ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಹೆ’ಯಲ್ಲಿ ಒಡಿಶಾ ಬಾಣಸಿಗನ ಕೈರುಚಿ

Last Updated 23 ಜೂನ್ 2017, 19:30 IST
ಅಕ್ಷರ ಗಾತ್ರ

ಗುಹೆಯೊಳಗೆ ಬಂದ ನಾಲ್ವರು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದರು. ಹರಿಯುವ ಝರಿ ಒಂದು ಕಡೆ, ಗೋಡೆಗೆ ಅಂಟಿಕೊಂಡಿದ್ದ ಬೇರುಗಳು ಮತ್ತೊಂದು ಕಡೆ. ದೊಡ್ಡ ಜೇಡರ ಬಲೆ ಇನ್ನೊಂದು ಕಡೆ. ಗೋಡೆಗೆ ನೇತುಹಾಕಿದ್ದ ಪಂಜುಗಳು ಹಾಗೂ ಲಾಟೀನುಗಳ ಬೆಳಕು ಮಾತ್ರ ಗುಹೆಯಲ್ಲಿ ಕಾಣುತ್ತಿತ್ತು. ನಾಲ್ವರೂ ಒಂದು ಟೇಬಲ್ ಸುತ್ತ ಕುಳಿತರು. ವನಪಾಲಕರ ವೇಷದಲ್ಲಿದ್ದ ಸಿಬ್ಬಂದಿ ಏನನ್ನೋ ಕೇಳುತ್ತಿದ್ದರು.

ಜಯನಗರ 3ನೇ ಬ್ಲಾಕ್‌ ದಿ ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿರುವ ಗುಫಾ (ಗುಹೆ) ರೆಸ್ಟೊರೆಂಟ್‌ ತನ್ನ ಒಳಾಂಗಣ ವಿನ್ಯಾಸದಿಂದಲೇ ಗ್ರಾಹಕರನ್ನು ಆಕರ್ಷಿಸುತ್ತಿದೆ.

‘ಇಲ್ಲಿನ ಥೀಮ್‌ಗಾಗಿ ಶೇ 60 ರಷ್ಟು ಗ್ರಾಹಕರು ಬರುತ್ತಾರೆ. ಮಕ್ಕಳು ಹೆಚ್ಚು ಇಷ್ಟಪಡುವ ಜಾಗವಾಗಿದೆ. ಸಿಬ್ಬಂದಿ ವನಪಾಲಕರ ರೀತಿ ಉಡುಪು ಧರಿಸಿರುತ್ತಾರೆ. ಮರದ ಟೇಬಲ್‌ಗಳು, ಕುರ್ಚಿಗಳಿಗೆ ಹುಲಿಚರ್ಮದ ವಿನ್ಯಾಸವಿದೆ. ನಮ್ಮಲ್ಲಿ ಆಫ್ಘಾನಿ, ಪೇಶಾವರಿ ಹಾಗೂ ಭಾರತೀಯ ತಿನಿಸುಗಳಿವೆ’ ಎನ್ನುತ್ತಾರೆ ಗುಫಾ ರೆಸ್ಟೊರೆಂಟ್‌ ವ್ಯವಸ್ಥಾಪಕ ಕಾಂತರಾಜು ಬಿ.ಎನ್‌.

ಸೂಪ್‌ನಲ್ಲಿ ಕೊಡುವ ಮುರ್ಗ್‌ ಜಹಾಂಗೀರಿ ಶೊರ್ಬಾ ಸ್ಪೈಸಿಯಾಗಿರುತ್ತದೆ. ಚಿಕನ್‌ ಹಾಗೂ ಮಸಾಲೆ ಹಾಕಿ ಮಾಡಿದ ಸೂಪ್‌ ಇದು. ವೆಜಿಟೇರಿಯನ್‌ನಲ್ಲಿ ದಾಲ್‌ ಶೊರ್ಬಾ ಬಹಳಷ್ಟು ಮಂದಿಗೆ ಇಷ್ಟವಾಗುತ್ತದೆ. ಮಕ್ಕಳಿಗಾಗಿ ಚೀನಾ ಶೈಲಿಯಲ್ಲಿ ಮಾಡುವ ಟೊಮೆಟೊ ಸೂಪ್‌ ಕೊಡುತ್ತಾರೆ.

ಆಫ್ಘಾನಿ ಕಬಾಬ್‌, ರುಜ್ವಾಲಿ ಕಬಾಬ್‌, ಪಾಡಿ ಕಬಾಬ್‌ಗಳನ್ನು ಬಹಳಷ್ಟು ಗ್ರಾಹಕರು ಇಷ್ಟಪಟ್ಟು ತಿನ್ನುತ್ತಾರಂತೆ. ಆಫ್ಘಾನಿ ಆಹಾರ ಹೆಚ್ಚು ಸ್ಪೆಸಿ ಇರುವುದಿಲ್ಲ. ಬಾಯಲ್ಲಿಟ್ಟರೆ ಕರಗುವಂತೆ ಚಿಕನ್‌ನ ಖಾದ್ಯಗಳು ಇರುತ್ತವೆ.

ಪಾಡಿ ಹಾಗೂ ರುಜ್ವಾಲಿ ಕಬಾಬ್‌ ಸ್ವಲ್ಪ ಸ್ಪೈಸಿಯಾಗಿರುತ್ತವೆ. ಕೋಳಿ ಮಾಂಸದ ತುಂಡುಗಳನ್ನು ಕತ್ತರಿಸಿ ಅದರೊಳಗೆ ಖೀಮ ಹಾಕಿ ಮಾಡಿದ ತಿನಿಸು ರುಜ್ವಾಲಿ ಕಬಾಬ್‌. ನಿಂಬೆ ರಸವನ್ನು ಮೇಲೆ ಹಾಕುವುದರಿಂದ ಸ್ವಲ್ಪ ಹುಳಿ ಎನಿಸಿದರೂ ಭಿನ್ನರುಚಿಯನ್ನು ನೀಡುತ್ತದೆ. ಪಾಡಿ ಕಬಾಬ್‌ ಚಿಕನ್‌ ಲೆಗ್‌ಪೀಸ್‌ನಲ್ಲಿ ಮಾಡಿದ ತಿನಿಸು. ಇದಕ್ಕೆ ಪುದೀನ ಚಟ್ನಿ ಉತ್ತಮ ಕಾಂಬಿನೇಷನ್‌.

ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡರಲ್ಲೂ ಪ್ಲಾಟರ್‌ ಇದೆ. ಮುಲ್ತಾನಿ ಪನ್ನೀರ್‌ ಟಿಕ್ಕ, ಆಲೂ ಚುರ್‌ಮುರಿ, ತವಾ ಮಿರ್ಚಿ ಪನ್ನೀರ್‌ , ನವಾಬಿ ಕಿ ಕಂಜೀರ್‌, ಹರಿಯಾಲಿ ಮುರ್ಗ್‌ ಟಿಕ್ಕ, ಆಚಾರಿ ಪನ್ನೀರ್ ಟಿಕ್ಕ, ಗ್ರೇವಿಯಲ್ಲಿ ಲಸೂನಿ ಪಾಲಕ್‌, ನವ್‌ ಫಲೋಂಕಿ ಸ್ವಾದ್‌, ಮಟ್ಕ ಮುರ್ಗ್‌ ಮುಖ್ಯವಾಗಿವೆ. ರೋಟಿ, ನಾನ್‌, ಚಪಾತಿಯನ್ನು ಗ್ರೇವಿಯೊಂದಿಗೆ ಆಯ್ಕೆಮಾಡಿಕೊಳ್ಳಬಹುದು. ಇಲ್ಲಿನ ಅಡುಗೆ ರುಚಿಯಲ್ಲಿ ಒಡಿಶಾದ ಬಾಣಸಿಗ ಎಸ್‌.ಕೆ. ಅಲಂ ಅವರ ಕೈಚಳಕವಿದೆ.

‘ಊರಿನಲ್ಲಿದ್ದರೆ ಕೃಷಿಕನಾಗುತ್ತಿದ್ದೆ’: ‘15 ವರ್ಷಗಳಿಂದ ಬಾಣಸಿಗನಾಗಿದ್ದೇನೆ. ನನ್ನ ಚಿಕ್ಕಪ್ಪ ಕೆಂಗೇರಿ ಸಮೀಪ ಗೆಸ್ಟ್‌ಹೌಸ್‌ ಆರಂಭಿಸಿದ್ದರು. ಅಲ್ಲಿ ಅಡುಗೆ ಕೆಲಸ ಕಲಿಯಲು ಸೇರಿಕೊಂಡೆ. ಉತ್ತರ ಭಾರತೀಯ ತಿನಿಸುಗಳನ್ನು ಮಾಡುತ್ತೇನೆ. ಮಟ್ಕ ಮುರ್ಗ್‌, ನಿಜಾಮಿ ಮುರ್ಗ್‌, ಮುರ್ಗ್‌ ಪೇಶಾವರಿ ನನ್ನ ಸಿಗ್ನೇಚರ್‌ ತಿನಿಸುಗಳು. ಹೋಟೆಲ್‌ಗೆ ಬರುವ ಗ್ರಾಹಕರಿಗೆ ಇಷ್ಟವಾಗುವಂತೆ ಅಡುಗೆ ಮಾಡಿಕೊಡುತ್ತೇನೆ’ ಎನ್ನುತ್ತಾರೆ ಅಲಂ.

‘ಮನೆಗೆ ಹೋದರೆ ಹೆಂಡ್ತಿ ಸಬೀರಾ ಬೀಬಿ ಮಾಡುವ ಅಡುಗೆ ಇಷ್ಟವಾಗುತ್ತದೆ. ನೆಂಟರಿಷ್ಟರು ಬಂದ್ರೆ ಇಬ್ಬರೂ ಸೇರಿ ಅಡುಗೆ ಮಾಡುತ್ತೇವೆ. ಆಕೆ ಮಾಡುವ ಮೀನುಸಾರು, ಅನ್ನ ತುಂಬಾ ಇಷ್ಟ. ಭುವನೇಶ್ವರ ಸಮೀಪದ ಬಾಲೀಸರ ನಮ್ಮೂರು. ಅಲ್ಲಿ ಒಂದಿಷ್ಟು ಜಮೀನು ಇದೆ. ನಾನು ಅಡುಗೆ ಭಟ್ಟ ಆಗಿರದಿದ್ದರೆ ಕೃಷಿಕನಾಗುತ್ತಿದ್ದೆ’ ಎಂದರು ಅಲಂ. 

ರೆಸ್ಟೊರೆಂಟ್‌: ಗುಫಾ
ಸ್ಥಳ–ನಂ79/8, ಡಯಾಗನಲ್‌ ರಸ್ತೆ, 3ನೇ ಬ್ಲಾಕ್‌, ಜಯನಗರ.
ಇಬ್ಬರಿಗೆ: ₹1000 
ವಿಶೇಷ: ಆಫ್ಘಾನಿ, ಪೇಶಾವರಿ ಆಹಾರ
ಟೇಬಲ್ ಕಾಯ್ದಿರಿಸಲು: 99809 09053

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT