ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆಗೆ ಆಶಾಕಿರಣ ‘ಜಿಎಸ್‌ಟಿ’

Last Updated 24 ಜೂನ್ 2017, 19:30 IST
ಅಕ್ಷರ ಗಾತ್ರ

ಶಿರಸಿ: ದೇಶದಾದ್ಯಂತ ಜುಲೈ 1ರಿಂದ ಜಾರಿಯಾಗಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ಅಡಿಕೆ ಬೆಳೆಗಾರರು ಹಾಗೂ ವ್ಯಾಪಾರಸ್ಥರಲ್ಲಿ ಭರವಸೆಯ ಬೆಳಕು ಮೂಡಿಸಿದೆ. ಬೆಳೆಗಾರರು ಮಾರುಕಟ್ಟೆ ದರದಲ್ಲಿ ಸ್ಥಿರತೆ ಕಾಣುವ ಆಶಾಭಾವದಲ್ಲಿದ್ದಾರೆ.

ತೋಟಗಾರಿಕಾ ಇಲಾಖೆಯ ಅಧಿಕೃತ ದಾಖಲೆಯ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ 18,431 ಹೆಕ್ಟೇರ್ ಅಡಿಕೆ ಬೆಳೆಯುವ ಪ್ರದೇಶವಿದೆ. ಇದರ ಹೊರತಾಗಿ ಸುಮಾರು 10 ಸಾವಿರ ಹೆಕ್ಟೇರ್ ಅತಿಕ್ರಮಣ ಭೂಮಿಯಲ್ಲಿ ಅಡಿಕೆ ತೋಟಗಳಿವೆ. ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳಲ್ಲಿ ಅಡಿಕೆಯೇ ಕೃಷಿಕರ ಜೀವನಾಡಿಯಾಗಿದೆ. ಅಡಿಕೆಯ ವಿಷಯದಲ್ಲಿ ಬೆಳೆಗಿಂತ ಪ್ರಮುಖವಾಗಿ ಬೆಲೆ ರೈತರನ್ನು ಸದಾ ಕಾಡುತ್ತದೆ. ಅನಿಶ್ಚಿತ ಮಾರುಕಟ್ಟೆಯಿಂದ ಹೈರಾಣಾಗಿರುವ ಬೆಳೆಗಾರರು ಹಾಗೂ ವ್ಯಾಪಾರಸ್ಥರು ಅಡಿಕೆ ಬೆಳೆಗೆ ಜಿಎಸ್‌ಟಿ ಹೊಸ ಮುನ್ನುಡಿ ಬರೆಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

‘ರಾಜ್ಯದಲ್ಲಿ ಅಡಿಕೆಗೆ ಶೇ 2ರಷ್ಟು ಮೌಲ್ಯವರ್ಧಿತ ತೆರಿಗೆ ಜಾರಿಯಲ್ಲಿದೆ. ಒಂದು ಬಾರಿ ಈ ತೆರಿಗೆ ಮೊತ್ತ ಪಾವತಿಸಲು ವ್ಯಾಪಾರಸ್ಥರು ಹೆದರುವುದಿಲ್ಲ. ಆದರೆ ಅಡಿಕೆಯ ಪ್ರಮುಖ ಮಾರುಕಟ್ಟೆ ಇರುವ ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಅಲ್ಲಿ ಜಾರಿಯಲ್ಲಿರುವ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹೀಗೆ ಸರಕು ಕಳುಹಿಸುವ ಮತ್ತು ಖರೀದಿಸುವ ರಾಜ್ಯಗಳ ತೆರಿಗೆ ಪಾವತಿಸುವಲ್ಲಿ ವ್ಯಾಪಾರಸ್ಥರು ಹೈರಾಣಾಗುತ್ತಾರೆ. ಜಿಎಸ್‌ಟಿ ಅಡಿಯಲ್ಲಿ ಈಗ ಅಡಿಕೆಗೆ ಶೇ 5ರಷ್ಟು ತೆರಿಗೆ ನಿಗದಿಯಾಗಿದೆ. ಇಡೀ ದೇಶದಲ್ಲಿ ಇದೇ ತೆರಿಗೆ ವ್ಯವಸ್ಥೆ ಇರುವುದರಿಂದ ವ್ಯಾಪಾರಸ್ಥರಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಶಿರಸಿಯ ಅಡಿಕೆ, ಕಾಳುಮೆಣಸು ಮತ್ತು ಯಾಲಕ್ಕಿ ವರ್ತಕರ ಸಂಘದ ಖಜಾಂಚಿ ಲೋಕೇಶ ಹೆಗಡೆ.

‘ಜಿಎಸ್‌ಟಿ ಅನುಷ್ಠಾನದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಿದರೆ ಹೊರ ರಾಜ್ಯಗಳ ಜೊತೆಗಿನ ಅನಧಿಕೃತ (‘ದೋ ನಂಬರ್’– ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ಶಬ್ದ) ಅಡಿಕೆ ವ್ಯಾಪಾರಕ್ಕೆ ಕಡಿವಾಣ ಬೀಳಬಹುದು. ಒಂದೊಮ್ಮೆ ಅಧಿಕಾರಿಗಳು ಎಡವಿದಲ್ಲಿ ‘ದೋ ನಂಬರ್’ ಮಿತಿ ಮೀರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಶೇ 2ರಷ್ಟು ತೆರಿಗೆ ಇರುವಾಗಲೇ ಜೋರಾಗಿರುವ ಅನಧಿಕೃತ ವ್ಯಾಪಾರ ಅಧಿಕಾರಿಗಳ ಒಳಬೆಂಬಲದಿಂದ ಅಂಕೆ ಮೀರಬಹುದು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವ್ಯಾಪಾರಸ್ಥರೊಬ್ಬರು ಹೇಳಿದರು.

ಜಿಎಸ್‌ಟಿ ಅನುಷ್ಠಾನದಿಂದ ಬಿಲ್‌ರಹಿತ ಅಡಿಕೆ ವ್ಯಾಪಾರಕ್ಕೆ ಕಡಿವಾಣ ಬೀಳುವುದರಿಂದ ಈ ವ್ಯವಸ್ಥೆಯನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ.
ಲೋಕೇಶ ಹೆಗಡೆ, ಶಿರಸಿ ಅಡಿಕೆ
ಕಾಳುಮೆಣಸು ಮತ್ತು ಯಾಲಕ್ಕಿ ವರ್ತಕರ ಸಂಘದ ಖಜಾಂಚಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT