ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 20 ಜೂನ್ 2017, 19:30 IST
ಅಕ್ಷರ ಗಾತ್ರ

ಗೋವರ್ಧನ್‌, ಬೆಂಗಳೂರು
*ನಿಮ್ಮ ಸಲಹೆ ಸದಾ ಓದುತ್ತೇನೆ ಹಾಗೂ ಜನಸಾಮಾನ್ಯರಿಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ. ನನಗೂ ನಿಮ್ಮ ಅಮೂಲ್ಯ ಸಲಹೆ ಬೇಕಾಗಿದೆ. ನಾನು ಬಂಗಾರದ ನಾಣ್ಯಗಳಲ್ಲಿ ಹಣ ಹೂಡ ಬೇಕೆಂದಿದ್ದೇನೆ. ನಾನು ಸಿವಿಲ್ ಎಂಜಿನಿಯರ್. ನನ್ನ ವಾರ್ಷಿಕ ಸಂಬಳ ₹5 ಲಕ್ಷ. ಕಡಿತವಾಗಿ ₹ 4.5 ಲಕ್ಷ ಬರುತ್ತದೆ.
ಉತ್ತರ:
ನಿಮ್ಮ ಉಳಿತಾಯದಲ್ಲಿ ಬಂಗಾರದ ನಾಣ್ಯ ಕೊಳ್ಳುವ ನಿಮ್ಮ ಆಸೆ ನಿಜವಾಗಿ ಉತ್ತಮ ಹೂಡಿಕೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತೀ ತಿಂಗಳೂ ಬಂಗಾರದ ನಾಣ್ಯ ಕೊಳ್ಳಲು ಕಷ್ಟವಾದೀತು. ನೀವು ಪ್ರತಿ ತಿಂಗಳು ಉಳಿಸಬಹುದಾದ ಹಣ ನಿರ್ಧರಿಸಿರಿ, ಅಂತಹ ಮೊತ್ತವನ್ನು ನೀವು ಸಂಬಳ ಪಡೆಯುವ ಬ್ಯಾಂಕಿನಲ್ಲಿ ಒಂದು ವರ್ಷದ ಆರ್.ಡಿ. ಮಾಡಿರಿ. ವರ್ಷಾಂತ್ಯಕ್ಕೆ ಹೀಗೆ ಬಂದ ಹಣದಲ್ಲಿ ಬಂಗಾರದ ನಾಣ್ಯ ಕೊಳ್ಳಿರಿ. ಬಂಗಾರದ ನಾಣ್ಯಗಳನ್ನು ಬ್ಯಾಂಕ್ ಲಾಕರಿನಲ್ಲಿ ಇರಿಸುತ್ತಾ ಬನ್ನಿ. ಹೀಗೆ ಸಂಗ್ರಹಿಸಿದ ಬಂಗಾರದ ನಾಣ್ಯ ಮುಂದೆ ನಿಮ್ಮ ಮಕ್ಕಳ ಮದುವೆ ಸಮಯದಲ್ಲಿ ಉಪಯೋಗಿಸಿರಿ. ಜೀವನದಲ್ಲಿ ಪ್ರಾರಂಭದಿಂದಲೇ ಆರ್ಥಿಕ ಶಿಸ್ತು ಅಳವಡಿಸಿಕೊಂಡಲ್ಲಿ ಮುಂದೆ ಯಾವುದೇ ತೊಂದರೆಯು ಸಮಸ್ಯೆಯೇ ಆಗಲಾರದು. ನೀವು ಈ ಬಂಗಾರದ ಯೋಜನೆ ತಕ್ಷಣ ಪ್ರಾರಂಭಿಸಿ. 

ರವಿ ವೈದ್ಯ, ರಾಮನಗರ
*ನನ್ನ ಮಡದಿಗೆ ಹೃದಯ ಕವಾಟದ ಬದಲಾವಣೆಯಾಗಿದೆ. ಎಂ.ಎಸ್. ರಾಮಯ್ಯ ಆಸ್‍ಪತ್ರೆಗೆ ಸೇರಿಸಿ ₹2.50  ಲಕ್ಷ ಖರ್ಚಾಗಿದೆ. ಸರ್ಕಾರಿ ಕಚೇರಿಯಿಂದ ಬಹುಶಃ ₹ 40,000 ದಷ್ಟು ನನಗೆ ದೊರೆಯಬಹುದು. ಹೀಗೆ ಬರುವ ಹಣಕ್ಕೆ ತೆರಿಗೆ ವಿನಾಯಿತಿ ಇದೆಯೇ? ಒಂದು ವೇಳೆ ಕಚೇರಿಯವರು ₹ 40,000ದ ಮೇಲೆ ಟಿಡಿಎಸ್ ಮಾಡಿದರೆ ವಾಪಸು ಪಡೆಯಬಹುದೇ ತಿಳಿಸಿ.
ಉತ್ತರ:
ಯಾವುದೇ ಉದ್ಯೋಗದಾತರು ತಮ್ಮ ನೌಕರರಿಗೆ ಅಥವಾ ಅವರ ಕುಟುಂಬಕ್ಕೆ ವೈದ್ಯಕೀಯ ವೆಚ್ಚ ಭರಿಸಿದಾಗ ಆದಾಯ ತೆರಿಗೆ ಸೆಕ್ಷನ್ 17 (2) ಆಧಾರದ ಮೇಲೆ ಗರಿಷ್ಠ ₹ 15,000 ತನಕ, ಅಂತಹ ನೌಕರರು ವಿನಾಯಿತಿ ಪಡೆಯಬಹುದು. ಆದರೆ, ಪಡೆದ ಹೆಚ್ಚಿನ ಮೊತ್ತಕ್ಕೆ, ತೆರಿಗೆ ಕೊಡಬೇಕಾಗುತ್ತದೆ.  ಒಂದು ವೇಳೆ ನಿಮ್ಮ ವಿಚಾರದಲ್ಲಿ, ನಿಮ್ಮ ಉದ್ಯೋಗದಾತರು, ₹ 40,000 ನಿಮ್ಮ ವಾರ್ಷಿಕ ಸಂಬಳಕ್ಕೆ ಸೇರಿಸಿ ಮೂಲದಲ್ಲಿಯೇ ತೆರಿಗೆ ಮುರಿದಲ್ಲಿ, ನೀವು ರಿಟರ್ನ್ ತುಂಬುವಾಗ, ₹ 15,000 ತನಕ ವಿನಾಯಿತಿ ಪಡೆದು, ತೆರಿಗೆ ವಾಪಸು ಪಡೆಯಬಹುದು.  

ಶ್ರೀವತ್ಸ ಪ್ರಧಾನ, ಮೈಸೂರು
*ನಾನು ತುಮಕೂರು ರೀಜನ್‌ನಲ್ಲಿ, ಎಸ್.ಬಿ.ಎಂ. ನಲ್ಲಿ ಎರಡು ಉಳಿತಾಯ ಖಾತೆ ಹೊಂದಬಹುದೇ? ಇದು ಕಾನೂನಿಗೆ ವಿರುದ್ಧವಾಗಿದೆಯೇ? ನನಗೆ ಬೇರೆ ಬೇರೆ ಊರಿನಲ್ಲಿ ಉಳಿತಾಯ ಖಾತೆ ತೆರೆಯುವ ಅವಶ್ಯವಿದೆ. ₹ 5,000 ಕನಿಷ್ಠ ಮೊತ್ತ ಉಳಿತಾಯ ಖಾತೆಯಲ್ಲಿ ಇರಿಸಬೇಕು ಎನ್ನುವ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು?
ಉತ್ತರ:
ಓರ್ವ ವ್ಯಕ್ತಿ ಒಂದೇ ಶಾಖೆಯಲ್ಲಿ ತನ್ನ ಹೆಸರಿನಲ್ಲಿ ಎರಡು ಉಳಿತಾಯ ಖಾತೆ ತೆರೆಯುವಂತಿಲ್ಲ. ಆದರೆ, ಅವಧಿ ಠೇವಣಿ ಖಾತೆ ಎಷ್ಟು ಬೇಕಾದರೂ ತೆರೆಯಬಹುದು. ತುಮಕೂರು ಪ್ರಾಂತ್ಯದಲ್ಲಿ ಬೇರೆ ಬೇರೆ ಶಾಖೆಯಲ್ಲಿ ನಿಮ್ಮ ಹೆಸರಿನಲ್ಲಿ ಉಳಿತಾಯ ಖಾತೆ ಹೊಂದುವುದು ಕಾನೂನಿಗೆ ವಿರುದ್ಧವೂ ಅಲ್ಲ, ಅಪರಾಧವೂ ಅಲ್ಲ. ಈಗ ಎಸ್.ಬಿ.ಎಂ., ಎಸ್.ಬಿ.ಐ. ಆಗಿ ಪರಿವರ್ತನೆಯಾಗಿದೆ. ಎಸ್.ಬಿ.ಐ. ಸುತ್ತೋಲೆ ಪ್ರಕಾರ ಕನಿಷ್ಠ ₹ 5,000 ಉಳಿತಾಯ ಖಾತೆಯಲ್ಲಿ ಇರಬೇಕು. ಆದರೆ ಈ ಮೊದಲೇ ಎಸ್.ಬಿ.ಎಂ.ನಲ್ಲಿ ಉಳಿತಾಯ ಖಾತೆ ಹೊಂದಿರುವವರಿಗೆ ಈ ವಿಚಾರ ಶಾಖೆಯಲ್ಲಿ ಸದ್ಯಕ್ಕೆ ಒತ್ತಾಯಿಸುತ್ತಿಲ್ಲ. ಮುಂದೊಂದು ದಿವಸ ₹ 5,000 ಇಡಬೇಕಾದೀತು. ಬ್ಯಾಂಕಿಂಗ್ ಸಾಕ್ಷರತೆ ವಿಚಾರ ಪರಿಗಣಿಸುವಾಗ ಹೀಗೆ ₹ 5,000 ಉಳಿತಾಯ ಖಾತೆಯಲ್ಲಿ ಕಡ್ಡಾಯ ಇರಿಸಬೇಕು ಎನ್ನುವುದು ಸರಿಯಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

ಮಂಜುಳಾ, ಚಿಕ್ಕಮಗಳೂರು
*ನನ್ನ ವಯಸ್ಸು 48, ಪತಿಯ ವಯಸ್ಸು 58, ಮಗಳು 24, ಮಗನ ವಯಸ್ಸು 21. ಆರೋಗ್ಯ ವಿಮೆ ವಿಚಾರದಲ್ಲಿ ತಿಳಿಸಿರಿ. ಆರೋಗ್ಯ ವಿಮೆ ಮಾಡಿಸಿದರೂ ವಿಮಾ ಹಣ ಬರಲಿಲ್ಲ ಎಂದು ಹಲವರು ಹೇಳುತ್ತಾರೆ. ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಉತ್ತಮ ಆರೋಗ್ಯ ವಿಮೆ ಯೋಜನೆ ತಿಳಿಸಿ.
ಉತ್ತರ:
ಆರೋಗ್ಯ ವಿಮೆ ಅಂದರೆ ಜೀವವಿಮೆಯಲ್ಲ. ಇಲ್ಲಿ ಕಟ್ಟಿದ ಹಣ ವಾಪಸು ಬರುವುದಿಲ್ಲ. ಪ್ರತೀ ವರ್ಷ ಪ್ರೀಮಿಯಂ ಹಣ ತುಂಬಬೇಕು. ನೀವು ಚಿಕ್ಕಮಗಳೂರಿನ ಸಿಂಡಿಕೇಟ್ ಬ್ಯಾಂಕಿನಲ್ಲಿ ‘ಸಿಂಡ್‌ ಆರೋಗ್ಯ’ ವಿಮೆ ಮಾಡಿರಿ. ನೀವು ನಿಮ್ಮ ಪತಿ ಹಾಗೂ ಮಕ್ಕಳು ಸೇರಿ 4 ಜನರ ಹೆಸರಿನಲ್ಲಿ F*OATER PO*ICY ಮಾಡಿಸಿರಿ. ಇದು ನಗದು ರಹಿತ ಯೋಜನೆ. ವ್ಯಕ್ತಿ ಆಸ್ಪತ್ರೆಗೆ ಸೇರುವಾಗ, ವಿಮೆ ಕಂಪನಿಯವರು ವಿತರಿಸಿದ ಕಾರ್ಡು ಹಾಗೂ ಪ್ಯಾನ್ ಕಾರ್ಡು ನಕಲು ಕೊಟ್ಟಲ್ಲಿ ವಿಮೆ ಮಿತಿಯೊಳಗೆ ಏನೂ ಹಣ ನೀಡದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ₹ 3 ಲಕ್ಷ ಆರೋಗ್ಯ ವಿಮೆಗೆ ವಾರ್ಷಿಕ ₹ 4,974, ₹ 4 ಲಕ್ಷ ವಿಮೆಗೆ ₹ 6,184, ಹಾಗೂ ₹ 5 ಲಕ್ಷ ವಿಮೆಗೆ ₹ 7,423 ಕಟ್ಟಬೇಕು. ಇದರಲ್ಲಿ ನೀವು 4 ಜನರೂ ಪ್ರಯೋಜನ ಪಡೆಯಬಹುದು. ಸಿಂಡ್ ಆರೋಗ್ಯ ವಿಮೆ ಒಂದು ಉತ್ತಮ ಹಾಗೂ ಕೈಗೆಟುಕುವ ಪ್ರೀಮಿಯಂ ಕಟ್ಟುವ ಯೋಜನೆ. ಕಾರ್ಪೊರೇಟ್ ಅಥವಾ ಕಂಪೆನಿಯವರು ಸ್ವೀಕರಿಸುವ ಎಲ್ಲಾ ಆಸ್ಪತ್ರೆಗಳಲ್ಲಿ ಹಣ ರಹಿತ ಚಿಕಿತ್ಸೆ ಯಾವ ತೊಂದರೆ ಇಲ್ಲದೇ ಪಡೆಯಬಹುದು.

ರಮೇಶ, ಚಿತ್ರದುರ್ಗ
*ನಾನು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ. ವಯಸ್ಸು 31. ವೇತನ ₹ 25,000. ಉಳಿತಾಯ ಕೆಜಿಐಡಿ 2500, ಎನ್‌ಪಿಎಸ್ ₹ 2000, ಎಲ್‌ಐಸಿ ₹ 1,000. ನನ್ನ ಖರ್ಚು ಕಳೆದು
₹ 10,000 ತಿಂಗಳಿಗೆ ಉಳಿಸಬಹುದು. ಈ ಹಣ ಎಲ್‌ಐಸಿ ‘ಜೀವನ ಲಾಭ’ ಯೋಜನೆಯಲ್ಲಿ, 21 ವರ್ಷಗಳ ಅವಧಿಗೆ,
₹ 22 ಲಕ್ಷ ಮೊತ್ತ (SUM ASSURED) ಪ್ರತೀ ತಿಂಗಳು
₹ 10,000 ತುಂಬುವ ಯೋಜನೆ ಯಲ್ಲಿ ಹಣ ಹೂಡಲು ನಿಮ್ಮ ಸಲಹೆ ಕೇಳ ಬಯಸುತ್ತೇನೆ. ಹೀಗೆ ವಿಮೆ ಮಾಡಿದಲ್ಲಿ 21 ವರ್ಷಗಳಲ್ಲಿ
₹ 45.91 ಲಕ್ಷ (ಅಂದಾಜು) ಬರಬಹುದು. ಬ್ಯಾಂಕ್ ಠೇವಣಿ ಹಾಗೂ ‘ಜೀವನ ಲಾಭ’ ಇವೆರಡರಲ್ಲಿ ಲಾಭದಾಯಕ ಹಾಗೂ ಉತ್ತಮ ಯಾವುದು ತಿಳಿಸಿ.
ಉತ್ತರ:
ವಿಮೆ ಹಾಗೂ ಬ್ಯಾಂಕ್ ಠೇವಣಿ ಇವುಗಳಲ್ಲಿ ಬಹಳ ವ್ಯತ್ಯಾಸವಿದೆ. ಉದ್ದೇಶ ಕೂಡಾ ಬೇರೆ, ಬೇರೆ ಇರುತ್ತದೆ. ಪ್ರತಿಯೋರ್ವ ವ್ಯಕ್ತಿಗೂ ಆತನ ಆದಾಯದ ಕನಿಷ್ಠ ಶೇ 10–15 ವಿಮೆಗೆ ಮೀಸಲಾಗಿಡುವ ಅವಶ್ಯವಿದೆ. ಇಲ್ಲಿ ಪ್ರಥಮವಾಗಿ ವಿಮೆಗೆ ಹೆಚ್ಚಿನ ಪ್ರಾಧಾನ್ಯ ಇದ್ದು, ಸ್ವಲ್ಪ ಮಟ್ಟಿನ ಉಳಿತಾಯದ ತತ್ವ ಕೂಡಾ ಅಡಕವಾಗಿದೆ. ಎಲ್.ಐ.ಸಿ. ಯವರ ‘ಜೀವನ ಲಾಭ’ ಪಾಲಿಸಿ ಒಂದು ಉತ್ತಮವಾದ ಯೋಜನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬ್ಯಾಂಕ್ ಠೇವಣಿಯಲ್ಲಿ ದ್ರವ್ಯತೆ ಹೆಚ್ಚು. ಬೇಕಾದಾಗ ಅವಧಿ ಠೇವಣಿ ಅವಧಿಗೆ ಮುನ್ನ ವಾಪಸು ಪಡೆಯಬಹುದು. ವಿಮೆ ಜೊತೆಗೆ, ಸಾಧ್ಯವಾದಷ್ಟು ಆರ್.ಡಿ. ಮಾಡಿ ಮುಂದೆ ಸ್ವಲ್ಪ ಸಾಲ ಪಡೆದು ನಿವೇಶನ ಕೊಳ್ಳಿರಿ. ಸ್ಥಿರ ಆಸ್ತಿಗೆ ಮಿಗಿಲಾದ ಹೂಡಿಕೆ ಬೇರೊಂದಿಲ್ಲ. ಇದೇ ವೇಳೆ ಸಾಧ್ಯವಾದರೆ ವಾರ್ಷಿಕವಾಗಿ ಕನಿಷ್ಠ 10 ಗ್ರಾಂ ಬಂಗಾರದ ನಾಣ್ಯ ಕೊಳ್ಳಿರಿ. ಆರು ತಿಂಗಳಿಗೊಮ್ಮೆ ಬರುವ ಡಿ.ಎ., ವಾರ್ಷಿಕವಾಗಿ ಬರುವ ಇನ್‌ಕ್ರಿಮೆಂಟ್ ಇವುಗಳ ಕನಿಷ್ಠ ಶೇ 50 ರಷ್ಟು, ದೀರ್ಘಾವಧಿ ಆರ್.ಡಿ. ಮಾಡಿರಿ. ಬಂಗಾರದ ನಾಣ್ಯ ಕೊಳ್ಳುವುದು ಹಾಗೂ ವಾರ್ಷಿಕ ಬರುವ ಹೆಚ್ಚಿನ ವರಮಾನದಲ್ಲಿ ಆರ್.ಡಿ. ಮಾಡುವುದು ಇವೆರಡೂ ಪ್ರಕ್ರಿಯೆ ನಿರಂತರವಾಗಿರಲಿ. 

ಮಧು. ಎನ್.ಟಿ., ನಾರನಹಳ್ಳಿ, ದೊಡ್ಡಬಳ್ಳಾಪುರ
*ವಯಸ್ಸು 28.   ತುಮಕೂರು ಮಹಾನಗರ ಪಾಲಿಕೆಯ ಪ್ರಥಮ ದರ್ಜೆ ಸಹಾಯಕರಾಗಿ ನೇಮಕಗೊಂಡಿರುತ್ತೇನೆ. ನನ್ನ ವೇತನ ಶ್ರೇಣಿ
₹ 14,550–26,600. ನನ್ನ ತಿಂಗಳ ಖರ್ಚು ₹ 6,000. ಅವಿವಾಹಿತ. ನನ್ನ ವೃತ್ತಿಯಲ್ಲಿ ಕೆಜಿಐಡಿ, ವೈದ್ಯಕೀಯ ವಿಮೆ ಎರಡೂ ಇರುವುದಿಲ್ಲ. ಮ್ಯೂಚುವಲ್ ಫಂಡ್, ವಿಮೆ, ಉಳಿತಾಯ, ವೈದ್ಯಕೀಯ ವಿಮೆ ಇವುಗಳ ವಿಚಾರದಲ್ಲಿ  ತಿಳಿಸಿ.
ಉತ್ತರ:
ಪ್ರತಿಯೊಬ್ಬ ವ್ಯಕ್ತಿಗೆ  ಸಂಕಟ ಬಂದಾಗ ವೆಂಕಟರಮಣನ ನೆನಪಾಗುವಂತೆ, ಒಟ್ಟು ಆದಾಯದ ಕನಿಷ್ಠ ಶೇ  10 ರಷ್ಟು ಜೀವವಿಮೆಯ ಅಗತ್ಯವಿದೆ. ನೀವು ಎಲ್.ಐ.ಸಿ.ಯವರ ಜೀವನ ಆನಂದ ಯೋಜನೆಯಲ್ಲಿ ಪ್ರತಿ ತಿಂಗಳೂ ₹ 2,000 ತುಂಬುವ ಹಾಗೆ ವಿಮೆ ಇಳಿಸಿರಿ. ಸಂಬಳದಲ್ಲಿ ಕಡಿತ ಮಾಡುವಂತೆ ತಿಳಿಸಿರಿ. ಅದೇ ರೀತಿ ಆರೋಗ್ಯ ವಿಮೆ ಕೂಡಾ ಅವಶ್ಯವಿದ್ದು, ಸಿಂಡಿಕೇಟ್ ಬ್ಯಾಂಕಿನ ‘ಸಿಂಡ್ ಆರೋಗ್ಯ’ ಯೋಜನೆಯಲ್ಲಿ ₹ 3 ಲಕ್ಷಗಳ ಆರೋಗ್ಯ ವಿಮೆ ಪಡೆಯಿರಿ. ಈ ಮೊತ್ತಕ್ಕೆ ವಾರ್ಷಿಕ ₹ 4,947 ಕಟ್ಟಬೇಕಾಗುತ್ತದೆ. ನಿಮ್ಮ ತಂದೆ ತಾಯಿ ಹಾಗೂ ನೀವು ಒಡಗೂಡಿ ಪ್ಲೋಟರ್ ಪಾಲಿಸಿ ₹ 3 ಲಕ್ಷಕ್ಕೆ ಮಾಡಿಸಬಹುದು.  ನಿಮ್ಮ ಮದುವೆಯ ತನಕ ₹ 15,000 ಆರ್.ಡಿ. ಮಾಡಿರಿ. ಇನ್ನೆರಡು ವರ್ಷಗಳಲ್ಲಿ ಮದುವೆಯಾಗಬಹುದು ಎಂದುಕೊಂಡು, ಎರಡು ವರ್ಷಗಳ ಆರ್.ಡಿ. ಮಾಡಿರಿ. 

ಎಸ್.ಕೆ. ಸಚ್ಚಿನ್, ಬೆಂಗಳೂರು
*ನಾನು ಎಲ್.ಐ.ಸಿ. ಹಾಗೂ ಸುಕನ್ಯಾ ಪ್ರಿಮಿಯಮ್ ವಾರ್ಷಿಕವಾಗಿ ಹಣ ಕಟ್ಟುತ್ತೇನೆ. ವಿಮೆ ಮುಗಿದು ಪಡೆಯುವಾಗ ಟಿ.ಡಿ.ಎಸ್. ಇದೆಯೇ. ನಾವು ಸೆಕ್ಷನ್ 80 ಸಿ ಆಧಾರದ ಮೇಲೆ ₹ 1.50 ಲಕ್ಷಕ್ಕೂ ಹೆಚ್ಚಿನ ಹಣ ಹೂಡಿದಲ್ಲಿ, ಟಿ.ಡಿ.ಎಸ್. ಹೇಗೆ ಮುರಿಯುತ್ತಾರೆ ತಿಳಿಸಿ.
ಉತ್ತರ:
ಒಟ್ಟು ಇಳಿಸಿದ ವಿಮೆ ಮೊತ್ತ (SUM ASSURED) ಪ್ರೀಮಿಯಂ ಹಣ 1–4–2003ರ ನಂತರ ಶೇ 20 ಹಾಗೂ 1–4–2012ರ ನಂತರ ಇಳಿಸಿದ ವಿಮೆ ಮೊತ್ತ ಶೇ 10ಕ್ಕೂ ಹೆಚ್ಚು ಇರುವಲ್ಲಿ, ಸೆಕ್ಷನ್ 10 (10ಡಿ) ಅಡಿಯಲ್ಲಿ ವಿನಾಯ್ತಿ ಪಡೆಯುವಂತಿಲ್ಲ. ಒಂದು ವೇಳೆ ಪಾಲಿಸಿದಾರ ಮೃತಪಟ್ಟರೆ, ಅಂತಹ ಸಂದರ್ಭದಲ್ಲಿ ತೆರಿಗೆ ವಿನಾಯ್ತಿ ಇದೆ. ಯಾವುದೇ ವ್ಯಕ್ತಿ ಸೆಕ್ಷನ್ 80ಸಿ ಆಧಾರದ ಮೇಲೆ ವಿನಾಯ್ತಿ  ಪಡೆಯಲು ಇರುವ ಗರಿಷ್ಠ ಮಿತಿ ₹ 1.50 ಮಾತ್ರ. ಇದಕ್ಕಿಂತ ಹೆಚ್ಚಿನ ಉಳಿತಾಯ ಮಾಡಬಹುದಾದರೂ ತೆರಿಗೆ ವಿನಾಯಿತಿ ಪಡೆಯುವಂತಿಲ್ಲ. ಹೀಗೆ ಉಳಿಸಿದ ಹಣದಿಂದ ಬರುವ ಬಡ್ಡಿಗೆ ತೆರಿಗೆ ಇರುತ್ತದೆ. ನೀವು 80ಸಿ ಹೊರತು ಪಡಿಸಿ 80 ಸಿಸಿಡಿ (1ಬಿ) ಆಧಾರದ ಮೇಲೆ ನ್ಯಾಷನಲ್ ಪೆನ್ಷನ್ ಸ್ಕೀಮ್ (ಎನ್‌ಪಿಎಸ್) ವಾರ್ಷಿಕವಾಗಿ ₹50,000 ಉಳಿಸಿ ಪ್ರತ್ಯೇಕವಾಗಿ ತೆರಿಗೆ ವಿನಾಯಿತಿ ಪಡೆಯಬಹುದು. ಇದೊಂದು ಸಾಮಾಜಿಕ ಭದ್ರತೆ ಯೋಜನೆ ಕೂಡಾ.

ಕೇಶವ ಪ್ರಭು, ಕೋಲಾರ
*82 ವರ್ಷದ ನನ್ನ ಅಕ್ಕ 10–11–2016 ರಂದು ಮೃತಳಾದಳು. ಅವರ ಗಂಡ ಬಹಳ ಹಿಂದೆಯೇ ತೀರಿಕೊಂಡಿದ್ದಾರೆ. ಅವರಿಗೆ ಮಕ್ಕಳು ಸಂಬಂಧಿಗಳು ಯಾರೂ ಇರುವುದಿಲ್ಲ. ಕಳೆದ 35 ವರ್ಷದಿಂದ ನಮ್ಮ ಮನೆಯಲ್ಲಿಯೇ ಇದ್ದರು. ನನ್ನ ಪ್ರಶ್ನೆ ಏನೆಂದರೆ, ಕೆನರಾ ಬ್ಯಾಂಕಿನಲ್ಲಿ ಅವರ ಹೆಸರಿನಲ್ಲಿ ₹ 50,000 ಹಾಗೂ ₹ 30,000 ಎರಡು ಎಫ್.ಡಿ. ಇದೆ. ಇದನ್ನು ವರ್ಷಕ್ಕೊಮ್ಮೆ ಮುಂದುವರಿಸುತ್ತಿದ್ದರು. ಇತ್ತೀಚೆಗೆ ಎಫ್.ಡಿ. ಮುಂದುವರಿಸುವಾಗ ನಾಮ ನಿರ್ದೇಶನ ಮಾಡಲು ಮರೆತಿದ್ದರು. ಈ ಹಿಂದೆ ಮಾಡುತ್ತಿದ್ದರು. ಬ್ಯಾಂಕಿನಲ್ಲಿ ಹೋಗಿ ಕೇಳಿದಾಗ ನನ್ನ ಅಕ್ಕನ ವಂಶವೃಕ್ಷ ತರಲು ಹೇಳುತ್ತಾರೆ.  ಮಾರ್ಗದರ್ಶನ ಮಾಡಿ.
ಉತ್ತರ:
ಯಾವುದೇ ಠೇವಣಿ ನಾಮ ನಿರ್ದೇಶನ ಮಾಡದಿರುವಲ್ಲಿ ಠೇವಣಿದಾರರು ಮೃತಪಟ್ಟ ಸಂದರ್ಭದಲ್ಲಿ ಹಣ ಹಿಂತಿರುಗಿಸುವಾಗ ಬ್ಯಾಂಕಿನಲ್ಲಿ ‘ವಂಶವೃಕ್ಷ’ (Fami*y Tree) ಕೇಳುವುದು ಸಹಜ. ಇದರ ಉದ್ದೇಶವೇನೆಂದರೆ, ಮೃತಪಟ್ಟವರ ಠೇವಣಿ ಹಣ ವಾರಸುದಾರರಿಗೇ ಸಲ್ಲಬೇಕು ಎಂಬುದಾಗಿರುತ್ತದೆ. ಮೃತಪಟ್ಟ ನಿಮ್ಮ ಅಕ್ಕನವರ ಉಳಿತಾಯ ಖಾತೆ ಆ ಬ್ಯಾಂಕಿನಲ್ಲಿದ್ದು, ಅಂತಹ ಉಳಿತಾಯ ಖಾತೆಗೆ ನಿಮ್ಮ ನಾಮನಿರ್ದೇಶನವಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಹಾಗೆ ಇರುವಲ್ಲಿ ಬ್ಯಾಂಕಿನವರು ಒಪ್ಪುವುದಾದರೆ, ಒಂದು ಪ್ರಮಾಣ ಪತ್ರ (Affidavit) ಹಾಗೂ ನಷ್ಟ ಭರ್ತಿ ಪತ್ರ (Indemnity) ಕೊಟ್ಟು ಠೇವಣಿ ಹಣ ಮೃತರ ಉಳಿತಾಯ ಖಾತೆಗೆ ಜಮಾ ಮಾಡಿಸಿ, ನಂತರ ನೀವು ಹಣ ಪಡೆಯಿರಿ.

ಯದುರಾಜ್, ಬೆಂಗಳೂರು
*ನಿವ್ವಳ ಆದಾಯ ಏರಿಳಿತಗಳಿರುವಾಗ ಕಳೆಯಬಹುದಾದ ಅಥವಾ ಪಡೆಯ ಬಹುದಾದ ವಿನಾಯಿತಿಗಳ ಬಗ್ಗೆ ವಿವರಣೆ ನೀಡಿರಿ.
ಉತ್ತರ:
ಮೊದಲನೆಯದಾಗಿ ವ್ಯಕ್ತಿಗಳ ವಯಸ್ಸಿಗನುಗುಣವಾಗಿ ಆಯಾ ವರ್ಷ ಬಜೆಟ್ಟಿನಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಮಿತಿ ಎಲ್ಲರೂ ಅನುಸರಿಸಬೇಕಾಗುತ್ತದೆ. ಈ ಕೆಳಗೆ ನಮೂದಿಸಿದ್ದ ಕೆಲವು ಮುಖ್ಯವಾದ ಸೆಕ್ಷನ್‌ಗಳ ಆಧಾರದ ಮೇಲೆ ಕೂಡಾ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ, ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ; ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು –560001
ಇ–ಮೇಲ್‌: businessdesk@prajavani.co.in  –ಸಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT