ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಬಹಾವಲ್ಪುರದಲ್ಲಿ ಪೆಟ್ರೋಲ್‌ ಸಾಗಣೆ ಟ್ಯಾಂಕರ್‌ ಸ್ಫೋಟ: 151 ಮಂದಿ ಸಜೀವ ದಹನ

Last Updated 25 ಜೂನ್ 2017, 19:09 IST
ಅಕ್ಷರ ಗಾತ್ರ

ಲಾಹೋರ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಭಾನುವಾರ ಬೆಳಿಗ್ಗೆ ಪೆಟ್ರೋಲ್‌ ಟ್ಯಾಂಕರೊಂದು ಉರುಳಿ ಬಿದ್ದು ನಂತರ ಸ್ಫೋಟಿಸಿದ್ದರಿಂದ 151 ಜನರು  ಸುಟ್ಟು ಕರಕಲಾಗಿದ್ದಾರೆ. 140 ಜನರು ಗಂಭೀರವಾಗಿ ಗಾಯ ಗೊಂಡಿದ್ದಾರೆ.

ಕರಾಚಿಯಿಂದ ಲಾಹೋರ್‌ ಕಡೆಗೆ ಹೋಗುತ್ತಿದ್ದ ಟ್ಯಾಂಕರ್‌ ಬಹಾವಲ್ಪುರ ಜಿಲ್ಲೆಯ ಅಹ್ಮದ್‌ಪುರ ಶರ್ಕಿಯಾ ಎಂಬಲ್ಲಿ ಟೈರ್‌ ಸ್ಫೋಟಗೊಂಡು ಮಗುಚಿ ಬಿತ್ತು. ಈ ಸ್ಥಳ ಲಾಹೋರ್‌ನಿಂದ 400 ಕಿ.ಮೀ ದೂರದಲ್ಲಿದೆ.

ಟ್ಯಾಂಕರ್‌ನಿಂದ ಸೋರುತ್ತಿದ್ದ ಪೆಟ್ರೋಲ್‌ ಸಂಗ್ರಹಿಸಿಕೊಳ್ಳಲು ಹತ್ತಿರದ  ಗ್ರಾಮಗಳ ಜನರು ಮುಗಿ ಬಿದ್ದರು. ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಸಿಗರೇಟ್‌ ಹಚ್ಚಿದ್ದರಿಂದಾಗಿ ಬೆಂಕಿ ತಗುಲಿ ಟ್ಯಾಂಕರ್‌ ಸ್ಫೋಟಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಸ್ಲಿಮರ ಪವಿತ್ರ ಈದ್‌–ಉಲ್‌–ಫಿತ್ರ್‌  ಮುನ್ನಾದಿನ ಈ ದುರಂತ ಸಂಭವಿಸಿದೆ.

‘ಪಾಕಿಸ್ತಾನದ ಇತಿಹಾಸದಲ್ಲಿ ಇದು ಅತಿ ದೊಡ್ಡ ದುರಂತ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಯಾವುದೇ ವೈದ್ಯಕೀಯ ನೆರವು ದೊರೆಯುವ ಮೊದಲೇ ಕನಿಷ್ಠ 123 ಮಂದಿ ಸಜೀವವಾಗಿ ದಹಿಸಿಹೋದರು. ನಂತರ, ಸುಟ್ಟ ಗಾಯಗಳಿಂದ ನರಳುತ್ತಿದ್ದ ನೂರಕ್ಕೂ ಹೆಚ್ಚು ಜನರನ್ನು ರಕ್ಷಣಾ ಕಾರ್ಯಕರ್ತರು ಜಿಲ್ಲಾ ಆಸ್ಪತ್ರೆ ಮತ್ತು ಬಹಾವಲ್ಪುರದ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದರು. ಇವರಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ’ ಎಂದು ಜಿಲ್ಲಾ ಸಮನ್ವಯಾಧಿಕಾರಿ ರಾಣಾ ಸಲೀಂ ಅಫ್ಜಲ್‌ ಹೇಳಿದ್ದಾರೆ.

ದುರಂತಕ್ಕೆ ಕಾರಣವಾದ ದುರಾಸೆ: ‘ನಾನು ಮನೆಯಲ್ಲಿ ಕುಳಿತಿದ್ದೆ. ಟ್ಯಾಂಕರ್‌ನಿಂದ ಸೋರುತ್ತಿದ್ದ  ಉಚಿತ ಪೆಟ್ರೋಲ್‌ ತೆಗೆದುಕೊಳ್ಳಲು ಬರುವಂತೆ ಸಂಬಂಧಿಕರೊಬ್ಬರು ಕರೆದರು. ಪೆಟ್ರೋಲ್‌ ಸಂಗ್ರಹಕ್ಕೆ ಬಾಟಲಿ ತರುವಂತೆಯೂ ಅವರು ಹೇಳಿದರು. ನಾನು ಹೊರಗೆ ಬಂದಾಗ ಜನರು ಹೆದ್ದಾರಿಯತ್ತ ಓಡುತ್ತಿದ್ದರು.

‘ಹಲವು ಜನರು ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿದ್ದರು. ನಾವೂ ಅಲ್ಲಿ ತಲುಪಿ ಟ್ಯಾಂಕರ್‌ನಿಂದ ಹರಿಯುತ್ತಿದ್ದ ಪೆಟ್ರೋಲ್‌ ಸಂಗ್ರಹಿಸಲು ಆರಂಭಿಸಿದೆವು. ಅಷ್ಟೊತ್ತಿಗೆ ಟ್ಯಾಂಕರ್‌ ಸ್ಫೋಟಗೊಂಡಿತು. ನಾವು ಸ್ವಲ್ಪ ದೂರ ಇದ್ದುದರಿಂದ ಬಚಾವಾದೆವು’ ಎಂದು 40 ವರ್ಷದ ಹನೀಫ್‌ ಎಂಬುವವರು ಹೇಳಿದರು. ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಗ್ರಾಮದ ಜನರ ದುರಾಸೆ ಅವರನ್ನು ಸಾವಿನ ಕಣಿವೆಗೆ ದೂಡಿತು’ ಎಂದು ದುಃಖಿಸಿದರು.

ಟ್ಯಾಂಕರ್‌ ಮಗುಚಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ದೂರ ಹೋಗುವಂತೆ ಜನರಿಗೆ ಮನವಿ ಮಾಡಿದರು. ಆದರೆ, ಅದನ್ನು ಲೆಕ್ಕಿಸದ  ಜನರು ಪೆಟ್ರೋಲ್‌ ತುಂಬಿಕೊಳ್ಳುವುದರಲ್ಲಿಯೇ ಮಗ್ನರಾಗಿದ್ದರು. ಕೆಲವೇ ಸೆಕೆಂಡ್‌ಗಳಲ್ಲಿ ಟ್ಯಾಂಕರ್‌ ಸ್ಫೋಟಗೊಂಡಿತು. ಜನರಿಗೆ ತಪ್ಪಿಸಿಕೊಳ್ಳುವುದಕ್ಕೆ ಅವಕಾಶವೇ ಇಲ್ಲದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಪ್ರದೇಶವನ್ನು ವ್ಯಾಪಿಸಿತು ಎಂದು ಪ್ರಾದೇಶಿಕ ಪೊಲೀಸ್‌ ಅಧಿಕಾರಿ ರಜಾ ರಿಫತ್‌ ಹೇಳಿದರು.

ಹಿಂದಿನ ಕಹಿ ನೆನಪು: ಎರಡು ವರ್ಷದ ಹಿಂದೆ ಕರಾಚಿ ಹೊರವಲಯದಲ್ಲಿ ತೈಲ ಟ್ಯಾಂಕರ್‌ ಸ್ಫೋಟಗೊಂಡು ಮಕ್ಕಳು, ಮಹಿಳೆಯರು ಸೇರಿ 62 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT