ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ‘ಉಜ್ವಲ’ಕ್ಕೆ ಚಾಲನೆ ಯಾವಾಗ?

Last Updated 23 ಜೂನ್ 2017, 5:06 IST
ಅಕ್ಷರ ಗಾತ್ರ

ಬೆಳಗಾವಿ: ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ‘ಉಜ್ವಲ’ ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಪೂರ್ವಸಿದ್ಧತೆಯೇ ನಡೆದಿಲ್ಲ! ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ತೈಲ ಕಂಪೆನಿಗಳ ಪ್ರತಿನಿಧಿಗಳ ಸಮನ್ವಯದ ಕೊರತೆಯಿಂದಾಗಿ ಫಲಾನುಭವಿಗಳು ಸೌಲಭ್ಯ ಪಡೆಯುವುದು ಸಾಧ್ಯವಾಗಿಲ್ಲ.

ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಪ್ರಯೋಜನವಾಗಲಿದೆ ಎನ್ನುವ ಕುರಿತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿಯೇ ಇಲ್ಲ! ಯೋಜನೆಯ ನೋಡಲ್‌ ಅಧಿಕಾರಿಯಲ್ಲೂ ಸ್ಪಷ್ಟವಾದ ಅಂಕಿ–ಅಂಶವಿಲ್ಲ. ಒಬ್ಬರತ್ತ ಇನ್ನೊಬ್ಬರು ಬೆರಳು ತೋರುತ್ತಿದ್ದು, ಚಾಲನೆ ಯಾವಾಗ ಎನ್ನುವುದು ಅಸ್ಪಷ್ಟವಾಗಿದೆ.

ಇದೇ 17ರಂದು ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಯೋಜನೆಗೆ ಚಾಲನೆ ನೀಡಿದ್ದಾರೆ. ಆದರೆ, ಇಲ್ಲಿ ಫಲಾನುಭವಿಗಳ ಪಟ್ಟಿಯೇ ಸಿದ್ಧವಾಗಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.

ಸಹಾಯಧನ ಬಿಟ್ಟುಕೊಟ್ಟಿದ್ದಕ್ಕೆ: ‘ಹೊಗೆರಹಿತ ಗ್ರಾಮ, ನಗರ’ದ ಕನಸಿನೊಂದಿಗೆ ಕೇಂದ್ರವು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಚಾಲನೆ ನೀಡಿದೆ.
ಸರ್ಕಾರದ ಕೋರಿಕೆಯಂತೆ ‘ಗಿವ್‌ಇಟ್‌ ಅಪ್’ ಅಡಿ ಕೆಲ ಗ್ರಾಹಕರು ಬಿಟ್ಟುಕೊಟ್ಟಿರುವ ಸಹಾಯಧನದಲ್ಲಿ (ಸಬ್ಸಿಡಿ), ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬ ಮಹಿಳೆಯರಿಗೆ ಅಡುಗೆ ಅನಿಲ ಸಂಪರ್ಕ ಒದಗಿಸುವ ಉದ್ದೇಶ ಯೋಜನೆಯದಾಗಿದೆ.

ಈ ನಡುವೆ ರಾಜ್ಯ ಸರ್ಕಾರದಿಂದಲೂ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ, ಫಲಾನುಭವಿಗಳನ್ನು ಹೇಗೆ ಆಯ್ಕೆ ಮಾಡಬೇಕು ಎನ್ನುವ ಗೊಂದಲ ಆಹಾರ ಇಲಾಖೆಯ ಅಧಿಕಾರಿಗಳನ್ನು ಕಾಡುತ್ತಿದೆ ಎನ್ನಲಾಗುತ್ತಿದೆ. ಯೋಜನೆ ಅನುಷ್ಠಾನಕ್ಕಾಗಿ ಎಚ್‌ಪಿಸಿಎಲ್‌ ಕಂಪೆನಿ ಪ್ರತಿನಿಧಿ ಅಭಿಜಿತ್‌ ರಾವತ್‌ ಎನ್ನುವವರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ.

ಇಲ್ಲಿ ಪ್ರಮುಖವಾಗಿ ಎಚ್‌ಪಿಸಿಎಲ್‌, ಬಿಪಿಸಿ ಹಾಗೂ ಐಒಸಿ ತೈಲ ಕಂಪೆನಿಗಳು ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಪೂರೈಸುತ್ತಿವೆ. 5 ಲಕ್ಷಕ್ಕೂ ಅಧಿಕ ಮಂದಿ ಅಡುಗೆ ಅನಿಲ ಸಂಪರ್ಕ ಪಡೆದಿದ್ದಾರೆ.ಆಹಾರ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 4.20 ಲಕ್ಷಕ್ಕೂ ಅಧಿಕ ಮಂದಿ ಸೀಮೆಎಣ್ಣೆ ಪಡೆಯುತ್ತಿದ್ದಾರೆ. ಬಹುತೇಕರು ಸೌದೆ ಒಲೆ ಅವಲಂಬಿತವಾಗಿದ್ದಾರೆ.

ಹೊಗೆಯಿಂದ ತಪ್ಪಿಸುವುದಕ್ಕಾಗಿ: ಸೀಮೆಎಣ್ಣೆ ಸ್ಟೌ ಹಾಗೂ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇದನ್ನು ತಪ್ಪಿಸಲು ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶ. ಪ್ರಚಾರ ಕೊರತೆಯಿಂದಾಗಿ ನೋಂದಣಿಯಲ್ಲೂ ನೀರಸ ಪ್ರತಿಕ್ರಿಯೆ ಕಂಡುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆಹಾರ ಇಲಾಖೆ ಉಪನಿರ್ದೇಶಕಿ ಎಸ್.ಎಸ್. ಬಳ್ಳಾರಿ, ‘ಉಜ್ವಲ ಯೋಜನೆ ಯಾವಾಗ ಆರಂಭವಾಗುತ್ತದೆ ಎನ್ನುವ ಮಾಹಿತಿ ಇಲ್ಲ. 2011ರ ಆರ್ಥಿಕ ಹಾಗೂ ಸಾಮಾಜಿಕ ಜನಗಣತಿ ಪ್ರಕಾರ, ಅಡುಗೆ ಅನಿಲ ಸಂಪರ್ಕ ಇಲ್ಲದಿರುವ ಎಲ್ಲ ಕುಟುಂಬದವರಿಗೂ ಸಿಲಿಂಡರ್‌ ಸಿಗುತ್ತದೆಯೇ ಎನ್ನುವುದೂ ಸ್ಪಷ್ಟವಾಗಿ ಗೊತ್ತಿಲ್ಲ’ ಎಂದು ಹೇಳಿದರು.

‘ಇಲ್ಲಿ ಯೋಜನೆ ಉದ್ಘಾಟನೆ ಆಗಿಲ್ಲ. 20ಸಾವಿರ ಮಂದಿ ನೋಂದಣಿ ಮಾಡಿಸಿದ್ದಾರೆ. ಇವರಲ್ಲಿ ಎಷ್ಟು ಮಂದಿ ಫಲಾನುಭವಿಗಳಾಗುತ್ತಾರೆ ಎನ್ನುವುದು ಗೊತ್ತಿಲ್ಲ. ಆರ್ಥಿಕ ಹಾಗೂ ಸಾಮಾಜಿಕ ಜನಗಣತಿ ಮಾಹಿತಿಯೂ ಸಿಕ್ಕಿಲ್ಲ. ಹಿರಿಯ ಅಧಿಕಾರಿಗಳ ಸೂಚನೆ ಆಧರಿಸಿ ವಿತರಣೆಗೆ ಚಾಲನೆ ನೀಡಲಾಗುವುದು’ ಎಂದು ನೋಡಲ್ ಅಧಿಕಾರಿ ಅಭಿಜಿತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT