ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊದಲ್ಲಿ ಹಿಂದಿ ಭಾಷೆ ಬಳಕೆ ವಿರೋಧಿಸಿ ವಾಟಾಳ್ 'ಕಿರಿಕ್' ಮಾಡಿಲ್ಲ ಯಾಕೆ?

Last Updated 21 ಜೂನ್ 2017, 17:50 IST
ಅಕ್ಷರ ಗಾತ್ರ

ಬೆಂಗಳೂರು:‘ನಮ್ಮ ಮೆಟ್ರೊ’ ದಲ್ಲಿ ಅನವಶ್ಯಕವಾಗಿ ಹಿಂದಿ ಭಾಷೆ ಬಳಕೆಯನ್ನು ವಿರೋಧಿಸಿ #nammametrohindibeda (ನಮ್ಮಮೆಟ್ರೊಹಿಂದಿಬೇಡ), #nammametrokannadasaaku (ನಮ್ಮಮೆಟ್ರೊಕನ್ನಡಸಾಕು) ಟ್ವಿಟರ್ ಅಭಿಯಾನ ನಡೆದಿದೆ.

ಬಸವನ ಗುಡಿ ಸೇರಿದಂತೆ ಹಲವು ಮೆಟ್ರೊ ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಹಿಂದಿ ಭಾಷೆಗೆ ಎರಡನೇ ಸ್ಥಾನ ಕಲ್ಪಿಸಲಾಗಿದೆ. ಈ ಹಿಂದೆ ಹಿಂದಿ ಭಾಷೆಗೆ ಮೂರನೇ ಸ್ಥಾನ ನೀಡಲಾಗಿತ್ತು. ಇದು ಹೀಗೆಯೇ ಮುಂದುವರಿದರೆ ಕೇಂದ್ರ ಸರ್ಕಾರ ಮುಂದೊಂದು ದಿನ ಕನ್ನಡವನ್ನೇ  ಮಾಯವಾಗಿಸಿ ಹಿಂದಿ ಭಾಷೆಗೆ ಮೊದಲ ಸ್ಥಾನ ನೀಡಬಹುದು ಎಂದು ನಮ್ಮ ಮೆಟ್ರೊ ನಮ್ಮದಾಗೇ ಉಳಿಯಬೇಕು ಎಂದರೆ ಅಲ್ಲಿ ಅನವಶ್ಯಕ ಹಿಂದಿ ಹೇರಿಕೆ ನಿಲ್ಲಬೇಕು. ಹಿಂದಿ ಹೇರಿಕೆಯ ಪ್ರಮಾಣ ತಗ್ಗಿದೆ, ಆದರೆ ನಿಂತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ, ಮೆಟ್ರೊ ಅಧಿಕಾರಿಗಳ ಗಮನ ಸೆಳೆದು, ಬೆಂಗಳೂರಿನ ಮೆಟ್ರೊದಲ್ಲಿ ಕನ್ನಡ ಸಾರ್ವಭೌಮತ್ವ ಎತ್ತಿ ಹಿಡಿಯಲು ಒತ್ತಾಯಿಸಿ ಈ ಟ್ವಿಟರ್ ಅಭಿಯಾನ ಆಯೋಜಿಸಲಾಗಿದೆ ಎಂದು ಬನವಾಸಿ ಬಳಗ ತನ್ನ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದೆ.

ಈ ಅಭಿಯಾನಕ್ಕೆ ನೆಟಿಜನ್‍ಗಳಿಂದ ಹೆಚ್ಚಿನ ಬೆಂಬಲವೂ ವ್ಯಕ್ತವಾಗಿದೆ. #StopHindiImposition ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದ್ದು, ಸುದ್ದಿ ವಾಹಿನಿಗಳಲ್ಲಿ ಈ ಬಗ್ಗೆ ಚರ್ಚೆಯೂ ನಡೆಯುತ್ತಿದೆ.

ಇಷ್ಟೆಲ್ಲಾ ಕಾರ್ಯಗಳು ನಡೆಯುತ್ತಿರುವಾಗ ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್ ಆಗಲಿ, ಸಾಮಾಜಿಕ ತಾಣದಲ್ಲಿ ಸೆಲೆಬ್ರಿಟಿ ಆಗಿರುವ 'ಕನ್ನಡಾಭಿಮಾನಿ' ಕಿರಿಕ್ ಕೀರ್ತಿ ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮತ್ತು ನಮ್ಮ ಮೆಟ್ರೊದಲ್ಲಿ ಅನವಶ್ಯಕವಾಗಿ ಹಿಂದಿ ಭಾಷೆ ಬಳಕೆಯ ಬಗ್ಗೆ ಯಾಕೆ ಸೊಲ್ಲೆತ್ತುತ್ತಿಲ್ಲ ಎಂದು ಕೆಲವು ನೆಟಿಜನ್‍ಗಳು ಪ್ರಶ್ನೆ ಎತ್ತಿದ್ದಾರೆ.

ನಮ್ಮ ಮೆಟ್ರೊದಲ್ಲಿ ಹಿಂದಿ ಭಾಷೆ ಬಳಕೆಯನ್ನು ವಿರೋಧಿಸಿ ಟ್ವಿಟರ್ ಅಭಿಯಾನದ ಬಗ್ಗೆ ಅರುಣ್ ಜಾವಗಲ್ ಅವರ ಸ್ಟೇಟಸ್‍ನ್ನು ಕಿರಿಕ್ ಕೀರ್ತಿ ಅವರು ತಮ್ಮ ಫೇಸ್‍ಬುಕ್ ಪುಟದಲ್ಲಿ ಹಂಚಿಕೊಂಡಿದ್ದು ಬಿಟ್ಟರೆ, ಬೇರೆ ಯಾವ ಚಟುವಟಿಕೆಗಳಲ್ಲೂ ಭಾಗಿಯಾಗಿಲ್ಲ.

ಈ ಹಿಂದೆ ಕರ್ನಾಟಕದ ನೆಲ, ಜಲ, ಕನ್ನಡ ಭಾಷೆ ವಿಷಯ ಬಂದಾಗ ಕಿರಿಕ್ ಕೀರ್ತಿ ಸಾಮಾಜಿಕ ತಾಣದಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಆದರೆ ನಮ್ಮ ಮೆಟ್ರೊದಲ್ಲಿನ ಹಿಂದಿ ಭಾಷೆ ಬಳಕೆ ಬಗ್ಗೆ ಅವರ್ಯಾಕೆ ಸುಮ್ಮನಿದ್ದಾರೆ? ಎಂಬುದು ನೆಟಿಜನ್‌ಗಳ ಪ್ರಶ್ನೆ.

ಎಲ್ಲಿ ಹೋದರು ವಾಟಾಳ್?
ನೆಲದ ಭಾಷೆಯ ವಿಷಯ ಬಂದಾಗ ಹೋರಾಟ, ಬಂದ್‍ಗೆ ಕರೆ ನೀಡುತ್ತಿದ್ದ ವಾಟಾಳ್ ನಾಗರಾಜ್, ನಮ್ಮ ಮೆಟ್ರೊದಲ್ಲಿ ಹಿಂದಿ ಹೇರಿಕೆ ಬಗ್ಗೆ ಇಲ್ಲಿಯವರೆಗೆ ಏನೂ ಪ್ರತಿಕ್ರಿಯೆ ನೀಡಿಲ್ಲ.

ಕಳಸಾ ಬಂಡೂರಿ, ಬೆಮಲ್ ಖಾಸಗೀಕರಣ ವಿರೋಧ, ಮಹಾದಾಯಿ ಯೋಜನೆ ಸೇರಿದಂತೆ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರಕಾರ ವಿಫಲವಾಗಿರುವುದನ್ನು ಖಂಡಿಸಿ ಜೂ. 12 ರಂದು ಕರ್ನಾಟಕ ಬಂದ್ ಆಚರಿಸಲು ಕರೆ ನೀಡಿದ್ದರು ವಾಟಾಳ್. ಆದರೆ ಈ ಬಂದ್ ಯಶಸ್ವಿಯಾಗಲಿಲ್ಲ. ಡಬ್ಬಿಂಗ್ ವಿರೋಧಿಸಿ ವಾಟಾಳ್ ಅವರ ನೇತೃತ್ವದಲ್ಲಿ ನಡೆದ ಚಳುವಳಿಗಳು ಎಲ್ಲರಿಗೂ ನೆನಪಿದೆ.

ಕೆಲವು ವಾರಗಳ ಹಿಂದೆಯಷ್ಟೇ ಪಕ್ಕದ ರಾಜ್ಯ ಕೇರಳದಲ್ಲಿ ಮಲಯಾಳಂ ಕಡ್ಡಾಯಗೊಳಿಸಿದರ ಬಗ್ಗೆ ವಾಟಾಳ್ ದನಿಯೆತ್ತಿದ್ದರು. ಕೇರಳದಲ್ಲಿ ಮಲಯಾಳಂ ಕಡ್ಡಾಯ ಮಾಡಿದರೆ ಅಲ್ಲಿರುವ ಕಾಸರಗೋಡಿನ ಕನ್ನಡಿಗರಿಗೆ ಅನ್ಯಾಯವಾಗುತ್ತದೆ. ಕಾಸರಗೋಡಿನಲ್ಲಿ ಕನ್ನಡಕ್ಕೆ ಮಾನ್ಯತೆ ಬೇಕು, ಕೇರಳ ಸರ್ಕಾರ ಮಲಯಾಳಂ ಕಡ್ಡಾಯ ಆದೇಶ ಹಿಂದಕ್ಕೆ ಪಡೆಯದಿದ್ದರೆ ಕರ್ನಾಟಕದಲ್ಲಿರುವ ಮಲಯಾಳಿಗಳನ್ನು ಓಡಿಸುತ್ತೇವೆ ಎಂದು ವೀರಾವೇಷದಿಂದ ಹೇಳಿದ್ದ ವಾಟಾಳ್, ನಮ್ಮ ಮೆಟ್ರೊ ರೈಲಿನಲ್ಲಿ ಹಿಂದಿ ಭಾಷೆ ಬಳಕೆ ವಿರೋಧಿಸಿ ಅಭಿಯಾನಗಳು ನಡೆಯುತ್ತಿದ್ದರೂ ಮೌನವಹಿಸಿರುವುದು ಯಾಕೆ? ಎಂಬ ಪ್ರಶ್ನೆ ಸಾಮಾನ್ಯ ಕನ್ನಡಿಗರದ್ದು.

[related]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT