ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಡ್‌ಕಾನ್‌ಸ್ಟೆಬಲ್ ಸೇರಿ ನಾಲ್ವರ ಸೆರೆ

Last Updated 21 ಜೂನ್ 2017, 20:02 IST
ಅಕ್ಷರ ಗಾತ್ರ

ಬೆಂಗಳೂರು: ಟರ್ಕಿ ದೇಶದ ನಿಷೇಧಿತ ನೋಟುಗಳನ್ನು ಮಾರುವ ಯತ್ನದಲ್ಲಿದ್ದ ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೆಬಲ್ ಸೇರಿ ನಾಲ್ವರು ಆರೋಪಿಗಳು ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ಕಾನ್‌ಸ್ಟೆಬಲ್ ನಾಗರಾಜು (40), ಚಿತ್ರದುರ್ಗದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವರಾಜ್ (50),  ಚಲನಚಿತ್ರ ನಿರ್ಮಾಣ ವಿಭಾಗದ ವ್ಯವಸ್ಥಾಪಕ ಮುರಳಿ (40) ಹಾಗೂ ದಾವಣಗೆರೆಯ ರಿಯಲ್ ಎಸ್ಟೇಟ್ ಉದ್ಯಮಿ ಅರವಿಂದ್ ಪ್ರಸಾದ್ (40)  ಎಂಬುವರನ್ನು ಬಂಧಿಸಿದ್ದೇವೆ.

ಪ್ರಮುಖ ಆರೋಪಿ ತೆಲಂಗಾಣದ ಚನ್ನಕೇಶವರೆಡ್ಡಿ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳಿಂದ 5 ಲಕ್ಷ ಲಿರಾ (ಟರ್ಕಿ ಕರೆನ್ಸಿ) ಮುಖಬೆಲೆಯ 78 ನೋಟುಗಳನ್ನು (ಭಾರತೀಯ ಮೌಲ್ಯ ₹ 70.25 ಕೋಟಿ) ಜಪ್ತಿ ಮಾಡಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ತಿಳಿಸಿದರು.
‘2007 ರಿಂದ 2015ರವರೆಗೆ ಆಂತರಿಕ ಭದ್ರತಾ ವಿಭಾಗದಲ್ಲಿದ್ದ ನಾಗರಾಜು, ನಂತರ ಚಿತ್ರದುರ್ಗಕ್ಕೆ ವರ್ಗವಾಗಿದ್ದ. ಮಂಗಳವಾರ ರಾತ್ರಿ ತನ್ನನ್ನು ಬಂಧಿಸಲು ಬಂದಿದ್ದ ಮಾರತ್ತಹಳ್ಳಿಠಾಣೆ ಕಾನ್‌ಸ್ಟೆಬಲ್ ತಿಮ್ಮಪ್ಪರಾಜು ಮೇಲೆ ಆತ ಸರ್ವಿಸ್ ಪಿಸ್ತೂಲ್‌ನಿಂದ ಗುಂಡು ಹಾರಿಸಲು ಯತ್ನಿಸಿದ್ದ. ಹೀಗಾಗಿ, ಕೊಲೆ ಯತ್ನ ಹಾಗೂ ಶಸ್ತ್ರಾಸ್ತ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ’ ಎಂದರು.

ಉದ್ಯಮಿಗೆ ಕರೆ: ಮಾರತ್ತಹಳ್ಳಿಯ ಉದ್ಯಮಿ ಶಕೀರ್ ಎಂಬುವರಿಗೆ ಮೂರು ತಿಂಗಳಿನಿಂದ ಕರೆ ಮಾಡುತ್ತಿದ್ದ ನಾಗರಾಜ್, ‘ನಮ್ಮ ಬಳಿ ಟರ್ಕಿ ದೇಶದ ನೋಟುಗಳಿವೆ. ಅವು ₹ 100 ಕೋಟಿ ಭಾರತೀಯ ರೂಪಾಯಿಗೆ ಸರಿ ಹೊಂದುತ್ತವೆ. ನೀವು ₹ 27 ಲಕ್ಷ ಕೊಟ್ಟು ಆ ನೋಟುಗಳನ್ನು ಖರೀದಿಸಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ  ವಿನಿಮಯ ಮಾಡಿಕೊಂಡರೆ ರಾತ್ರೋರಾತ್ರಿ ಶ್ರೀಮಂತರಾಗುತ್ತೀರಿ’ ಎಂದು ಆಮಿಷ ಒಡ್ಡುತ್ತಿದ್ದ.
ಈ ವಿಷಯವನ್ನು ಅವರು ಸ್ನೇಹಿತ ಚೆಲ್ಲಸ್ಯಾಮ್ಯುಯಲ್‌ ಬಳಿ ಹೇಳಿಕೊಂಡಿದ್ದರು. ಅನುಮಾನಗೊಂಡ ಅವರು, ನಾಗರಾಜುಗೆ ಕರೆ ಮಾಡಿ ನೋಟುಗಳ ಸಮೇತ ಬೆಂಗಳೂರಿಗೆ ಬರುವಂತೆ ತಿಳಿಸಿದ್ದರು. ಅಂತೆಯೇ ಜೂನ್ 20ರ ಮಧ್ಯಾಹ್ನ 1.30ರ ಸುಮಾರಿಗೆ ಆತ ನಾಲ್ವರು ಸಹಚರರ ಜತೆ ಮಾರತ್ತಹಳ್ಳಿ ಸೇತುವೆ ಬಳಿ ಬಂದಿದ್ದ.
ತಮ್ಮನ್ನು ಭೇಟಿಯಾದ ಆ ಸ್ನೇಹಿತರಿಬ್ಬರಿಗೆ 5 ಲಕ್ಷ ಲಿರಾ ಮುಖಬೆಲೆಯ ಒಂದು ನೋಟನ್ನು ತೋರಿಸಿದ್ದ  ಆರೋಪಿಗಳು, ‘ನಮ್ಮ ಬಳಿ ಇಂಥ 78 ನೋಟುಗಳಿವೆ’ ಎಂದಿದ್ದರು. ಅವುಗಳನ್ನು ಖರೀದಿಸಲು ಒಪ್ಪಿಕೊಂಡ ಇವರು, ಹಣ ಹೊಂದಿಸಿಕೊಂಡು ರಾತ್ರಿ 8.30ರ ಸುಮಾರಿಗೆ ಮಾರತ್ತಹಳ್ಳಿ ವರ್ತುಲ ರಸ್ತೆಯ ಇನೋವೇಟಿವ್ ಮಲ್ಟಿಪ್ಲೆಕ್ಸ್‌ನಲ್ಲಿರುವ ಕಾರು ನಿಲುಗಡೆ ಪ್ರದೇಶಕ್ಕೆ ಬರುವುದಾಗಿ ತಿಳಿಸಿ ಬಂದಿದ್ದರು.
ಈ ಹಂತದಲ್ಲಿ ಅವರಿಗೆ ‘ಕೋಟ್ಯಂತರ ಮೌಲ್ಯದ ನೋಟುಗಳನ್ನೇಕೆ ಕೇವಲ ₹ 27 ಲಕ್ಷಕ್ಕೆ ನಮಗೆ ಕೊಡುತ್ತಿದ್ದಾರೆ. ನಮ್ಮ ಹಣ ದೋಚಲು ಸಂಚು ರೂಪಿಸಿರಬಹುದೇ’ ಎಂಬ ಅನುಮಾನ ಕಾಡಲಾರಂಭಿಸಿತ್ತು. ಕೊನೆಗೆ ಅವರು ಮಾರತ್ತಹಳ್ಳಿ ಠಾಣೆಯ ಮೆಟ್ಟಿಲೇರಿದ್ದರು.

ಬೆನ್ನಟ್ಟಿದಾಗ ಪಿಸ್ತೂಲ್ ತೋರಿಸಿದ: ‘ದೂರಿನ ಅನ್ವಯ ಇನ್‌ಸ್ಪೆಕ್ಟರ್ ಪ್ರಶಾಂತ್‌ಬಾಬು ನೇತೃತ್ವದ ತಂಡವು ಫಿರ್ಯಾದಿಗಳ ಜತೆ ರಾತ್ರಿ 8.30ರ ಸುಮಾರಿಗೆ ಮಫ್ತಿಯಲ್ಲಿ  ನಿಗದಿತ ಸ್ಥಳಕ್ಕೆ ಹೋಗಿತ್ತು. ಸ್ವಲ್ಪ ಸಮಯದಲ್ಲೇ ಆರೋಪಿಗಳು ಆಲ್ಟೊ ಕಾರಿನಲ್ಲಿ (ಕೆಎ 03 ಎಂಸಿ 9618) ಅಲ್ಲಿಗೆ ಬಂದಿದ್ದರು. ಈ ವೇಳೆ ಫಿರ್ಯಾದಿಗಳು ಖಾಲಿ ಸೂಟ್‌ಕೇಸ್ ತೆಗೆದುಕೊಂಡು ನೋಟು ಖರೀದಿಸುವ ನೆಪದಲ್ಲಿ ಹತ್ತಿರ ಹೋಗಿದ್ದರು. ಅವರು ಟರ್ಕಿ ನೋಟುಗಳಿದ್ದ ಬ್ಯಾಗ್ ತೆಗೆಯುತ್ತಿದ್ದಂತೆಯೇ ಸಿಬ್ಬಂದಿ ಅವರನ್ನು ಸುತ್ತುವರಿದರು’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಪೂರ್ವ) ಹೇಮಂತ್ ನಿಂಬಾಳ್ಕರ್ ವಿವರಿಸಿದರು.
‘ತಪ್ಪಿಸಿಕೊಳ್ಳಲು ಯತ್ನಿಸಿದ ನಾಗರಾಜುನನ್ನು ಕಾನ್‌ಸ್ಟೆಬಲ್ ತಿಮ್ಮಪ್ಪರಾಜು ಬೆನ್ನಟ್ಟಿ ಹಿಡಿದರು. ಈ ವೇಳೆ ಆತ ಗುಂಡು ಹಾರಿಸುವುದಾಗಿ ಪಿಸ್ತೂಲನ್ನು ಅವರ ತಲೆ ಬಳಿ ಹಿಡಿದ. ಕೂಡಲೇ ಮೇಲೆರಗಿ ಪಿಸ್ತೂಲನ್ನು ಕಿತ್ತುಕೊಂಡ ಇತರೆ ಸಿಬ್ಬಂದಿ, ಅವನನ್ನು ವಶಕ್ಕೆ ಪಡೆದುಕೊಂಡರು. ಕಾರ್ಯಾಚರಣೆ ವೇಳೆ ಚನ್ನಕೇಶವರೆಡ್ಡಿ ತಪ್ಪಿಸಿಕೊಂಡ’ ಎಂದು ಮಾಹಿತಿ ನೀಡಿದರು.

ಜಾಮೀನು ಕೊಡಿಸಿದ್ದ: ‘ಟರ್ಕಿಯ ನೋಟುಗಳನ್ನು ತರುತ್ತಿದ್ದವನು ಚನ್ನಕೇಶವರೆಡ್ಡಿ. 2016ರ ಅಕ್ಟೋಬರ್‌ನಲ್ಲಿ ಹಿರಿಯೂರು ಪೊಲೀಸರು ಆತನನ್ನು ಬಂಧಿಸಿ, 96 ನೋಟುಗಳನ್ನು (ಭಾರತೀಯ ಮೌಲ್ಯ ₹ 87.69 ಕೋಟಿ) ಜಪ್ತಿ  ಮಾಡಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಆಗ ನಾಗರಾಜು, ಪರಿಚಿತ ವಕೀಲರ ಮೂಲಕ ಚನ್ನಕೇಶವರೆಡ್ಡಿಗೆ ಜಾಮೀನು ಕೊಡಿಸಿದ್ದ. ಆ ನಂತರ ಪರಸ್ಪರರ ನಡುವೆ ಆತ್ಮೀಯತೆ ಬೆಳೆದಿತ್ತು. ತನ್ನ ವ್ಯವಹಾರದ ಬಗ್ಗೆ ಕಾನ್‌ಸ್ಟೆಬಲ್‌ ಬಳಿ ವಿವರಿಸಿದ್ದ ಆತ, ದಂಧೆಗೆ ಕೈಜೋಡಿಸಿದರೆ ಲಕ್ಷಾಂತರ ರೂಪಾಯಿ ಹಣ ನೀಡುವ ಆಮಿಷ ಒಡ್ಡಿದ್ದ. ಹಣದಾಸೆಗೆ ನಾಗರಾಜು ಈ ಗ್ಯಾಂಗ್ ಸೇರಿಕೊಂಡಿದ್ದ’ ಎಂದು ಮಾಹಿತಿ ನೀಡಿದರು.

ಪಿಸ್ತೂಲ್ ಹಿಂದಿರುಗಿಸಿಲಿಲ್ಲ
‘ನಾಗರಾಜು ಚಿತ್ರದುರ್ಗಕ್ಕೆ ವರ್ಗವಾದ ಆರಂಭದಲ್ಲಿ ಜಿಲ್ಲಾ ಅಪರಾಧ ತನಿಖಾ ದಳದಲ್ಲಿ (ಡಿಸಿಐಬಿ) ಕರ್ತವ್ಯ ನಿರ್ವಹಿಸಿದ್ದ. ಡಿಸಿಐಬಿ ಅಧಿಕಾರಿಗಳ ಸೂಚನೆಯಂತೆ 2016ರ ಡಿ.7ರಂದು ಆತನಿಗೆ ‘9ಎಂಎಂ’ ಪಿಸ್ತೂಲ್ ಹಾಗೂ 10 ಜೀವಂತ ಗುಂಡುಗಳನ್ನು ನೀಡಲಾಗಿತ್ತು. ಇದೇ ಜೂನ್ 17ರಂದು ಡಿಸಿಐಬಿಯಿಂದ ಕೋಟೆ ಠಾಣೆಗೆ ವರ್ಗ ಮಾಡಲಾಗಿತ್ತು. ಸೇವೆಯಿಂದ ಬಿಡುಗಡೆಗೊಳ್ಳುವಾಗ ಆತ ಪಿಸ್ತೂಲನ್ನು ಇಲಾಖೆಗೆ ಮರಳಿಸಿರಲಿಲ್ಲ. ಇದೀಗ ಅದೇ ಪಿಸ್ತೂಲನ್ನು ಕೃತ್ಯಕ್ಕೆ ಬಳಸಿದ್ದಾನೆ’  ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

2019ರವರೆಗೆ ಗಡುವು
‘ಭಾರತದಲ್ಲಿ ₹ 500 ಹಾಗೂ  ₹ 1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವಂತೆಯೇ ಟರ್ಕಿಯಲ್ಲಿ 5 ಲಕ್ಷ ಲಿರಾ ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿರ್ಬಂಧಿಸಲಾಗಿದೆ. ಆ ನೋಟುಗಳನ್ನು ಬದಲಾಯಿಸಿಕೊಳ್ಳಲು ಟರ್ಕಿ ಸರ್ಕಾರ 2019ರ ಡಿ.31ರವರೆಗೆ ಗಡುವು ನೀಡಿದೆ’ ಎಂದು ಕಮಿಷನರ್ ಪ್ರವೀಣ್ ಸೂದ್ ತಿಳಿಸಿದರು.

ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದೇವೆ. ಬಂಧಿತರ ಪೂರ್ವಾಪರ ಕಲೆಹಾಕಲು ಸಿಬ್ಬಂದಿ ತಂಡ ಚಿತ್ರದುರ್ಗಕ್ಕೆ ತೆರಳಿದೆ
ತನಿಖಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT