ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭಾಷಣೆಗೂ ಕನ್ನ ಹಾಕುವ ಸಾಧ್ಯತೆ

Last Updated 20 ಜೂನ್ 2017, 19:30 IST
ಅಕ್ಷರ ಗಾತ್ರ

ಧ್ವನಿ ಮೂಲಕವೇ ಸಂದೇಶ ಮತ್ತು ಕರೆಮಾಡುವ ಸೌಲಭ್ಯವಿರುವ ಸಿರಿ, ವೀ ಚಾಟ್‌ನಂತಹ ತಂತ್ರಾಂಶಗಳಲ್ಲಿ ಸಂಭಾಷಣೆಯನ್ನು ಕದ್ದಾಲಿಸಿ  ಅನುಕರಿಸುವ ಅಥವಾ ಹ್ಯಾಕ್‌ ಮಾಡುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ. ಹ್ಯಾಕಿಂಗ್ ಹಾವಳಿಯನ್ನು ತಪ್ಪಿಸಲು ಹೊಸ ತಂತ್ರಾಂಶ ಅಭಿವೃದ್ಧಿಪಡಿಸುತ್ತಿರುವ ವಿಜ್ಞಾನಗಳ ತಂಡ ಈ ವಿಷಯ ಬಹಿರಂಗ ಪಡಿಸಿದೆ.

ಗುಣಮಟ್ಟದ ಸುರಕ್ಷಾ ತಂತ್ರಜ್ಞಾನವನ್ನು ಅಳವಡಿಸಿದ್ದರೂ, ಕೆಲವು ನಿಮಿಷಗಳ ಸಂಭಾಷಣಾ ತುಣುಕುಗಳು ಸಿಕ್ಕರೆ ಸಾಕು ಹ್ಯಾಕರ್‌ಗಳು ನಿಮ್ಮ ಧ್ವನಿಯನ್ನು ಅನುಕರಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಹ್ಯಾಕರ್‌ಗಳು ನಿಮ್ಮ ಧ್ವನಿಯನ್ನು ಅನುಕರಣೆ ಮಾಡಿ ನಿಮ್ಮ ಕುಟುಂಬ ಸದಸ್ಯರೊಂದಿಗೆ, ಸ್ನೇಹಿತರೊಂದಿಗೆ ಮಾತನಾಡಿಸಿ ಬ್ಯಾಂಕ್‌ ಖಾತೆ, ಇತರ ಖಾಸಗಿ ಮಾಹಿತಿಯನ್ನು ಪಡೆಯುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈಗಾಗಲೇ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಪರಿಕರಗಳನ್ನೇ ಬಳಸಿಕೊಂಡು ಅಮೆರಿಕದ ಬಫಲೊ ವಿಶ್ವವಿದ್ಯಾಲಯದ ಸಂಶೋಧಕರು ಸಂಭಾಷಣೆಗೆ ಕನ್ನ ಹಾಕುವುದನ್ನು ತಡೆಯುಲು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಈ ತಂತ್ರಾಂಶವು ಧ್ವನಿ ಅನುಕರಣೆ ಮಾಡುವುದನ್ನು ಯಶಸ್ವಿಯಾಗಿ ತಡೆಗಟ್ಟುತ್ತದೆ ಎಂದು ಅವರು ಹೇಳಿದ್ದಾರೆ.

‘ಜೀವನದ ಪ್ರತಿಯೊಂದು ಹಂತದಲ್ಲೂ ಮೊಬೈಲ್‌ ಅನಿವಾರ್ಯವಾಗಿಬಿಟ್ಟಿದೆ. ನಮ್ಮ ಎಲ್ಲ ವಿವರಗಳು ಅದರಲ್ಲೇ ಇರುತ್ತವೆ. ದುರಂತವೆಂದರೆ ಈಗ ಅದು ಅಷ್ಟೊಂದು ಸುರಕ್ಷಿತವಾಗಿಲ್ಲ. ಹ್ಯಾಕರ್‌ಗಳ ವಕ್ರ ದೃಷ್ಟಿ ಅದರ ಮೇಲೆ ಬಿದ್ದಿದೆ. ಮೊಬೈಲ್‌ ಬಳಕೆದಾರರ ಊಹೆಗೂ ಮೀರಿದ ವ್ಯವಹಾರ ಇಲ್ಲಿ ನಡೆಯುತ್ತಿದೆ. ನಿಮ್ಮ ಪಾಸ್‌ವರ್ಡ್‌ ಇತ್ಯಾದಿ ಮಾಹಿತಿಯನ್ನು ಮಾರಾಟ ಮಾಡಲು ದೊಡ್ಡ ಜಾಲವೇ ಸೃಷ್ಟಿಯಾಗಿದೆ’ ಎಂದು ಯುಬಿಕ್ವಿಟೌಸ್‌ ಭದ್ರತೆ ಮತ್ತು ಗೋಪ್ಯತೆ ಸಂಶೋಧನಾ ಸಂಸ್ಥೆ (ಯುಬಿಸೆಕ್‌) ನಿರ್ದೇಶಕ  ಕ್ಯೂರೆನ್‌ ಅವರು ಎಚ್ಚರಿಸಿದ್ದಾರೆ.

ನಿಮ್ಮ ಮೊಬೈಲ್‌ ಹ್ಯಾಕಿಂಗ್‌ಗೆ ಗುರಿಯಾಗದಂತೆ ರಕ್ಷಣೆ ಕಲ್ಪಿಸಲು ಆಗಾಗ್ಗೆ ಸುರಕ್ಷಾ ತಂತ್ರಾಂಶಗಳನ್ನು ತಪ್ಪದೇ ಅಳವಡಿಸಿಕೊಳ್ಳುತ್ತಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಅಂತರ್ಜಾಲ ಆಧಾರಿತ  ಕೆಲವು ಪರಿಕರಗಳಲ್ಲಿ ಧ್ವನಿ ಗುರುತಿಸಿದ ನಂತರ ಕಾರ್ಯನಿರ್ವಹಿಸದಂತೆ ಸುರಕ್ಷಾ ಕ್ರಮಗಳನ್ನು ಅಳವಡಿಸುವುದು ಹೆಚ್ಚಾಗುತ್ತಿದೆ. ಏಕೆಂದರೆ ಅವುಗಳಲ್ಲಿ ಕೀಪ್ಯಾಡ್‌ ಸೌಲಭ್ಯ ಇರುವುದಿಲ್ಲ.

ಇನ್ನೊಂದು ಮುಖ್ಯ ಕಾರಣವೆಂದರೆ, ಟಚ್‌ ಸ್ಕ್ರೀನ್‌ ಅಥವಾ ಕೀಪ್ಯಾಡ್‌ ಸೌಲಭ್ಯ ಇರದ ಮತ್ತು ಮೊಬೈಲ್‌ ಹೊರತಾದ  ಅಂತರ್ಜಾಲ ಆಧಾರಿತ ಪರಿಕರಿಗಳಲ್ಲಿ ಧ್ವನಿ ಗುರುತಿಸುವ ವಿಧಾನವೇ ಹೆಚ್ಚು ಉಪಯುಕ್ತ ಎಂದು ರೆನ್‌ ಹೇಳುತ್ತಾರೆ. ಆದರೆ, ಇದು ಹ್ಯಾಕರ್‌ಗಳಿಗೆ ವರದಾನವಾಗುತ್ತಿರುವುದರಿಂದ ಈ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಕನ್ನ ಹಾಕುವವರು ನಿಮ್ಮ ಧ್ವನಿಯನ್ನು ಅನುಕರಿಸಿದರೂ ನಾವು  ಅಭಿವೃದ್ಧಿಪಡಿಸುತ್ತಿರುವ ತಂತ್ರಾಂಶ ಪತ್ತೆಹಚ್ಚಲಿದೆ.  ನಿಮ್ಮ ಧ್ವನಿ ಅನುಕರಿಸಿ ಹ್ಯಾಕರ್‌ಗಳು ಮಾತನಾಡಿದರೆ ಅವರ ಮಾತುಗಳು ಸ್ಪೀಕರ್‌ ಮೂಲಕವೇ  ಹಾದುಹೋಗಬೇಕು. ಹೀಗಾಗಿ ಸ್ಪೀಕರ್‌ಗಳಲ್ಲಿ ಅಳವಡಿಸುವ ಆಯಸ್ಕಾಂತಗಳನ್ನು ನಮ್ಮ ತಂತ್ರಾಂಶ  ಬಳಸಿಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಫೋನ್‌ನಲ್ಲಿರುವ ಮ್ಯಾಗ್ನೋ ಮೀಟರ್‌ಗಳು ಧ್ವನಿ ಅನುಕರಿಸಿ ಮಾತನಾಡುವುದನ್ನು ಪತ್ತೆಹಚ್ಚಲು ಉಪಯೋಗವಾಗುತ್ತವೆ. ಜತೆಗೆ ಫೋನ್‌ನಲ್ಲಿರುವ ನಕ್ಷಾ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಪೀಕರ್ ಮತ್ತು ಫೋನ್‌ ನಡುವಣ ಅಂತರವನ್ನು ಪತ್ತೆಹಚ್ಚಬಹುದು. ಹೀಗಾಗಿ ಈ ತಂತ್ರಜ್ಞಾನವನ್ನೂ ನಾವು ಬಳಸಿಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಮೊಬೈಲ್‌ ಫೋನ್‌ನಲ್ಲಿ ಮಾತನಾಡುವವರು ಫೋನ್‌ಗೆ ಹತ್ತಿರ ಇರುವುದು ಅನಿವಾರ್ಯ. ಆದರೆ ನಿಮ್ಮ ಧ್ವನಿ ಅನುಕರಣೆ ಮಾಡಿ ಮಾತನಾಡುವವರು ಬೇರೆ ಪ್ರದೇಶದಿಂದ ಮಾತನಾಡುತ್ತಿರುತ್ತಾರೆ. ಹ್ಯಾಕರ್‌ಗಳ ಧ್ವನಿ ನಿಮ್ಮ ಮೊಬೈಲ್‌ ಸ್ಪೀಕರ್‌ಗಳಲ್ಲಿ ಇರುವ ಮ್ಯಾಗ್ನೋಮೀಟರ್‌ನಲ್ಲಿ ದಾಖಲಾಗಲು ಸಾಧ್ಯವಿಲ್ಲ  ಹೀಗಾಗಿ ಅದು ನಿಮ್ಮ ಧ್ವನಿ ಅಲ್ಲ ಎಂದು ಪತ್ತೆಹಚ್ಚಬಹುದು.

ಸುರಕ್ಷಿತವಾಗಿರುವ ತಂತ್ರಾಂಶಗಳನ್ನು ಬಳಸಿ
ಅಂತರ್ಜಾಲ ಆಧಾರಿತ ಮೆಸೇಜಿಂಗ್‌ ಮತ್ತು ಕರೆ ಸೌಲಭ್ಯವಿರುವ ತಂತ್ರಾಂಶಗಳಲ್ಲಿ  ಆಗಾಗ್ಗೆ ಮಾಹಿತಿ ಸೋರಿಕೆಯಾಗದಂತೆ ಸುರಕ್ಷಾ ತಂತ್ರಾಂಶಗಳನ್ನು ಮತ್ತು ಸೆಕ್ಯೂರಿಟಿ ಪ್ಯಾಚ್‌ಗಳನ್ನು ಸಂಸ್ಥೆಯವರು  ಅಳವಡಿಸುತ್ತಿರುತ್ತಾರೆ.  ಅತಂಹ ಉತ್ತಮ ಕೆಲವು ತಂತ್ರಾಂಶಗಳ ಮಾಹಿತಿ ಇಲ್ಲಿದೆ.

*


ಸಿಗ್ನಲ್‌ 
ಇದನ್ನು ಸ್ಯಾನ್‌ಫ್ರಾನ್ಸಿಸ್ಕೊದ ಓಪನ್‌ ವಿಸ್ಪರ್‌ ಸಿಸ್ಟಂ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ಐಫೋನ್‌ ಮತ್ತು ಅಂಡ್ರಾಯ್ಡ್‌  ಆಧಾರಿತ ತಂತ್ರಾಂಶಗಳಲ್ಲಿ ಲಭ್ಯವಿದೆ. ಇದರಲ್ಲಿ ಎಂಡ್‌ಟು ಎಂಡ್ ಎನ್‌ಕ್ರಿಪ್ಟ್‌, ವಿಒಐಪಿ ಫೋನ್‌ ಕಾಲ್ಸ್, ರೀಡ್‌ ರಿಸಿಪ್ಟ್ಸ್‌ನಂತಹ ಹಲವು ಸೌಲಭ್ಯಗಳಿವೆ.

*


ಟೆಲಿಗ್ರಾಮ್‌ ಸೀಕ್ರೆಟ್ ಚಾಟ್ಸ್‌
ರಷ್ಯಾದ ಮಾರ್ಕ್ ಜುಕರ್‌ ಬರ್ಗ್‌ ಎಂದೇ ಖ್ಯಾತರಾದ ಪವೆಲ್‌ ಡುರೋವ್‌ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ಎಎಫ್‌ಎಫ್‌ ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದ್ದು, ಮಾಹಿತಿ ಹೆಚ್ಚು ಗೋಪ್ಯವಾಗಿರುತ್ತದೆ.

*


ಚಾಟ್‌ ಸೆಕ್ಯೂರ್
ಈ ತಂತ್ರಾಂಶವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಇದರಲ್ಲೂ ಎಂಡ್‌ ಟು ಎಂಡ್ ಎನ್‌ಕ್ರಿಪ್ಟ್ ಸೌಲಭ್ಯವೂ ಸೇರಿದಂತೆ ಹಲವು ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದೆ.

*


ಸೈಲೆಂಟ್‌ ಫೋನ್‌
ಈ ತಂತ್ರಾಂಶವನ್ನು ಐಫೋನ್‌ ಮತ್ತು ಆಂಡ್ರಾಯ್ಡ್‌ ಆಧಾರಿತ ಮೊಬೈಲ್‌ಫೋನ್‌ಗಳಲ್ಲಿ ಅಳವಡಿಸಿಕೊಳ್ಳಬಹುದು. ಇದರಲ್ಲಿ ಮಾಹಿತಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್‌ ಆಗಿರುತ್ತದೆ. ಇತರ ಪರಿಕರಗಳೊಂದಿಗೆ ಮಾಹಿತಿ ಹಂಚಿಕೊಂಡರೂ ಸೋರಿಕೆಯಾಗದಂತೆ ಸುರಕ್ಷಿತವಾಗಿರುತ್ತದೆ.

ಇದನ್ನು ಸೈಲೆಂಟ್ ಸರ್ಕಲ್‌ ಕಂಪೆನಿ ಅಭಿವೃಧ್ಧಿಪಡಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಿರುವ ಸಂಸ್ಥೆಗಳಲ್ಲಿ ಸಂವಹನ ನಡೆಸುವವರಿಗೆ ಇದು ಹೆಚ್ಚು ಉಪಯುಕ್ತ. ಇದರಲ್ಲಿ ವಿಡಿಯೋ ಕಾಲಿಂಗ್‌ ಸೌಲಭ್ಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT