ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದ ಜೋಪಾನ...

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಅದೊಂದು ಸರ್ಕಾರಿ ಆಸ್ಪತ್ರೆ. ಆಗ ತಾನೇ ಭೂಮಿಗೆ ಕಾಲಿಟ್ಟ ಕಂದಮ್ಮನ ಮುಖದಲ್ಲಿ ಅಳು. ಹೆತ್ತ ತಾಯಿಗೋ ಪರಮಾನಂದ. ಬಂಧುಗಳಲ್ಲೂ ಸಂತಸ. ಆದರೆ ಮಗುವಿಗಿದ್ದ ಶ್ವಾಸಕೋಶದ ಸೋಂಕು ಅವರ ಆನಂದವನ್ನು ಹೆಚ್ಚು ಸಮಯ ಇರಗೊಡಲು ಬಿಡಲಿಲ್ಲ.

ಅದು ನಗರದ ಸುಸಜ್ಜಿತ ಆಸ್ಪತ್ರೆ, ಸ್ವಚ್ಛ ವಾರ್ಡ್‌, ಶುಭ್ರ ದಿರಿಸು ತೊಟ್ಟ ನರ್ಸ್‌ಗಳು, ಹುಟ್ಟಿ ಒಂದು ದಿನ ಕಳೆದಿದ್ದ ಮಗುವನ್ನು ಮನೆಗೆ ಕರೆದೊಯ್ಯುವ ಸಂಭ್ರಮ. ಆದರೆ ಮನೆಯಲ್ಲಿ ಸ್ವಚ್ಛತೆಯ ಕೊರತೆಯಿಂದಾಗಿ ವಾರ ಕಳೆಯುವ ಹೊತ್ತಿಗೆ ಮಗುವಿಗೆ ಕಾಣಿಸಿಕೊಂಡ ಉಸಿರಾಟದ ತೊಂದರೆ  ಅದರ ಜೀವವನ್ನೇ ಕಸಿದುಕೊಂಡಿತು.

***
ಈ ಎರಡೂ ಘಟನೆಗಳಲ್ಲಿ ಬಲಿಯಾಗಿದ್ದು ಅಮಾಯಕ ಜೀವ. ಒಂದು ಕಡೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ, ಮತ್ತೊಂದು ಕಡೆ ಮನೆಯಲ್ಲಿ ಸೂಕ್ತ ಆರೈಕೆ ಆಗಲಿಲ್ಲ. 

ಇಂತಹ ಘಟನೆಗಳು ಡಾ. ಪ್ರಶಾಂತ್ ಗೌಡ ಅವರನ್ನು ಹೊಸ ಚಿಂತನೆಗೆ ಪ್ರೇರೇಪಿಸಿದವು. ಮದರ್‌ಹುಡ್ ಹಾಸ್ಪಿಟಲ್‌ನಲ್ಲಿ ಅವರು, ನವಜಾತ ಶಿಶುಗಳ ಆರೈಕೆ, ಪೋಷಣೆ ಬಗ್ಗೆ ಮಕ್ಕಳ ತಜ್ಞರಿಗೆ ತರಬೇತಿ ನೀಡಲು ಆರಂಭಿಸಿದರು.

‘ನಿಯೋರೆಸ್ಪಿಕಾನ್’ ಎಂಬ ಹೆಸರಿನಲ್ಲಿ ದೇಶದ 500ಕ್ಕೂ ಹೆಚ್ಚು ಮಕ್ಕಳ ತಜ್ಞರಿಗೆ ಒಂದೇ ವೇದಿಕೆಯಲ್ಲಿ ಡಾ.ಪ್ರಶಾಂತ್‌ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದಾರೆ.  

‘ಬಡವರ ಜೀವಕ್ಕೂ ಬೆಲೆಯಿದೆ ಅಲ್ವಾ’ ಎಂದು ಮಾತಿಗಿಳಿದ ಡಾ. ಪ್ರಶಾಂತ್, ‘ಜೀವ ಎಲ್ಲಿ ಹುಟ್ಟಿದ್ದರೂ ಒಂದೇ. ಜನನದ ಬಳಿಕ ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಸೋಂಕು ತಡೆಗಟ್ಟುವ ಮೂಲಕ ಅವುಗಳ ಸುಂದರ ನಾಳೆಗಳನ್ನು ಕಟ್ಟುವ ಹೊಣೆ ನಮ್ಮ ಮೇಲಿದೆ’ ಎನ್ನುತ್ತಾರೆ.

ಹಳ್ಳಿ ಆಸ್ಪತ್ರೆಗಳು ಅದರಲ್ಲೂ ಸರ್ಕಾರಿ ಆಸ್ಪತ್ರೆಗಳನ್ನು ತಾಂತ್ರಿಕವಾಗಿ ಬಲವರ್ಧನೆಗೊಳಿಸುವ ಉಮೇದು ಅವರ ಮಾತಿನಲ್ಲಿ ವ್ಯಕ್ತವಾಗುತ್ತದೆ. ಅವರ ಈ ಯತ್ನಕ್ಕೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಬಲವಾಗಿ ನಿಂತಿದೆ.

ಮುಂಜಾಗ್ರತೆಯೇ ಮದ್ದು
ಭಾರತದಲ್ಲಿ ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಉಸಿರಾಟದ ತೊಂದರೆ ಅನಾರೋಗ್ಯ ಮತ್ತು ಸಾವಿಗೂ ಕಾರಣವಾಗುತ್ತಿದೆ. ನವಜಾತ ಶಿಶುಗಳ ಪೈಕಿ ಶೇ 85ರಷ್ಟು ಬದುಕುಳಿಯುತ್ತಿಲ್ಲ ಎಂಬ ಅಂಕಿ-ಅಂಶವು ಇದರ ತೀವ್ರತೆ ಸೂಚಿಸುತ್ತದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ.

ಅವಧಿ ಪೂರ್ವ ಜನನ, ಗರ್ಭಾಶಯದ ಸೋಂಕು, ಉಸಿರಾಟದ ತೊಂದರೆಯೊಂದಿಗೆ ಹುಟ್ಟುವುದು, ಪ್ರಸವದ ಸಂದರ್ಭದಲ್ಲಿ ಶ್ವಾಸಕೋಶಕ್ಕೆ ಹಾನಿಯಾಗುವುದು, ಪ್ರಸವದ ನಂತರದ ಸೋಂಕು.

ಸೂಕ್ತ ಪೋಷಣೆ ಮತ್ತು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದಿದ್ದರೆ ತೊಂದರೆ ತಪ್ಪಿದ್ದಲ್ಲ ಎನ್ನುತ್ತಾರೆ ಮದರ್‌ಹುಡ್‌ ಆಸ್ಪತ್ರೆಯ  ಮಕ್ಕಳು ಮತ್ತು ನವಜಾತ ಶಿಶು ವಿಭಾಗದ  ಮುಖ್ಯಸ್ಥ ಡಾ. ಪ್ರಶಾಂತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT