ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ವಿರುದ್ಧ ‘ಮಾಸ್‌ ಲೀಡರ್‌’ ಗರ್ಜನೆ

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಅದು ಮಿನರ್ವ ಮಿಲ್‌ನ ಆವರಣ. ನೇಸರ ಮೆಲ್ಲಗೆ ಪಶ್ಚಿಮದತ್ತ ಜಾರುತ್ತಿದ್ದ. ‘ಮಾಸ್‌ ಲೀಡರ್‌’ ಚಿತ್ರತಂಡವೂ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಮುಳುಗಿತ್ತು. ‘ಹ್ಯಾಟ್ರಿಕ್ ಹೀರೊ’ ಶಿವರಾಜ್‌ಕುಮಾರ್ ಹಾಡೊಂದರ ಚಿತ್ರೀಕರಣ ಮುಗಿಸಿ ಸುದ್ದಿಗೋಷ್ಠಿಗೆ ಬಂದು ಕುಳಿತರು.

‘ಈ ಚಿತ್ರದಲ್ಲಿ ನಾನೊಬ್ಬನೇ ಮಾಸ್‌ ಲೀಡರ್‌ ಅಲ್ಲ. ಎಲ್ಲರೂ ಮಾಸ್‌ ಲೀಡರ್‌ಗಳೇ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಉತ್ತಮ ಸಂದೇಶ ಅಡಗಿದೆ. ಇದನ್ನು ಪ್ರತಿಯೊಬ್ಬರು ಅರಿತರೆ ಬದುಕಿನಲ್ಲಿ ನೆಮ್ಮದಿ ಸಿಗಲಿದೆ’ ಎಂದರು ಶಿವರಾಜ್‌ಕುಮಾರ್.

‘ಶೂಟಿಂಗ್‌ ಮುಗಿದಿದ್ದೇ ಗೊತ್ತಾಗಲಿಲ್ಲ. ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ಜನರಿಗೆ ಒಳ್ಳೆಯ ಮನರಂಜನೆ ಸಿಗಲಿದೆ. ಪ್ರೇಕ್ಷಕರಿಗೆ ವಾಸ್ತವಾಂಶ ತಿಳಿಸುವ ಪ್ರಯತ್ನ ಮಾಡಿದ್ದೇವೆ. ನನ್ನ ಪ್ರತಿ ಚಿತ್ರದಲ್ಲೂ ಒಂದೊಂದು ಸಂದೇಶವಿದೆ. ಇದು ಕೂಡ ಈ ಸಾಲಿಗೆ ಸೇರಲಿದ್ದು, ಜನರಿಗೆ ಇಷ್ಟವಾಗಲಿದೆ’ ಎಂದ ಅವರ ಮಾತಿನಲ್ಲಿ ಗೆಲ್ಲುವ ವಿಶ್ವಾಸವಿತ್ತು.

ಭಾರತದಲ್ಲಿ ಬಾಂಗ್ಲಾ ವಲಸಿಗರ ಉಪಟಳ ಎಲ್ಲೆ ಮೀರಿದೆ. ದೇಶದ ಸೈನಿಕರ ಸಂಖ್ಯೆಗಿಂತಲೂ ವಲಸಿಗರ ಸಂಖ್ಯೆ ಹೆಚ್ಚಿದೆ. ಮತ್ತೊಂದೆಡೆ ಭಯೋತ್ಪಾದನೆ ಉಲ್ಬಣಿಸಿದೆ. ಲವ್‌ ಜಿಹಾದಿ ಹೆಸರಿನಡಿ ಆತಂಕ ಸೃಷ್ಟಿಸಲಾಗುತ್ತಿದೆ. ಈ ಅಂಶಗಳೇ ಚಿತ್ರದ ಜೀವಾಳ. 

‘ದ್ವಿತೀಯಾರ್ಧದಲ್ಲಿ ಸಿನಿಮಾ ತಿರುವು ಪಡೆಯುತ್ತದೆ. ಶಿವರಾಜ್‌ಕುಮಾರ್‌ ಯೋಧನಾಗಿ ಹೇಗೆ ಸಮಾಜಘಾತುಕ ಶಕ್ತಿಗಳನ್ನು ಹಿಮ್ಮೆಟ್ಟಿಸುತ್ತಾರೆ ಎನ್ನುವುದೇ ಚಿತ್ರದ ಸಾರ’ ಎಂದು ನಿರ್ಮಾಪಕ ತರುಣ್‌ ಶಿವಪ್ಪ ಕಥೆಯ ಎಳೆಯನ್ನು ಬಿಚ್ಚಿಟ್ಟರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ –20 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿತ್ತು. ಪ್ರತಿಕೂಲ ಹವಾಮಾನದಲ್ಲೂ  ಶಿವರಾಜ್‌ಕುಮಾರ್‌ ಅವರು ಎಲ್ಲರನ್ನು ಹುರಿದುಂಬಿಸಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು’ ಎಂದು ಅನುಭವ ಹಂಚಿಕೊಂಡರು.

ಶಿವರಾಜ್‌ಕುಮಾರ್‌ ಅವರನ್ನು ‘ಮಾಸ್‌’ ಆಗಿ ತೋರಿಸುವ ಪ್ರಯತ್ನವೇ? ಎಂಬ ಪ್ರಶ್ನೆ ತೂರಿಬಂತು. ‘ಕ್ಲಾಸ್‌ನಲ್ಲಿಯೇ ಮಾಸ್‌ ಇರಬಹುದಲ್ಲವೇ’ ಎಂದು ಅವರು ಥಟ್ಟಂತ ಉತ್ತರಿಸಿದರು.

ನಟ ವಿಜಯ್‌ ರಾಘವೇಂದ್ರ, ‘ಲೀಡರ್‌ ಕಣ್ಣಿನಲ್ಲಿ ತೋರಿಸಿದ ಕೆಲಸವನ್ನು ಕೈಯಲ್ಲಿ ಮಾಡುವುದಷ್ಟೇ ನನ್ನ ಕೆಲಸ. ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ತೃಪ್ತಿಯಿದೆ’ ಎಂದರು.

ಶಿವರಾಜ್‌ಕುಮಾರ್‌ ಅವರೊಂದಿಗೆ ಮೊದಲ ಬಾರಿಗೆ ನಟಿಸುತ್ತಿರುವ ಖುಷಿಯಲ್ಲಿದ್ದ ನಟ ಜಗ್ಗೇಶ್ ಅವರ ಪುತ್ರ ಗುರುರಾಜ್‌, ‘ನಾನು ಲೀಡರ್‌ನ ಸ್ನೇಹಿತ. ಚಿತ್ರದ ಒಳ್ಳೆಯ ಅನುಭವ ನೀಡಿದೆ’ ಎಂದು ಸಂತಸ ಹಂಚಿಕೊಂಡರು. ನಿರ್ದೇಶಕ ನರಸಿಂಹ, ‘ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ’ ಎಂದಷ್ಟೇ ಹೇಳಿದರು.

ಪ್ರಣೀತಾ ಈ ಚಿತ್ರದ ನಾಯಕಿ. ಯೋಗಿ, ಶರ್ಮಿಳಾ ಮಾಂಡ್ರೆ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿವೆ. ವೀರ್‌ ಸಮರ್ಥ್‌ ಸಂಗೀತ ನೀಡಿದ್ದಾರೆ. ಗುರುಪ್ರಶಾಂತ್‌ ರೈ ಅವರ ಛಾಯಾಗ್ರಹಣವಿದೆ. ಬೆಂಗಳೂರು, ಕತಾರ್‌, ಜಮ್ಮು ಮತ್ತು ಕಾಶ್ಮೀರ, ಕೋಲ್ಕತ್ತಾ, ಗುಲ್ಮಾರ್ಗ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT