ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುತ್ತಲೇ ಇದೆ ಕರಾಳ ಪರ್ವ

Last Updated 25 ಜೂನ್ 2017, 6:46 IST
ಅಕ್ಷರ ಗಾತ್ರ

ಅನುವಾದ: ಡಿ. ಉಮಾಪತಿ

ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರು 1975ರ ಜೂನ್ 25ರಂದು ದೇಶದ ಮೇಲೆ ಹೇರಿದ್ದ ಕರಾಳ ತುರ್ತುಪರಿಸ್ಥಿತಿಯು ಜನತಂತ್ರವನ್ನು ಹತ್ತಿಕ್ಕುವ ಅತಿದೊಡ್ಡ ಪ್ರಯತ್ನವಾಗಿತ್ತು. ಸರ್ವಾಧಿಕಾರವನ್ನು ನೆಲೆಗೊಳಿಸಿ ಸಂವಿಧಾನವನ್ನು ವಿರೂಪಗೊಳಿಸಲಾಯಿತು. ಸಂಸತ್ತನ್ನು ರಬ್ಬರ್ ಮೊಹರಿನ ಶೋಚನೀಯ ಸ್ಥಿತಿಗೆ ಇಳಿಸಲಾಯಿತು. ಮೂಲಭೂತ ಹಕ್ಕುಗಳನ್ನು ತುಳಿಯಲಾಯಿತು. ಸುದ್ದಿ ಪತ್ರಿಕೆಗಳ ಬಾಯಿ ಕಟ್ಟಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಪ್ರತಿಪಕ್ಷಗಳ ಘಟಾನುಘಟಿ ನಾಯಕರನ್ನು ಜೈಲಿಗೆ ತಳ್ಳಲಾಯಿತು. ನ್ಯಾಯಾಂಗ ಕೂಡ ನಡುಬಗ್ಗಿಸಿತು. ಜೈಲುಗಳು, ಪೊಲೀಸ್ ಠಾಣೆಗಳು ಚಿತ್ರಹಿಂಸೆಯ ಕೂಪಗಳಾದವು.

ರಾಜನ್ ಚಿತ್ರಹಿಂಸೆ ಮತ್ತು ಕೊಲೆ ಪ್ರಕರಣ
ತುರ್ತುಪರಿಸ್ಥಿತಿಯ ಕಾಲದಲ್ಲಿ ಚಿತ್ರಹಿಂಸೆಯ ನೂರಾರು ಪ್ರಕರಣಗಳು ನಡೆದವು. ಇವುಗಳ ಪೈಕಿ ಕಲ್ಲಿಕೋಟೆಯ ರೀಜನಲ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪಿ.ರಾಜನ್ ಚಿತ್ರಹಿಂಸೆ ಮತ್ತು ಕೊಲೆ ಪ್ರಕರಣ ಅತ್ಯಂತ ಕ್ರೂರ ಹಾಗೂ ಹೃದಯವಿದ್ರಾವಕ. ರಾಜನ್ ತಂದೆ ಟಿ.ವಿ.ಈಚರ ವಾರಿಯರ್ ನಿವೃತ್ತ ಪ್ರೊಫೆಸರ್. ಮಗನ ಭಾವಚಿತ್ರ ಹಿಡಿದು ಕರುಳ ಕುಡಿಯನ್ನು ಪತ್ತೆ ಮಾಡಿಕೊಡಬೇಕೆಂದು ಕೇರಳದ ಗೃಹಮಂತ್ರಿಯಿಂದ ಹಿಡಿದು ಪೊಲೀಸ್ ಇನ್ಸ್‌ಪೆಕ್ಟರ್ ತನಕ ಸರ್ಕಾರಿ ಕಚೇರಿಗಳ ಕಂಬ ಸುತ್ತಿ ಅಲವತ್ತುಕೊಳ್ಳುವ ವೃದ್ಧ ತಂದೆಯ ದೃಶ್ಯ ಸರ್ವಾಧಿಕಾರದ ಭಯಾನಕ ಪರಿಣಾಮಗಳ ಶಕ್ತಿಶಾಲಿ ಪ್ರತೀಕವಾಯಿತು.
ಜನತಂತ್ರವು ಸರ್ವಾಧಿಕಾರವಾಗಿ ರೂಪಾಂತರಗೊಂಡಾಗ ಬಹುಮುಖ್ಯ ಕಾನೂನು ಪಾಲಕರೇ ಕಾನೂನು ಭಂಜಕರಾಗಿರುತ್ತಾರೆ.

ಗ್ರಾಮೀಣ ಪೊಲೀಸ್ ಠಾಣೆಗಳ ಮೇಲೆ ನಡೆದ ಕೆಲವು ದಾಳಿಗಳ ಹಿನ್ನೆಲೆಯಲ್ಲಿ ತೀವ್ರ ಎಡಪಂಥದ ಕುರಿತು ಒಲವುಳ್ಳ ವಿದ್ಯಾರ್ಥಿಗಳನ್ನು ಕೇರಳದ ಪೊಲೀಸರು ಹುಡುಕುತ್ತಿರುತ್ತಾರೆ. ಇಂತಹ ವಿದ್ಯಾರ್ಥಿಗಳ ಪೈಕಿ ರಾಜನ್ ಹೆಸರಿನವನು ಒಬ್ಬನಿದ್ದು ಅವನು ರೀಜನಲ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಎಂಬುದು ಪೊಲೀಸರ ಕಿವಿಗೆ ಬಿದ್ದಿರುತ್ತದೆ. ಇಷ್ಟು ಮಾಹಿತಿ ಇರಿಸಿಕೊಂಡು ಮದ್ದು ಗುಂಡು ಆಯುಧಗಳೊಂದಿಗೆ ಪೊಲೀಸರು 1976ರ ಮೇ ಒಂದರ ಬೆಳಗಿನ ಜಾವ ರೀಜನಲ್ ಎಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ ನಡೆಸುತ್ತಾರೆ. ರಾಜನ್ ಮತ್ತು ಇನ್ನೊಬ್ಬ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಜೀಪಿಗೆ ತಳ್ಳುತ್ತಾರೆ.
ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಎತ್ತಿ ಹಾಕಿಕೊಂಡು ಹೋದದ್ದನ್ನು ಹಾಸ್ಟೆಲಿನ ಡೀನ್ ಅವರು ಕಾಲೇಜಿನ ಪ್ರಾಂಶುಪಾಲರಿಗೆ ತಿಳಿಸುತ್ತಾರೆ. ಈ ಸಂಗತಿಯನ್ನು ಪ್ರಾಂಶುಪಾಲರು ಈಚರ ವಾರಿಯರ್‌ಗೆ ದಾಟಿಸುತ್ತಾರೆ.

ಮಗನ ಬಂಧನದ ಮಾಹಿತಿಯನ್ನು ಕಲೆಹಾಕಲು ತಂದೆ ಈಚರ ವಾರಿಯರ್ ತಕ್ಷಣವೇ ಹೊರಡುತ್ತಾರೆ. ರಾಜನ್‌ನನ್ನು ಪೊಲೀಸ್ ಜೀಪಿನಲ್ಲಿ ಎಳೆದೊಯ್ದ ನಂತರ ಕಾಲೇಜಿನ ಸಮೀಪವೇ ಇರುವ ಸರ್ಕಾರಿ ಪ್ರವಾಸಿ ಬಂಗಲೆಯೊಂದರಲ್ಲಿ ಚಿತ್ರಹಿಂಸೆಗೆ ಗುರಿಪಡಿಸಲಾಗುತ್ತದೆ. ಪೊಲೀಸರ ಮೂರನೆಯ ಡಿಗ್ರಿ ಚಿತ್ರಹಿಂಸೆಯನ್ನು ತಡೆಯಲಾರದೆ ರಾಜನ್ ಮಾಡುವ ಆಕ್ರಂದನ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಹಾಸ್ಟೆಲಿನ ಉದ್ಯೋಗಿಗಳ ಕಿವಿಗೆ ಬೀಳುತ್ತದೆ. ಅಂದೇ ತುಸು ತರುವಾಯ ಎಲ್ಲ ನಿಶ್ಯಬ್ದ.

ಎಲ್ಲರನ್ನೂ ವಾರಿಯರ್ ಕೇಳಿದ್ದು ಒಂದೇ ಪ್ರಶ್ನೆ- ರಾಜನ್ ಎಲ್ಲಿದ್ದಾನೆ? ಉತ್ತರ ಅರಸಿ ಸರ್ಕಾರಿ ಕಚೇರಿಗಳನ್ನು ಸುತ್ತುತ್ತಾರೆ. ಅಂದಿನ ಮುಖ್ಯಮಂತ್ರಿ ಸಿ.ಅಚ್ಯುತ ಮೆನನ್ ಮತ್ತು ಗೃಹಮಂತ್ರಿ ಕೆ.ಕರುಣಾಕರನ್, ಸಂಸದರು ಮತ್ತಿತರರನ್ನು ಅವರು ಕಾಣುತ್ತಾರೆ. ಆದರೆ ಈ ಎಲ್ಲ ಭೇಟಿಗಳೂ ನಿಷ್ಫಲವಾಗುತ್ತವೆ. ರಾಜನ್ ಎಲ್ಲಿದ್ದಾನೆ ಎಂದು ಹೇಳುವ ಆಸಕ್ತಿ ಯಾರಿಗೂ ಇರುವುದಿಲ್ಲ. 1976ರ ಮಾರ್ಚ್ 10ರಂದು ಕರುಣಾಕರನ್ ಅವರನ್ನು ಭೇಟಿ ಮಾಡಿ ನೆರವಿಗಾಗಿ ಯಾಚಿಸುತ್ತಾರೆ. ಭಾರತದ ಬಹುತೇಕ ಮಂತ್ರಿಗಳಂತೆ ಕರುಣಾಕರನ್ ಕೂಡ ‘ಪರಿಶೀಲಿಸುವ’ ಭರವಸೆ ಕೊಡುತ್ತಾರೆಯೇ ಹೊರತು ವಾಸ್ತವದಲ್ಲಿ ಅಂಥದ್ದೇನನ್ನೂ ಮಾಡುವುದಿಲ್ಲ.

ಮಗ ಕಾಣೆಯಾದ ಆಘಾತದಿಂದ ರಾಜನ್ ತಾಯಿಗೆ ಹುಚ್ಚೇ ಹಿಡಿದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದಾರೆ ಎಂದು ಕರುಣಾಕರನ್‌ಗೆ ಬರೆದ ಪತ್ರವೊಂದರಲ್ಲಿ ವಾರಿಯರ್ ದಾಖಲಿಸುತ್ತಾರೆ.
ಸಹಾಯ ಮಾಡುವಂತೆ ಕೋರಿ ಕೇಂದ್ರ ಮಂತ್ರಿ ಮತ್ತು ಕೆಲ ಸಂಸದರಿಗೂ ಪತ್ರ ಬರೆಯುತ್ತಾರೆ ವಾರಿಯರ್. ರಾಜನ್ ಕಾಣೆಯಾಗಿರುವ ಸುದ್ದಿಯನ್ನು ಇಬ್ಬರು ಸಂಸದರು ಸಂಸತ್ತಿನಲ್ಲೂ ಪ್ರಸ್ತಾಪಿಸುತ್ತಾರೆ. ತನಿಖೆಗೆ ಆದೇಶ ನೀಡುವ ಇಲ್ಲವೇ ಆತನನ್ನು ಪತ್ತೆ ಮಾಡುವ ನಿಜದ ಪ್ರಯತ್ನಕ್ಕೆ ಯಾರೂ ಮುಂದಾಗುವುದಿಲ್ಲ.

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಯಾರೂ ಹಾಕುವಂತಿರಲಿಲ್ಲ. ಹೀಗಾಗಿ ಪ್ರೊ.ವಾರಿಯರ್‌ಗೆ ನ್ಯಾಯಾಂಗದ ಬಾಗಿಲೂ ಮುಚ್ಚಿ ಹೋಗಿರುತ್ತದೆ. ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ತಂದು ನಿಲ್ಲಿಸಬೇಕು ಎಂದು ಕೋರುವ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಯಾರೂ ಹಾಕುವಂತಿಲ್ಲ ಎಂಬ ತೀರ್ಪು ಜನತಂತ್ರದ ಶವಪೆಟ್ಟಿಗೆಗೆ ಹೊಡೆದ ಕಟ್ಟಕಡೆಯ ಮೊಳೆಯಾಗಿರುತ್ತದೆ. ಪ್ರಾಣದ ಹಕ್ಕನ್ನು ಕಾಯ್ದುಕೊಳ್ಳಲು ನ್ಯಾಯಾಂಗದ ಹಸ್ತಕ್ಷೇಪ ಕೋರುವ ನಾಗರಿಕರ ಹಕ್ಕನ್ನು ನ್ಯಾಯಾಲಯ ತಿರಸ್ಕರಿಸಿರುತ್ತದೆ.

ಮಗನನ್ನು ಪತ್ತೆ ಮಾಡಿಕೊಡುವಂತೆ ವಾರಿಯರ್, ಸಿಕ್ಕಸಿಕ್ಕವರಿಗೆಲ್ಲ ಅರ್ಜಿ ನೀಡತೊಡಗಿದ್ದನ್ನು ಕಂಡ ಪೊಲೀಸರು ರಾಜನ್ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗುತ್ತಾರೆ. ರಾಜನ್‌ನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಳ್ಳಲೇ ಇಲ್ಲವೆಂದೂ, ಈ ಸಂಬಂಧ ಪ್ರಾಂಶುಪಾಲರು ವಾರಿಯರ್‌ಗೆ ಬರೆದ ಪತ್ರ ‘ಅಂತೆ ಕಂತೆ’ಗಳನ್ನು ಆಧರಿಸಿದ್ದೆಂದೂ ‘ತನಿಖೆ’ಯಿಂದ ತಿಳಿದು ಬಂದಿರುವುದಾಗಿ ಪೊಲೀಸ್ ಮಹಾನಿರ್ದೇಶಕರು 1977ರ ಜನವರಿ ಏಳರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ.

ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಜೋಸೆಫ್ ಚಾಲಿಯನ್ನು 1976ರ ಮಾರ್ಚ್ ಎಂಟರಂದು ಮೀಸಾ ಕಾಯಿದೆಯಡಿ ಬಂಧಿಸಲಾಯಿತು. ಅದೇ ಕಾಲೇಜಿನ ಮುರಳೀಧರನ್ ಎಂಬ ವಿದ್ಯಾರ್ಥಿಯ ಕೈವಾಡ ಇರುವ ಮಾಹಿತಿ ಪೊಲೀಸರಿಗೆ ತಿಳಿಯಿತು. 1976ರ ಏಪ್ರಿಲ್ 18ರಂದು ಮುರಳೀಧರನನ್ನು ಬಂಧಿಸಲಾಯಿತು. ಮುರಳೀಧರನನ್ನು ವಿಚಾರಿಸಿದಾಗ ವಾರಿಯರ್ ಮಗ ರಾಜನ್ ತೀವ್ರಗಾಮಿಗಳಿಗೆ ಆಶ್ರಯ ನೀಡಿದ್ದಾಗಿ ತಿಳಿದು ಬಂದಿತು. ಆದರೆ ಆ ಹೊತ್ತಿಗಾಗಲೇ ಪರಾರಿಯಾಗಿದ್ದ ರಾಜನ್ ಪೊಲೀಸರ ಕೈಗೆ ಸಿಗಲಿಲ್ಲ ಎಂದೂ ಪೊಲೀಸ್ ಮಹಾನಿರ್ದೇಶಕರು ತಮ್ಮ ಪತ್ರದಲ್ಲಿ ವಿವರಿಸಿದ್ದರು. ಈ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ವರದಿಯೊಂದನ್ನು ರವಾನಿಸಿತು. ಆದರೆ ವಾರಿಯರ್‌ಗೆ ಈ ವರದಿಯ ಸೂಚನೆ ಕೊಡಬೇಕೆಂದು ಯಾರಿಗೂ ಅನಿಸಲಿಲ್ಲ.

1977ರ ಜನವರಿಯಲ್ಲಿ ಲೋಕಸಭಾ ಚುನಾವಣೆಗಳ ಘೋಷಣೆಯಾಯಿತು. ಪರಿಣಾಮವಾಗಿ ತುರ್ತುಪರಿಸ್ಥಿತಿಯ ಕಾಠಿಣ್ಯ ತಗ್ಗಿತ್ತು. ನ್ಯಾಯಾಲಯದ ಕದ ಬಡಿಯುವ ಮೊದಲ ಅವಕಾಶ ವಾರಿಯರ್‌ಗೆ ದೊರೆತಿತ್ತು. ಚುನಾವಣೆಗಳ ಅಧಿಸೂಚನೆ ಹೊರಬೀಳುತ್ತಿದ್ದಂತೆ ಬಹುತೇಕ ರಾಜಕೀಯ ಸೆರೆಯಾಳುಗಳನ್ನು ಬಿಡುಗಡೆ ಮಾಡಲಾಯಿತು.

ರಾಜನ್ ಬಿಡುಗಡೆಯೂ ಆಗುವುದೆಂದು ವಾರಿಯರ್ ಆಸೆಯಿಂದ ಎದುರು ನೋಡಿದರು. ಆದರೆ ಅಂತಹುದೇನೂ ನಡೆಯಲಿಲ್ಲ. ಚುನಾವಣೆಯಲ್ಲಿ ಇಂದಿರಾಗಾಂಧಿಯವರು ಸೋತು ಮಾರ್ಚ್ 21ರಂದು ತುರ್ತುಪರಿಸ್ಥಿತಿ ರದ್ದಾಯಿತು. 1977ರ ಮಾರ್ಚ್ 25ರಂದು ಕೇರಳ ಹೈಕೋರ್ಟ್ ಮುಂದೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು ವಾರಿಯರ್.

ಈ ನಡುವೆ ರಾಜಕೀಯ ಬದಲಾವಣೆಯೊಂದು ನಡೆಯಿತು. ಲೋಕಸಭೆ ಚುನಾವಣೆ ಜೊತೆ ಜೊತೆಗೇ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತು. ಹಿಂದಿನ ಸರ್ಕಾರದಲ್ಲಿ ಗೃಹಮಂತ್ರಿಯಾಗಿದ್ದ ಕರುಣಾಕರನ್ ಮುಖ್ಯಮಂತ್ರಿಯಾದರು.

ರಾಜನ್ ಪತ್ತೆಗೆ ನೆರವು ಕೋರಿ 1976ರ ಮಾರ್ಚ್ 10ರಂದು ತಾವು ಅಂದಿನ ಗೃಹಮಂತ್ರಿ ಕರುಣಾಕರನ್ ಅವರನ್ನು ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದಾಗಿ ಪ್ರಮಾಣಪತ್ರದಲ್ಲಿ ನ್ಯಾಯಾಲಯಕ್ಕೆ ತಿಳಿಸಿದರು ವಾರಿಯರ್.

ತೀರಾ ಗಂಭೀರ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಕಾರಣ, ರಾಜನ್ ದಸ್ತಗಿರಿಯಾಗಿದ್ದು, ನೆರವಾಗಲು ಶಕ್ತಿಮೀರಿ ಪ್ರಯತ್ನ ಮಾಡುವುದಾಗಿ ತಮಗೆ ಭರವಸೆ ನೀಡಿದ್ದರು ಎಂದೂ ಪ್ರಮಾಣಪತ್ರದಲ್ಲಿ ಹೇಳಲಾಗಿತ್ತು. ನ್ಯಾಯಾಲಯಕ್ಕೆ ತಮ್ಮ ಪ್ರತಿಕ್ರಿಯೆ ಸಲ್ಲಿಸಿದ ಮುಖ್ಯಮಂತ್ರಿ ಕರುಣಾಕರನ್ ವಾರಿಯರ್ ಹೇಳಿಕೆಗಳನ್ನು ತಳ್ಳಿಹಾಕಿದರು. ರಾಜನ್ ದಸ್ತಗಿರಿಯಾಗಿದ್ದಾನೆ ಎಂದು ತಾವು ಹೇಳಲೇ ಇಲ್ಲವೆಂದು ವಾದಿಸಿದರು. ‘ವಾರಿಯರ್ ಆಪಾದನೆ ಸಾರಾಸಗಟಾಗಿ ತಪ್ಪು. ರಾಜನ್ ಪೊಲೀಸ್ ವಶದಲ್ಲಿದ್ದಾನೆಂದು ತಾವು ಹೇಳಲೇ ಇಲ್ಲ, ಈ ಕುರಿತು ಈವರೆಗೂ ತಮಗೆ ಏನೂ ಗೊತ್ತಿಲ್ಲ. ಚುನಾವಣಾ ಪ್ರಚಾರದಲ್ಲೂ ತಾವು ರಾಜನ್ ಬಂಧನದ ಪ್ರಸ್ತಾಪ ಮಾಡಿರಲಿಲ್ಲ’ ಎಂದರು ಕರುಣಾಕರನ್. 1976ರ ಮಾರ್ಚ್ ಒಂದರಂದು ರಾಜನ್ ದಸ್ತಗಿರಿ ಮಾಡಲಾಗಿತ್ತೆಂಬ ಆಪಾದನೆಯನ್ನು ಪೊಲೀಸರು ತಳ್ಳಿ ಹಾಕಿದರು.

ಆದರೆ ಹೈಕೋರ್ಟ್ ತನ್ನ ಮುಂದೆ ಮಂಡಿಸಲಾದ ಹಲವಾರು ಸಾಕ್ಷ್ಯಗಳನ್ನು ಪರಿಗಣಿಸಿತು. ರಾಜನ್ ಅಪಹರಣವನ್ನು ಕಣ್ಣಾರೆ ಕಂಡಿದ್ದವರ ಪ್ರಮಾಣಪತ್ರಗಳೂ ಈ ಸಾಕ್ಷ್ಯಗಳಲ್ಲಿ ಸೇರಿದ್ದವು.

ರಾಜನ್ ಮತ್ತು ಜೋಸೆಫ್ ಚಾಲಿಯನ್ನು ಪೊಲೀಸರು ಬಂಧಿಸಿದರೆಂದು ಹಾಸ್ಟೆಲ್ ವಾರ್ಡನ್ 1976ರ ಮಾರ್ಚ್ ಒಂದರ ಮುಂಜಾನೆ ಏಳು ಗಂಟೆಗೆ ತಮಗೆ ತಿಳಿಸಿದ್ದಾಗಿ ರೀಜನಲ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಹಾವುದ್ದೀನ್ ನ್ಯಾಯಾಲಯಕ್ಕೆ ತಿಳಿಸಿದರು. ಬಂಧನದ ಕುರಿತ ಲಿಖಿತ ವರದಿಗಳನ್ನೂ ಸಂಜೆ ಪಡೆಯಲಾಯಿತು. ಇಬ್ಬರೂ ವಿದ್ಯಾರ್ಥಿಗಳ ಬಂಧನ ಕುರಿತು ಅವರ ಪೋಷಕರಿಗೆ ಅಂದೇ ಪತ್ರಗಳನ್ನೂ ಬರೆಯಲಾಯಿತು ಎಂದರು.

ಪೊಲೀಸರಿಂದ ರಾಜನ್ 'ಅಪಹರಣ'ದ ತರುವಾಯ ಹಲವು ಕಾಲಘಟ್ಟಗಳಲ್ಲಿನ ವಿದ್ಯಮಾನಗಳನ್ನು ಹಲವು ಸಾಕ್ಷೀದಾರರು ನ್ಯಾಯಾಲಯಕ್ಕೆ ವಿವರಿಸಿದರು. ಪೊಲೀಸರ ಗುಂಪೊಂದು ಹಾಸ್ಟೆಲಿಗೆ ಬಂದು ಡಿ ಹಾಸ್ಟೆಲಿನ ಕೊಠಡಿ ಸಂಖ್ಯೆ 144ರಲ್ಲಿ ವಾಸವಿದ್ದ ರಾಜನ್ ಮತ್ತು ಚಾಲಿಯ ಕುರಿತು ವಿಚಾರಿಸಿದ್ದಾಗಿ ಹಾಸ್ಟೆಲಿನಲ್ಲಿ ಉಳಿದಿದ್ದ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ನಾರಾಯಣ ನಾಯರ್, 1976ರ ಫೆಬ್ರವರಿ 29ರಿಂದ ಮಾರ್ಚ್ ಒಂದರ ತನಕ ಕರ್ತವ್ಯದಲ್ಲಿದ್ದ ಕಾವಲುಗಾರ ನ್ಯಾಯಾಲಯಕ್ಕೆ ತಮ್ಮ ಹೇಳಿಕೆಗಳನ್ನು ನೀಡಿದರು. ಪೊಲೀಸರು ರಾಜನ್ ದಸ್ತಗಿರಿ ಮಾಡಿ ಕೊಂಡೊಯ್ದ ಕೆಲ ಹೊತ್ತಿನಲ್ಲೇ ತಾನು ಹಾಸ್ಟೆಲ್ ಕಾರ್ಯದರ್ಶಿ ಮತ್ತು ಮುಖ್ಯ ವಾರ್ಡನ್‌ಗೆ ಈ ವಿಷಯ ತಿಳಿಸಿದ್ದಾಗಿ ಕಾವಲುಗಾರ ವಿವರಿಸಿದ.

ಸರ್ಕಲ್ ಇನ್‌ಸ್ಪೆಕ್ಟರ್ ಮತ್ತು ಕೆಲವು ಪೊಲೀಸ್ ಪೇದೆಗಳು ರಾಜನ್‌ನನ್ನು ಪೊಲೀಸ್ ಟೆಂಪೋ ವ್ಯಾನಿನತ್ತ ಕರೆದೊಯ್ಯುತ್ತಿದ್ದುದನ್ನು ತಾನು ನೋಡಿದ್ದಾಗಿ ಮತ್ತೊಬ್ಬ ಸಾಕ್ಷೀದಾರ ಹೇಳಿದ. ಪೊಲೀಸರ ಬಳಿ ನಿಂತಿದ್ದ ವ್ಯಾನೊಂದರಲ್ಲಿ ರಾಜನ್ ಮತ್ತು ಚಾಲಿ ಕುಳಿತಿದ್ದನ್ನು ತಾನು ಕಂಡದ್ದಾಗಿ ಅರೆಕಾಲಿಕ ಸಫಾಯಿ ಕರ್ಮಚಾರಿ ಬಾಲಸುಬ್ರಮೊಣಿಯಂ ಹೇಳಿದ. ಈ ವ್ಯಾನ್‌ ಸಮೀಪದಲ್ಲೇ ಇರುವ ಲಾಡ್ಜ್ ಕಡೆಗೆ ಚಲಿಸಿತು. ಇಬ್ಬರೂ ವಿದ್ಯಾರ್ಥಿಗಳನ್ನು ಲಾಡ್ಜ್ ಒಳಕ್ಕೆ ಒಯ್ಯಲಾಯಿತು. ಒಳಗಿನಿಂದ ಇಬ್ಬರೂ ವಿದ್ಯಾರ್ಥಿಗಳ ಚೀತ್ಕಾರಗಳು ಕೇಳಿ ಬಂದವು. 15 ನಿಮಿಷಗಳ ನಂತರ ಇಬ್ಬರನ್ನೂ ಹೊರಕ್ಕೆ ಕರೆತರಲಾಯಿತು. ನಂತರ ಕಾಲೇಜಿನ ಸ್ಟೇಟ್ ಬ್ಯಾಂಕ್ ಬಳಿ ಈ ವ್ಯಾನು ಕಂಡು ಬಂದಿತು ಎಂದು ಆತ ವಿವರಿಸಿದ. ತಾನು ನೋಡಿದಾಗ ಈ ವ್ಯಾನಿನಲ್ಲಿ ಪೊಲೀಸರ ಜೊತೆ ರಾಜನ್ ಮಾತ್ರವೇ ಇದ್ದನೆಂದು ಮತ್ತೊಬ್ಬ ಸಫಾಯಿ ಕರ್ಮಚಾರಿ ಹೇಳಿದ. ಕೋರು ಎಂಬ ಭೋಜನಶಾಲೆಯ ಸಹಾಯಕನೂ ಇದೇ ಮಾತು ಹೇಳಿದ.

ವ್ಯಾನನ್ನು ಚಾತಮಂಗಲದ ಬಳಿ ನೋಡಿದೆ. ಹೆಂಡದಂಗಡಿ ಬಳಿ ನಿಲ್ಲಿಸಲಾಗಿತ್ತು. ಇಣುಕಿ ನೋಡಿದಾಗ ಪೊಲೀಸರ ಜೊತೆ ರಾಜನ್ ಕುಳಿತದ್ದು ಕಂಡು ಬಂದದ್ದಾಗಿ ಸುರೇಂದ್ರನ್ ಎಂಬ ಮತ್ತೊಬ್ಬ ಸಾಕ್ಷೀದಾರ ಹೇಳಿಕೆ ನೀಡಿದ್ದ.

ನಕ್ಸಲೀಯ ಚಟುವಟಿಕೆಗಳ ಜೊತೆ ಸಂಬಂಧ ಇರಿಸಿಕೊಂಡಿದ್ದ ಆಪಾದನೆಯ ಮೇರೆಗೆ ಟೈಪ್‌ರೈಟಿಂಗ್ ಇನ್‌ಸ್ಟಿಟ್ಯೂಟ್ ನಡೆಸುತ್ತಿದ್ದ ರಾಜನ್ ಎಂಬ ಹೆಸರಿನ ಮತ್ತೊಬ್ಬ ಯುವಕನನ್ನು ಫೆ. 28ರಂದು ಬಂಧಿಸಲಾಗಿತ್ತು. ಆರಂಭಿಕ ವಿಚಾರಣೆಯ ನಂತರ ಆತನನ್ನು ಪೊಲೀಸ್ ಜೀಪೊಂದರಲ್ಲಿ ಕಕ್ಕಾಯಂ ಪ್ರವಾಸಿ ಮಂದಿರದ ಕೊಠಡಿಯೊಳಕ್ಕೆ ಎಳೆದೊಯ್ಯಲಾಯಿತು. ಅದೇ ಕೋಣೆಯಲ್ಲಿ ಆರು ಮಂದಿ ಪೊಲೀಸರು ರಾಜನ್‌ನನ್ನು ಚಿತ್ರಹಿಂಸೆಗೆ ಗುರಿಪಡಿಸುತ್ತಿದ್ದರು. ಈ ಪೈಕಿ ಒಬ್ಬಾತ ಸಬ್ ಇನ್‌ಸ್ಪೆಕ್ಟರ್ ಪುಲಿಕ್ಕೋಡಂ ನಾರಾಯಣನ್. ಕೆಲ ಸಮಯದ ನಂತರ ಪ್ರಜ್ಞೆ ತಪ್ಪಿದ ರಾಜನ್ ನನ್ನು ಆ ಜಾಗದಿಂದ ಹೊರಗೊಯ್ಯಲಾಯಿತು ಎಂದು ಈ ಯುವಕ ಸಾಕ್ಷಿ ಹೇಳಿದ.

ರಾಜನ್ ಪೊಲೀಸ್ ವಶದಲ್ಲಿದ್ದ ಸಂಗತಿ ರುಜುವಾತಾಗಿದೆ ಎಂದೂ ನ್ಯಾಯಾಲಯ ತೀರ್ಪು ನೀಡಿತು. ಮಗನನ್ನು ಪತ್ತೆ ಮಾಡಿಕೊಡುವಂತೆ ಪ್ರೊ.ವಾರಿಯರ್ ನೀಡಿದ್ದ ಅರ್ಜಿಗಳನ್ನು ನಿರ್ಲಕ್ಷಿಸಿದ ಗೃಹಸಚಿವ ಮತ್ತು ಗೃಹಕಾರ್ಯದರ್ಶಿಯವರ ನಡವಳಿಕೆಗಳನ್ನು ನ್ಯಾಯಾಲಯ ಖಂಡಿಸಿತು. ರಾಜನ್ ಎಲ್ಲಿದ್ದಾನೆಂದು ತಿಳಿಸಲಾಗದ ರಾಜ್ಯ ಸರ್ಕಾರದ ಸ್ಥಿತಿ ಅತ್ಯಂತ ವಿಷಾದಕರ. ಆತ ಬದುಕಿ ಉಳಿದಿಲ್ಲವಾದಲ್ಲಿ, ಪೊಲೀಸ್ ವಶಕ್ಕೆ ತೆಗೆದುಕೊಂಡ ನಂತರ ಏನಾಯಿತು ಎಂಬುದನ್ನು ಆತನ ಪೋಷಕರಿಗೆ ತಿಳಿಸುವುದು ಸರ್ಕಾರದ ಕರ್ತವ್ಯ. ಇನ್ನೂ ಪೊಲೀಸ್ ವಶದಲ್ಲಿದ್ದಾನೆಯೇ, ಇಲ್ಲವೆಂದಾದರೆ ಆತನ ಅಂತ್ಯ ಹೇಗಾಯಿತು ಎಂಬುದನ್ನು ಕಂಡು ಹಿಡಿಯಬೇಕು ಎಂದು ನ್ಯಾಯಾಲಯ ಆದೇಶ ನೀಡಿತು.

ರಾಜನ್ ನಾಪತ್ತೆಯಾದ ಕುರಿತು ವಿಚಾರಣೆ ನಡೆಸಲು ಆಯೋಗವೊಂದನ್ನು ರಚಿಸುವ ರಾಜ್ಯ ಸರ್ಕಾರದ ಅರಿಕೆಯನ್ನು ನ್ಯಾಯಾಲಯ ತಳ್ಳಿ ಹಾಕಿತು. ರಾಜ್ಯ ಸರ್ಕಾರದ ಈ ಅರಿಕೆಯಲ್ಲಿ ಯಾವುದೇ ಪ್ರಾಮಾಣಿಕ ಆತಂಕ ಕಂಡುಬಂದಿಲ್ಲ. ರಾಜನ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಲ್ಲಿ ವಿಫಲವಾದರೆ, ಅದನ್ನು ನ್ಯಾಯಾಂಗ ನಿಂದನೆಯ ಅಪರಾಧವೆಂದು ಪರಿಗಣಿಸಲಾಗುವುದು. ರಾಜನ್ ನನ್ನು ಹಾಜರುಪಡಿಸುವುದು ಸಾಧ್ಯವಿಲ್ಲವಾದರೆ ಏಪ್ರಿಲ್ 19ರ ಒಳಗೆ ನ್ಯಾಯಾಲಯದ ರಿಜಿಸ್ಟ್ರಾರ್ ಗೆ ತಿಳಿಯಪಡಿಸಬೇಕು ಎಂದು ವಿಧಿಸಿದ ನ್ಯಾಯಾಲಯ ವಿಚಾರಣೆಯನ್ನು ಅದೇ ಏಪ್ರಿಲ್ 25ಕ್ಕೆ ಮುಂದೂಡಿತು.

ಸಂಬಂಧಪಟ್ಟವರು ತಮ್ಮ ಜವಾಬ್ದಾರಿಯನ್ನು ಕೆಲವು ಪೊಲೀಸ್ ಅಧಿಕಾರಿಗಳ ಕೃತ್ಯವೆಂದು ಕೈ ತೊಳೆದುಕೊಳ್ಳುವಂತಿಲ್ಲ. ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದಿತು.

ಎದೆಯೊಡೆದ ತಂದೆ, ಮತಿಭ್ರಮಿತ ತಾಯಿ, ದುಃಖತಪ್ತ ಸೋದರಿಯರ ಈ ಕುಟುಂಬ ಏಕೈಕ ಮನೆಮಗನನ್ನು ಪತ್ತೆ ಮಾಡಿಕೊಡುವಂತೆ ಕಡೆಯ ಪ್ರಯತ್ನವಾಗಿ ನ್ಯಾಯಾಲಯದ ಕದ ತಟ್ಟಿದ್ದಾರೆ. ಪ್ರತಿವಾದಿಗಳು (ಸರ್ಕಾರ) ನಮ್ಮ ಜೊತೆ ಸಹಕರಿಸಿ ನೆರವಾಗಿದ್ದರೆ ಸತ್ಯಶೋಧನೆಯ ನಮ್ಮ ಕೆಲಸ ಹಗುರಾಗುತ್ತಿತ್ತು. ಆದರೆ ಪೊಲೀಸರು ವಶಕ್ಕೆ ತೆಗೆದುಕೊಳ್ಳಲೇ ಇಲ್ಲವೆಂಬ ಕಠಿಣ ನಿಲುವು ತಳೆದಿರುವ ಕಾರಣ ಸಾಕ್ಷ್ಯಾಧಾರಗಳಿಂದಲೇ ಈ ವಿಷಯದ ತನಿಖೆಯನ್ನು ಮಾಡಬೇಕಿದೆ. 1976ರ ಮಾರ್ಚ್ ಒಂದರಂದು ರಾಜನ್ ದಸ್ತಗಿರಿ ಆಯಿತೆಂಬ ಪ್ರಾಂಶುಪಾಲರ ಸಾಕ್ಷ್ಯವನ್ನು ನ್ಯಾಯಾಲಯ ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ರಾಜನ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು ಎಂಬುದನ್ನು ಸಾಕ್ಷ್ಯಗಳು ಸಂಶಯಕ್ಕೆ ಎಡೆಯಿಲ್ಲದಂತೆ ಸಾಬೀತು ಮಾಡಿವೆ. ಮಾರ್ಚ್ ಎರಡರಂದು ಆತನನ್ನು ಚಿತ್ರಹಿಂಸೆಗೆ ಗುರಿಪಡಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಒಯ್ಯಲಾಯಿತು. ಪ್ರತಿವಾದಿಗಳು (ಸರ್ಕಾರ) ಸಲ್ಲಿಸಿರುವ ಪ್ರಮಾಣ ಪತ್ರಗಳು ಸತ್ಯವನ್ನು ಹೊರಗೆಡವುವ ಬದಲು ಹತ್ತಿಕ್ಕಲು ಪ್ರಯತ್ನಿಸಿವೆ ಎಂದು ನ್ಯಾಯಾಲಯ ಹೇಳಿತು.

ಮುಖ್ಯಮಂತ್ರಿ ಕರುಣಾಕರನ್ ನ್ಯಾಯಾಲಯದ ಮುಂದೆ ಸುಳ್ಳು ಹೇಳಿರುವುದಾಗಿ ಸಾರಿದ ವಿಭಾಗೀಯ ನ್ಯಾಯಪೀಠವು, ಪೊಲೀಸರ ವಿರುದ್ಧ ಕಟು ನುಡಿಗಳನ್ನು ಬಳಸಿತು.

ನ್ಯಾಯಾಲಯದ ತೀರ್ಪಿನ ಪರಿಣಾಮವಾಗಿ 1977ರ ಏಪ್ರಿಲ್ 26ರಂದು ಮುಖ್ಯಮಂತ್ರಿ ಕರುಣಾಕರನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜನ್ ನನ್ನು ಪೊಲೀಸರು ಬಂಧಿಸಿರಲೇ ಇಲ್ಲವೆಂದು ಪ್ರಮಾಣಪತ್ರ ಸಲ್ಲಿಸಿ ವಾದಿಸಿದ್ದ ಕರುಣಾಕರನ್ ಹಠಾತ್ತನೆ ಹೆದರಿ ತಿಪ್ಪರಲಾಗ ಹಾಕಿದರು. ಗೊಂದಲ ಫಜೀತಿಗಳಿಂದ ಹೊರಬರಲು ಮತ್ತು ಆಗಿದ್ದ ಹಾನಿಯ ತೀವ್ರತೆಯನ್ನು ತಗ್ಗಿಸಲು 1977ರ ಮೇ 22ರಂದು ಕರುಣಾಕರನ್ ನ್ಯಾಯಲಯದ ಮುಂದೆ ಮತ್ತೊಂದು ಪ್ರಮಾಣಪತ್ರ ಸಲ್ಲಿಸಿದರು. ರಾಜನ್ ನನ್ನು ಪೊಲೀಸರು ಬಂಧಿಸಿದ್ದು ನಿಜವೆಂದೂ, ಪೊಲೀಸ್ ವಶದಲ್ಲಿ ಚಿತ್ರಹಿಂಸೆಯಿಂದ ಆತ ಸತ್ತದ್ದಾಗಿಯೂ ಒಪ್ಪಿಕೊಂಡರು. ಪೊಲೀಸ್ ಚಿತ್ರಹಿಂಸೆಯ ಕಾರಣ 1976ರ ಮಾರ್ಚ್ ಎರಡರಂದು ಕಕ್ಕಾಯಂ ತನಿಖಾ ಶಿಬಿರದಲ್ಲಿ ಮರಣ ಹೊಂದಿರುವ ರಾಜನ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದು ಸಾಧ್ಯವಿಲ್ಲ. ಈ ಸಂಗತಿಯನ್ನು 1977ರ ಮೇ 17ರ ತನಿಖಾಧಿಕಾರಿಯ ವರದಿಯು ಹೊರಗೆಡವಿದೆ ಎಂದು ಕರುಣಾಕರನ್ ನಿವೇದಿಸಿಕೊಂಡರು.

ಕರುಣಾಕರನ್ ಮತ್ತು ಪೊಲೀಸರ ಈ ತಪ್ಪೊಪ್ಪಿಗೆಯ ನಂತರ ಹತ್ಯೆಯ ಅಪರಾಧಕ್ಕಾಗಿ ಯಾರಿಗೂ ಶಿಕ್ಷೆಯಾಗಲಿಲ್ಲ. ರಾಜನ್ ಮೃತದೇಹ ಸಿಗದೆ ಹೋದ ಕಾರಣ ಎಲ್ಲ ಪೊಲೀಸರು ಮತ್ತು ರಾಜಕಾರಣಿಗಳು ನುಣುಚಿಕೊಂಡರು.

ರಾಜನ್ ನಾಪತ್ತೆಯಾದ ದಿನದಿಂದ ವಾರಿಯರ್ ಅವರ ಬದುಕು ಭರವಸೆ ಮತ್ತು ಕೊನೆಯಿಲ್ಲದ ನಿರೀಕ್ಷೆಯ ಸುತ್ತ ಸುತ್ತತೊಡಗಿತ್ತು. ತರುವಾಯ ತಮ್ಮ ತೊಳಲಾಟಗಳನ್ನು ಅವರು ‘Memories of a Father’ ಎಂಬ ಕೃತಿಯಲ್ಲಿ ಹಿಡಿದಿಟ್ಟರು- ‘ನನ್ನ ಅಮಾಯಕ ಕಂದನನ್ನು ಸಾವಿನ ನಂತರವೂ ಯಾಕೆ ಮಳೆಯಲ್ಲೇ ನಿಲ್ಲಿಸಿದ್ದೀರಿ? ನಾನು ಬಾಗಿಲು ಮುಚ್ಚುವುದಿಲ್ಲ. ಮಳೆ ಒಳಕ್ಕೆ ರಾಚಿ ನನ್ನನ್ನು ತೋಯಿಸಲಿ. ಕನಿಷ್ಠ ಪಕ್ಷ ತನ್ನ ತಂದೆ ಬಾಗಿಲು ಮುಚ್ಚಲಿಲ್ಲವೆಂದು ನನ್ನ ಅದೃಶ್ಯ ಅಣುಗನಿಗೆ ತಿಳಿಯಲಿ.’

ಆದರೆ, ರಾಜನ್ ಎದುರಿಸಿದ ಚಿತ್ರಹಿಂಸೆಯಾದರೂ ಎಂತಹುದು ಮತ್ತು ಅಷ್ಟು ಬೇಗನೆ ಆತ ಕುಸಿದು ಹೋದದ್ದೇಕೆ? ಈ ಸಂಬಂಧ ಸಾಕಷ್ಟು ಊಹಾಪೋಹ ಉಂಟು. ‘ದಿ ವೈರ್’ ಸುದ್ದಿ ಸಂಸ್ಥೆಯ ಪಿ.ವೇಣುಗೋಪಾಲ್ ಅವರು ಕೆ.ವೇಣು ಎಂಬ ತೀವ್ರ ಎಡಪಂಥೀಯರೊಬ್ಬರ ಮಾತುಗಳನ್ನು ಉಲ್ಲೇಖಿಸಿದ್ದಾರೆ- ತೀವ್ರ ಎಡಪಂಥೀಯ ಚಟುವಟಿಕೆಗಳ ದಮನ ಕಾರ್ಯಾಚರಣೆಯ ಹೊಣೆ ಅಂದಿನ ಐ.ಜಿ.ಪಿ ಜಯರಾಂ ಪಡಿಕ್ಕಲ್ ಮೇಲಿತ್ತು. ಅಪರಾಧ ತನಿಖೆಯ ವೈಜ್ಞಾನಿಕ ವಿಧಾನಗಳ ಕುರಿತು ಸ್ಕಾಟ್ಲೆಂಡ್ ಯಾರ್ಡ್ ತರಬೇತಿ ಪಡೆದಿದ್ದವರು ಅವರು. ಆದರೆ ಕೇರಳದಲ್ಲಿ ಊಹಿಸಲೂ ಅಸಾಧ್ಯವೆನಿಸುವ ಅತ್ಯಂತ ಒರಟು ಸಾಧನಗಳನ್ನು ಬಳಕೆಗೆ ಇಳಿಸಿದ್ದರು. 'ಉರುಟ್ಟಲ್' ವಿಚಾರಣಾ ವಿಧಾನವಂತೂ ಕುಖ್ಯಾತವೆನಿಸಿತ್ತು. ಮಲೆಯಾಳದಲ್ಲಿ 'ಓಲಕ್ಕ' ಎಂದು ಕರೆಯಲಾಗುವ ಒನಕೆಯಂತಹ ‘ಬಾಯಿ ಬಿಡಿಸುವ’ ಸಾಧನ. ಬೆಂಚೊಂದರ ಮೇಲೆ ಮಲಗಿಸಿದ ವ್ಯಕ್ತಿಯ ತೊಡೆಗಳ ಮೇಲೆ ಈ ಸಾಧನವನ್ನು ಅಡ್ಡಡ್ಡವಾಗಿ ಇರಿಸಿ ಎರಡೂ ಬದಿಗೆ ನಿಂತ ಇಬ್ಬರು ಠೊಣಪ ಪೊಲೀಸ್ ಪೇದೆಗಳು ತಮ್ಮ ಎಲ್ಲ ಭಾರವನ್ನು ಒನಕೆಯ ಎರಡೂ ತುದಿಗಳಿಗೆ ಇಳಿಸಿ ನಿಧಾನವಾಗಿ ಮೇಲಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಅದನ್ನು ಉರುಳಿಸುವ ಚಿತ್ರಹಿಂಸೆಯಿದು. ಬಲಿಪಶು ಪ್ರಜ್ಞೆ ತಪ್ಪುವ ತನಕ ಮುಂದುವರೆಯುವ ಹಿಂಸೆ. ಕಣ್ಣಿಗೆ ಕಾಣುವ ಯಾವ ಗಾಯವೂ ಆಗದು. ಆದರೆ ತೊಡೆಯ ಎಲ್ಲ ಮಾಂಸಪೇಶಿಗಳೂ ಜಜ್ಜಿ ಕರಗಿ ಲೇಹ್ಯ ಅಥವಾ ಮುಲಾಮಿನಂತಾಗುವ ಭಯಾನಕ ಸ್ಥಿತಿ. ಮರುದಿನ ಬಾಯಿ ಬಿಡಿಸಲು ಮತ್ತೆ ಬಡಿಯಬೇಕಿಲ್ಲ. ಕೋಲು ಹಿಡಿದು ತೊಡೆಯ ಮೇಲೆ ಮೆದುವಾಗಿ ತಟ್ಟಿದರೂ ಸಾಕು...ನೋವಿನ ಆಳ ತರಂಗಗಳೆದ್ದು ಜೋರು ಚೀತ್ಕಾರಗಳು ನಿಶ್ಚಿತ.

ಕೇರಳದ ಬ್ಲಾಗರ್ ಒಬ್ಬರ ಪ್ರಕಾರ ರಾಜನ್ ಕೇಸಿನ ಪ್ರಮುಖ ಆರೋಪಿ ಜಯರಾಂ ಪಡಿಕ್ಕಲ್, ಬಡ್ತಿ ಪಡೆದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಹುದ್ದೆಯನ್ನು ಅಲಂಕರಿಸುತ್ತಾರೆ.

ಆದರೆ, ರಾಜನ್ ಕಳೇಬರಕ್ಕೆ ಪೊಲೀಸರು ಏನು ಗತಿ ಕಾಣಿಸಿದರು? ಜನಪ್ರಿಯ ಮಲೆಯಾಳಂ ದಿನಪತ್ರಿಕೆ ‘ಮಾತೃಭೂಮಿ’ ರಾಜನ್ ಶವವನ್ನು ಮೂವತ್ತು ವರ್ಷಗಳ ಹಿಂದೆ ಸಾಗಿಸಿದ ವಾಹನದ ಚಾಲಕನ ಮೈ ನಡುಗಿಸುವ ತಪ್ಪೊಪ್ಪಿಗೆಯನ್ನು 2014ರ ನವೆಂಬರ್ ತಿಂಗಳಲ್ಲಿ ಪ್ರಕಟಿಸಿತ್ತು. ಚಿತ್ರಹಿಂಸೆಗೆ ಗುರಿಯಾಗಿ ತುಂಡಾಗಿ ವಿರೂಪಗೊಂಡ ರಾಜನ್ ಮೃತದೇಹವನ್ನು ಮೊದಲು ಮಂಜುಗಡ್ಡೆಗಳ ಕೋಣೆಗೆ ಎಸೆದು ಆನಂತರ ಹೊರತೆಗೆದು ಅರೆದು ಕೂತಾಟ್ಟುಕುಳಂನ 'ಮೀಟ್ ಪ್ರಾಡಕ್ಟ್ಸ್ ಇಂಡಿಯಾ' ಎಂಬ ಸರ್ಕಾರಿ ಕಾರ್ಖಾನೆಯಲ್ಲಿ ಹಂದಿಗಳಿಗೆ ಉಣಿಸಲಾಯಿತು.

ಲಾರೆನ್ಸ್ ಫರ್ನಾಂಡಿಸ್ ಪ್ರಕರಣ

ಒಂದು ಕಾಲಕ್ಕೆ ಉರಿ ಉರಿವ ಸಮಾಜವಾದಿಯಾಗಿದ್ದರು ಜಾರ್ಜ್ ಫರ್ನಾಂಡಿಸ್. ಅವರಿಗಿದ್ದ ಜನಸಂಘಟನಾ ಸಾಮರ್ಥ್ಯ ಅಸಾಧಾರಣ. 1974ರಲ್ಲಿ ಜಾರ್ಜ್ ಸಂಘಟಿಸಿದ್ದ ಅಖಿಲ ಭಾರತ ರೈಲ್ವೆ ಮುಷ್ಕರ ಐತಿಹಾಸಿಕ. ಇಂದಿರಾ ಸರ್ಕಾರವನ್ನು ನಡುಗಿಸಿದ್ದರು. 1975ರ ತುರ್ತು ಪರಿಸ್ಥಿತಿ ಘೋಷಣೆಯ ಜೊತೆ ಜೊತೆಗೇ ಅವರ ಬೇಟೆಗೆ ವ್ಯಾಪಕ ಬಲೆ ಬೀಸಲಾಗಿತ್ತು.

ಹಠಾತ್ ಭೂಗತರಾದರು. ವೇಷ ಬದಲಿಸಿ ದೇಶದಾದ್ಯಂತ ಸಂಚರಿಸಿ ಸರ್ವಾಧಿಕಾರಿ ಸರ್ಕಾರದ ವಿರುದ್ಧ ಸಶಸ್ತ್ರ ಬಂಡಾಯದ ಸಂಘಟನೆಯಲ್ಲಿ ತೊಡಗಿದರು.ಬರೋಡಾಗೆ ತೆರಳಿದರು. ಡೈನಮೈಟ್ (ಸಿಡಿಮದ್ದು) ಪಡೆದು ಸರ್ಕಾರಿ ಸಂಸ್ಥೆಗಳನ್ನು ಸ್ಫೋಟಿಸುವ ಮತ್ತು ಇಂದಿರಾಗಾಂಧಿ ಅವರ ಸಾರ್ವಜನಿಕ ಸಭೆಗಳಲ್ಲಿ ಭೀತಿಯನ್ನು ಎಬ್ಬಿಸುವುದು ಅವರ ಯೋಜನೆಯಾಗಿತ್ತು.

ಅವರನ್ನು ಹಿಡಿಯಲಾಗದೆ ಹತಾಶಗೊಂಡಿತ್ತು ಪ್ರಭುತ್ವ. ಜಾರ್ಜ್ ಸೋದರ ಲಾರೆನ್ಸ್ ಫರ್ನಾಂಡಿಸ್ ಅವರ ಬೆನ್ನು ಬಿದ್ದಿತು ಕರ್ನಾಟಕದ ಸಿ.ಓ.ಡಿ. 1976ರ ಮೇ ಒಂದರಂದು ಬೆಂಗಳೂರಿನ ರಿಚ್ಮಂಡ್ ರಸ್ತೆಯ ಫರ್ನಾಂಡಿಸ್ ನಿವಾಸದಿಂದ ಅವರನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಯಿತು. ಈ ಹಿಂಸೆಯ ಭಯಾನಕ ವಿವರಗಳು ದೇಶದ ತುಂಬೆಲ್ಲ ಜನಾಕ್ರೋಶದ ಅಲೆಗಳನ್ನು ಎಬ್ಬಿಸಿದವು.

ಲಾರೆನ್ಸ್ ಕತೆಯನ್ನು ಅವರ ಮಾತುಗಳಲ್ಲೇ ಆಲಿಸಿರಿ-

1976ರ ಮೇ ಒಂದರ ರಾತ್ರಿ. ಯಾರೋ ನನ್ನನ್ನು ಲಾರೆನ್ಸ್ ಎಂದು ಕೂಗಿ ಕರೆಯುತ್ತಿದ್ದರು. ಗೆಳೆಯನಿರಬೇಕೆಂದು ಭಾವಿಸಿ ಗೇಟಿನತ್ತ ನಡೆದೆ. ಮನೆಯ ಹೊರಗೆ ಪೊಲೀಸ್ ಜೀಪೊಂದು ನಿಂತಿತ್ತು. ಹೆಸರಿಡಿದು ಕರೆದದ್ದು ಮಫ್ತಿಯಲ್ಲಿದ್ದ ಪೊಲೀಸ್ ಅಧಿಕಾರಿ. ಮೈಕೆಲ್ ಫರ್ನಾಂಡಿಸ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ ಸಂಬಂಧದಲ್ಲಿ ನನ್ನ ಹೇಳಿಕೆಯೊಂದನ್ನು ಪಡೆಯಬೇಕಾಗಿದೆ ಎಂದರು ಆ ಅಧಿಕಾರಿ. ಮೈಕೆಲ್ ನನ್ನ ಕಿರಿಯ ಸೋದರ. ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ನಲ್ಲಿ ಎಂಜಿನಿಯರ್. ಹೇಳಿಕೆ ನೀಡಲು ಬಹಳ ಹೊತ್ತೇನೂ ಹಿಡಿಯದೆಂದು ಭಾವಿಸಿ ವಯಸ್ಸಾದ ನನ್ನ ತಂದೆ ತಾಯಿಗಳಿಗೆ ಹೇಳದೆ ಮನೆ ಬಿಟ್ಟೆ.

ಪೊಲೀಸರು ನನ್ನ ಹೇಳಿಕೆಯನ್ನು ದಾಖಲಿಸಿಕೊಂಡು ಸಿ.ಓ.ಡಿ. ಕಚೇರಿಗೆ ಕರೆದೊಯ್ದರು. ಅಲ್ಲಿ ಯಾರೋ ಏಕಾಏಕಿ ನನ್ನ ಕೆನ್ನೆಗೆ ಬಾರಿಸಿದರು. ಪ್ರಜ್ಞೆ ತಪ್ಪಿತ್ತು. ಎಚ್ಚರವಾದಾಗ ಬೆತ್ತಲಾಗಿದ್ದೆ. ಹತ್ತು ಮಂದಿ ಪೊಲೀಸರಿಂದ ಚಿತ್ರಹಿಂಸೆ. ಸಿಕ್ಕಿದೆಡೆ ಬಾರಿಸಿದರು. ನಾಲ್ಕು ಲಾಠಿಗಳು ಮುರಿದವು. ಕಾಲ್ಚೆಂಡಿನಂತೆ ಒದ್ದರು. ತೆವಳಿ ತೆವಳಿ ಬೇಡಿದರೂ ಬಿಡಲಿಲ್ಲ. ನೋವು ತಡೆಯಲಾರದೆ ಅಬ್ಬರಿಸಿ ಕಿರುಚಿದೆ. ಅರೆಪ್ರಜ್ಞೆಯ ಸ್ಥಿತಿ. ಸಾಯುವಷ್ಟು ಬಾಯಾರಿಕೆ. ನೀರು ಕೇಳಿದೆ. ನನ್ನ ಬಾಯಿಯಲ್ಲಿ ಮೂತ್ರ ಮಾಡುವಂತೆ ಅಧಿಕಾರಿಯೊಬ್ಬ ಕಾನ್‌ಸ್ಟೆಬಲ್ ಗಳಿಗೆ ಆದೇಶ ನೀಡಿದ. ಅವರು ಹಾಗೆ ಮಾಡಲಿಲ್ಲ. ಉಸಿರು ಕಟ್ಟುತ್ತಿತ್ತು. ಚಮಚೆ ನೀರಿನಿಂದ ನನ್ನ ತುಟಿಗಳನ್ನು ಒದ್ದೆ ಮಾಡುತ್ತಿದ್ದರು. ಚಾರ್ಜ್ ಎಲ್ಲಿದ್ದಾರೆಂದು ಕೇಳುತ್ತಿದ್ದರು. ಲೈಲಾ (ಜಾರ್ಜ್ ಪತ್ನಿ) ಮತ್ತು ಅವರ ಮಗ 1975ರ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿಗೆ ಬಂದದ್ದೇಕೆ, ಆಕೆ ಹಿಂತಿರುಗಿದಾಗ ಮದ್ರಾಸ್ ತನಕ ಜೊತೆಗೆ ನಾನೂ ಪ್ರಯಾಣ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.

ಜೀಪು ಸಿದ್ಧವಿರಿಸುವಂತೆ ಅಧಿಕಾರಿಯೊಬ್ಬ ಕಾನ್‌ಸ್ಟೆಬಲ್ ಗಳಿಗೆ ಹೇಳಿದ. ಓಡುವ ರೈಲಿನ ಕೆಳಗೆ ನನ್ನನ್ನು ಎಸೆದು, ಆತ್ಮಹತ್ಯೆ ಮಾಡಿಕೊಂಡನೆಂದು ಹೇಳಿದರಾಯಿತು ಎಂದ. ನಾನು ಛಿದ್ರಗೊಂಡಿದ್ದೆ. ದೇಹದ ಎಡಭಾಗದ ಮೂಳೆಗಳೆಲ್ಲ ಮುರಿದಿದ್ದವು. ತೊಡೆಗಳಲ್ಲಿ ನರಕದಂತಹ ನೋವು. ಕೈ-ಕಾಲುಗಳು ಬಾತುಕೊಂಡಿದ್ದವು.

ನನ್ನನ್ನು ಮಲ್ಲೇಶ್ವರದತ್ತ ಒಯ್ಯಲಾಯಿತು. ರೈಲು ಕೆಳಗೆ ಎಸೆವ ಬೆದರಿಕೆಯನ್ನು ನಿಜ ಮಾಡುತ್ತಾರೆಂದು ಬಗೆದು ಕರುಣೆ ತೋರುವಂತೆ ಬೇಡಿಕೊಂಡೆ. ಮನಸು ಬದಲಾಯಿಸಿದ್ದರು. ವೈಯ್ಯಾಲಿಕಾವಲ್ ಲಾಕಪ್ ಗೆ ಒಯ್ದರು. ಮರುದಿನ ಮತ್ತೆ ಸಿ.ಓ.ಡಿ. ಕಚೇರಿಗೆ ವಾಪಸು ಕರೆ ತಂದರು.

ಅಲ್ಲಿ ಮೊದಲ ಸಲ ಹೆಣ್ಣುಮಗಳ ಪರಿಚಿತ ದನಿಯೊಂದು ಕೇಳಿತು. ಆಕೆ ಸ್ನೇಹಲತಾರೆಡ್ಡಿ. ಕಿರುಚುತ್ತಿದ್ದರು. ನನಗೆ ಮಾಲಿಶ್ ಮಾಡಿಸಲು ಪೊಲೀಸರು ಯಾರನ್ನೋ ಕರೆದಿದ್ದರು. ಆತ ನನ್ನ ಕೈ ಕಾಲುಗಳಿಗೆ ಎಣ್ಣೆ ಹೆಚ್ಚಿದ ಅಷ್ಟೇ. ಮುಂದೆ ದುರಸ್ತಿ ಸಾಧ್ಯವಿಲ್ಲವೆಂದು ಕೈ ಎತ್ತಿಬಿಟ್ಟ. ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ.

ಮರುದಿನ ನನ್ನನ್ನು ಹೊಟೆಲೊಂದಕ್ಕೆ ಕರೆದೊಯ್ದರು. ಅಲ್ಲಿ ಜಾರ್ಜ್ ತಂಗಿದ್ದ ಕೊಠಡಿಯನ್ನು ನಾನು ಗುರುತಿಸಬೇಕಿತ್ತು. ಮರಳಿ ಸಿ.ಓ.ಡಿ. ಕಚೇರಿ. ಹಸಿದು ಬಿದ್ದುಕೊಂಡಿದ್ದೆ. ಊಟ ಬೇಡಿದರೆ ಸಿಕ್ಕದ್ದು ಕಾನ್‌ಸ್ಟೆಬಲ್ ಗಳಿಂದ ಬಾಯ್ತುಂಬ ಬೈಗುಳ. ವೈದ್ಯರನ್ನು ಕರೆದರು. ನನ್ನನ್ನು ಪರೀಕ್ಷಿಸಿ ಔಷಧಿಗಳನ್ನು ಬರೆದುಕೊಟ್ಟರು. ಮುಂದಿನ ಕೆಲ ದಿನಗಳ ಕಾಲ ನನ್ನನ್ನು ಮಲ್ಲೇಶ್ವರಂ ಠಾಣೆಯಲ್ಲಿ ಇರಿಸಲಾಗಿತ್ತು.

ಶೌಚಾಲಯಕ್ಕೆ ಕೂಡ ಕಾನ್‌ಸ್ಟೆಬಲ್ ಗಳು ನನ್ನನ್ನು ಹೊತ್ತು ಒಯ್ಯಬೇಕಿತ್ತು. ಮೇ ಒಂಬತ್ತರಂದು ಬಲವಂತವಾಗಿ ನನಗೆ ಕ್ಷೌರ-ಸ್ನಾನ ಮಾಡಿಸಿದರು. ಆದರೆ ತೊಟ್ಟಿದ್ದು ಅದೇ ದುರ್ನಾತದ ಬಟ್ಟೆಗಳು. ಸ್ವಲ್ಪ ಹೊತ್ತಿನ ನಂತರ ಮಫ್ತಿಯಲ್ಲಿದ್ದ ಇಬ್ಬರು ಅಧಿಕಾರಿಗಳು ಬಂದು ನನ್ನನ್ನು ಕಾರಿನಲ್ಲಿ ಹೊರಗೊಯ್ದರು. ದುಃಖ ಉಮ್ಮಳಿಸಿ ಜೋರಾಗಿ ಅತ್ತುಬಿಟ್ಟೆ.

ದಾವಣಗೆರೆಗೆ ಒಯ್ದು ತಿಗಣೆ-ಜಿರಳೆಗಳಿದ್ದ ಚಿಕ್ಕ ಚಚ್ಚೌಕದಲ್ಲಿ ಕೂಡಿ ಹಾಕಿದರು. ಚಿತ್ರಹಿಂಸೆ ಬಗ್ಗೆ ಮ್ಯಾಜಿಸ್ಟ್ರೇಟರ ಮುಂದೆ ಬಾಯಿ ತೆರೆದರೆ ನನ್ನ ಕುಟುಂಬವನ್ನು ನಿರ್ನಾಮ ಮಾಡುವುದಾಗಿ ಬೆದರಿಸಿದರು. ಬರಿಗಾಲಲ್ಲಿ ನಡೆಸಿದರು. ಕಾಲುಗಳು ದುಪ್ಪಟ್ಟು ಗಾತ್ರಕ್ಕೆ ಬಾತುಕೊಂಡಿದ್ದವು. ನನ್ನನ್ನು ಬಂಧಿಸಿದ್ದು ಯಾವಾಗ ಎಂದು ಮ್ಯಾಜಿಸ್ಟ್ರೇಟ್ ಪ್ರಶ್ನಿಸಿದರು. ತಡವರಿಸಿದೆ. ಮೇ 25ರ ತನಕ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.

ಕಳವಿನ ಕೇಸಿಗೆ ಸಂಬಂಧಿಸಿದ ವ್ಯಕ್ತಿಯೊಡನೆ ನನ್ನನ್ನು ದೊಡ್ಡ ಲಾಕಪ್ ನಲ್ಲಿ ಇಡಲಾಯಿತು. ಅವನು ಪೊಲೀಸರನ್ನೇ ನಿಯಂತ್ರಿಸುತ್ತಿದ್ದ. ಬೇಕಾದಾಗಲೆಲ್ಲ ಉಣಿಸು ತಿನಿಸು ಮತ್ತು ಸಿರೇಟುಗಳನ್ನು ತರಿಸಿಕೊಳ್ಳುತ್ತಿದ್ದ. ಕಾನ್‌ಸ್ಟೆಬಲ್ ಗಳು ಮತ್ತು ಸಬ್ ಇನ್‌ಸ್ಟೆಕ್ಟರುಗಳ ಅವನು ಕರೆದಾಗಲೆಲ್ಲ ಬರುತ್ತಿದ್ದರು.

ಮೇ 11ರಂದು ಬೆಂಗಳೂರಿಗೆ ವಾಪಸು ಕರೆತಂದು ಮಲ್ಲೇಶ್ವರಂ ಲಾಕಪ್ ನಲ್ಲಿ ಇರಿಸಿದರು. ಮಲ್ಲೇಶ್ವರದ ಆಸ್ಪತ್ರೆಗೆ ಒಯ್ದಾಗ ಎಕ್ಸ್ ರೇ ಮಾಡಿಸಬೇಕೆಂಬ ವೈದ್ಯರ ಸಲಹೆಯನ್ನು ತಳ್ಳಿ ಹಾಕಿದರು. ಮತ್ತಿನ ಔಷಧ ಕೊಡಲಾರಂಭಿಸಿದರು. ಸತತ ಮೂರು ದಿನ ಬೇಧಿ.

ಮಲ್ಲೇಶ್ವರದ ಪೊಲೀಸ್ ಅಧಿಕಾರಿ ನಿತ್ಯ ಸಂಜೆ ಮದ್ಯಪಾನ ಮಾಡುವಂತೆ ಒತ್ತಾಯಿಸುತ್ತಿದ್ದ. ಕೋರ್ಟಿಗೆ ಕರೆದೊಯ್ದಾಗ ನನ್ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸುವವರು ಯಾರೂ ಕಂಡು ಬರಲಿಲ್ಲ. ಚಿತ್ರಹಿಂಸೆಗೆ ಗುರಿ ಮಾಡಿದರೆಂದು ದೂರಿದೆ.

ಕೇಂದ್ರೀಯ ಕಾರಾಗೃಹಕ್ಕೆ ಒಯ್ದರು. ಬಿಡುಗಡೆಯ ಆಸೆ ಬತ್ತಿ ಹೋಯಿತು. ನನ್ನ ಬಟ್ಟೆ ಬಿಚ್ಚಿದರು. ಸೆಲ್ ಒಳಗೆ ನೂಕಿದರು. ಕತ್ತಲು, ಕೊಳಕು ನಾತ. ಆಳದಿಂದ ಯಾರೋ ನನ್ನ ಹೆಸರಿಡಿದು ಮತ್ತೆ ಮತ್ತೆ ಕರೆದಂತೆ. ಹಲವು ದನಿಗಳು. ಭ್ರಮೆ ಇದ್ದೀತೆಂದು ಭಾವಿಸಿದೆ. ಅವುಗಳಲ್ಲೊಂದು ದನಿ ಪರಿಚಿತ ಎನಿಸಿತು. ಅದು ಮಧು (ಮಧು ದಂಡವತೆ) ಅವರದು. ಸೆಲ್ ಬಾಗಿಲ ತನಕ ತೆವಳಿ ಸರಳು ಹಿಡಿದೆ. ‘ಲಾರೆನ್ಸ್, ಇದು ನೀನೇನಾ, ಹೇಳು. ನಿನಗೆ ಚಿತ್ರಹಿಂಸೆ ಕೊಟ್ಟರಾ’ ಎಂದು ಕೇಳಿದರು ಮಧು ದಂಡವತೆ.

ಹೌದು ಎಂದೆ. ನನ್ನ ದನಿ ನನಗೇ ಕೇಳುತ್ತಿರಲಿಲ್ಲ. ನನ್ನನ್ನು ಹುಚ್ಚನನ್ನಾಗಿ ಮಾಡುವುದು ಅಧಿಕಾರಿಗಳ ಇರಾದೆಯಾಗಿತ್ತು ಅನಿಸಿತು. ಉಸಿರಾಟದ ತೊಂದರೆ. ದಂಡವತೆ ಮತ್ತು ಇತರೆ ಮೀಸಾ ಬಂದಿಗಳು ಉಪವಾಸ ಸತ್ಯಾಗ್ರಹ ನಡೆಸಿದ್ದರು. ನನ್ನನ್ನು ಕತ್ತಲ ಕೊಳಕು ಸೆಲ್ ನಿಂದ ಹೊರತೆಗೆದು ಉತ್ತಮ ವಾತಾವರಣದಲ್ಲಿ ಇರಿಸಬೇಕೆಂಬುದು ಅವರ ಬೇಡಿಕೆಯಾಗಿತ್ತು. ಮರುದಿನ ನನ್ನ ತಾಯಿ ಮತ್ತು ಚಿಕ್ಕ ತಮ್ಮ ರಿಚರ್ಡ್ ನನ್ನನ್ನು ಕಾಣಲು ಬಂದಂತಿತ್ತು.

ಕೆಲ ದಿನಗಳ ನಂತರ ನಡೆಯಲು ಊರುಗೋಲು ಕೊಟ್ಟರು. ನನ್ನ ಸೆಲ್ ಬಳಿ ಬಂದವರಿಗೆಲ್ಲ ಹೊಡೆಯುತ್ತೇನೆಂಬ ಮಾತು ಹಬ್ಬಿ ಹರಡಿತು. ಎಲುಬಿನ ಗೂಡಾಗಿ ಹೋಗಿದ್ದ ನನ್ನನ್ನು ಯಾರೂ ಗುರುತು ಹಿಡಿಯುತ್ತಿರಲಿಲ್ಲ. ನನ್ನ ಬಿಡುಗಡೆಗೆ ಕೆಲ ದಿನ ಮುನ್ನ ಬಹಳ ಸೌಜನ್ಯ ತೋರಿದರು. ಎಳೆನೀರು ಕೂಡ ಕೊಟ್ಟರು.

ಲಾರೆನ್ಸ್ ಅವರನ್ನು ಅಕ್ರಮ ಬಂಧನದಲ್ಲಿರಿಸಿ ಚಿತ್ರಹಿಂಸೆ ನೀಡಿದ್ದಕ್ಕಾಗಿ ಷಾ ಆಯೋಗ ನಾಲ್ವರು ಪೊಲೀಸರ ಮೇಲೆ ದೋಷಾರೋಪ ಹೊರಿಸಿತು. ಮೂಲ ಹೊಣೆಯನ್ನು ಸಿ.ಓ.ಡಿ. ಎಸ್.ಪಿ. ಕೃಷ್ಣಮೂರ್ತಿ ರಾಜು ಅವರೇ ಹೊರಬೇಕು ಎಂದಿತು.

ಆಯೋಗದ ಮುಂದೆ ಹಾಜರಾದ ಎಲ್ಲ ಪೊಲೀಸ್ ಅಧಿಕಾರಿಗಳೂ ಈ ಪ್ರಕರಣದ ಘಟನೆಗಳ ಅನುಕ್ರಮಣಿಕೆ ಮತ್ತು ಪ್ರಕರಣದಲ್ಲಿ ತಮ್ಮ ಪಾತ್ರಗಳನ್ನು ಕುರಿತು ಹಸಿ ಹಸೀ ಸುಳ್ಳುಗಳನ್ನು ಹೇಳಿದರು.

ಈ ಪ್ರಕರಣ ಕೇವಲ ವ್ಯಕ್ತಿಯೊಬ್ಬನ ಅಕ್ರಮ ಬಂಧನ ಮತ್ತು ಚಿತ್ರಹಿಂಸೆಯನ್ನಷ್ಟೇ ಎತ್ತಿ ತೋರಿಲ್ಲ, ಬದಲಾಗಿ ಹಿರಿಯ ಮತ್ತು ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಗಳಿಂದ ಕಾನೂನು ವ್ಯವಸ್ಥೆ ಮತ್ತು ನ್ಯಾಯಾಂಗ ಪ್ರಕ್ರಿಯೆಯನ್ನೇ ಬುಡಮೇಲು ಮಾಡುವ ಪ್ರಯತ್ನ ನಡೆದಿರುವುದಕ್ಕೆ ಕನ್ನಡಿ ಹಿಡಿದಿದೆ ಎಂದು ಷಾ ಆಯೋಗ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT