ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಷೆ ಸೇರಿದ ಕಾರ್ಟೊಸ್ಯಾಟ್–2

ದೂರಸಂವೇದಿ ಉಪಗ್ರಹದಿಂದ ಹೆಚ್ಚಲಿದೆ ಸೇನೆಯ ಕಣ್ಗಾವಲು ಸಾಮರ್ಥ್ಯ
Last Updated 23 ಜೂನ್ 2017, 19:30 IST
ಅಕ್ಷರ ಗಾತ್ರ

ಶ್ರೀಹರಿ ಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ದೂರಸಂವೇದಿ ಉಪಗ್ರಹ ಕಾರ್ಟೊಸ್ಯಾಟ್–2 ಅನ್ನು, ಧ್ರುವೀಯ ಉಪಗ್ರಹ ಉಡಾವಣಾ ವಾಹನ (ಪಿಎಸ್‌ಎಲ್‌ವಿ) ಸಿ–38 ಶುಕ್ರವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಕಾರ್ಟೊಸ್ಯಾಟ್–2 ಮತ್ತು ಇತರ 30 ಸಣ್ಣ ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್‌ಎಲ್‌ವಿ  ಸಿ–38, ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 9.29ಕ್ಕೆ  ಪಯಣ ಆರಂಭಿಸಿತು. ನಂತರದ 27 ನಿಮಿಷಗಳಲ್ಲಿ ಎಲ್ಲಾ 31 ಉಪಗ್ರಹಗಳನ್ನೂ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು.

‘ಕಾರ್ಟೊಸ್ಯಾಟ್ ಸರಣಿಯ ಈ ಹಿಂದಿನ ಉಪಗ್ರಹಗಳು ಕಳುಹಿಸಿದ್ದ ಚಿತ್ರಗಳನ್ನು ಬಳಸಿಕೊಂಡೇ ಸೇನೆ ಕಳೆದ ವರ್ಷ, ಗಡಿ ನಿಯಂತ್ರಣಾ ರೇಖೆಯಲ್ಲಿ ನಿರ್ದಿಷ್ಟ ದಾಳಿ ನಡೆಸಿತ್ತು. ಕಾರ್ಟೊಸ್ಯಾಟ್–2 ಉಪಗ್ರಹ ಕಳುಹಿಸಲಿರುವ ಚಿತ್ರಗಳು, ಈ ಹಿಂದಿನ ಉಪಗ್ರಹದ ಚಿತ್ರಕ್ಕಿಂತಲೂ ದೊಡ್ಡದಾಗಿರಲಿವೆ’ ಎಂದು ಇಸ್ರೊದ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

‘ಕಾರ್ಟೊಸ್ಯಾಟ್–1, ಗರಿಷ್ಠ 0.8 ಮೀಟರ್‌ ಅಳತೆಯಷ್ಟು ಜಾಗ ಸ್ಪಷ್ಟವಾಗಿ ಕಾಣಿಸುವ ಚಿತ್ರವನ್ನು ಸೆರೆಹಿಡಿಯುತ್ತಿತ್ತು. ಕಾರ್ಟೊಸ್ಯಾಟ್–2 ಗರಿಷ್ಠ 0.6 ಮೀಟರ್‌ ಅಳತೆಯ ಜಾಗದ ಚಿತ್ರವನ್ನು ಸ್ಪಷ್ಟವಾಗಿ ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ.  ಇದರಿಂದ ನೆಲದ ಮೇಲಿರುವ ಸಣ್ಣ–ಪುಟ್ಟ ವಸ್ತುಗಳನ್ನೂ ಉಪಗ್ರಹದ ಮೂಲಕವೇ ಪತ್ತೆ ಮಾಡಬಹುದು. ಇದು ಭಾರತೀಯ ಸೇನೆಯ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲಿದೆ’ ಎಂದು ಆ ವಿಜ್ಞಾನಿ ಹೇಳಿದ್ದಾರೆ.

‘ಕಾರ್ಟೊಸ್ಯಾಟ್–2 ಕಕ್ಷೆಗೆ ಸೇರಿದ ನಂತರ, ತನ್ನ ಸೌರಫಲಕಗಳನ್ನು ತೆರೆದು ಕಾರ್ಯಾಚರಣೆ ಆರಂಭಿಸಿದೆ. ಬೆಂಗಳೂರಿನಲ್ಲಿರುವ ಕೇಂದ್ರದಿಂದ ಉಪಗ್ರಹವನ್ನು  ನಿಯಂತ್ರಿಸಲಾಗುತ್ತದೆ. ಉಪಗ್ರಹ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆರಂಭಿಸಿದ ನಂತರ, ಉಪಗ್ರಹದಿಂದ ಚಿತ್ರಗಳು ಮತ್ತು ಕೆಲವು ಸ್ವರೂಪದ ದತ್ತಾಂಶಗಳನ್ನು ಪಡೆಯಲು ಸೇನೆಗೆ ಅನುಮತಿ ನೀಡಲಾಗುತ್ತಿದೆ. ಇದಕ್ಕಾಗಿ ಸೇನೆ ಒಂದು ಸ್ವೀಕೃತಿ ಕೇಂದ್ರವನ್ನು ಸ್ಥಾಪಿಸಿದೆ ಮತ್ತು ತರಬೇತಿ ಪಡೆದ ಸಿಬ್ಬಂದಿಯೂ ಇದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT