ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸುತ್ತಿವೆ ಶಾಲಾ ವಾಹನ

Last Updated 21 ಜೂನ್ 2017, 9:17 IST
ಅಕ್ಷರ ಗಾತ್ರ

ಮೈಸೂರು: ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವಿದ್ಯಾರ್ಥಿಗಳಿಗೆ ಸೇವೆ ಒದಗಿಸುತ್ತಿರುವ ವಾಹನಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶಿಕ್ಷಣ, ಸಾರಿಗೆ ಹಾಗೂ ಪೊಲೀಸ್ ಇಲಾಖೆಯ ನಡುವೆ ಸಮನ್ವಯದ ಕೊರತೆ ಇದೆ. ಇದರಿಂದ ಮಕ್ಕಳು ನಿತ್ಯ ಆತಂಕದಲ್ಲಿ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲಾ ವಾಹನ ಹಾಗೂ ಮಕ್ಕಳ ಪ್ರಯಾಣಕ್ಕೆ ಸಂಬಂಧಿಸಿದ ವಿಚಾರ ಸಾರಿಗೆ ಇಲಾಖೆಗೆ ಸಂಬಂಧಿಸಿದ್ದು ಎಂಬುದು ಶಿಕ್ಷಣ ಇಲಾಖೆಯ ನಿಲುವು. ಪರವಾನಗಿ ನೀಡುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ವಾಹನಗಳ ಸುಸ್ಥಿತಿಯನ್ನು ಮಾತ್ರ ಪರಿಶೀಲಿಸುತ್ತಿದ್ದಾರೆ. ವಾರಕ್ಕೊಮ್ಮೆ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಮಾರ್ಗಸೂಚಿ ಉಲ್ಲಂಘಿಸುವವರಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

ನಿತ್ಯ ಬೆಳಿಗ್ಗೆ 8.30ರಿಂದ 10 ಹಾಗೂ ಸಂಜೆ 4ರಿಂದ 5.30ರ ಅವಧಿಯಲ್ಲಿ ವಾಹನಗಳು ಮಕ್ಕಳಿಗೆ ಸೇವೆ ಒದಗಿಸುತ್ತಿವೆ. ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ವಾಹನಕ್ಕೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿವೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ಮಾಸಿಕ ₹ 3 ಸಾವಿರ ಪ್ರಯಾಣ ಶುಲ್ಕ ನಿಗದಿಪಡಿಸಿದೆ. ಇಷ್ಟು ಹಣ ತೆರುವ ಸಾಮರ್ಥ್ಯ ಇಲ್ಲದ ಮಧ್ಯಮವರ್ಗದ ಮಕ್ಕಳಿಗೆ ಆಟೊ ಹಾಗೂ ಮಾರುತಿ ಆಮ್ನಿ ಅನಿವಾರ್ಯವಾಗಿವೆ.

12 ವರ್ಷದ ಒಳಗಿನ ಮಕ್ಕಳಿಗೆ ಸೇವೆ ಒದಗಿಸುವ ವಾಹನಗಳಿಗೆ ಮಾತ್ರ ನಿಗದಿಗಿಂತ ಒಂದೂವರೆಪಟ್ಟು ಹೆಚ್ಚಿನ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಟೊ ಹಾಗೂ ಆಮ್ನಿಯಲ್ಲಿ ಬ್ಯಾಗುಗಳ ನಡುವೆ ಪ್ರಯಾಣಿಸುವ ಮಕ್ಕಳ ಪಾಡು ಹೇಳತೀರದಾಗಿದೆ. ನಿಗದಿಗಿಂತ ಹೆಚ್ಚು ಮಕ್ಕಳನ್ನು ವಾಹನದಲ್ಲಿ ತುಂಬಿದ್ದು ಕಂಡು ಬಂದರೆ, ಒಂದು ವಿದ್ಯಾರ್ಥಿಗೆ ₹ 100ರಂತೆ ಚಾಲಕರಿಂದ ದಂಡ ವಸೂಲಿ ಮಾಡಲಾಗುತ್ತಿದೆ.

‘ಸಂಚಾರ ನಿಯಮ ಉಲ್ಲಂಘನೆ ಮಾಡುವ ಶಾಲಾ ವಾಹನಗಳ ವಿರುದ್ಧ ವಾರಕ್ಕೆ ಒಮ್ಮೆಯಾದರೂ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಮಾರ್ಗಸೂಚಿಯಲ್ಲಿನ ನಿಯಮಕ್ಕಿಂತ ಹೆಚ್ಚಿನ ಮಕ್ಕಳನ್ನು ವಾಹನಗಳಿಗೆ ತುಂಬಿದ್ದು ಹೆಚ್ಚಾಗಿ ಕಂಡು ಬಂದಿದೆ. ಕೆಲವೊಮ್ಮೆ ಮಕ್ಕಳ ಉಸಿರಾಟಕ್ಕೂ ತೊಂದರೆ ಉಂಟಾಗಿದೆ. ಸಾರ್ವಜನಿಕರು ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ’ ಎನ್ನುತ್ತಾರೆ ಪೊಲೀಸರು.

ನಗರ ಸಾರಿಗೆ ಬಸ್‌ಗಳ ಸಂಚಾರ ಸಮಸ್ಯೆಯೂ ಶಾಲಾ ಮಕ್ಕಳಿಗೆ ಸಮಸ್ಯೆ ಸೃಷ್ಟಿಸಿದೆ. ವಿದ್ಯಾರ್ಥಿಗಳು ಪ್ರಯಾಣಿಸುವ ಅವಧಿಯಲ್ಲಿ ಬಸ್‌ಗಳ ಕೊರತೆಯೂ ಇದೆ. 
ಹೊರವಲಯದ ಬಡಾವಣೆಯ ಮಕ್ಕಳು ಶಾಲೆಗೆ ಬರಲು ಖಾಸಗಿ ವಾಹನ ಅವಲಂಬಿಸುವುದು ಅನಿವಾರ್ಯವಾಗಿದೆ.

ಸರ್ಕಾರದ ಮಾರ್ಗಸೂಚಿ
* ಹಳದಿ ಬಣ್ಣದ ಶಾಲಾ ವಾಹನದ ಸುತ್ತ ಹಸಿರು ಅಡ್ಡಪಟ್ಟಿ ಹಾಕಬೇಕು. ದಪ್ಪಾಕ್ಷರದಲ್ಲಿ ‘ಸ್ಕೂಲ್‌ ಕ್ಯಾಬ್‌’ ಎಂದು ನಮೂದಿಸಬೇಕು.
* ಶಾಲಾ ವಾಹನಗಳಿಗೆ ಸ್ಪೀಡ್ ಗವರ್ನರ್‌ ಕಡ್ಡಾಯ. 15 ವರ್ಷ ಮೀರಿದ ವಾಹನ ಬಳಸುವಂತಿಲ್ಲ. ವೇಗದ ಮಿತಿ– 40 ಕಿ.ಮೀ.
* ಎಲ್‌ಪಿಜಿ ಟ್ಯಾಂಕ್ ಮೇಲೆ ಆಸನ ಇರಬಾರದು. ಆಸನ ವ್ಯವಸ್ಥೆ ಬದಲಾಯಿಸುವಂತಿಲ್ಲ.
* ಬ್ಯಾಗ್‌ ಇಡಲು ಸ್ಥಳಾವಕಾಶವಿರಬೇಕು. ವಾಹನದ ಹೊರಗೆ ಬ್ಯಾಗ್‌ಗಳನ್ನು ನೇತು ಹಾಕಬಾರದು.
* ವಾಹನದ ಬಾಗಿಲಿಗೆ ಉತ್ತಮ ಲಾಕಿಂಗ್‌ ವ್ಯವಸ್ಥೆ ಇರಬೇಕು. ವಾಹನ ಚಾಲಕರು ಕನಿಷ್ಠ 4 ವರ್ಷ ಅನುಭವ ಹೊಂದಿರಬೇಕು.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಂಖ್ಯೆ

2,143 ಸರ್ಕಾರಿ ಶಾಲೆಗಳು

286 ಅನುದಾನಿತ

869 ಅನುದಾನ ರಹಿತ

7 ಕೇಂದ್ರೀಯ ಪಠ್ಯಕ್ರಮ

49 ಸರ್ಕಾರಿ ವಸತಿ ಶಾಲೆ

* * 

ಖಾಸಗಿ ಶಾಲಾ ವಾಹನಗಳಿಗೆ ಅನುಮತಿ ನೀಡುವ ಅಧಿಕಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (ಆರ್‌ಟಿಒ) ಇದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಜವಾಬ್ದಾರಿ ಕೂಡ ಅವರದು
ಎಚ್‌.ಆರ್‌.ಬಸಪ್ಪ
ಡಿಡಿಪಿಐ

* * 

ಪರವಾನಗಿ ಪಡೆದ ವಾಹನಗಳನ್ನು ಮಾತ್ರ ವಿದ್ಯಾರ್ಥಿಗಳ ಪ್ರಯಾಣಕ್ಕೆ ಬಳಸಬೇಕು. ವಿಶೇಷ ಕಾರ್ಯಾಚರಣೆ ನಡೆಸಿ ತಪಾಸಣೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
ಸಿ.ಟಿ.ಮೂರ್ತಿ
ಜಂಟಿ ನಿರ್ದೇಶಕರು, ಪ್ರಾದೇಶಿಕ ಸಾರಿಗೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT