ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರು– ಜೆಡಿಎಸ್‌ ಮುಖಂಡರ ವಾಗ್ವಾದ

Last Updated 23 ಜೂನ್ 2017, 11:01 IST
ಅಕ್ಷರ ಗಾತ್ರ

ಕೋಲಾರ: ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಶಾಸಕ ವರ್ತೂರು ಪ್ರಕಾಶ್‌ ಬೆಂಬಲಿಗರನ್ನು ಬಂಧಿಸುವಂತೆ ಒತ್ತಾಯಿಸಿ ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಗುರುವಾರ ಮುತ್ತಿಗೆ ಹಾಕಲು ಮುಂದಾದ ಜೆಡಿಎಸ್‌ ಮುಖಂಡರಿಗೆ ಪೊಲೀಸರು ತಡೆಯೊಡ್ಡಿದ್ದರಿಂದ ಪರಸ್ಪರ ವಾಗ್ವಾದ ನಡೆದು ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಮಾಜಿ ಸಚಿವ ಕೆ.ಶ್ರೀನಿವಾಸಗೌಡ ನೇತೃತ್ವದಲ್ಲಿ ಬಂದಿದ್ದ ಜೆಡಿಎಸ್‌ನ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಎಸ್ಪಿ ಕಚೇರಿಯ ಪ್ರವೇಶದ್ವಾರದಲ್ಲಿ ಧರಣಿ ಕುಳಿತರು. ನಂತರ ಒಂದು ತಾಸು ಕಳೆದರೂ ಎಸ್ಪಿ ರೋಹಿಣಿ ಕಟೋಚ್‌ ಸೆಪಟ್‌ ಅವರು ಧರಣಿನಿರತರನ್ನು ಭೇಟಿಯಾಗಲಿಲ್ಲ.

ಇದರಿಂದ ಆಕ್ರೋಶಗೊಂಡ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸರ ವಿರುದ್ಧ ಘೋಷಣೆ ಕೂಗಿ ಕಚೇರಿಗೆ ನುಗ್ಗಲು ಯತ್ನಿಸಿದರು. ಆಗ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್‌, ಡಿವೈಎಸ್ಪಿ ಅಬ್ದುಲ್‌ ಸತ್ತಾರ್‌, ಇನ್‌ಸ್ಪೆಕ್ಟರ್‌ ಹಾಗೂ ಎಸ್‌ಐಗಳು ಧರಣಿನಿರತರನ್ನು ಒಳ ಹೋಗದಂತೆ ತಡೆದರು.

ಈ ಹಂತದಲ್ಲಿ ಧರಣಿನಿರತರು ಪೊಲೀಸರನ್ನು ತಳ್ಳಿ ಒಳ ನುಗ್ಗಲು ಯತ್ನಿಸಿದರು. ಆಗ ತಳ್ಳಾಟ ಉಂಟಾಗಿ ಪೊಲೀಸರು ಮತ್ತು ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ತಳ್ಳಾಟದಲ್ಲಿ ಹಲವು ಮುಖಂಡರು ಗಾಯಗೊಂಡರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಮನಗಂಡ ಎಸ್ಪಿ ರೋಹಿಣಿ ಅವರು ಧರಣಿನಿರತರನ್ನು ಭೇಟಿಯಾಗಿ ಅಹವಾಲು ಆಲಿಸಿದರು.

ಗೂಂಡಾ ರಾಜ್ಯವೇ? ಶ್ರೀನಿವಾಸಗೌಡ ಮಾತನಾಡಿ, ‘ನಗರಸಭೆಯ 21ನೇ ವಾರ್ಡ್‌ನ ಉಪ ಚುನಾವಣೆ ವಿಚಾರದಲ್ಲಿ ಶಾಸಕ ವರ್ತೂರು ಪ್ರಕಾಶ್‌ ಬೆಂಬಲಿಗರು ಪೊಲೀಸ್‌ ಠಾಣೆ ಎದುರೇ ಜೆಡಿಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಗೂಂಡಾ ಪ್ರವೃತ್ತಿ ತೋರಿದ್ದಾರೆ. ಈ ವೇಳೆ ಠಾಣೆಯಲ್ಲೇ ಇದ್ದ ಪೊಲೀಸರು ಕಾರ್ಯಕರ್ತರ ರಕ್ಷಣೆಗೆ ಧಾವಿಸಿಲ್ಲ’ ಎಂದು ಕಿಡಿಕಾರಿದರು.

‘ಶಾಸಕರ ಬೆಂಬಲಿಗರು ಹಲ್ಲೆ ನಡೆಸಿದ ಸಂಬಂಧ ದೂರು ನೀಡಲು ಠಾಣೆಗೆ ಹೋದ ಕಾರ್ಯಕರ್ತರನ್ನು ಪೊಲೀಸರ ಸಮ್ಮುಖದಲ್ಲೇ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಠಾಣೆಗಳಲ್ಲಿ ಹರಾಜಕತೆ ಸೃಷ್ಟಿಯಾಗಿದೆ. ಇದು ಗೂಂಡಾ ರಾಜ್ಯವೇ, ಪೊಲೀಸ್‌ ಸಿಬ್ಬಂದಿ ಶಾಸಕರ ಕೈಗೊಂಬೆಗಳೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನ್ಯಾಯ ಕೇಳಲು ಪೊಲೀಸ್ ಠಾಣೆಗೆ ಹೋದವರ ಮೇಲೆಯೇ ದೌರ್ಜನ್ಯ ನಡೆದಿದೆ. ಇಂತಹ ಪೊಲೀಸ್ ವ್ಯವಸ್ಥೆಯನ್ನು ಎಲ್ಲಿಯೂ ಕಂಡಿಲ್ಲ. ಪೊಲೀಸ್‌ ಸಿಬ್ಬಂದಿ ಶಾಸಕರ ಒತ್ತಡಕ್ಕೆ ಮಣಿದು ಹಲ್ಲೆ ಆರೋಪಿಗಳನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಆದ ಕಾರಣ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಪ್ರಕರಣ ಸಂಬಂಧ ನಗರ ಠಾಣೆಯ ಇನ್‌ಸ್ಪೆಕ್ಟರ್‌ ಮತ್ತು ಎಸ್‌ಐಗಳನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

ಬಳಿಕ ರೋಹಿಣಿ ಅವರು ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಭರವಸೆ ನೀಡಿ ಧರಣಿನಿರತರನ್ನು ಸಮಾಧಾನಪಡಿಸಿದರು.

ಜೆಡಿಎಸ್ ವೀಕ್ಷಕರಾದ ಲೊಕೇಶ್, ಹರೀಶ್, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಟರಾಜ್, ಕಾರ್ಯದರ್ಶಿ ಅನ್ವರ್ ಪಾಷಾ, ತಾಲ್ಲೂಕು ಘಟಕದ ಅಧ್ಯಕ್ಷ ಇ.ಗೋಪಾಲಪ್ಪ, ನಗರಸಭೆ ಸದಸ್ಯರಾದ ಬಿ.ಎಂ.ಮುಬಾರಕ್, ನಾರಾಯಣಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಒಕ್ಕಲಿಗರ ಸಂಘದ ರಾಜ್ಯ ಘಟಕದ ನಿರ್ದೇಶಕ ರಾಮು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಆಸ್ಪತ್ರೆಗೆ ಭೇಟಿ
ಶ್ರೀನಿವಾಸಗೌಡ, ವೀಕ್ಷಕರಾದ ಲೋಕೇಶ್‌ ಹಾಗೂ ಹರೀಶ್‌ ಅವರು ಶಾಸಕರ ಬೆಂಬಲಿಗರಿಂದ ಹಲ್ಲೆಗೊಳಗಾಗಿ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಮುಖಂಡ ವಿಶ್ವನಾಥ್‌ರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT