ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ವಿಶ್ರಾಂತಿ ತಾಣಕ್ಕೆ ಕೋವಿಂದ್‌ಗೆ ಸಿಕ್ಕಿರಲಿಲ್ಲ ಪ್ರವೇಶ

Last Updated 20 ಜೂನ್ 2017, 19:30 IST
ಅಕ್ಷರ ಗಾತ್ರ

ಶಿಮ್ಲಾ:  ಬಿಹಾರ ರಾಜ್ಯಪಾಲ ಮತ್ತು ರಾಷ್ಟ್ರಪತಿ ಹುದ್ದೆಗಾಗಿ ಬಿಜೆಪಿ ಆಯ್ಕೆ ಮಾಡಿರುವ ಅಭ್ಯರ್ಥಿ ರಾಮನಾಥ ಕೋವಿಂದ್‌ ಅವರು ಕಳೆದ ತಿಂಗಳು ಶಿಮ್ಲಾದಲ್ಲಿರುವ, ಬೇಸಿಗೆಯಲ್ಲಿ ರಾಷ್ಟ್ರಪತಿಯವರು ವಿಶ್ರಾಂತಿ ಪಡೆಯುವ  ತಾಣಕ್ಕೆ (ರಿಟ್ರೀಟ್‌ ಬಿಲ್ಡಿಂಗ್‌) ತಮ್ಮ ಕುಟುಂಬದೊಂದಿಗೆ ಭೇಟಿ ನೀಡಲು ಬಯಸಿದ್ದರು. ಆದರೆ, ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು!

ಆದರೆ, ಇನ್ನು ಕೆಲವು ವಾರಗಳಲ್ಲಿ ಅದೇ ರಾಮನಾಥ ಕೋವಿಂದ್‌ ಅವರು   ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿರುವ ವಿಶ್ರಾಂತಿ ತಾಣದ ಮಾಲೀಕರಾಗುವುದು ಬಹುತೇಕ ಖಚಿತವಾಗಿದೆ. ಪತ್ನಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಮೇ 28ರಂದು ಶಿಮ್ಲಾಕ್ಕೆ ಭೇಟಿ ನೀಡಿದ್ದ ಕೋವಿಂದ್‌ ಸುತ್ತಮುತ್ತಲಿನ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು.

ಆದರೆ, ಮಶೋಬ್ರಾ ಬೆಟ್ಟದಲ್ಲಿ  ಬಿಗಿ ಭದ್ರತಾ ವಲಯದಲ್ಲಿರುವ ವಿಶ್ರಾಂತಿ ತಾಣಕ್ಕೆ ಕೋವಿಂದ್‌ ತಲುಪಿದಾಗ, ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಕೋವಿಂದ್‌ ಅವರು ಭೇಟಿಗೆ ಮುಂಚಿತವಾಗಿ ಅನುಮತಿ ಪಡೆದಿರಲಿಲ್ಲ. ಈ ವಿಶ್ರಾಂತಿ ತಾಣವು ರಾಷ್ಟ್ರಪತಿಯವರ ಎಸ್ಟೇಟ್‌ನ ಭಾಗವಾಗಿದೆ. ಇದು ಮೊದಲು ವೈಸ್‌ರೀಗಲ್‌ ಲಾಡ್ಜ್‌ ಆಗಿತ್ತು. ಸ್ವಾತಂತ್ರ್ಯಾನಂತರ ಅದನ್ನು ರಾಷ್ಟ್ರಪತಿ ಭವನವನ್ನಾಗಿ ಮಾಡಲಾಯಿತು. ಆ ಬಳಿಕ ಅದನ್ನು ಸಂಶೋಧನೆಯ ಉದ್ದೇಶಕ್ಕೆ ಬಳಸುವುದಕ್ಕಾಗಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್‌ ಸ್ಟಡಿಗೆ (ಐಐಎಎಸ್‌) ಹಸ್ತಾಂತರಿಸಲಾಗಿತ್ತು.

ರಾಷ್ಟ್ರಪತಿ ಹುದ್ದೆಯಲ್ಲಿರುವವರು ಪ್ರತಿವರ್ಷ ಒಮ್ಮೆಯಾದರೂ ಈ ತಾಣಕ್ಕೆ ಭೇಟಿ ನೀಡುತ್ತಾರೆ. ಆ ಸಂದರ್ಭದಲ್ಲಿ ಇಡೀ ರಾಷ್ಟ್ರಪತಿ ಕಚೇರಿ ಇಲ್ಲಿಗೆ ಸ್ಥಳಾಂತರಗೊಳ್ಳುತ್ತದೆ.

ಕೋವಿಂದ್‌ ಅವರು ಶಿಮ್ಲಾ ಪ್ರವಾಸದ ಸಂದರ್ಭದಲ್ಲಿ ತಮ್ಮ ಪತ್ನಿಯೊಂದಿಗೆ ಅಧಿಕೃತ ಕಾರಿನಲ್ಲಿಯೇ ಸುತ್ತಾಡಿದ್ದರು. ಅವರ ಕುಟುಂಬದ ಸದಸ್ಯರು ಬಾಡಿಗೆ ಟ್ಯಾಕ್ಸಿಯಲ್ಲಿ ಸುತ್ತಿದ್ದರು.

‘ನ್ಯಾಯಾಂಗದ ಟೀಕೆ ತಪ್ಪಲ್ಲ’
ನವದೆಹಲಿ: ದೇಶದ ರಾಷ್ಟ್ರಪತಿಯನ್ನು ಟೀಕಿಸಬಹುದು ಎಂದಾದರೆ ನ್ಯಾಯಮೂರ್ತಿಗಳನ್ನು ಟೀಕಿಸಬಾರದು ಎಂದು ಹೇಳುವುದಕ್ಕೆ ಅರ್ಥವೇ ಇಲ್ಲ ಎಂಬುದು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ ಕೋವಿಂದ್‌ ಅವರ ಅಭಿಪ್ರಾಯ.

2006ರಲ್ಲಿ ನ್ಯಾಯಾಂಗ ನಿಂದನೆ (ತಿದ್ದುಪಡಿ) ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಕೋವಿಂದ್‌ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದೇ ರಾಷ್ಟ್ರಪತಿ. ರಾಷ್ಟ್ರಪತಿಯನ್ನು ವಿಮರ್ಶಿಸುವುದಕ್ಕೆ ಅವಕಾಶ ಇದೆ. ಹಾಗೆಯೇ ನ್ಯಾಯಾಂಗವನ್ನು ವಿಮರ್ಶಿಸುವುದಕ್ಕೂ ಅವಕಾಶ ಇರಬೇಕು ಎಂದು ಅವರು ಒತ್ತಾಯಿಸಿದ್ದರು.

ಉತ್ತರಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಕೋವಿಂದ್‌ ಅವರು ಈ ಮಸೂದೆಯ ಬಗ್ಗೆ ವಿವರವಾಗಿ ಮಾತನಾಡಿದ್ದರು.

ರಾಜ್ಯಪಾಲ ಹುದ್ದೆಗೆ ರಾಜೀನಾಮೆ
ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ನಾಮಕರಣಗೊಂಡಿರುವ ರಾಮನಾಥ ಕೋವಿಂದ್ ಅವರು ಮಂಗಳವಾರ ಬಿಹಾರದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯಪಾಲ ಕೇಸರಿನಾಥ್‌ ತ್ರಿಪಾಠಿ ಅವರಿಗೆ ಬಿಹಾರ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆ ತಿಳಿಸಿದೆ.

ವಿರೋಧ ಪಕ್ಷಗಳ ಅಭ್ಯರ್ಥಿ  ಖಚಿತ
ನವದೆಹಲಿ: ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಆಯ್ಕೆ ಮಾಡಿರುವ ಅಭ್ಯರ್ಥಿ ರಾಮನಾಥ ಕೋವಿಂದ್‌ ಅವರ ವಿರುದ್ಧ ಸ್ಪರ್ಧಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಸಮರ್ಥ ಅಭ್ಯರ್ಥಿಯನ್ನು ಗುರುತಿಸುವಂತೆ ಎಡಪಕ್ಷಗಳು ಕಾಂಗ್ರೆಸ್‌ ಪಕ್ಷಕ್ಕೆ ಮನವಿ ಮಾಡಿವೆ.

ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಗುರುವಾರ ಸಭೆ ಸೇರಿ ಅಭ್ಯರ್ಥಿ ಬಗ್ಗೆ ನಿರ್ಧರಿಸಲಿವೆ. ಉತ್ತರ ಪ್ರದೇಶದ ದಲಿತ ಸಮುದಾಯಕ್ಕೆ ಸೇರಿದ ಕೋವಿಂದ್‌ ಅವರನ್ನು ವಿರೋಧಿಸುವ ನಿರ್ಧಾರವನ್ನು ಜೆಡಿಯು, ಎಸ್‌ಪಿ ಮತ್ತು ಬಿಎಸ್‌ಪಿ ಬೆಂಬಲಿಸುವ ಸಾಧ್ಯತೆ ಇಲ್ಲ. ಸ್ಪರ್ಧಿಸಲೇಬೇಕು ಎಂಬ ಕಾರಣಕ್ಕೆ ದಲಿತ ಸಮುದಾಯಕ್ಕೆ ಸೇರಿದ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆಯೂ ಒಮ್ಮತ ಮೂಡುವುದು ಕಷ್ಟ ಎಂದು ಹೇಳಲಾಗುತ್ತಿದೆ.

ದಲಿತ ಮತಬ್ಯಾಂಕನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಬಿಜೆಪಿ ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದೆ. ಅದಕ್ಕೆ ತಿರುಗೇಟು ನೀಡಲು ವಿರೋಧ ಪಕ್ಷಗಳು ಕೂಡ ದಲಿತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂಬ ಅಭಿಪ್ರಾಯ ಕೆಲವು ಪಕ್ಷಗಳಲ್ಲಿ ಇದೆ.

ಲೋಕಸಭೆಯ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಮತ್ತು ಕೇಂದ್ರದ ಮಾಜಿ  ಸಚಿವ ಸುಶೀಲ್‌ ಕುಮಾರ್‌ ಶಿಂಧೆ, ಕೃಷಿ ವಿಜ್ಞಾನಿ ಎಂ.ಎಸ್‌. ಸ್ವಾಮಿನಾಥನ್‌, ಅಣು ವಿಜ್ಞಾನಿ ಅನಿಲ್‌ ಕಾಕೋಡ್ಕರ್‌ ಮತ್ತು ಬಿ.ಆರ್‌. ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಅವರ ಹೆಸರು ಈಗ ಮುಂಚೂಣಿಗೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT