಮನಗಂಡು 2003ರಲ್ಲೇ  ವಿವರವಾದ ಯೋಜನಾ ವರದಿ  ತಯಾರಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.  ನಂತರ  ಪುನರ್ವಿಮರ್ಶಿತ ಮೆಟ್ರೊ ರೈಲು ಯೋಜನೆಗೆ ಅನುಮತಿ ದೊರೆತದ್ದು 2006ರಲ್ಲಿ.  2012ರ ಮಾರ್ಚ್‌ನಲ್ಲಿ ‘ನಮ್ಮ ಮೆಟ್ರೊ’ ಮೊದಲ ಹಂತ ಪೂರ್ಣಗೊಳ್ಳಬೇಕಿತ್ತು.  ಆದರೆ ಈ ಗಡುವು ಬೆಂಗಳೂರಿಗರ ತಾಳ್ಮೆಯನ್ನು ಪರೀಕ್ಷಿಸುವ ರೀತಿ ಕನಿಷ್ಠ 9 ಬಾರಿ ಮುಂದಕ್ಕೆ ಹೋಯಿತು ಎಂಬುದು ಅಕ್ಷಮ್ಯ. ಇದರಿಂದಾದ  ಹಣಕಾಸು ನಷ್ಟ ಹಾಗೂ ನಗರ ಪರಿಸರಕ್ಕಾದ ಧಕ್ಕೆಯನ್ನು ತುಂಬಿಕೊಡುವವರಾರು? ಸರ್ಕಾರವೇ  ಉತ್ತರ ಹೇಳಬೇಕು. ಈ ಅವಧಿಯಲ್ಲಿ ಆಡಳಿತ ನಡೆಸಿದ ರಾಜಕೀಯ ಪಕ್ಷಗಳಾಗಲೀ ಆಡಳಿತ ಯಂತ್ರವಾಗಲೀ ಇದಕ್ಕೆ ಉತ್ತರದಾಯಿಯಾಗಿಲ್ಲ ಎಂಬುದು ವಿಷಾದನೀಯ.

2006ರಲ್ಲಿ  ಮೆಟ್ರೊ ಮೊದಲ ಹಂತದ ಕೆಲಸ ಆರಂಭಿಸಿದಾಗ  ನಿರ್ಮಾಣ ವೆಚ್ಚವನ್ನು  ₹ 6,500 ಕೋಟಿ  ಎಂದು ಅಂದಾಜು  ಮಾಡಲಾಗಿತ್ತು. ಈಗ ಇದು  ಸುಮಾರು ₹ 14,405 ಕೋಟಿಗೆ ಏರಿದೆ. 42.3 ಕಿ.ಮೀ. ಉದ್ದದ ಹಳಿಗಳ ನಿರ್ಮಾಣಕ್ಕೆ 10 ವರ್ಷಕ್ಕೂ ಹೆಚ್ಚು ಕಾಲ ಹಿಡಿದಿರುವುದು  ಭಾರತೀಯ ಮಾನದಂಡಗಳ ಪ್ರಕಾರ ಸುದೀರ್ಘವಾದ  ವಿಳಂಬ.  ದೊಡ್ಡ ಮೂಲಸೌಕರ್ಯ ಯೋಜನೆಗಳ ಅನುಷ್ಠಾನದಲ್ಲಿ ಅನಿರೀಕ್ಷಿತ ವಿಳಂಬಗಳಾಗುವ ಸಾಧ್ಯತೆ ಇರುತ್ತದೆ  ಎಂಬುದು ನಿಜ. ಆದರೆ ನಮ್ಮ ಮೆಟ್ರೊ ಯೋಜನೆ ಜಾರಿಗೊಳಿಸುತ್ತಿರುವ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್)  ಅದಕ್ಷತೆ ಹಾಗೂ ಯೋಜನೆ ಅನುಷ್ಠಾನವನ್ನು ತ್ವರಿತ ಗತಿಯಲ್ಲಿ ಪೂರೈಸಲು ಇಚ್ಛಾಶಕ್ತಿ ಪ್ರದರ್ಶಿಸದ ಸರ್ಕಾರ ಈ ವಿಳಂಬಕ್ಕೆ ಕಾರಣ ಎನ್ನದೆ ವಿಧಿಯಿಲ್ಲ. ಬಿಎಂಆರ್‌ಸಿಎಲ್‌ ಮುಖ್ಯಸ್ಥರ ಸ್ಥಾನಕ್ಕೆ ಮೊದಲಿನಿಂದಲೂ ತಂತ್ರಜ್ಞರನ್ನು ನೇಮಿಸಲೇ  ಇಲ್ಲ. ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಐಎಎಸ್‌ ಅಧಿಕಾರಿಗಳನ್ನೇ ನೇಮಿಸಲಾಗುತ್ತಿದೆ.  ಈ ಅಧಿಕಾರಿಗಳನ್ನೂ ಅನೇಕ ಸಲ ಬದಲಾವಣೆ ಮಾಡಲಾಗಿದೆ. ಇನ್ನು ರಾಜ್ಯ ಸರ್ಕಾರವೂ ವಹಿಸಬೇಕಾಗಿದ್ದಷ್ಟು ಕಾಳಜಿ ವಹಿಸಿದ್ದಿದ್ದರೆ  ಈ ವಿಳಂಬ ತಪ್ಪುತ್ತಿತ್ತು.  ನಮ್ಮ ಮೆಟ್ರೊ ಮೊದಲನೇ ಹಂತ ಲೋಕಾರ್ಪಣೆ ಮಾಡಿದ ದಿನದಂದೇ ಉದ್ಘಾಟನೆಗೊಂಡ ಕೊಚ್ಚಿ ಮೆಟ್ರೊ ದಾಖಲೆ ಸಮಯದಲ್ಲಿ ಪೂರ್ಣಗೊಂಡಿದೆ ಎಂಬುದನ್ನು ಗಮನಿಸಬೇಕು.  ಅಲ್ಲಿ 13 ಕಿ.ಮೀ. ಮಾರ್ಗವನ್ನು 3 ವರ್ಷ 9 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಬೆಂಗಳೂರಿನಲ್ಲಿ ರೀಚ್‌–1 ಮಾರ್ಗದಲ್ಲಿ (8 ಕಿ.ಮೀ.) ರೈಲು ಸಂಚಾರ ಪ್ರಾರಂಭವಾಗಲು  ಐದಕ್ಕೂ ಹೆಚ್ಚು ವರ್ಷ ಬೇಕಾಯಿತು ಎಂಬುದನ್ನು ಹೋಲಿಸಬಹುದು. ದೆಹಲಿಯಲ್ಲಿ ಕಾಮಗಾರಿ ಪ್ರಾರಂಭವಾದ ನಾಲ್ಕು ವರ್ಷಗಳಲ್ಲೇ ಮೊದಲ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಯಿತು ಎಂಬುದನ್ನೂ ಸ್ಮರಿಸಬಹುದು.

ಈಗ ನಮ್ಮ ಮೆಟ್ರೊ ಮೊದಲ ಹಂತ ಪೂರ್ಣಗೊಂಡ ಸಂತಸಕ್ಕೆ ತಣ್ಣೀರೆರಚುವಂತೆ ಮೆಟ್ರೊ ಟಿಕೆಟ್ ದರ ಕೂಡ ದುಬಾರಿಯಾಗಿದೆ. ಶೇ 10ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದರ ಏರಿಕೆ ಆಗಿದೆ. ಕಾರ್ಯಾಚರಣೆ ವೆಚ್ಚದಲ್ಲಿನ ನಷ್ಟವನ್ನು ಕಡಿಮೆ ಮಾಡಲು ಈ ಏರಿಕೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಪ್ರತಿದಿನ ಸರಾಸರಿ 1.75 ಲಕ್ಷ ಜನ ನಮ್ಮ ಮೆಟ್ರೊದಲ್ಲಿ ಓಡಾಡುತ್ತಿದ್ದಾರೆ. ಇದು 5 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.  ಆದರೆ ಈ ದಟ್ಟಣೆಯನ್ನು ನಿರ್ವಹಿಸಲು ಮೆಟ್ರೊ ಸಜ್ಜಾಗಿದೆಯೇ? ಪ್ರಸ್ತುತ ಮೆಟ್ರೊ ರೈಲು ಮೂರು ಬೋಗಿಗಳನ್ನು ಮಾತ್ರ ಹೊಂದಿದೆ. ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಬೋಗಿಗಳ ಸಂಖ್ಯೆಯನ್ನು ಆರಕ್ಕೆ ಹೆಚ್ಚಿಸುವ ಉದ್ದೇಶವಿದ್ದು ಈ ಸಲುವಾಗಿ 150 ಬೋಗಿಗಳನ್ನು  ಖರೀದಿಸಲಾಗುತ್ತಿದೆ. ಡಿಸೆಂಬರ್‌ ನಂತರವಷ್ಟೇ ಬೋಗಿಗಳು ಲಭ್ಯವಾಗಲಿವೆ. ಅಲ್ಲಿಯವರೆಗೂ  ಮೂರು ಬೋಗಿಗಳನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯ ಇದೆ.

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವೂ  ಸೇರಿದಂತೆ ಎರಡನೇ ಹಂತದ ಕಾಮಗಾರಿಯನ್ನು 2020ಕ್ಕೆ ಪೂರ್ಣಗೊಳಿಸುವುದಾಗಿ ಬಿಎಂಆರ್‌ಸಿಎಲ್‌ ಹೇಳುತ್ತಿದೆ. ಆದರೆ ಇದು ಸಾಧ್ಯವೇ ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ. ದೆಹಲಿ ಹಾಗೂ ಕೊಚ್ಚಿ ಮಾದರಿ ನಮಗೆ ಪಾಠವಾಗಬೇಕು. ಇಂಧನ ಮಿತವ್ಯಯ, ಅಪಘಾತ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಬೆಳೆಯುತ್ತಿರುವ ನಗರಗಳಿಗೆ ಮೆಟ್ರೊ ಅತ್ಯವಶ್ಯವಾದ ಸಾರಿಗೆ ವ್ಯವಸ್ಥೆ ಎಂಬುದರಲ್ಲಿ ಎರಡು ಮಾತಿಲ್ಲ. ನಗರಿಗರ ಜೀವನಶೈಲಿಯಲ್ಲಿ ಗುಣಾತ್ಮಕ ಬದಲಾವಣೆಗೆ ಕಾರಣವಾಗುವ ಈ ಸಮೂಹ ಸಾರ್ವಜನಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ಅನುಷ್ಠಾನಗೊಳಿಸುವಲ್ಲಿ ಇನ್ನು  ವಿಳಂಬಗತಿ ಅನುಸರಿಸುವುದು ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT