ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ

Last Updated 24 ಜೂನ್ 2017, 10:15 IST
ಅಕ್ಷರ ಗಾತ್ರ

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯ ಜನ ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಂಗಳೂರಿನ ಕಿದ್ವಾಯ್‌ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಇದ್ದು, ಇದನ್ನು ತಪ್ಪಿಸಲು ಜಿಲ್ಲೆಯಲ್ಲೇ ಕ್ಯಾನರ್‌ ಚಿಕಿತ್ಸಾ ಕೇಂದ್ರ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಜುಲೈನಿಂದ ಕೇಂದ್ರದ ನಿರ್ಮಾಣ ಕಾರ್ಯ ಆರಂಭವಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ತಿಳಿಸಿದರು.

ಕ್ಯಾನ್ಸರ್‌ ಕೇಂದ್ರದ ನಿರ್ಮಾಣಕ್ಕೆ ಗುರುತಿಸಲಾಗಿರುವ ನಗರದ ಹೊರವಲಯದ ಸ್ಯಾನಿಟೋರಿಯಂ ಬಳಿಯ ಜಾಗವನ್ನು ಶುಕ್ರವಾರ ಪರಿಶೀಲಿಸಿದ ಮಾತನಾಡಿದ ಅವರು, ಕಿದ್ವಾಯ್‌ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ನಡೆಸಲಾಗುತ್ತದೆ’ ಎಂದರು.

‘ಆಸ್ಪತ್ರೆ ಸ್ಥಾಪನೆಗೆ 15 ಎಕರೆ ಜಾಗ ಅಗತ್ಯವಿದ್ದು, ಸ್ಯಾನಿಟೋರಿಯಂ ಬಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ 12.5 ಎಕರೆ ಜಾಗ ಲಭ್ಯವಿದೆ. ಕಟ್ಟಡದಲ್ಲಿ ಉತ್ತಮ ಕೊಠಡಿಗಳಿವೆ. ಇನ್ನು ಹೆಚ್ಚಿನ ಜಾಗಕ್ಕೆ ಕಿದ್ವಾಯ್‌ ಸಂಸ್ಥೆಯವರು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿಕೊಟ್ಟರೆ ಭೂಮಿ ನೀಡಲಾಗುವುದು’ ಎಂದರು.

ಸಮಸ್ಯೆ ಎದುರಾಗುವುದಿಲ್ಲ: ‘ಅರಣ್ಯ ಇಲಾಖೆ ಜಾಗವನ್ನು ವಶಪಡಿಸಿಕೊಳ್ಳುವ ಅಗತ್ಯವಿಲ್ಲ. ಜಾಗದ ಯಜಮಾನಿಕೆಯನ್ನು ಆ ಇಲಾಖೆಗೆ ಬಿಟ್ಟು ಕಟ್ಟಡ ನಿರ್ಮಿಸಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದಕ್ಕೆ ಇಲಾಖೆ ಕಾರ್ಯದರ್ಶಿಗಳಿಂದ ಅನುಮತಿ ಪಡೆದರೆ ಸಾಕು. ಈ ಸಂಬಂಧ ಬೆಂಗಳೂರಿನಲ್ಲಿ ಸದ್ಯದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

‘ಅರಣ್ಯ ಇಲಾಖೆ ಜಾಗದ ಸರ್ವೆಗೆ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೈತರು ಒತ್ತುವರಿ ಮಾಡಿಕೊಂಡಿದ್ದರೆ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡು ತೆರವುಗೊಳಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈನಲ್ಲಿ ಕೋಲಾರಕ್ಕೆ ಬರಲಿದ್ದು, ಆ ದಿನವೇ ಕ್ಯಾನ್ಸರ್‌ ಕೇಂದ್ರಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗುತ್ತದೆ. ಅಷ್ಟರೊಳಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಎಚ್ಚರಿಕೆ ಕೊಡಬೇಕು: ‘ಮುಳಬಾಗಿಲು ತಾಲ್ಲೂಕು ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಶಂಕರ್ ವಿರುದ್ಧ ದೂರು ಬಂದಿದೆ. ಆತ ಸರ್ಕಾರಿ ಸಂಬಳ ಪಡೆದು ಸಾರ್ವಜನಿಕರನ್ನು ವಂಚಿಸುತ್ತಿದ್ದಾನೆ. ಆತ ಈ ಬಾರಿ ಯಾರ ಕಡೆಯಿಂದಾದರೂ ದೂರವಾಣಿ ಕರೆ ಮಾಡಿಸಿ ಒತ್ತಡ ಹೇರಿಸಿದರೆ ಸುಮ್ಮನಿರುವುದಿಲ್ಲ. ಸೇವೆಯಿಂದ ಅಮಾನತು ಮಾಡುತ್ತೇನೆ. ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಶಂಕರ್‌ಗೆ ಎಚ್ಚರಿಕೆ ಕೊಡಬೇಕು’ ಎಂದು ಸೂಚಿಸಿದರು.

ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಡಾ. ಕೆ.ವಿ. ತ್ರಿಲೋಕಚಂದ್ರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್.ಎನ್. ವಿಜಯ್‌ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ ವಿಭಾಗ) ರಾಮಲಿಂಗೇಗೌಡ ಹಾಜರಿದ್ದರು.

* * 

ರಾಜ್ಯದ , ಹೊರ ರಾಜ್ಯಗಳಿಂದ ಕ್ಯಾನ್ಸರ್‌ ರೋಗಿಗಳು ಕಿದ್ವಾಯ್‌ ಆಸ್ಪತ್ರೆಗೆ ಬರುತ್ತಿದ್ದಾರೆ. ಧರ್ಮ ಶಾಲೆ ಆರಂಭಿಸಿ ಚಿಕಿತ್ಸೆ ನೀಡುತ್ತಿದ್ದರೂ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ
ಕೆ.ಆರ್‌. ರಮೇಶ್‌ಕುಮಾರ್‌
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT